ADVERTISEMENT

ಕೇಂದ್ರ ಸರ್ಕಾರದಿಂದ ಒಕ್ಕೂಟ ವ್ಯವಸ್ಥೆಗೆ ಧಕ್ಕೆ

ಸಂವಿಧಾನ ಮತ್ತು ಸಮಕಾಲೀನ ಸಂದರ್ಭ ವಿಚಾರಸಂಕಿರಣದಲ್ಲಿ ಬರಗೂರು ರಾಮಚಂದ್ರಪ್ಪ

​ಪ್ರಜಾವಾಣಿ ವಾರ್ತೆ
Published 23 ಡಿಸೆಂಬರ್ 2018, 19:50 IST
Last Updated 23 ಡಿಸೆಂಬರ್ 2018, 19:50 IST
ದಾವಣಗೆರೆಯಲ್ಲಿ ಭಾನುವಾರ ಹಮ್ಮಿಕೊಂಡಿದ್ದ ‘ಸಂವಿಧಾನ ಮತ್ತು ಸಮಕಾಲೀನ ಸಂದರ್ಭ’ ಕುರಿತ ವಿಚಾರಸಂಕಿರಣದಲ್ಲಿ ಸಾಹಿತಿ ಬರಗೂರು ರಾಮಚಂದ್ರಪ್ಪ ಮಾತನಾಡಿದರು
ದಾವಣಗೆರೆಯಲ್ಲಿ ಭಾನುವಾರ ಹಮ್ಮಿಕೊಂಡಿದ್ದ ‘ಸಂವಿಧಾನ ಮತ್ತು ಸಮಕಾಲೀನ ಸಂದರ್ಭ’ ಕುರಿತ ವಿಚಾರಸಂಕಿರಣದಲ್ಲಿ ಸಾಹಿತಿ ಬರಗೂರು ರಾಮಚಂದ್ರಪ್ಪ ಮಾತನಾಡಿದರು   

ದಾವಣಗೆರೆ: ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗಗಳ ನೇಮಕಾತಿ ಮಾಡುವ ಅಧಿಕಾರವನ್ನು ರಾಜ್ಯದಿಂದ ಕೇಂದ್ರ ಸರ್ಕಾರ ಕಿತ್ತುಕೊಳ್ಳುವ ಮಸೂದೆಯನ್ನು ಲೋಕಸಭೆಯಲ್ಲಿ ಅಂಗೀಕರಿಸಿರುವುದರಿಂದ ಒಕ್ಕೂಟ ವ್ಯವಸ್ಥೆಗೆ ಧಕ್ಕೆಯಾಗಲಿದೆ ಎಂದು ಸಾಹಿತಿ ಡಾ. ಬರಗೂರು ರಾಮಚಂದ್ರಪ್ಪ ಅಭಿಪ್ರಾಯಪಟ್ಟರು.

ಸಂವಿಧಾನ ಉಳಿಸಿ ಹೋರಾಟ ಸಮಿತಿ ನಗರದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ‘ಸಂವಿಧಾನ ಮತ್ತು ಸಮಕಾಲೀನ ಸಂದರ್ಭ’ ವಿಚಾರಸಂಕಿರಣ ಉದ್ಘಾಟಿಸಿದ ಅವರು, ‘ರಾಜ್ಯಕ್ಕೆ ಸಿಗಬೇಕಾದ ಸ್ವಾಯತ್ತತೆಯನ್ನು ಇಂದಿಗೂ ಯಾವುದೇ ಕೇಂದ್ರ ಸರ್ಕಾರ ಕೊಟ್ಟಿಲ್ಲ. ತೆಗೆದುಕೊಳ್ಳುವ ಪ್ರಯತ್ನವೂ ರಾಜ್ಯದಿಂದ ನಡೆದಿಲ್ಲ. ಕಾಂಗ್ರೆಸ್‌ ಹಾಗೂ ಪ್ರಾದೇಶಿಕ ಪಕ್ಷಗಳಿಂದಲೂ ಇದು ನಡೆದಿಲ್ಲ. ಸ್ವಾಯತ್ತತೆಯನ್ನು ಪಡೆದುಕೊಳ್ಳುವ ನಿಟ್ಟಿನಲ್ಲಿ ಯಾವುದೇ ದೊಡ್ಡ ಹೋರಾಟವೂ ನಡೆದಿಲ್ಲ’ ಎಂದು ಬೇಸರ ವ್ಯಕ್ತಪಡಿಸಿದರು.

ಸಂವಿಧಾನದ ತಾತ್ವಿಕ ಆಶಯಗಳಾದ ಒಕ್ಕೂಟ ವ್ಯವಸ್ಥೆ, ಜಾತ್ಯತೀತ, ಸಮಾಜವಾದ, ಸ್ವಾತಂತ್ರ್ಯ ಮತ್ತು ಸಂವಿಧಾನ, ಸಂಸದೀಯ ಪ್ರಜಾಪ್ರಭುತ್ವಕ್ಕೆ ಬಹುಪಾಲು ರಾಜಕೀಯ ಪಕ್ಷಗಳು ವಿರುದ್ಧವಾಗಿ ನಡೆದುಕೊಂಡು ಬರುತ್ತಿವೆ. ಏಕಮುಖಿಯಾಗಿ ನಡೆಯಲಾಗುತ್ತಿದೆ ಎಂದು ಹೇಳಿದರು.

ADVERTISEMENT

ಜಿಎಸ್‌ಟಿ ತರುವಾಗ ತೆರಿಗೆ ಸರಳೀಕರಣ ಹೆಸರಿನಲ್ಲಿ ತೆರಿಗೆ ವಿಕೇಂದ್ರೀಕರಣ ನಡೆಯಿತು. ಒಂದು ದೇಶ ಒಂದೇ ತೆರಿಗೆ ಇದ್ದುದ್ದು, ಮುಂದೆ ಒಂದು ಧರ್ಮ, ಒಂದು ಭಾಷೆ ಆಗುವ ಆತಂಕವಿದೆ. ಒಕ್ಕೂಟ ವ್ಯವಸ್ಥೆಯನ್ನು ಉಳಿಸಲು ತಾತ್ವಿಕ ಹೋರಾಟ ನಡೆಸದೇ ಇರುವುದು ಆತಂಕಕಾರಿ ಸಂಗತಿ ಎಂದು ಹೇಳಿದರು.

ಸಿಪಿಐ ಮುಖಂಡ ಸಿದ್ದನಗೌಡ ಪಾಟೀಲ, ‘ಇಂದು ಕಾರ್ಪೊರೇಟ್‌ ಕಂಪನಿಗಳು ಕೋಮುವಾದಿ ಶಕ್ತಿಗಳನ್ನು ಮುಂದಿಟ್ಟುಕೊಂಡು ಆಡಳಿತ ನಡೆಸುತ್ತಿವೆ. ಪ್ರಧಾನಿ ನರೇಂದ್ರ ಮೋದಿ ಅವರ ಚುನಾವಣಾ ವೆಚ್ಚವನ್ನು ಭರಿಸಿದ್ದವು. ಗ್ರಾಹಕರ ಹಕ್ಕನ್ನು ನಿಯಂತ್ರಣ ಮಾಡಲು ಜಿಲ್ಲಾ ಗ್ರಾಹಕರ ವೇದಿಕೆಯ ಅಧ್ಯಕ್ಷರನ್ನೂ ಆಯ್ಕೆ ಮಾಡುವ ಅಧಿಕಾರವನ್ನು ಕೇಂದ್ರ ಸರ್ಕಾರಕ್ಕೆ ನೀಡುವಂತೆ ಮಸೂದೆ ಅಂಗೀಕರಿಸಲಾಗಿದೆ. ಇದರ ಹಿಂದೆ ಕಾರ್ಪೊರೇಟ್‌ ಕಂಪನಿಗಳ ಹಿತಾಸಕ್ತಿ ಇದೆ’ ಎಂದು ದೂರಿದರು.

‘ಕ್ರೌರ್ಯವನ್ನೇ ಶೌರ್ಯವಾಗಿ ಪರಿವರ್ತಿಸಲಾಗುತ್ತಿದೆ. ನಾವು ಕೇವಲ ಪ್ರತಿಕ್ರಿಯೆಗೆ ಸೀಮಿತರಾಗುತ್ತಿದ್ದೇವೆ ಹೊರತು, ನಮ್ಮದೇ ಆದ ಕ್ರಿಯೆ ಮಾಡುವಲ್ಲಿ ಸೋಲುತ್ತಿದ್ದೇವೆ’ ಎಂದು ಹೇಳಿದರು.

ಅಧ್ಯಕ್ಷತೆ ವಹಿಸಿದ್ದ ಸಂವಿಧಾನ ಉಳಿಸಿ ಹೋರಾಟ ಸಮಿತಿ ಜಿಲ್ಲಾ ಘಟಕದ ಅಧ್ಯಕ್ಷ ಎಚ್‌.ಕೆ. ರಾಮಚಂದ್ರಪ್ಪ, ‘ಸಂವಿಧಾನ ವಿಫಲವಾಗಿಲ್ಲ. ಆದರೆ, ಸಂವಿಧಾನದ ಹೆಸರಿನಲ್ಲಿ ಆಡಳಿತ ನಡೆಸಲು ಬಂದವರು ವಿಫಲರಾದರು. ಹೀಗಾಗಿ ಸಂವಿಧಾನದ ಆಶಯಗಳು ಜಾರಿಯಾಗಿಲ್ಲ. ಅದಕ್ಕಾಗಿ ನಾವು ಸಂವಿಧಾನ ಉಳಿಸಿಕೊಂಡು ನಮ್ಮ ಹಕ್ಕುಗಳನ್ನು ಪಡೆಯಲು ಚಳವಳಿ ಮಾಡಬೇಕಾಗಿದೆ’ ಎಂದು ಅಭಿಪ್ರಾಯಪಟ್ಟರು.

‘ಸಮಾಜದಲ್ಲಿ ಬಲಪಂಥೀಯ ಸಾಮ್ರಾಜ್ಯಶಾಹಿ ಮನಸ್ಥಿತಿಯವರು ಸಮಾಜದಲ್ಲಿ ಒಡಕು ಉಂಟು ಮಾಡಿ ಆಳಲು ಹೊರಟಿದ್ದಾರೆ. ಈ ಧ್ವನಿಯನ್ನು ಮಟ್ಟ ಹಾಕಬೇಕು’ ಎಂದು ಪ್ರತಿಪಾದಿಸಿದರು.

ವಕೀಲ ಅನೀಸ್‌ ಪಾಷಾ ಮಾತನಾಡಿದರು. ಇಮ್ತಿಯಾಜ್‌ ಹುಸೇನ್‌ ಸ್ವಾಗತಿಸಿದರು. ಹೆಗ್ಗೆರೆ ರಂಗಪ್ಪ ತಂಡದವರು ಕ್ರಾಂತಿಗೀತೆ ಹಾಡಿದರು. ಪ್ರಾಧ್ಯಾಪಕ ಡಾ. ಎಂ. ಮಂಜಣ್ಣ ನಿರೂಪಿಸಿದರು.

ಬರಗೂರು ಹೇಳಿದ್ದೇನು?

* ಆಡಳಿತಾತ್ಮಕ, ಶೈಕ್ಷಣಿಕ ಹಾಗೂ ಸಾಂಸ್ಕೃತಿಕ ಸ್ವಾಯತ್ತತೆಗಾಗಿ ರಾಜ್ಯ ಸರ್ಕಾರ ಹೋರಾಟ ನಡೆಸಬೇಕು.

* ಇಂದು ಧಾರ್ಮಿಕ ಮೂಲಭೂತವಾದದ ಜೊತೆಗೆ ಆರ್ಥಿಕ ಮೂಲಭೂತವಾದವೂ ಕಾಡುತ್ತಿದೆ. ಕಾರ್ಪೊರೇಟ್‌ ಆರ್ಥಿಕ ನೀತಿಗೆ ಆದ್ಯತೆ ನೀಡಲಾಗುತ್ತಿದೆ.

* ಸುಪ್ರೀಂ ಕೋರ್ಟ್‌ ತ್ರಿವಳಿ ತಲಾಕ್‌ ಬಗ್ಗೆ ತೀರ್ಪು ನೀಡಿದಾಗ ವಿಜಯೋತ್ಸವ ಆಚರಿಸಿದವರು, ಶಬರಿಮಲೈ ಕುರಿತು ತೀರ್ಪು ಬಂದಾಗ ವಿರೋಧಿಸುತ್ತಿದ್ದಾರೆ. ಇದು ಇಬ್ಬಗೆಯ ನಿಲುವಲ್ಲವೇ?

* ದೇವರ ಜಾತಿಯನ್ನೂ ಹುಡುಕುವ ‘ಬುದ್ಧಿವಂತಿಕೆ’ ಹೆಚ್ಚಾಗುತ್ತಿದೆ. ದೇವರನ್ನೂ ಜಾತ್ಯತೀತವಾಗಿಡಲು ಬಿಡದ ವಿಕೃತಿ ಬೆಳೆಯುತ್ತಿದೆ.

* ‘ಹಸಿವಿನ’ ರಾಜಕಾರಣದ ಬದಲು ‘ಹಸು’ವಿನ ರಾಜಕಾರಣ ಮುನ್ನೆಲೆಗೆ ಬಂದಿದೆ. ಇದು ಜನರನ್ನೂ ಬಲಿ ತೆಗೆದುಕೊಳ್ಳುತ್ತಿದೆ.

* ಸಂವಿಧಾನವನ್ನು ಪೂರ್ಣ ಪ್ರಮಾಣದಲ್ಲಿ ಬದಲಾಯಿಸಲು, ನಾಶ ಮಾಡಲು ದೇಶದ ಜನ ಬಿಡುವುದಿಲ್ಲ.

* 20ನೇ ಶತಮಾನದಲ್ಲಿ ಸಂವಿಧಾನವನ್ನು ನಾಶಪಡಿಸುವ ಧೈರ್ಯವನ್ನು ಯಾರೂ ಮಾಡಿರಲಿಲ್ಲ. ಆದರೆ, 21ನೇ ಶತಮಾನವು ಸಂವಿಧಾನವನ್ನು ಸುಡುವ ಮೂಲಕ ಸಾಮಾಜಿಕ, ಸಾಂಸ್ಕೃತಿಕ ವಿಕೃತಿಗೆ ಉದಾಹರಣೆಯಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.