ADVERTISEMENT

ಲಾಕ್‌ಡೌನ್‌ ಮಾಡುವುದಿಲ್ಲ: ಸಚಿವ ಬೈರತಿ ಬಸವರಾಜ

​ಪ್ರಜಾವಾಣಿ ವಾರ್ತೆ
Published 13 ಜನವರಿ 2022, 12:06 IST
Last Updated 13 ಜನವರಿ 2022, 12:06 IST
ಬೈರತಿ ಬಸವರಾಜ
ಬೈರತಿ ಬಸವರಾಜ   

ದಾವಣಗೆರೆ: ರಾಜ್ಯದಲ್ಲಿ ಯಾವುದೇ ಕಾರಣಕ್ಕೂ ಲಾಕ್‌ಡೌನ್‌ ಮಾಡುವುದಿಲ್ಲ. ಕೋವಿಡ್‌ಗೆ ಲಾಕ್‌ಡೌನ್‌ ಒಂದೇ ಪರಿಹಾರವಲ್ಲ ಎಂದು ಜಿಲ್ಲಾ ಉಸ್ತುವಾರಿ ಸಚಿವ ಬೈರತಿ ಬಸವರಾಜ ಹೇಳಿದರು.

ನಗರದಲ್ಲಿ ಸುದ್ದಿಗಾರರ ಜತೆಗೆ ಮಾತನಾಡಿದ ಅವರು, ‘ಕೊರೊನಾದಿಂದಾಗಿ ಜನರ ಜೀವನವೇ ದುಸ್ತರವಾಗಿದೆ. ಎರಡು ವರ್ಷಗಳಿಂದ ಸಂಕಷ್ಟಗಳಿಗೆ ಸಿಲುಕಿದ್ದಾರೆ. ಇಂಥ ಸಂದರ್ಭದಲ್ಲಿ ಮತ್ತೆ ಲಾಕ್‌ಡೌನ್ ಮಾಡುವುದು ಸರಿಯಲ್ಲ. ಮುಖ್ಯಮಂತ್ರಿಗಳ ಮುಂದೆ ಲಾಕ್‌ಡೌನ್‌ ಪ್ರಸ್ತಾವ ಇಲ್ಲ’ ಎಂದು ತಿಳಿಸಿದರು.

ರಾಜ್ಯದಲ್ಲಿ ಕೊರೊನಾ ಸೋಂಕು ಉಲ್ಬಣ ಆಗುತ್ತಿದೆ. ಜನರು ಮೈ ಮರೆತು ನಡೆದಾಡುತ್ತಿದ್ದಾರೆ. ಸರ್ಕಾರ ಎಲ್ಲ ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಂಡಿದೆ. ಜನರು ಸಹಕಾರ ಕೊಡಬೇಕು ಎಂದು ಮನವಿ ಮಾಡಿದರು.

ADVERTISEMENT

‘ಜಿಲ್ಲಾ ಆಸ್ಪತ್ರೆಗಳಲ್ಲಿ ಬೆಡ್‌, ವೆಂಟಿಲೇಟರ್‌ ಸಹಿತ ಎಲ್ಲವನ್ನು ಸಿದ್ಧ ಮಾಡಿಕೊಳ್ಳಲು ಸೂಚಿಸಿದ್ದೇನೆ’ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಜ್ಞಾನ ಇಲ್ಲದ ಡಿಕೆಶಿ, ಸಿದ್ದರಾಮಯ್ಯ: ಮೇಕೆದಾಟು ಸೂಕ್ಷ್ಮ ವಿಷಯ. ಇದನ್ನು ಯಾವ ರೀತಿ ನಿಭಾಯಿಸಬೇಕು ಎಂಬುದನ್ನು ಅರಿತುಕೊಳ್ಳಬೇಕು. ಅದನ್ನು ಬಿಟ್ಟು ಪಾದಯಾತ್ರೆ ಹೊರಡುವುದು ಪರಿಹಾರವಲ್ಲ. ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌, ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯರಿಗೆ ಜ್ಞಾನವೇ ಇಲ್ಲ ಎಂದು ಬೈರತಿ ಟೀಕಿಸಿದರು.

ಮೇಕೆದಾಟು ಯೋಜನೆ ಅರ್ಧಕ್ಕೆ ನಿಂತರೆ ಕಾಂಗ್ರೆಸ್‌ ಅದಕ್ಕೆ ನೇರಹೊಣೆಯಾಗುತ್ತದೆ. ವಿರೋಧ ಪಕ್ಷವು ಜವಾಬ್ದಾರಿಯಿಂದ ನಡೆದುಕೊಳ್ಳಲಿ ಎಂದು ಸಲಹೆ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.