ADVERTISEMENT

ಇಂಡೀಕರಣ ಪ್ರಕ್ರಿಯೆ ತ್ವರಿತವಾಗಿ ಪೂರ್ಣಗೊಳಿಸಿ

ವಕ್ಫ್‌ ಆಸ್ತಿಗಳ ಕಾರ್ಯಪಡೆ ಸಭೆಯಲ್ಲಿ ಜಿಲ್ಲಾಧಿಕಾರಿ ಜಿ.ಎನ್‌. ಶಿವಮೂರ್ತಿ ಸೂಚನೆ

​ಪ್ರಜಾವಾಣಿ ವಾರ್ತೆ
Published 25 ಜೂನ್ 2019, 15:28 IST
Last Updated 25 ಜೂನ್ 2019, 15:28 IST
ದಾವಣಗೆರೆ ಜಿಲ್ಲಾಧಿಕಾರಿ ಕಚೇರಿಯಲ್ಲಿ ಮಂಗಳವಾರ ನಡೆದ ಅಧಿಕಾರಿಗಳ ಸಭೆಯಲ್ಲಿ ಜಿಲ್ಲಾಧಿಕಾರಿ ಜಿ.ಎನ್‌. ಶಿವಮೂರ್ತಿ, ಜಿಲ್ಲಾ ಪಂಚಾಯಿತಿ ಸಿಇಒ ಎಚ್‌.ಬಸವರಾಜೇಂದ್ರ, ಎಸ್.ಪಿ ಚೇತನ್ ಇದ್ದಾರೆ –ಪ್ರಜಾವಾಣಿ ಚಿತ್ರ
ದಾವಣಗೆರೆ ಜಿಲ್ಲಾಧಿಕಾರಿ ಕಚೇರಿಯಲ್ಲಿ ಮಂಗಳವಾರ ನಡೆದ ಅಧಿಕಾರಿಗಳ ಸಭೆಯಲ್ಲಿ ಜಿಲ್ಲಾಧಿಕಾರಿ ಜಿ.ಎನ್‌. ಶಿವಮೂರ್ತಿ, ಜಿಲ್ಲಾ ಪಂಚಾಯಿತಿ ಸಿಇಒ ಎಚ್‌.ಬಸವರಾಜೇಂದ್ರ, ಎಸ್.ಪಿ ಚೇತನ್ ಇದ್ದಾರೆ –ಪ್ರಜಾವಾಣಿ ಚಿತ್ರ   

ದಾವಣಗೆರೆ: ಖಾಸಗಿ ವ್ಯಕ್ತಿಗಳ ಹೆಸರಿನಲ್ಲಿರುವ ವಕ್ಫ್‌ ಆಸ್ತಿಗಳನ್ನು ಮೊದಲು ಸಂಬಂಧಿಸಿದ ತಹಶೀಲ್ದಾರ್ ಹೆಸರಿಗೆ ಮಾಡಿಕೊಂಡು ನಂತರ ವಕ್ಫ್ ಮಂಡಳಿಗೆ ವರ್ಗಾಹಿಸುವ ಮೂಲಕ ಇಂಡೀಕರಣ ಪ್ರಕ್ರಿಯೆಯನ್ನು ತ್ವರಿತವಾಗಿ ಪೂರ್ಣಗೊಳಿಸಿ ಎಂದು ಜಿಲ್ಲಾಧಿಕಾರಿ ಜಿ.ಎನ್. ಶಿವಮೂರ್ತಿ ಅಧಿಕಾರಿಗಳಿಗೆ ಸೂಚಿಸಿದರು.

ಜಿಲ್ಲಾಧಿಕಾರಿ ಕಚೇರಿಯಲ್ಲಿ ಮಂಗಳವಾರ ನಡೆದ ಜಿಲ್ಲಾ ವಕ್ಫ್‌ ಆಸ್ತಿಗಳ ಕಾರ್ಯಪಡೆ ಸಭೆಯಲ್ಲಿ ಅವರು ಮಾತನಾಡಿದರು.

ವಕ್ಫ್ ಅಧಿಕಾರಿ ಸೈಯದ್ ಮೊಹಝಂ ಪಾಷಾ, ಹಲವು ಪ್ರಕರಣಗಳು ಇಂಡೀಕರಣವಾಗದೇ ಬಾಕಿ ಇವೆ ಎಂದು ಸಭೆಗೆ ಮಾಹಿತಿ ನೀಡಿದರು.

ADVERTISEMENT

ಇದಕ್ಕೆ ಪ್ರತಿಕ್ರಿಯಿಸಿದ ಜಿಲ್ಲಾಧಿಕಾರಿ, ‘ಯಾವೆಲ್ಲ ಕಾರಣಕ್ಕಾಗಿ ಪ್ರಕರಣಗಳು ಬಾಕಿ ಇವೆ? ವಕ್ಫ್ ಅಧಿಕಾರಿಗಳು ಅನುಸರಣೆ ಮಾಡಬೇಕು. ಇಂಡೀಕರಣ ಬಾಕಿ ಏಕಿದೆ ಎಂಬ ಬಗ್ಗೆ ಕಾರಣ ತಿಳಿದು ಕ್ರಮ ವಹಿಸಿದರೆ ಶೀಘ್ರಗತಿಯಲ್ಲಿ ಕೆಲಸ ಆಗುತ್ತದೆ ಎಂದ ಅವರು ದಾವಣಗೆರೆ ತಹಶೀಲ್ದಾರ್ ಮತ್ತು ನಗರ ಸ್ಥಳೀಯ ಸಂಸ್ಥೆಗಳ ಅಧಿಕಾರಿಗಳಿಗೆ ಈ ಬಗ್ಗೆ ವಿವರಣೆ ಕೇಳಿದರು.

ದಾವಣಗೆರೆ ತಹಶೀಲ್ದಾರ್ ಸಂತೋಷ್‍ಕುಮಾರ್ ‘ಬಾಕಿ ಇರುವ 68 ಪ್ರಕರಣಗಳಲ್ಲಿ ಏನೂ ಸಮಸ್ಯೆ ಇಲ್ಲದ ಪ್ರಕರಣಗಳನ್ನು ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಲಾಗಿದೆ. ಗೋಪನಾಳ್ ಮತ್ತು ವಡೇರಹಳ್ಳಿಯ ಆಸ್ತಿಗಳನ್ನು ಇತ್ತೀಚೆಗೆ ಪ್ರಸ್ತಾವ ಸಲ್ಲಿಸಲಾಗಿದೆ. ಖಾಸಗಿ ಮತ್ತು ಸರ್ಕಾರಿ ಆಸ್ತಿ ಎಂದು ನಮೂದಾಗಿರುವುದನ್ನು ಬಾಕಿ ಇಡಲಾಗಿದೆ’ ಎಂದರು.

ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಆರ್.ಚೇತನ್, ‘ಯಾವ ಕಾರಣಕ್ಕಾಗಿ ಬಾಕಿ ಇಡಲಾಗಿದೆ ಎಂಬುದನ್ನು ಪರಿಶೀಲಿಸಿ, ಅವರಿಗೆ ಬರೆದು ತಿಳಿಸಿ, ಬಾಕಿ ಇತ್ಯರ್ಥಕ್ಕೆ ಸಹಕಾರಿಯಾಗತ್ತದೆ’ ಎಂದರು.

‘ಹಿಂದೆ ಮುತುವಲ್ಲಿಗಳ ಹೆಸರಿನಲ್ಲಿ ಮಸೀದಿ, ಖಬರ್‌ಸ್ತಾನದ ಆಸ್ತಿ ಇದ್ದು ಅವರು ಅನಧಿಕೃತವಾಗಿ ಈ ಜಾಗಗಳನ್ನು ಮಾರಾಟ ಮಾಡಿರುವುದೂ ಉಂಟು. ಆದ್ದರಿಂದ ವಕ್ಫ್ ಆಸ್ತಿಯು ವಕ್ಫ್ ಸಂಸ್ಥೆ ಹೆಸರಿನಲ್ಲಿ ಖಾತೆ ಇಂಡೀಕರಣವಾಗುವುದು ಅವಶ್ಯಕ’ ಎಂದು ವಕ್ಫ್‌ ಅಧಿಕಾರಿಗಳು ತಿಳಿಸಿದರು.

ಇದಕ್ಕೆ ಪ್ರತಿಕ್ರಿಯಿಸಿದ ಜಿಲ್ಲಾಧಿಕಾರಿ ‘ಈ ತರಹದ ಸಮಸ್ಯೆ ಕಂಡುಬರುವ ಆಸ್ತಿಗಳನ್ನು ಸಂಬಂಧಿಸಿದ ತಾಲ್ಲೂಕುಗಳ ತಹಶೀಲ್ದಾರರ ಹೆಸರಿಗೆ ಮಾಡಿಕೊಂಡು ನಂತರ ವಕ್ಫ್‌ಗೆ ವರ್ಗಾಯಿಸಬಹುದು. ಹೀಗೆ ಮಾಡುವ ಮೂಲಕ ಆದಷ್ಟು ಬಾಕಿ ಪ್ರಕರಣಗಳನ್ನು ಇತ್ಯರ್ಥಪಡಿಸುವಂತೆ ತಹಶೀಲ್ದಾರ್‌ಗಳಿಗೆ ಸೂಚಿಸಿದರು.

ಹೊನ್ನಾಳಿ ತಾಲ್ಲೂಕಿನ ಹನಗವಾಡಿ ಗ್ರಾಮದಲ್ಲಿ 5 ಎಕರೆ ಜಮೀನು ಮುಸ್ಲಿಂ ಖಬರಸ್ತಾನದ ಆಸ್ತಿ ಎಂದು ಗುರುತಿಸಿದ್ದು, ಇದಕ್ಕೆ ಕಾಂಪೌಂಡ್ ಗೋಡೆ ನಿರ್ಮಿಸಲು ₹5 ಲಕ್ಷ ಅನುದಾನ ಬಿಡುಗಡೆಯಾಗಿದೆ. ಆದರೆ ಅನ್ಯ ಕೋಮಿನವರು ಅರ್ಧ ಭೂಮಿಯನ್ನು ಬಳಕೆ ಮಾಡಿಕೊಳ್ಳೋಣ ಎನ್ನುತ್ತಿದ್ದಾರೆ. ಆದ್ದರಿಂದ ಹೊನ್ನಾಳಿ ತಹಶೀಲ್ದಾರರು ಅಳತೆ ಮಾಡಿ, ಜಮೀನಿನ ಹದ್ದುಬಸ್ತು ಗುರುತಿಸಿ ಕಾಂಪೌಂಡ್ ಗೋಡೆ ನಿರ್ಮಿಸಲು ಆದೇಶಿಸಬೇಕು ಎಂದು ಕೋರಿದರು.

ಚನ್ನಗಿರಿ ಪಟ್ಟಣದಲ್ಲಿರುವ ಜುಮ್ಮಾ ಷಾ ಮಕಾನ್ ಆಸ್ತಿ ಜಾಗ ವಕ್ಫ್ ಸ್ವತ್ತಾಗಿದ್ದು, ಹೈಕೋರ್ಟ್‌ನಲ್ಲಿ 1978ರಲ್ಲಿ ವಕ್ಫ್ ಆಸ್ತಿ ಎಂದು ಆದೇಶವಾಗಿದೆ. ಆದರೆ ಪಹಣಿಯಲ್ಲಿ ಈ ಜಾಗ ಕೋಟೆ ರಂಗನಾಥ ದೇವಸ್ಥಾನ ಎಂದು ತೋರಿಸಲಾಗುತ್ತಿದ್ದು, ಖಾತೆ ಬದಲಾವಣೆಗೆ ಬಗ್ಗೆ ಅನೇಕ ಬಾರಿ ಚನ್ನಗಿರಿ ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿಗಳಿಗೆ ಪತ್ರ ಬರೆದಿದ್ದರೂ ವಿಳಂಬ ಮಾಡಲಾಗುತ್ತಿದೆ. ಆದ್ದರಿಂದ ಖಾತೆ ಬದಲಾವಣೆ ಮಾಡಿಸಿಕೊಡಬೇಕು ಎಂದು ಮನವಿ ಮಾಡಿದರು.

ಜಿಲ್ಲಾ ವಕ್ಫ್ ಸಲಹಾ ಸಮಿತಿ ಅಧ್ಯಕ್ಷ ಮೊಹಮ್ಮದ್ ಸಿರಾಜ್, ‘ಹರಿಹರ ತಾಲ್ಲೂಕಿನ ಭಾನುವಳ್ಳಿ ಗ್ರಾಮದಲ್ಲಿ 4 ಎಕರೆ 32 ಗುಂಟೆ ಜಮೀನು ಖಬರ್‌ಸ್ತಾನವಾಗಿದ್ದು, ಇದೀಗ ಆ ಜಮೀನಿನಲ್ಲಿ ಅನ್ಯ ಕೋಮಿನವರು ನಮ್ಮ ಪೂರ್ವಜರ ಕಾಲದಿಂದ ಇಲ್ಲೇ ಶವ ಸಂಸ್ಕಾರ ಮಾಡುತ್ತಿದ್ದಾರೆ ಎಂದು ಅಡಚಣೆ ಮಾಡುತ್ತಿದ್ದಾರೆ. ಆದ್ದರಿಂದ ಜಿಲ್ಲಾಧಿಕಾರಿ, ಸಿಇಒ ಎಸ್ಪಿಯವರು ಸ್ಥಳ ಪರಿಶೀಲಿಸಿ ಪ್ರಕರಣ ಇತ್ಯರ್ಥಪಡಿಸುವಂತೆ ಕೋರಿದರು.

ಜಿಲ್ಲಾಧಿಕಾರಿಗಳು ಈ ಪ್ರಕರಣಗಳ ಕುರಿತು ಪರಿಶೀಲಿಸಿ ಕ್ರಮ ಕೈಗೊಳ್ಳಲಾಗುವುದು. ಅಗತ್ಯ ಕಂಡುಬಂದ ಪ್ರಕರಣಗಳಲ್ಲಿ ಸ್ಥಳ ಪರಿಶೀಲಿಸಲಾಗುವುದು ಎಂದರು.

ಎಸ್‌ಪಿ ಆರ್‌.ಚೇತನ್, ‘ಮಸೀದಿ, ಇತರೆ ಪ್ರಾರ್ಥನ ಮಂದಿರಗಳಿಗೆ ಸಿಸಿಟಿವಿ ಕ್ಯಾಮೆರಾ ಅಳವಡಿಸುವಂತೆ ಸೂಚಿಸಿದರು.

ಸಭೆಯಲ್ಲಿ ಜಿಲ್ಲಾ ಪಂಚಾಯಿತಿ ಸಿಇಒ ಎಚ್.ಬಸವರಾಜೇಂದ್ರ ಹಾಗೂ ಅಧಿಕಾರಿಗಳು ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.