ಚನ್ನಗಿರಿ: ‘ಪಟ್ಟಣದಲ್ಲಿ 11 ಕೊಳಚೆ ಪ್ರದೇಶಗಳಿದ್ದು, 1,508 ಮನೆಗಳ ಸರ್ವೆ ಕಾರ್ಯ ಮಾಡಲಾಗಿದೆ. ಈ ಪೈಕಿ ಪರಿಶಿಷ್ಟ ಕಾಲೊನಿಯ 41 ಕುಟುಂಬಗಳಿಗೆ ಮನೆಗಳ ಹಕ್ಕುಪತ್ರಗಳನ್ನು ವಿತರಣೆ ಮಾಡಲಾಗಿದೆ’ ಎಂದು ಶಾಸಕ ಬಸವರಾಜು ವಿ. ಶಿವಗಂಗಾ ತಿಳಿಸಿದರು.
ಪಟ್ಟಣದ ಬಾಬು ಜಗಜೀವನ ರಾಂ ಸಮುದಾಯ ಭವನದಲ್ಲಿ ಕೊಳಗೇರಿ ಅಭಿವೃದ್ಧಿ ಮಂಡಳಿಯಿಂದ ಸೋಮವಾರ ಪರಿಶಿಷ್ಟ ಕಾಲೊನಿಯ ನಿವಾಸಿಗಳಿಗೆ ಮನೆಗಳ ಹಕ್ಕುಪತ್ರಗಳನ್ನು ವಿತರಿಸಿ ಅವರು ಮಾತನಾಡಿದರು.
‘40 ವರ್ಷಗಳಿಂದ ಪರಿಶಿಷ್ಟ ಸಮುದಾಯದ ಜನರು ಈ ಮನೆಗಳಲ್ಲಿ ವಾಸ ಮಾಡುತ್ತಿದ್ದು, ಮನೆಗಳ ಹಕ್ಕುಪತ್ರಗಳನ್ನು ಹೊಂದಿರಲಿಲ್ಲ. ಅಧಿಕಾರಕ್ಕೆ ಬಂದ ಎರಡು ವರ್ಷಗಳಲ್ಲಿಯೇ ಹಕ್ಕುಪತ್ರ ನೀಡುವ ಮೂಲಕ ಮನೆಯ ಯಜಮಾನರನ್ನಾಗಿ ಮಾಡಲಾಗಿದೆ’ ಎದು ಹೇಳಿದರು.
‘ಅದೇ ರೀತಿ ಪ್ರಧಾನ ಮಂತ್ರಿ ಅವಾಸ್ ಯೋಜನೆ ಅಡಿ ಈ ಕ್ಷೇತ್ರಕ್ಕೆ 1,092 ಮನೆಗಳು ಮಂಜೂರಾಗಿದ್ದು, ₹ 70 ಕೋಟಿ ವೆಚ್ಚದಲ್ಲಿ 800 ಮನೆಗಳನ್ನು ನಿರ್ಮಿಸಲಾಗುತ್ತಿದೆ. ಈ ಪೈಕಿ ಈಗಾಗಲೇ 610 ಮನೆಗಳ ನಿರ್ಮಾಣ ಕಾರ್ಯ ಮುಕ್ತಾಯಗೊಂಡಿದೆ. ಉಳಿದ ಮನೆಗಳ ನಿರ್ಮಾಣ ಕಾರ್ಯವನ್ನು ಆದಷ್ಟು ಶೀಘ್ರದಲ್ಲಿ ಆರಂಭಿಸಲಾಗುವುದು’ ಎಂದರು.
ಪುರಸಭೆ ಸದಸ್ಯರಾದ ಬಿ.ಆರ್. ಹಾಲೇಶ್, ಜಿ. ನಿಂಗಪ್ಪ, ಸೈಯದ್ ಗೌಸ್ ಪೀರ್, ಅಮೀರ್ ಅಹಮದ್, ಸ್ಥಾಯಿ ಸಮಿತಿ ಅಧ್ಯಕ್ಷ ಸೈಯದ್ ಇಮ್ರಾನ್, ಶ್ರೀಕಾಂತ್ ಚವ್ಹಾಣ್, ತನ್ವೀರ್ ಅಹಮದ್, ಮುಖ್ಯಾಧಿಕಾರಿ ಕೃಷ್ಣ ಡಿ. ಕಟ್ಟಿಮನಿ, ಮಂಜುನಾಥ್ ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.