ADVERTISEMENT

ಕೊರೊನಾ: ವೈದ್ಯರ ಹೋರಾಟಕ್ಕೆ ವೆಬಿನಾರ್‌ ಸಾಥ್

ಇಂಡಿಯನ್‌ ಚೆಸ್ಟ್‌ ಸೊಸೈಟಿ, ಚೆಸ್ಟ್‌ ಕೌನ್ಸಿಲ್‌ ಆಫ್‌ ಇಂಡಿಯಾದ ವಿನೂತನ ಪ್ರಯತ್ನ

​ಪ್ರಜಾವಾಣಿ ವಾರ್ತೆ
Published 5 ಏಪ್ರಿಲ್ 2020, 10:02 IST
Last Updated 5 ಏಪ್ರಿಲ್ 2020, 10:02 IST
ಡಾ. ಎನ್‌.ಎಚ್‌. ಕೃಷ್ಣ
ಡಾ. ಎನ್‌.ಎಚ್‌. ಕೃಷ್ಣ   

ದಾವಣಗೆರೆ: ಕೋವಿಡ್‌–19 ವಿರುದ್ಧ ಹೋರಾಟದಲ್ಲಿ ಭಾಗಿಯಾಗಿರುವ ವೈದ್ಯರು, ವೈದ್ಯ ವಿದ್ಯಾರ್ಥಿಗಳಿಗೆ ಈ ಬಗ್ಗೆ ಹೆಚ್ಚಿನ ಜ್ಞಾನ, ಮಾಹಿತಿ ನೀಡಲು ಇಂಡಿಯನ್‌ ಚೆಸ್ಟ್‌ ಸೊಸೈಟಿ ಹಾಗೂ ಚೆಸ್ಟ್‌ ಕೌನ್ಸಿಲ್‌ ಆಫ್‌ ಇಂಡಿಯಾ ಮುಂದಾಗಿದೆ.

ಕೊರೊನಾ ತಡೆಗೆ ಶ್ರಮಿಸುತ್ತಿರುವ ವೈದ್ಯರು, ಆರೋಗ್ಯ ಸಿಬ್ಬಂದಿ ಸದ್ಯ ಮನೆ, ಆಸ್ಪತ್ರೆ, ಸಭೆ, ಆರೋಗ್ಯ ಸಂಬಂಧಿ ಸಮ್ಮೇಳನ, ಕಾರ್ಯಾಗಾರ ಎಲ್ಲದರಿಂದ ದೂರ ಇದ್ದಾರೆ. ಇದರಿಂದ ಅವರಿಗೆ ವೈದ್ಯಕೀಯ ಕ್ಷೇತ್ರದಲ್ಲಿನ ಬೆಳವಣಿಗೆಯ ಮಾಹಿತಿ ಸಿಗುತ್ತಿಲ್ಲ. ಇದನ್ನು ಮನಗಂಡು ಅವರಿಗೆ ಈ ಬಗ್ಗೆ ಹೆಚ್ಚಿನ ಮಾಹಿತಿ, ಸಾಧಕ–ಬಾಧಕ ಕುರಿತು ತಿಳಿಸಲು ‘ಕೋವಿಡ್‌–19 ವೆಬಿನಾರ್‌’ ಎಂಬ ಹೊಸ ವೇದಿಕೆ ಸಿದ್ಧವಾಗಿದೆ.

ಇಲ್ಲಿ ಕೊರೊನಾ ಬಗ್ಗೆ ವೈದ್ಯಕೀಯ ಸಿಬ್ಬಂದಿಗೆ ಹೆಚ್ಚಿನ ಮಾಹಿತಿ ನೀಡಲಾಗುತ್ತಿದೆ. ಮೊಬೈಲ್‌ನಲ್ಲೇ ಈ ಬಗ್ಗೆ ಮಾಹಿತಿ ಪಡೆಯಬಹುದು.

ADVERTISEMENT

ಏನಿದು ‘ವೆಬಿನಾರ್‌’

‘ಕೋವಿಡ್‌–19 ವೆಬಿನಾರ್‌’ ವೇದಿಕೆಯಲ್ಲಿ ಹಲವು ನುರಿತ ತಜ್ಞರು 15 ನಿಮಿಷಗಳ ಕೊರೊನಾ ವೈರಸ್‌ ಕುರಿತು ಮಾಹಿತಿ ನೀಡುತ್ತಾರೆ. ಬಳಿಕ ಸಂವಾದ ನಡೆಯಲಿದೆ. ವೈದ್ಯಕೀಯ ಸಿಬ್ಬಂದಿ ತಜ್ಞರ ವಿಷಯ ಮಂಡನೆ ಬಳಿಕ ತಮ್ಮ ಸಂದೇಹಗಳು, ಕೊರೊನಾ ಕುರಿತ ಪ್ರಶ್ನೆಗಳನ್ನು (ಮೊಬೈಲ್‌ನಲ್ಲಿ ಮೆಸೇಜ್‌ಗಳನ್ನು ಟೈಪ್ ಮಾಡುವ ಮೂಲಕ) ಕೇಳಬಹುದು. ಇದಕ್ಕೆ ಅಲ್ಲಿಯೇ ತಜ್ಞ ವೈದ್ಯರು ಉತ್ತರ ನೀಡುತ್ತಾರೆ.

bit.ly/ICSCOVID2020 ಈ ಲಿಂಕ್‌ ಕ್ಲಿಕ್‌ ಮಾಡಿದರೆ ‘ವೆಬಿನಾರ್‌’ನ ಪುಟ ತೆರೆದುಕೊಳ್ಳುತ್ತದೆ. ಎಡ ಬದಿ ಕಾಣುವ ಖಾಲಿ ಜಾಗದಲ್ಲಿ ನಿಮ್ಮ ಹೆಸರು, ಸ್ಥಳ, ಇ–ಮೇಲ್ ಹಾಗೂ ಸಂಪರ್ಕ ಸಂಖ್ಯೆ ದಾಖಲಿಸಿದರೆ ವೈದ್ಯರು ನೀಡುವ ಮಾಹಿತಿಯನ್ನು ಪಡೆಯಬಹುದು. ವಿಷಯ ಮಂಡನೆ ಕಾರ್ಯಕ್ರಮ ಆರಂಭವಾಗುವ ಸಮಯದಲ್ಲಿ (ರಾತ್ರಿ 7ರಿಂದ 8 ಅಥವಾ 8ರಿಂದ 9) ಮಾತ್ರ ಈ ಲಿಂಕ್‌ನಲ್ಲಿ ವೈದ್ಯರ ನೇರ ಉಪನ್ಯಾಸ ಕಾರ್ಯಕ್ರಮ ವೀಕ್ಷಿಸಬಹುದು.

‘ಕೋವಿಡ್‌ ವಿರುದ್ಧ ಹೋರಾಡುತ್ತಿರುವ ವೈದ್ಯಕೀಯ ಸಿಬ್ಬಂದಿ ಅನುಕೂಲಕ್ಕಾಗಿ, ಅವರಿಗೆ ಹೆಚ್ಚಿನ ಜ್ಞಾನ ನೀಡಲು ಈ ವೇದಿಕೆ ಸಿದ್ಧಪಡಿಸಲಾಗಿದೆ. ಏ. 15ರವರೆಗೂ ಕಾರ್ಯಕ್ರಮ ನಡೆಯಲಿದೆ. ಒಟ್ಟು 8 ವಿಷಯಗಳ ಉಪನ್ಯಾಸ ನಡೆಯಲಿದೆ. ದೇಶದ ವಿವಿಧೆಡೆಯ ನುರಿತ ತಜ್ಞರು ಮಾಹಿತಿ ಹಂಚಿಕೊಳ್ಳಲಿದ್ದಾರೆ’ ಎಂದುಚೆಸ್ಟ್‌ ಕೌನ್ಸಿಲ್‌ ಆಫ್‌ ಇಂಡಿಯಾದ ಅಧ್ಯಕ್ಷ ಡಾ. ಎನ್‌.ಎಚ್‌. ಕೃಷ್ಣ ಕಾರ್ಯಕ್ರಮದ ಬಗ್ಗೆ ‘ಪ್ರಜಾವಾಣಿ’ಗೆ ವಿವರಿಸಿದರು.

‘ಕೋವಿಡ್‌–19 ಬಗ್ಗೆ ವಿವರ, ಅದರ ವ್ಯಾಖ್ಯಾನ, ಅದರ ತಡೆ, ಚಿಕಿತ್ಸೆ ಹೀಗೆ ವಿವಿಧ ವಿಷಯಗಳು ಇಲ್ಲಿ ಮಂಡನೆಯಾಗಲಿವೆ. ಅಲ್ಲದೇ ಏಪ್ರಿಲ್‌ 15ರ ಬಳಿಕವೂ ಕಾರ್ಯಕ್ರಮ ಮುಂದುವರಿಯಲಿದೆ. ಅಲ್ಲಿ ಕೊರೊನಾ ಸೋಂಕು ತಗುಲಿ ಗುಣವಾದವರಿಗೆ ಯಾವ ರೀತಿಯ ಚಿಕಿತ್ಸೆ ನೀಡಲಾಯಿತು? ಬೇರೆ ದೇಶಗಳಿಗೆ ಹೋಲಿಸಿದರೆ ಭಾರತದಲ್ಲಿ ಸೋಂಕಿನಿಂದ ಸತ್ತವರ ಸಂಖ್ಯೆ ಕಡಿಮೆ. ಇದಕ್ಕೆ ಕಾರಣಗಳೇನು? ಮುಂದೆ ಕೈಗೊಳ್ಳಬೇಕಾದ ಮುಂಜಾಗ್ರತಾ ಕ್ರಮಗಳೇನು.. ಹೀಗೆ ಹತ್ತು ಹಲವು ವಿಷಯಗಳ ಚರ್ಚೆ ನಡೆಯಲಿದೆ’ ಎಂದು ಅವರು ಮಾಹಿತಿ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.