ADVERTISEMENT

ದಾವಣಗೆರೆ: ಸ್ವಲ್ಪ ಕಹಿ, ಹೆಚ್ಚು ಸಿಹಿ ಬೆಳೆ ಸಮೀಕ್ಷೆ

ಶೇ 64 ಸಾಧನೆ ಮಾಡಿದ ಜಿಲ್ಲೆ lತಿಂಗಳ ಅಂತ್ಯದೊಳಗೆ ಪೂರ್ಣ

ಬಾಲಕೃಷ್ಣ ಪಿ.ಎಚ್‌
Published 21 ಸೆಪ್ಟೆಂಬರ್ 2020, 1:12 IST
Last Updated 21 ಸೆಪ್ಟೆಂಬರ್ 2020, 1:12 IST
ಮಲೇಬೆನ್ನೂರು ಹೋಬಳಿಯಲ್ಲಿ ಬೆಳೆ ಸಮೀಕ್ಷೆ ನಡೆಸುತ್ತಿರುವ ರೈತ
ಮಲೇಬೆನ್ನೂರು ಹೋಬಳಿಯಲ್ಲಿ ಬೆಳೆ ಸಮೀಕ್ಷೆ ನಡೆಸುತ್ತಿರುವ ರೈತ   

ದಾವಣಗೆರೆ: ನೆಟ್‌ವರ್ಕ್‌ ಸಮಸ್ಯೆ, ಮೊಬೈಲ್‌ ಇಲ್ಲದಿರುವುದು, ಮಾಹಿತಿ ಸರಿಯಾಗಿ ಗೊತ್ತಿಲ್ಲದೇ ಇರುವುದು ಮುಂತಾದ ಸಮಸ್ಯೆಗಳನ್ನು ಮೀರಿ ಜಿಲ್ಲೆಯಲ್ಲಿ ಬೆಳೆ ಸಮೀಕ್ಷೆ ಯಶಸ್ವಿಯಾಗುವತ್ತ ದಾಪುಗಾಲು ಹಾಕಿದೆ. ಈಗಾಗಲೇ ಶೇ 64ರಷ್ಟು ಪೂರ್ಣಗೊಂಡಿದ್ದು, ರಾಜ್ಯದಲ್ಲಿಯೇ ಮೂರನೇ ಸ್ಥಾನ ಪಡೆದಿದೆ.

ಜಿಲ್ಲೆಯಲ್ಲಿ 4,97,301 ಹಿಡುವಳಿಗಳು ಇವೆ. ಅದರಲ್ಲಿ 19,093 ಬೆಳೆ ಸಮೀಕ್ಷೆಯಡಿ ಬರುವುದಿಲ್ಲ. ಅವುಗಳನ್ನು ಹೊರತುಪಡಿಸಿ 4,78,208 ಹಿಡುವಳಿಗಳ ಸಮೀಕ್ಷೆ ನಡೆಯಬೇಕು. ಅದರಲ್ಲಿ 3,08,355 ಹಿಡುವಳಿಗಳ ಸಮೀಕ್ಷೆ ಮುಗಿದಿದೆ. ಈಗಾಗಲೇ ಪೂರ್ಣಗೊಂಡಿರುವುದರಲ್ಲಿ ಶೇ 88ರಷ್ಟು ರೈತರೇ ಸಮೀಕ್ಷೆ ನಡೆಸಿದ್ದಾರೆ. ಶೇ 12ರಷ್ಟು ಮಾತ್ರ ಪಿ.ಆರ್‌.ಗಳ (ಪ್ರೈವೇಟ್‌ ರೆಸಿಡೆನ್ಸೀಸ್‌) ನೆರವಿನಿಂದ ಆಗಿದೆ.

ರೈತರು ತಮ್ಮ ಜಮೀನಿನ ವಿಸ್ತೀರ್ಣ, ಛಾಯಾಚಿತ್ರ ಸಹಿತ ಬೆಳೆಯ ವಿವರಗಳ ಬಗ್ಗೆ ನಿಖರ ಮಾಹಿತಿ ನೀಡುತ್ತಿದ್ದಾರೆ. ಬೆಂಬಲ ಬೆಲೆ ಖರೀದಿ ಕೇಂದ್ರದಲ್ಲಿ ಮಾರಾಟ ಮಾಡುವಲ್ಲಿ, ಬೆಳೆ ವಿಮೆ, ಬೆಳೆ ನಷ್ಟ ಪರಿಹಾರ ಹಾಗೂ ಬೆಳೆಸಾಲದ ಸಂದರ್ಭದಲ್ಲಿ ಈ ಸಮೀಕ್ಷೆಯಿಂದ ಅನುಕೂಲವಾಗಲಿದೆ. ಪ್ರತಿ ಹಂಗಾಮಿನಲ್ಲಿ ರೈತ ತನ್ನ ಜಮೀನಿನಲ್ಲಿ ಬೆಳೆಯುವ ಬೆಳೆಯ ಬಗ್ಗೆ ಮಾಹಿತಿ ನೀಡುವುದರಿಂದ ರೈತರಿಗೆ ಅಗತ್ಯ ಮಾಹಿತಿ ಹಾಗೂ ಸೌಲಭ್ಯ ನೀಡುವುದು ಸರಳವಾಗಲಿದೆ.

ADVERTISEMENT

‘ಗ್ರಾಮವಾರು ಪ್ರಚಾರ ಮಾಡಲಾಗಿದೆ. ಟ್ಯಾಬ್ಲೋ ಮೂಲಕವೂ ಜಾಗೃತಿ ಮೂಡಿಸಲಾಗುತ್ತಿದೆ. ರೈತ ಸಂಪರ್ಕ ಕೇಂದ್ರಗಳಲ್ಲೂ ಈ ಬಗ್ಗೆ ಮಾಹಿತಿ ನೀಡಲಾಗುತ್ತಿದೆ. ರೈತರಿಗೇ ಉಪಯೋಗ ಆಗುವುದರಿಂದ ಎಲ್ಲರೂ ಸಮೀಕ್ಷೆ ನಡೆಸಲು ಉತ್ಸುಕರಾಗಿದ್ದಾರೆ’ ಎಂದು ಕೃಷಿ ಇಲಾಖೆ ಜಂಟಿ ನಿರ್ದೇಶಕಶ್ರೀನಿವಾಸ ಚಿಂತಾಲ್‌ ವಿ. ‘ಪ್ರಜಾವಾಣಿ’ಗೆ ತಿಳಿಸಿದರು.

ರೈತರು ತಮ್ಮ ಜಮೀನಿನಲ್ಲಿ ಯಾವ ಬೆಳೆಗಳನ್ನು ಬೆಳೆಯಲಾಗಿದೆ ಎಂಬ ಬಗ್ಗೆ ವಿವರವನ್ನು ನೀಡಲು ಕೃಷಿ ಹಾಗೂ ತೋಟಗಾರಿಕೆ ಇಲಾಖೆಗಳಿಗೆ ಹೋಗಬೇಕಾಗಿತ್ತು. ಈ ಆ್ಯಪ್‌ನಿಂದ ಇಲಾಖಾ ಕಚೇರಿಗಳಿಗೆ ಬರುವುದು ತಪ್ಪಿದೆ. ರೈತರ ಬಗ್ಗೆ ಕೀಳಂದಾಜು ಮಾಡಬಾರದು. ಹೆಚ್ಚಿನವರಿಗೆ ಫೇಸ್‌ಬುಕ್‌, ವಾಟ್ಸ್‌ಆ್ಯಪ್‌ ಬಳಸುವುದು ಗೊತ್ತು. ಸಮೀಕ್ಷೆ ಮಾಡಲು ಗೊತ್ತಾಗದವರಿಗೆ ನಮ್ಮ ಪಿ.ಆರ್‌.ಗಳು ಸಹಾಯ ಮಾಡುತ್ತಾರೆ ಎನ್ನುತ್ತಾರೆ ಅವರು.

ಕೃಷಿ, ತೋಟಗಾರಿಕೆ, ಕಂದಾಯ, ರೇಷ್ಮೆ ಹೀಗೆ ಅನೇಕ ಇಲಾಖೆಗಳು ಸೇರಿ ನಡೆಸುತ್ತಿರುವ ಈ ಸಮೀಕ್ಷೆಯಲ್ಲಿ ರಾಜ್ಯದಲ್ಲಿ ವಿಜಯಪುರ (ಶೇ 68.71), ಕೋಲಾರ (ಶೇ 65.32) ಜಿಲ್ಲೆಗಳು ಮಾತ್ರ ದಾವಣಗೆರೆಗಿಂತ ಮೇಲಿವೆ. ಕೊಡಗು (ಶೇ 18.02) ಕೊನೇ ಸ್ಥಾನದಲ್ಲಿದೆ.

ಕೈಕೊಡುತ್ತಿರುವ ಆ್ಯಪ್‌: ರೈತ ಕಂಗಾಲು

ಹರಪನಹಳ್ಳಿ: ಕಂದಾಯ ಮತ್ತು ಕೃಷಿ ಇಲಾಖೆ ಅಭಿವೃದ್ಧಿ ಪಡಿಸಿರುವ ರೈತರ ಬೆಳೆ ಸಮೀಕ್ಷೆ ಆ್ಯಪ್ ಕೈಕೊಡುತ್ತಿರುವ ಪರಿಣಾಮ ಬಳ್ಳಾರಿ ಜಿಲ್ಲೆಯ ಹರಪನಹಳ್ಳಿ ತಾಲ್ಲೂಕಿನ ರೈತರು ಹೈರಾಣಾಗಿದ್ದಾರೆ.

ಮೊಬೈಲ್‍ ಇಲ್ಲದಿರುವುದು, ನೆಟ್‍ವರ್ಕ್‌ ಸಮಸ್ಯೆ ಸೇರಿ ವಿವಿಧ ಕಾರಣಗಳಿಂದ ತಾಲ್ಲೂಕಿನ 81 ಕಂದಾಯ ಗ್ರಾಮಗಳಲ್ಲಿನ 230 ಹಳ್ಳಿಗಳ ವ್ಯಾಪ್ತಿಯಲ್ಲಿ ಬೆಳೆ ಸಮೀಕ್ಷೆಗೆ ಹಿನ್ನಡೆಯಾಗಿದೆ. 1,24,578 ಪ್ಲಾಟ್‍ಗಳಲ್ಲಿ ಬಿತ್ತನೆಯಾಗಿದ್ದು, 38,696 ಪ್ಲಾಟ್‍ಗಳ ಸಮೀಕ್ಷೆ ಮಾಡಲಾಗಿದೆ. ಕೇವಲ ಶೇ 30ರಷ್ಟು ಪ್ರಗತಿ ಕಂಡಿದೆ.

ತಾಲ್ಲೂಕಿನಲ್ಲಿ ಮೆಕ್ಕೆಜೋಳ–70,905 ಹೆಕ್ಟೇರ್‌, ಭತ್ತ– 2 ಸಾವಿರ ಹೆಕ್ಟೇರ್‌, ಜೋಳ–750 ಹೆಕ್ಟೇರ್‌, ರಾಗಿ–3,885 ಹೆಕ್ಟೇರ್‌, ತೊಗರಿ–3,255, ಶೇಂಗಾ-2480 ಸೇರಿ ಒಟ್ಟು 83,820 ಹೆಕ್ಟೇರ್‌ ಬಿತ್ತನೆಯಾಗಿದೆ. ರೈತರಿಗೆ ಸಮೀಕ್ಷೆ ಬಗ್ಗೆ ತಿಳಿವಳಿಕೆ ನೀಡುತ್ತಿದ್ದೇವೆ ಎನ್ನುತ್ತಾರೆ ಕೃಷಿ ಸಹಾಯಕ ನಿರ್ದೇಶಕ ಗೊಂದಿ ಮಂಜುನಾಥ.

ರೈತರಿಗೆ ಸಮೀಕ್ಷೆ ಮಾಡುವುದು ತೊಂದರೆಯಾದರೆ, ಅದನ್ನು ಪೂರೈಸಲು ಇಲಾಖೆ 81 ಕಂದಾಯ ಗ್ರಾಮಗಳ ವ್ಯಾಪ್ತಿಯಲ್ಲಿ ಪ್ರತಿ 1,500 ಪ್ಲಾಟ್‍ಗೆ ಮೂರು ಜನರಂತೆ 123 ಜನ ಖಾಸಗಿ ನಿವಾಸಿ (ಪಿಆರ್‌)ಗಳನ್ನು ನೇಮಿಸಿದೆ. ಸಮಸ್ಯೆ ಇರುವ ರೈತರು ಅವರನ್ನು ಸಂಪರ್ಕಿಸಬಹುದು ಎಂದು ಮಂಜುನಾಥ್ ಮಾಹಿತಿ ನೀಡಿದರು.

ಜಗಳೂರಿನಲ್ಲಿ ಶೇ 40ರಷ್ಟು ಸಮೀಕ್ಷೆ

ಜಗಳೂರು: ತಾಲ್ಲೂಕಿನಲ್ಲಿ 71 ಸಾವಿರ ಹಿಡುವಳಿಗಳಲ್ಲಿ ಬೆಳೆ ಸಮೀಕ್ಷೆ ಗುರಿ ಇದ್ದು, ಇದುವರೆಗೆ ಆ್ಯಪ್ ಮೂಲಕ ಸ್ವತಃ 31 ಸಾವಿರ ಹಿಡುವಳಿಗಳಲ್ಲಿ ರೈತರೇ ಬೆಳೆ ಸಮೀಕ್ಷೆ ಮಾಡಿದ್ದಾರೆ.
ಶೇ 40ರಷ್ಟು ಗುರಿ ಸಾಧನೆಯಾಗಿದೆ.

ರೈತರು, ಖಾಸಗಿ ನಿವಾಸಿಗಳಿಂದ
(ಪಿ.ಆರ್) ಸಮೀಕ್ಷಾ ಕಾರ್ಯಕ್ಕೆ ಚುರುಕು ನೀಡಲು ತಹಶೀಲ್ದಾರ್‌ಗೆ ಮನವಿ ಸಲ್ಲಿಸಲಾಗಿದೆ. ತಾಲ್ಲೂಕಿನ 170 ಹಳ್ಳಿಗಳ ಪೈಕಿ 140ಕ್ಕೂ ಹೆಚ್ಚು ಹಳ್ಳಿಗಳಲ್ಲಿ ರೈತರ ಮನೆಬಾಗಿಲಿಗೆ ತೆರಳಿ ಬೆಳೆ ಸಮೀಕ್ಷೆ ಆ್ಯಪ್ ಬಗ್ಗೆ ಜಾಗೃತಿ ಮೂಡಿಸಲಾಗಿದೆ ಎಂದು ಕೃಷಿ ಇಲಾಖೆ ಸಹಾಯಕ ನಿರ್ದೇಶಕ ಶ್ರೀನಿವಾಸುಲು ಮಾಹಿತಿ ನೀಡಿದರು.

ಸಮೀಕ್ಷೆಯ ಬಗ್ಗೆ ಸಮಸ್ಯೆಗಳಿದ್ದಲ್ಲಿ ಸಮೀಪದ ಗ್ರಾಮ ಲೆಕ್ಕಾಧಿಕಾರಿಯನ್ನು ಸಂಪರ್ಕಿಸಬಹುದು ಎಂದು ಅವರು ಸ್ಪಷ್ಟಪಡಿಸಿದ್ದಾರೆ.

ಹರಿಹರ: 31,600 ಹಿಡುವಳಿದಾದರರ ಸಮೀಕ್ಷೆ ಪೂರ್ಣ

ಹರಿಹರ: ತಾಲ್ಲೂಕಿನಲ್ಲಿ 32 ಸಾವಿರ ಹೆಕ್ಟೇರ್‍ ಸಾಗುವಳಿ ಜಮೀನಿದ್ದು, 63,330 ಹಿಡುವಳಿದಾರರಿದ್ದಾರೆ. ಪ್ರಸ್ತುತ ಶೇ 50ರಷ್ಟು (31,600 ಹಿಡುವಳಿದಾರರು) ಸಮೀಕ್ಷೆಯಲ್ಲಿ ಪಾಲ್ಗೊಂಡಿದ್ದಾರೆ. ಗ್ರಾಮ ಸಹಾಯಕರು ಹಾಗೂ ಖಾಸಗಿ ವ್ಯಕ್ತಿಗಳ ಸಹಕಾರದಿಂದ ಸೆ.30ರೊಳಗೆ ಸಮೀಕ್ಷೆ ಕಾರ್ಯ ಪೂರ್ಣಗೊಳಿಸುವ ವಿಶ‍್ವಾಸವಿದೆ ಎಂದು ಕೃಷಿ ಸಹಾಯಕ ನಿರ್ದೆಶಕ ವಿ.ಪಿ. ಗೋವರ್ಧನ ಮಾಹಿತಿ ನೀಡಿದರು.

ರೈತರು ತಮ್ಮ ಬೆಳೆಗಳ ಬಗ್ಗೆ ಸ್ವಯಂ ಘೋಷಣೆ ಮಾಡಿಕೊಳ್ಳುವ ಯೋಜನೆ ರೈತಸ್ನೇಹಿಯಾಗಿದೆ. ಬೆಳೆದ ಬೆಳೆಗೆ ಸರ್ಕಾರದಿಂದ ದೊರೆಯುವ ಸೌಲಭ್ಯ ಹಾಗೂ ಬೆಲೆಯ ಮಾಹಿತಿ ರೈತರಿಗೆ ಸುಲಭವಾಗಿ ದೊರೆಯುವುದರಿಂದ ರೈತರ ಬದುಕು ಹಸನಾಗುವ ನಿರೀಕ್ಷೆ ಇದೆ ಎಂದು ರೈತ ಮುಖಂಡ ಪ್ರಭುಗೌಡ ವಿಶ‍್ವಾಸ ವ್ಯಕ್ತಪಡಿಸಿದರು.

ಹೊನ್ನಾಳಿ: ಕಷ್ಟವಾಗುವ ರೈತರಿಗೆ ನೆರವು

ಹೊನ್ನಾಳಿ: ತಾಲ್ಲೂಕಿನಲ್ಲಿ 59,259 ಸಾವಿರ ಪ್ಲಾಟ್‌ಗಳನ್ನು ಸಮೀಕ್ಷೆ ಮಾಡುವ ಗುರಿ ಇದೆ. ಶೇ 44ರಷ್ಟು (25,884 ) ಗುರಿ ತಲುಪಲಾಗಿದೆ ಎಂದು ಸಹಾಯಕ ಕೃಷಿ ನಿರ್ದೇಶಕ ಸಿ.ಟಿ. ಸುರೇಶ್‌ ಮಾಹಿತಿ ನೀಡಿದ್ದಾರೆ.

ಬೆಳೆ ಸಮೀಕ್ಷೆ ಆ್ಯಪ್‌ನಲ್ಲಿ ಟೆಕ್ನಿಕಲ್ ಸಮಸ್ಯೆ ಕಂಡುಬಂದಿದೆ. ಅದನ್ನು ಸರಿಪಡಿಸಿಕೊಂಡು ಮುಂದುವರಿಯಬೇಕಾಗುತ್ತದೆ. ಅಂಡ್ರಾಯ್ಡ್ ಮೊಬೈಲ್ ಎಲ್ಲಾ ರೈತರಲ್ಲಿ ಇಲ್ಲದೇ ಇರುವುದು ಕೂಡ ಸಮಸ್ಯೆ. ಅವರಿಗೆ ಇಲಾಖೆ ನೆರವು ನೀಡಲಿದೆ ಎಂದು ತಿಳಿಸಿದರು.

ನ್ಯಾಮತಿ: ಖಾಸಗಿ ನಿವಾಸಿಗಳ ನೆರವು

ನ್ಯಾಮತಿ: ತಾಲ್ಲೂಕಿನಲ್ಲಿ 41,737 ಪ್ಲಾಟ್‌ಗಳಲ್ಲಿ ಬೆಳೆ ಸಮೀಕ್ಷೆ ನಡೆಯಬೇಕಿದ್ದು, ಅದರಲ್ಲಿ 16,873 ಹಿಡುವಳಿಗಳಲ್ಲಿ ಬೆಳೆದಿರುವ ಬೆಳೆಗಳನ್ನು ರೈತರು ಮೊಬೈಲ್‌ನಲ್ಲಿ ದಾಖಲಿಸಿದ್ದಾರೆ. ಶೇ 40.43 ಸಾಧನೆಯಾಗಿದೆ ಎಂದು ರೈತ ಸಂಪರ್ಕ ಕೇಂದ್ರದ ಕೃಷಿ ಅಧಿಕಾರಿ ಗೋವಿಂದ ನಾಯ್ಕ ತಿಳಿಸಿದ್ದಾರೆ.

ಕೆಲವು ರೈತರು ಮೊಬೈಲ್ ಮತ್ತು ಮಾಹಿತಿ ಕೊರತೆಯಿಂದ ದಾಖಲಿಸಲು ಸಾಧ್ಯವಾಗದೇ ಇರುವುದರಿಂದ ಸೆ.15ರಿಂದ ಖಾಸಗಿ ನಿವಾಸಿಗಳ ನೆರವಿನಲ್ಲಿ ದಾಖಲಿಸಲು ಅನುವು ಮಾಡಿಕೊಟ್ಟಿದೆ ಎಂದು ಮಾಹಿತಿ ನೀಡಿದರು.

ಚನ್ನಗಿರಿಯಲ್ಲಿ ಶೇ 72 ಪೂರ್ಣ

ಚನ್ನಗಿರಿ: ತಾಲ್ಲೂಕಿನಲ್ಲಿ ಬೆಳೆ ಸಮೀಕ್ಷೆಗೆ ಉತ್ತಮ ಸ್ಪಂದನ ನೀಡಿದ್ದಾರೆ. 1,25,544 ಪ್ಲಾಟ್‌ಗಳಲ್ಲಿ 72,178 ಪ್ಲಾಟ್‌ಗಳಲ್ಲಿ (ಶೇ 72.17) ಬೆಳೆ ಸಮೀಕ್ಷೆ ಮುಗಿಸಲಾಗಿದೆ ಎಂದು ಸಹಾಯಕ ಕೃಷಿ ನಿರ್ದೇಶಕ ಶಿವಕುಮಾರ್‌ ಮಲ್ಲಾಡದ ಮಾಹಿತಿ ನೀಡಿದ್ದಾರೆ.

ಆರು ಹೋಬಳಿವಾರು ವಿವರ: ಉಬ್ರಾಣಿ– 21,027 ಪ್ಲಾಟ್‌ಗಳಲ್ಲಿ 12,229; ಸಂತೇಬೆನ್ನೂರು–1ರಲ್ಲಿ 19,753 ಪ್ಲಾಟ್‌ಗಳ ಪೈಕಿ 13,661; ಸಂತೇಬೆನ್ನೂರು–2ರಲ್ಲಿ 21,087 ಪ್ಲಾಟ್‌ಗಳಲ್ಲಿ 12,221; ಬಸವಾಪಟ್ಟಣ–1ರ 16,266 ಪ್ಲಾಟ್‌ಗಳಲ್ಲಿ 11,499; ಬಸವಪಟ್ಟಣೆ–2ರ 13,337 ಪ್ಲಾಟ್‌ಗಳಲ್ಲಿ 6511 ಹಾಗೂ ಕಸಬಾದ 34,074 ಪ್ಲಾಟ್‌ಗಳಲ್ಲಿ 16,067 ಪ್ಲಾಟ್‌ಗಳನ್ನು ಸಮೀಕ್ಷೆ ಮಾಡಲಾಗಿದೆ.

ರೈತರು ಏನಂತಾರೆ?

ಬೆಳೆ ಸಮೀಕ್ಷೆ ಆ್ಯಪ್ ಡೌನ್‌ಲೋಡ್‌ ಮಾಡುವುದು ಹೇಗೆ ಎಂದು ಮೊದಲು ತಿಳಿದಿರಲಿಲ್ಲ. ನಂತರ ಬೇರೆಯವರಿಂದ ಡೌನ್‌ಲೋಡ್‌ ಮಾಡಿಸಿ ಬೆಳೆ ಸಮೀಕ್ಷೆ ವಿವರವನ್ನು ತುಂಬಿಸಿದೆ. ಈ ಆ್ಯಪ್‌ನಿಂದಾಗಿ ರೈತರು ಕಚೇರಿಗೆ ಅಲೆಯುವುದು ತಪ್ಪಿದೆ.

– ಬೆಳ್ಳಿಗನೂಡು ಬಸವರಾಜಪ್ಪ, ಚನ್ನಗಿರಿ ತಾಲ್ಲೂಕು

ರೈತರು ಮೊಬೈಲ್‌ನಿಂದ ಬೆಳೆ ಸಮೀಕ್ಷೆಯನ್ನು ಅಪ್‌ಲೋಡ್ ಮಾಡುವ ಆ್ಯಪ್ ಇಷ್ಟವಾಗಿದೆ. ಸೆಕೆಂಡಿಗೆ 70 ಎಂ.ಬಿ. ಸ್ಪೀಡ್ ಇರುವ ಈ ಆ್ಯಪ್‌ ಹಳ್ಳಿಗಾಡಿನಲ್ಲಿ ಡೌನ್‌ಲೋಡ್ ಆಗುವುದು ಕಷ್ಟ. ಈಚೆಗೆ ಆಧಾರ್ ಕಾರ್ಡ್ ಸ್ಕ್ಯಾನಿಂಗ್ ಕೇಳುತ್ತಿದ್ದು, ಪಹಣಿ ಮತ್ತು ಆಧಾರ್ ಕಾರ್ಡ್‌ನಲ್ಲಿ ಹೆಸರು ಸ್ವಲ್ಪ ವ್ಯತ್ಯಾಸವಿದ್ದರೂ ಮುಂದಿನ ಹಂತಕ್ಕೆ ಹೋಗುವುದಿಲ್ಲ.

– ಬಿ.ಆರ್. ಅಂಜಿನಪ್ಪ, ಬೆಂಚಿಕಟ್ಟೆ ಗ್ರಾಮ, ಜಗಳೂರು ತಾಲ್ಲೂಕು

ರೈತರು ತಮ್ಮ ಬೆಳೆಗಳ ಹಾಗೂ ವಿಸ್ತೀರ್ಣದ ಸಂಪೂರ್ಣ ಮಾಹಿತಿಯನ್ನು ದಾಖಲಿಸುವುದರಿಂದ ಬೆಳೆ ವಿಮೆ ಹಾಗೂ ಪ್ರಕೃತಿ ವಿಕೋಪದಿಂದ ಸಂಭವಿಸಬಹುದಾದ ಹಾನಿಗೆ ಪರಿಹಾರ ಪಡೆಯಲು ಸುಲಭವಾಗುತ್ತದೆ.

– ಎಚ್‍.ಬಿ. ರುದ್ರೇಗೌಡ, ಹರಿಹರ

ಹಿಂದೆ ಪ್ರೈವೇಟ್ ಏಜೆನ್ಸಿಗೆ ಸಮೀಕ್ಷೆ ಮಾಡುವಂತೆ ಸರ್ಕಾರ ಆದೇಶ ಕೊಡುತ್ತಿತ್ತು. ಏಜೆನ್ಸಿ ಪರವಾಗಿ ಬಂದವರು ಎಲ್ಲೋ ಕುಳಿತು ವರದಿ ನೀಡುತ್ತಿದ್ದರು. ಇದರಿಂದ ತಪ್ಪಾಗುತ್ತಿತ್ತು. ಈಗ ರೈತರಿಗೇ ಸಮೀಕ್ಷೆ ಮಾಡುವ ಅವಕಾಶ ನೀಡಿರುವುದರಿಂದ ತಪ್ಪು ಮಾಹಿತಿ ನೀಡಲು ಸಾಧ್ಯವಿಲ್ಲ. ಹಿಂದೆ ಜಮೀನಿನ ಅಕ್ಕ–ಪಕ್ಕ ಇದ್ದ ಜಮೀನಿನ ಪಹಣಿಯನ್ನು ಅಪ್‌ಲೋಡ್ ಮಾಡಬೇಕಾಗಿತ್ತು. ಈಗ ಕೇವಲ ನಮ್ಮ ಜಮೀನಿನ ಪಹಣಿಯನ್ನು ಮಾತ್ರ ಅಪ್‌ಲೋಡ್ ಮಾಡಿದರೆ ಸಾಕಾಗುತ್ತದೆ. ಆರಂಭದಲ್ಲಿ ಸ್ವಲ್ಪ ಕಷ್ಟವಾಗುತ್ತದೆ. ಒಮ್ಮೆ ನೋಡಿಕೊಂಡರೆ ಸುಲಭ.

– ಕೆ.ಇ. ಮಹೇಶ್ವರಪ್ಪ, ಮಾದೇನಹಳ್ಳಿ, ಹೊನ್ನಾಳಿ

ನಾನು ನನ್ನ ಜಮೀನಿನಲ್ಲಿ ಬೆಳೆದಿರುವ ಬೆಳೆ ಸಮೀಕ್ಷೆ ದಾಖಲಿಸುವ ಜೊತೆಗೆ ಗ್ರಾಮದಲ್ಲಿ ಮಾಹಿತಿ ಕೊರತೆ ಇರುವ ಕೆಲವು ರೈತರ ಬೆಳೆಗಳನ್ನು ಸಮೀಕ್ಷೆ ಆ್ಯಪ್‌ನಲ್ಲಿ ದಾಖಲಿಸಿದ್ದೇನೆ. ಸರ್ಕಾರದಿಂದ ಸಿಗುವ ಸೌಲಭ್ಯ ಪಡೆಯಲು ಇದು ಉತ್ತಮ ಯೋಜನೆಯಾಗಿದೆ.

– ಹರೀಶ, ಎಂಬಿಎ ಪದವೀಧರ, ಹೊಸಕೊಪ್ಪ, ನ್ಯಾಮತಿ

ಬೆಳೆ ಸಮೀಕ್ಷೆ ಮಾಡಲು ದುಬಾರಿ ಮೊಬೈಲ್ ಬೇಕು. ಕೆಲವು ರೈತರಲ್ಲಿರುವ ಕೀಪ್ಯಾಡ್ ಮೊಬೈಲ್‌ಗಳಲ್ಲಿ ದಾಖಲೆ ಮಾಡಲು ಬರುವುದಿಲ್ಲ. ಹಾಗಾಗಿ ಖಾಸಗಿ ನಿವಾಸಿಗಳ ಸಹಕಾರದೊಂದಿಗೆ ಬೆಳೆ ಸಮೀಕ್ಷೆ ಮಾಡಿಸುತ್ತಿದ್ದಾರೆ.

– ವೀರೇಶ, ಅರಳಿಮಲ್ಲಪ್ಪರ ಪ್ರಕಾಶ, ನ್ಯಾಮತಿ

ಅಂಕಿ ಅಂಶ

4,78,208 -ಸಮೀಕ್ಷೆಯಡಿ ಬರುವ ಜಿಲ್ಲೆಯ ಹಿಡುವಳಿಗಳ ಸಂಖ್ಯೆ

2,72,053 -ರೈತರೇ ಸಮೀಕ್ಷೆ ಮಾಡಿರುವ ಹಿಡುವಳಿಗಳು

36,302 -ಪಿಆರ್‌ಗಳ ಸಹಾಯದಲ್ಲಿ ಸಮೀಕ್ಷೆ ಮಾಡಿರುವ ಹಿಡುವಳಿಗಳು

ಶೇ 64.48 -ಸೆ.19ರ ಮಧ್ಯಾಹ್ನದವರೆಗೆ ಆಗಿರುವ ಸಮೀಕ್ಷೆಯ ಪ್ರಮಾಣ

ವರದಿ ಮಾಹಿತಿ: ಡಿ.ಶ್ರೀನಿವಾಸ್‌ ಜಗಳೂರು, ಎಚ್‌.ವಿ. ನಟರಾಜ್‌ ಚನ್ನಗಿರಿ, ಎಚ್‌.ಕೆ. ಆಂಜನೇಯ ಹೊನ್ನಾಳಿ, ಡಿ.ಎಂ. ಹಾಲಾರಾಧ್ಯ ನ್ಯಾಮತಿ, ಆರ್‌. ರಾಘವೇಂದ್ರ ಹರಿಹರ, ವಿಶ್ವನಾಥ ಡಿ. ಹರಪನಹಳ್ಳಿ, ಚಿತ್ರ: ಹೇಮಂತ್‌ ಹಾಲೇಕಲ್‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.