ADVERTISEMENT

ಜಿಲ್ಲೆಯ ಅಭಿವೃದ್ಧಿಗೆ ಬದ್ಧ: ಸಂಸದ ಜಿ.ಎಂ. ಸಿದ್ದೇಶ್ವರ

ವಿವಿಧ ಕಾಮಗಾರಿಗೆ ಸಂಸದ ಸಿದ್ದೇಶ್ವರ ಭೂಮಿಪೂಜೆ

​ಪ್ರಜಾವಾಣಿ ವಾರ್ತೆ
Published 31 ಡಿಸೆಂಬರ್ 2018, 14:41 IST
Last Updated 31 ಡಿಸೆಂಬರ್ 2018, 14:41 IST
ಹೊನ್ನಾಳಿ ತಾಲ್ಲೂಕಿನ ಕೂಲಂಬಿ ಗ್ರಾಮದಲ್ಲಿ ಸಂಸದ ಜಿ.ಎಂ.ಸಿದ್ದೇಶ್ವರ ವಿವಿಧ ಕಾಮಗಾರಿಗಳಿಗೆ ಭೂಮಿಪೂಜೆ ನೆರವೇರಿಸಿದರು
ಹೊನ್ನಾಳಿ ತಾಲ್ಲೂಕಿನ ಕೂಲಂಬಿ ಗ್ರಾಮದಲ್ಲಿ ಸಂಸದ ಜಿ.ಎಂ.ಸಿದ್ದೇಶ್ವರ ವಿವಿಧ ಕಾಮಗಾರಿಗಳಿಗೆ ಭೂಮಿಪೂಜೆ ನೆರವೇರಿಸಿದರು   

ಹೊನ್ನಾಳಿ: ‘ಸಾರ್ವಜನಿಕರಿಗೆ ಮೂಲ ಸೌಲಭ್ಯ ಕಲ್ಪಿಸುವುದು ಮತ್ತು ಅಭಿವೃದ್ಧಿ ಗಮನದಲ್ಲಿರಿಸಿಕೊಂಡು ತಾಲ್ಲೂಕಿನಲ್ಲಿ ಸಮುದಾಯ ಭವನ, ಶಾಲಾ ಕೊಠಡಿ, ಹಾಗೂ ಕಾಂಕ್ರೀಟ್ ರಸ್ತೆ ಕಾಮಗಾರಿಗಳಿಗೆ ಹೆಚ್ಚು ಅನುದಾನ ನೀಡಿದ್ದೇನೆ’ ಎಂದು ಸಂಸದ ಜಿ.ಎಂ. ಸಿದ್ದೇಶ್ವರ ಹೇಳಿದರು.

ಭಾನುವಾರ ತಾಲ್ಲೂಕಿನ ಕೂಲಂಬಿ ಗ್ರಾಮದಲ್ಲಿ ಕಾಂಕ್ರೀಟ್ ರಸ್ತೆ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿ ಮಾತನಾಡಿದರು.

‘ಜಿಲ್ಲೆಯ ಎಲ್ಲಾ ವಿಧಾನಸಭಾ ಕ್ಷೇತ್ರಗಳ ಅಭಿವೃದ್ಧಿಗೆ ಪ್ರಾಮಾಣಿಕ ಪ್ರಯತ್ನ ಮಾಡಿದ್ದು, ಕೇಂದ್ರ ಸರ್ಕಾರದ ಅನೇಕ ಮಹತ್ವದ ಯೋಜನೆಗಳನ್ನು ಜಾರಿಗೊಳಿಸಲಾಗಿದೆ. ಹೊನ್ನಾಳಿ ಕ್ಷೇತ್ರವನ್ನು ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲಿ ಶಾಸಕ ರೇಣುಕಾಚಾರ್ಯ ಮಾದರಿ ಕ್ಷೇತ್ರವನ್ನಾಗಿ ಅಭಿವೃದ್ಧಿಪಡಿಸಿದ್ದಾರೆ. ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಗೆ ಮತ ನೀಡಿ’ ಎಂದು ಹೇಳಿದರು.

ADVERTISEMENT

ಶಾಸಕ ಎಂ.ಪಿ. ರೇಣುಕಾಚಾರ್ಯ, ‘ಕಳೆದ ಅವಧಿಯಲ್ಲಿ ಕೂಲಂಬಿ ಗ್ರಾಮವನ್ನು ಸುವರ್ಣ ಗ್ರಾಮೋದಯ ಯೋಜನೆಯಡಿಯಲ್ಲಿ ಅಭಿವೃದ್ಧಿ ಪಡಿಸಲಾಗಿತ್ತು. ಈಗ ಅಲ್ಪಸಂಖ್ಯಾತರ ಕಾಲೊನಿಗಳಲ್ಲಿ ಕಾಂಕ್ರೀಟ್ ರಸ್ತೆ ಅಬಿವೃದ್ದಿಗೆ ₹ 50 ಲಕ್ಷ, ಕೂಲಂಬಿ ಯಕ್ಕನಹಳ್ಳಿ ರಸ್ತೆ ಅಭಿವೃದ್ದಿಗೆ ₹ 4.40 ಲಕ್ಷ ಅನುದಾನ ನೀಡಲಾಗಿದೆ’ ಎಂದರು.

ಕೂಲಂಬಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಗಾಯಿತ್ರಿ ಪ್ರಶಾಂತ್, ಜಿಲ್ಲಾ ಪಂಚಾಯಿತಿ ಸದಸ್ಯೆ ದೀಪಾ ಜಗದೀಶ್, ತಾಲ್ಲೂಕು ಪಂಚಾಯಿತಿ ಸದಸ್ಯೆ ಅಂಬುಜಾಕ್ಷಿ ಮರುಳಸಿದ್ದಪ್ಪ, ಮುಕ್ತೇನಹಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಗಂಗಾಧರ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.