ADVERTISEMENT

ಯೋಗೇಶ್ವರ್ ಯಾವ ಪರೀಕ್ಷೆ ಬರೆದಿದ್ದಾರೋ ಗೊತ್ತಿಲ್ಲ: ಡಾ.ಕೆ. ಸುಧಾಕರ್

ಪ್ರವಾಸಿ ತಾಣಗಳಲ್ಲಿ ಹೆಚ್ಚಿನ ಜನ ಅಪಾಯಕಾರಿ

​ಪ್ರಜಾವಾಣಿ ವಾರ್ತೆ
Published 10 ಜುಲೈ 2021, 15:57 IST
Last Updated 10 ಜುಲೈ 2021, 15:57 IST
ಡಾ. ಕೆ. ಸುಧಾಕರ್‌
ಡಾ. ಕೆ. ಸುಧಾಕರ್‌   

ದಾವಣಗೆರೆ: ‘ನಾವು 17 ಜನ ಪರೀಕ್ಷೆ ಬರೆದು ಪಾಸಾಗಿದ್ದೇವೆ. ಆದರೆ ಸಿ.ಪಿ. ಯೋಗೇಶ್ವರ್ ಯಾವ ಪರೀಕ್ಷೆ ಬರೆದಿದ್ದಾರೋ ಗೊತ್ತಿಲ್ಲ’ ಎಂದು ಆರೋಗ್ಯ ಸಚಿವ ಡಾ.ಕೆ. ಸುಧಾಕರ್ ಟೀಕಿಸಿದರು.

ಪರೀಕ್ಷೆ ಬರೆದಿದ್ದೀವಿ, ಫಲಿತಾಂಶಕ್ಕೆ ಕಾಯುತ್ತಿದ್ದೇವೆ ಎಂಬ ಸಚಿವ ಯೋಗೇಶ್ವರ್ ಹೇಳಿಕೆಗೆ ದಾವಣಗೆರೆಯಲ್ಲಿ ಮಾಧ್ಯಮದವರ ಜೊತೆ ಮಾತನಾಡಿ, ‘ನಾವು 17 ಜನ ರಾಜೀನಾಮೆ ಕೊಟ್ಟು ಪರೀಕ್ಷೆ ಬರೆದಿದ್ದೆವು.ಬಳಿಕ ಪಾಸ್ ಆಗಿ ಸಚಿವರಾಗಿದ್ದೇವೆ.ಯೋಗೇಶ್ವರ್ ಯಾವ ಪರೀಕ್ಷೆ ಬರೆದಿದ್ದಾರೋ ಗೊತ್ತಿಲ್ಲ’ ಎಂದು ವ್ಯಂಗ್ಯವಾಡಿದರು.

‘ರಮೇಶ್ ಜಾರಕಿಹೊಳಿ ರಾಜೀನಾಮೆ ಕೊಡಲ್ಲ ಅಂತಾ ಹೇಳಿದ್ದೆ. ಜಾರಕಿಹೊಳಿ ಹಾಗೂ ಮುನಿರತ್ನ ಸಚಿವ ಸ್ಥಾನ ಕೊಡುವುದನ್ನು ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಅವರು ನಿರ್ಧರಿಸುತ್ತಾರೆ’ ಎಂದು ಹೇಳಿದರು.

ADVERTISEMENT

ಲಸಿಕೆ ಬಗ್ಗೆ ಸುಳ್ಳು ಲೆಕ್ಕ ಕೊಡುತ್ತಿದ್ದಾರೆ ಎಂಬ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಆರೋಪ‌ಕ್ಕೆ ತಿರುಗೇಟು ನೀಡಿದ ಸುಧಾಕರ್ ‘ ‘ಕರ್ನಾಟಕಕ್ಕೆ 2.50 ಕೋಟಿ‌ ಡೋಸ್ ಲಸಿಕೆ ಸುಳ್ಳು ಲೆಕ್ಕಾನಾ. ದೇಶದಲ್ಲಕ 38 ಕೋಟಿ ಜನಕ್ಕೆ ಲಸಿಕೆ ನೀಡಲಾಗಿದೆ‌. ಅಮೆರಿಕದಲ್ಲಿ ಎಷ್ಟು ಕೊಟ್ಟಿದ್ದಾರೆ ಎಂದು ಒಮ್ಮೆ ಕೇಳಲಿ.ಸಿದ್ದರಾಮಯ್ಯಗೆ ಸುಳ್ಳು ಲೆಕ್ಕ ಹೇಳೋ ಅಭ್ಯಾಸ ಇರಬೇಕು’ ಎಂದು ಟೀಕಿಸಿದರು.

‘ಕೊರೊನಾ 3ನೇ ಅಲೆ ಮಕ್ಕಳ ಮೇಲೆ ಪರಿಣಾಮ ಬೀರದು’
ಕೊರೊನಾ 3ನೇ ಅಲೆ ಮಕ್ಕಳ ಮೇಲೆ ಗಂಭೀರ ಪರಿಣಾಮ ಬೀರದು ಎಂದು ತಜ್ಞರು ಹೇಳಿದ್ದಾರೆ ಎಂದು ಆರೋಗ್ಯ ಸಚಿವ ಡಾ.ಕೆ. ಸುಧಾಕರ್ ಹೇಳಿದರು.

‘ಕೊರೊನಾ ಮೂರನೇಅಲೆ ಬರಬೇಕು ಎಂದೇನಿಲ್ಲ. ಅದು ನಮ್ಮ ಮೇಲೆ ಅವಲಂಬಿತವಾಗಿರುತ್ತದೆ. ಲಸಿಕೆ ತೆಗೆದುಕೊಂಡು ದೂರ ಇರಬೇಕು. ಅದರಲ್ಲೂ ಮಕ್ಕಳಿಗೆ ಬರುತ್ತದೆ ಎಂಬುದು ಅವೈಜ್ಞಾನಿಕ. ಮೂರನೇ ಅಲೆಯಿಂದ ಮಕ್ಕಳಿಗೆ ತೀವ್ರ ವ್ಯಾಧಿ ಉಲ್ಬಣವಾಗುವುದಿ‌ಲ್ಲ ಎಂದು ತಜ್ಞರು ಹೇಳಿದ್ದಾರೆ. ಆದರೂ ನಾವು ಎಚ್ಚರಿಕೆಯಿಂದ ಇರಬೇಕು’ ಎಂದು ಸಲಹೆ ನೀಡಿದರು.

‘ರಾಜ್ಯದಲ್ಲಿ 2.50 ಕೋಟಿ ಜನರಿಗೆ ಲಸಿಕೆ ನೀಡಲಾಗಿದೆ. ಖಾಸಗಿ ವಲಯದವರೂ ಕೊಟ್ಟಿರುವುದರಿಂದ ಬೆಂಗಳೂರಿನಲ್ಲಿ ಶೇ 46ರಷ್ಟು ಮುಟ್ಟಿದೆ.ಹೈಕೋರ್ಟ್ ಲಸಿಕೆ ನೀಡಿಕೆ ಸಂಬಂಧ ನಿರ್ದೇಶನ ನೀಡಿದೆ‌. ಈ ನಿಟ್ಟಿನಲ್ಲಿ ನಾವು ಕ್ರಮ ತೆಗೆದುಕೊಳ್ಳುತ್ತಿದ್ದೇವೆ. ನಾನು ದೆಹಲಿಗೆ ಹೋಗಿ ಸಂಬಂಧಪಟ್ಟವರನ್ನು ಭೇಟಿ ಮಾಡಿದ್ದೇನೆ.ಮಕ್ಕಳ ಲಸಿಕೆ ಸಂಶೋಧನಾ ಹಂತದಲ್ಲಿದ್ದು, ಹಸಿರು ನಿಶಾನೆ ಸಿಗಬಹುದು. ಆಗಸ್ಟ್ ತಿಂಗಳಲ್ಲಿ ಇನ್ನು ದೊಡ್ಡ ಪ್ರಮಾಣದಲ್ಲಿ ಲಸಿಕೆ ಬರಲಿದ್ದು, ಡಿಸೆಂಬರ್ ಅಂತ್ಯದೊಳಗೆ ಎಲ್ಲರಿಗೂ ವ್ಯಾಕ್ಸಿನ್ ನೀಡಲಾಗುವುದು’ ಎಂದು ತಿಳಿಸಿದರು.

‘ಈಗಾಗಲೇ ಕೇರಳದಲ್ಲಿ ಪ್ರತಿ ದಿನ 15 ಸಾವಿರ ಕೊರೊನಾ ಪ್ರಕರಣಗಳು ದಿನಕ್ಕೆ ವರದಿಯಾಗುತ್ತಿವೆ. ಮಹಾರಾಷ್ಟ್ರ ಹಾಗೂ ಕೇರಳ ಗಡಿಯನ್ನು ಹಂಚಿಕೊಂಡಿರುವ ಕಾರಣ ನಾವು ಎಚ್ಚರಿಕೆ ವಹಿಸಬೇಕಿದೆ. ಎರಡು ಅಲೆಗಳಲ್ಲಿ ಅಲ್ಲಿ ಜಾಸ್ತಿಯಾದ ಕಾರಣ ಇಲ್ಲೂ ಜಾಸ್ತಿಯಾಗಿತ್ತು. ಪ್ರವಾಸಿ ತಾಣಗಳಲ್ಲಿ ಜನಸಂದಣಿ ಹೆಚ್ಚುತ್ತಿರುವುದು ಅಪಾಯಕಾರಿ ಬೆಳವಣಿಗೆ.ಈ ಬಗ್ಗೆ ತೆಗೆದುಕೊಳ್ಳಬೇಕಾದ ಕ್ರಮಗಳ ಬಗ್ಗೆ ಚರ್ಚಿಸುತ್ತೇವೆ’ ಎಂದು ಹೇಳಿದರು.

‘ರಾಜ್ಯದಲ್ಲಿ ಕೊರೊನಾ ಪಾಸಿಟಿವಿಟಿ ದರ ಶೇ 1.5 ಬರುತ್ತಿದೆ.‌ ಆದರೂ ಯಾರೂ ಮೈಮರೆಯಬಾರದು. ಈಗಿರುವ ಕ್ರಮಗಳನ್ನು ಮುಂದುವರಿಸುವಂತೆ ಐಸಿಎಂಆರ್, ಏಮ್ಸ್ ವೈದ್ಯರು ಈಗಾಗಲೇ ಎಚ್ಚರಿಕೆ ನೀಡಿದ್ದಾರೆ. ‌ಶೇ 60ರಿಂದ 70ರಷ್ಟು ಮಂದಿಗೆ ಎರಡು ಡೋಸ್ ಆಗುವವರೆಗೆ ಎಲ್ಲರೂ ಆರೋಗ್ಯದ ಬಗ್ಗೆ ಗಮನ ನೀಡಬೇಕು’ ಎಂದು ಹೇಳಿದರು.

ರಾಜ್ಯಕ್ಕೆ ₹ 1,500 ಕೋಟಿ:‘3ನೇ ಅಲೆಗೆ ಸಿದ್ಧತೆಗೋಸ್ಕರ ಕೇಂದ್ರ ಸರ್ಕಾರ ಮೂಲಸೌಲಭ್ಯ ಕಲ್ಪಿಸಲು ₹26 ಸಾವಿರ ಕೋಟಿ ನೀಡಿದ್ದು, ಅದರಲ್ಲಿ ರಾಜ್ಯಕ್ಕೆ ₹1.500 ಕೋಟಿ ಬರುತ್ತದೆ. ಪ್ರತಿ ಜಿಲ್ಲೆ ಹಾಗೂ ತಾಲ್ಲೂಕಿನಲ್ಲಿ ಮಕ್ಕಳ ವಿಭಾಗ ತೆರೆಯುತ್ತೇವೆ. ಗುಣಮಟ್ಟದ ಆರೋಗ್ಯಕ್ಕೆ ಒತ್ತು ನೀಡಲಾಗುವುದು’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.