ಬಸವಾಪಟ್ಟಣ: ಐದು ದಿನಗಳಿಂದ ನಿರಂತವಾಗಿ ಬೀಳುತ್ತಿರುವ ಮಳೆಯಿಂದ ಭತ್ತದ ಕಟಾವಿಗೆ ತೊಂದರೆಯಾಗಿದ್ದು, ಕೊಯ್ಲು ಮಾಡಿದ ಭತ್ತವನ್ನು ಒಣಗಿಸಲಾಗದೇ ರೈತರು ಕಂಗಾಲಾಗಿದ್ದಾರೆ.
ಯಂತ್ರಗಳಿಂದ ಭತ್ತದ ಕೊಯ್ಲು ಮಾಡಿರುವ ರೈತರು, ರಸ್ತೆಗಳ ಪಕ್ಕದಲ್ಲಿ ಅದನ್ನು ರಾಶಿ ಮಾಡಿದ್ದು, ಒಣಗಿಸಲು ಪರದಾಡುತ್ತಿದ್ದಾರೆ. ಒಣಗದ ಭತ್ತದ ಗುಣಮಟ್ಟ ಕಡಿಮೆ ಎಂಬ ಕಾರಣ ನೀಡಿ, ವ್ಯಾಪಾರಿಗಳು ಭತ್ತದ ದರವನ್ನು ಕಡಿಮೆ ಮಾಡಿ ರೈತರನ್ನು ಪೇಚಿಗೆ ಸಿಲುಕಿಸಿದ್ದಾರೆ. ಆಗಾಗ ಬೀಳುತ್ತಿರುವ ಮಳೆಯಿಂದ ರಕ್ಷಿಸಿಕೊಳ್ಳಲು ಹೆಣಗಾಡುತ್ತಿದ್ದು, ಅಲ್ಲಿಯೇ ಸಿಕ್ಕಟ್ಟು ಬೆಲೆಗೆ ಮಾರಾಟ ಮಾಡುತ್ತಿದ್ದಾರೆ.
‘ಸಾಮಾನ್ಯವಾಗಿ ಬೇಸಿಗೆ ಹಂಗಾಮಿನ ಭತ್ತವನ್ನು ಮಳೆಗಾಲದ ಆರಂಭದಲ್ಲಿ ಕೊಯ್ಲು ಮಾಡಲಾಗುತ್ತದೆ. ಭತ್ತ ಒಣಗಿಸಲು ರೈತರಿಗೆ ತೊಂದರೆಯಾಗಿದ್ದು, ಹೋಬಳಿಯಲ್ಲಿರುವ 20 ಸಾವಿರ ಟನ್ ಸಾಮರ್ಥ್ಯದ ನಾಲ್ಕು ಉಗ್ರಾಣಗಳಲ್ಲಿ ಡ್ರೈಯರ್ ಯಂತ್ರಗಳನ್ನು ಸ್ಥಾಪಿಸಿ ರೈತರಿಗೆ ನೆರವಾಗಬೇಕು’ ಎಂದು ರೈತ ಸಂಘದ ತಾಲ್ಲೂಕು ಘಟಕದ ಅಧ್ಯಕ್ಷ ಎಸ್.ಆರ್.ರವಿಕುಮಾರ್ ಒತ್ತಾಯಿಸಿದ್ದಾರೆ.
‘ಡ್ರೈಯರ್ ಯಂತ್ರಗಳು ಮೂರು ಗಂಟೆಗಳಲ್ಲಿ 100 ಕ್ವಿಂಟಲ್ ಭತ್ತವನ್ನು ಒಣಗಿಸುವ ಸಾಮರ್ಥ್ಯ ಹೊಂದಿದ್ದು, ಒಣಗಿಸಿದ ಭತ್ತವನ್ನು ರೈತರು ಉತ್ತಮ ದರಕ್ಕೆ ಮಾರಬಹುದು. ಇಲ್ಲವೇ ಉಗ್ರಾಣಗಳಲ್ಲಿ ಸಂಗ್ರಹಿಸಿಟ್ಟು ನಂತರ ಮಾರಬಹುದು. ದಾಸ್ತಾನಿನ ಆಧಾರದ ಮೇಲೆ ರಾಷ್ಟ್ರೀಕೃತ ಬ್ಯಾಂಕುಗಳಿಂದ ಸಾಲವನ್ನೂ ಪಡೆಯಬಹುದು. ಈ ವ್ಯವಸ್ಥೆ ಭತ್ತ ಬೆಳೆಯುವ ಇತರ ರಾಜ್ಯಗಳಲ್ಲಿದೆ. ಅಲ್ಲಿನ ಮಾದರಿಯಲ್ಲಿ ನಮ್ಮ ರೈತರಿಗೂ ಅನುಕೂಲ ಮಾಡಿಕೊಡಬೇಕು’ ಎಂದು ರೈತ ಸಂಘದ ತಾಲ್ಲೂಕು ಘಟಕದ ಪ್ರಧಾನ ಕಾರ್ಯದರ್ಶಿ ಗುಡ್ಡದ ಕೊಮಾರನಹಳ್ಳಿ ಪ್ರಭಾಕರ್ ಒತ್ತಾಯಿಸಿದ್ದಾರೆ.
ಜಿಲ್ಲಾಧಿಕಾರಿ ನೇತೃತ್ವದಲ್ಲಿ ಈಚೆಗೆ ನಡೆದ ಸಭೆಯಲ್ಲಿ ಭತ್ತವನ್ನು ಕ್ವಿಂಟಲ್‌ಗೆ ₹2,300ರಂತೆ ಖರೀದಿಸಬೇಕೆಂದು ವ್ಯಾಪಾರಿಗಳಿಗೆ ತಿಳಿಸಿದ್ದರೂ, ₹1,700 ಕ್ಕೆ ಖರೀದಿಸಲಾಗುತ್ತಿದೆ. ಇದರಿಂದ ರೈತರಿಗೆ ಭಾರಿ ನಷ್ಟವಾಗುತ್ತಿದೆ ಎಂದು ಖಜಾಂಚಿ ಗಾಣದಕಟ್ಟೆ ಆಂಜನೇಯ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.