ADVERTISEMENT

ದಾವಣಗೆರೆ: ಕೋವಿಡ್‌ ಪಾಸಿಟಿವ್ ಪ್ರಕರಣ ಇಳಿಕೆ

ಪತ್ರಿಕಾಗೋಷ್ಠಿಯಲ್ಲಿ ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ

​ಪ್ರಜಾವಾಣಿ ವಾರ್ತೆ
Published 30 ಅಕ್ಟೋಬರ್ 2020, 15:59 IST
Last Updated 30 ಅಕ್ಟೋಬರ್ 2020, 15:59 IST
ಮಹಾಂತೇಶ ಬೀಳಗಿ
ಮಹಾಂತೇಶ ಬೀಳಗಿ   

ದಾವಣಗೆರೆ: ಆರೋಗ್ಯ ಇಲಾಖೆಯ ಎಲ್ಲ ಸಿಬ್ಬಂದಿ, ಕೋವಿಡ್‌ ಕಾರ್ಯಪಡೆಯ ಸಿಬ್ಬಂದಿಯ ತಂಡ ಸೇರಿ ಎಲ್ಲರ ಪರಿಶ್ರಮದಿಂದ ಜಿಲ್ಲೆಯಲ್ಲಿ ಕೋವಿಡ್‌ ಪಾಸಿಟಿವ್ ಪ್ರಕರಣಗಳು ಶೇ 5ಕ್ಕೆ ಇಳಿದಿದೆ. ಕೋವಿಡ್‌ನಿಂದಾಗುವ ಮರಣ ಪ್ರಮಾಣ ಕಡಿಮೆ ಮಾಡಲು ಯಶಸ್ವಿಯಾಗಿದ್ದು, ಶೇ 1.2 ರಷ್ಟು ಮರಣ ಪ್ರಮಾಣ ಇದೆ ಎಂದು ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ಹೇಳಿದರು.

ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕೋವಿಡ್ ಪ್ರಕರಣ ಸಂಖ್ಯೆ ಇಳಿಮುಖವಾಗಲು ಶ್ರಮಿಸಿದ ವೈದ್ಯರು, ಸರ್ವೆಲನ್ಸ್‌ ತಂಡ, ನರ್ಸ್, ‘ಡಿ’ ಗ್ರೂಪ್‌ ನೌಕರರು‌ ಸೇರಿ ಎಲ್ಲರ ಕಾರ್ಯವೈಖರಿಗೆ ಮೆಚ್ಚುಗೆ ವ್ಯಕ್ತಪಡಿಸಿದರು.

‘15 ದಿನಗಳಿಂದ ಮರಣ ಪ್ರಮಾಣ ಶೇ 0.4 ಇದೆ. ಪ್ರತಿದಿನ 2000 ದಿಂದ 2,500 ಕೋವಿಡ್‌ ಪರೀಕ್ಷೆ ಕೈಗೊಳ್ಳುತ್ತಿದ್ದು, ಪಾಸಿಟಿವ್‌ ಪ್ರಕರಣಗಳ ಸಂಖ್ಯೆ 100ರ ಒಳಗೆ ಇದೆ. ಸದ್ಯ ಚಿಗಟೇರಿ ಜಿಲ್ಲಾ ಆಸ್ಪತ್ರೆಯಲ್ಲಿ 87 ಜನರು ಚಿಕಿತ್ಸೆ ಪಡೆಯುತ್ತಿದ್ದು, ವೆಂಟಿಲೇಟರ್‌ನಲ್ಲಿ 11 ಪ್ರಕರಣಗಳು ಇವೆ. ಗಂಭೀರ ಪ್ರಕರಣಗಳು ಕಡಿಮೆಯಾಗಿವೆ. ಕೋವಿಡ್‌ ದೃಢಪಟ್ಟವರು ವೆಂಟಿಲೇಟರ್‌ಗೆ ಹೋಗದ ಸ್ಥಿತಿ ಕಾಪಾಡುತ್ತಿದ್ದೇವೆ. ಗಂಭೀರ ಪ್ರಕರಣಗಳನ್ನು ಸಮರ್ಥವಾಗಿ ನಿಭಾಯಿಸಲಾಗಿದೆ. ಇದಕ್ಕೆ ಶ್ರಮಿಸಿದ ಎಲ್ಲರಿಗೂ ಅಭಿನಂದನೆ ಸಲ್ಲಿಸುತ್ತೇನೆ’ ಎಂದರು.

ADVERTISEMENT

‘ಜಿಲ್ಲೆಯ ಕೋವಿಡ್‌ ಕೇರ್‌ ಸೆಂಟರ್‌ಗಳಲ್ಲಿ 25 ಜನ ಚಿಕಿತ್ಸೆ ಪಡೆಯುತ್ತಿದ್ದು, ಹರಿಹರ, ಚನ್ನಗಿರಿ ಹಾಗೂ ಜಗಳೂರಿನ ಕೇಂದ್ರಗಳಿಗೆ ಸದ್ಯ ಯಾರೂ ದಾಖಲಾಗಿಲ್ಲ. ಇದು ಸಮಾಧಾನದ ಸಂಗತಿ. ಹಾಗಂತ ಯುದ್ಧ ಗೆದ್ದಿದ್ದೇವೆ ಎಂದು ಯಾರೂ ಭಾವಿಸಬಾರದು’ ಎಂದು ಹೇಳಿದರು.

ಶೇ 95 ಜನರು ಗುಣಮುಖ:

‘ಜಿಲ್ಲೆಯಲ್ಲಿ ಗುಣಮುಖ ಪ್ರಮಾಣ ಶೇ 95 ಇದೆ. ಸಕ್ರಿಯ ಪ್ರಕರಣಗಳು ಶೇ 4ರಷ್ಟು ಇವೆ. ಕೊರೊನಾ ಬಂತು ಎಂದು ಭಯದಿಂದ ವಿಷ ಸೇವಿಸಿದ ಎರಡು ಪ್ರಕರಣಗಳನ್ನು ಸಮರ್ಥವಾಗಿ ನಿಭಾಯಿಸಲಾಗಿದೆ. ಕೆಲಸ ಮುಗಿಯಿತು ಎಂದು ಯಾರೂ ಭಾವಿಸಿಲ್ಲ. ಅದೇ ಹುಮ್ಮಸ್ಸಿನಿಂದ ಕೆಲಸ ಮಾಡುತ್ತಿದ್ದೇವೆ’ ಎಂದರು.

ಮುಂಜಾಗ್ರತೆ ವಹಿಸಿ:

ನವೆಂಬರ್‌ ತಿಂಗಳಲ್ಲಿ ದೀಪಾವಳಿ ಹಬ್ಬ ಹಾಗೂ ಚಳಿಗಾಲ ಆರಂಭವಾಗುವುದರಿಂದ ಕೋವಿಡ್‌ ಪ್ರಕರಣಗಳು ಹೆಚ್ಚಳ ಆಗಬಹುದು ಎಂದು ತಜ್ಞರು ಎಚ್ಚರಿಕೆ ನೀಡಿದ್ದಾರೆ. ಹಾಗಾಗಿ ಜನರು ಎಚ್ಚರದಿಂದ ಇರಬೇಕು ಎಂದು ಡಿಸಿ ಹೇಳಿದರು.

‘ಎಪಿಎಂಸಿ, ಮಾರುಕಟ್ಟೆಗಳಲ್ಲಿ ಹೆಚ್ಚು ಕೇಂದ್ರೀಕರಿಸಿ ಅಲ್ಲಿ ಪರೀಕ್ಷೆ ಹೆಚ್ಚುಸುತ್ತಿದ್ದೇವೆ. ಪ್ರತಿದಿನನಮ್ಮ ಸಿಬ್ಬಂದಿ ಪರೀಕ್ಷೆ ನಡೆಸುತ್ತಿದ್ದು, ಡೆತ್ ಪಾಕೆಟ್ಸ್, ಸಂಪರ್ಕಿತರ ಮನೆಗಳ ಸುತ್ತ, ಜನಸಂದಣಿ ಇರುವಲ್ಲಿ ಹೆಚ್ಚಿನ ಪರೀಕ್ಷೆ ಮಾಡುತ್ತಿದೆ. ಜನರು ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು. ಅಂತರ ಹಾಗೂ ಸ್ವಚ್ಛತೆ ಕಾಪಾಡಿಕೊಳ್ಳಬೇಕು. ಆಯುಷ್ ಔಷಧ, ಇತರೆ ರೊಗನಿರೋಧಕ ಶಕ್ತಿ ಹೆಚ್ಚಿಸುವ ಎಲ್ಲ ಕ್ರಮಗಳನ್ನು ಅನುಸರಿಸಬೇಕು. ಉಸಿರಾಟ ಸಂಬಂಧಿತ ಕಾಯಿಲೆಗಳು, ಅಸ್ತಮಾ, ಅಲರ್ಜಿ ಇರುವವರು, ಮಕ್ಕಳು, ವೃದ್ಧರು, ಐಎಲ್‍ಡಿ (ಕೋವಿಡ್ ಬಂದು ಗುಣಮುಖರಾದವರು) ಎಲ್ಲರೂ ಮುನ್ನೆಚ್ಚರಿಕೆ ವಹಿಸಬೇಕು ಎಂದು ಜಿಲ್ಲಾಧಿಕಾರಿ ಎಚ್ಚರಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಕೋವಿಡ್ ಜಿಲ್ಲಾ ನೋಡಲ್ ಅಧಿಕಾರಿ ಪ್ರಮೋದ್‍ ನಾಯಕ್, ಹೆಚ್ಚುವರಿ ಜಿಲ್ಲಾಧಿಕಾರಿ ಪೂಜಾರ ವೀರಮಲ್ಲಪ್ಪ, ಪಾಲಿಕೆ ಆಯುಕ್ತ ವಿಶ್ವನಾಥ ಮುದಜ್ಜಿ, ಡಿಎಚ್‍ಒ ಡಾ. ನಾಗರಾಜ್, ಡಿಎಸ್ ಡಾ. ಜೈಪ್ರಕಾಶ್, ಡಿಎಸ್‍ಒ ಡಾ. ರಾಘವನ್, ಜಿಲ್ಲಾ ಆರ್‌ಸಿಎಚ್‍ ಅಧಿಕಾರಿ ಡಾ.ಮೀನಾಕ್ಷಿ, ಡಾ.ರವಿ ಇದ್ದರು.

ರಾಜ್ಯೋತ್ಸವ ಮಾರ್ಗಸೂಚಿ:

ಕೋವಿಡ್ ಪ್ರಕಾರಣ ನ.1 ರಂದು ಕರ್ನಾಟಕ ರಾಜ್ಯೋತ್ಸವವನ್ನು ಸರಳವಾಗಿ ಆಚರಿಸುವಂತೆ ರಾಜ್ಯ ಸರ್ಕಾರ ಮಾರ್ಗಸೂಚಿ ಬಿಡುಗಡೆ ಮಾಡಿದೆ. ಈಸಮಾರಂಭದ ಧ್ವಜಾರೋಹಣ ಸ್ಥಳದಲ್ಲಿ ಅಂತರ, ಮಾಸ್ಕ್ ಬಳಕೆ ಮತ್ತು ಸ್ಯಾನಿಟೈಸರ್‌ ಕಡ್ಡಾಯವಾಗಿ ಬಳಸಬೇಕು. ಗರಿಷ್ಠ 100 ಜನರು ಮಾತ್ರ ಸೇರಲು ಅನುಮತಿಸಲಾಗಿದೆ. ಕಾನೂನು ಮತ್ತು ಸುವ್ಯವಸ್ಥೆಗೆ ಯಾವುದೇ ಭಂಗ ಬಾರದಂತೆ ಕಾಪಾಡಬೇಕು. ಯಾವುದೇ ರೀತಿಯ ಮೆರವಣಿಗೆಗೆ ಅವಕಾಶವಿಲ್ಲ. ಭುವನೇಶ್ವರಿ ಪೂಜೆ ಸಲ್ಲಿಸಿ, ನಂತರ ಧ್ವಜಾರೋಹಣ ಕಾರ್ಯಕ್ರಮ ನಡೆಯಲಿದೆ. ದುರ್ಬಲ ವರ್ಗದವರು ಭಾಗವಹಿಸುವಂತಿಲ್ಲ. ಸಾಂಸ್ಕೃತಿಕ ಕಾರ್ಯಕ್ರಮಗಳು ಸರಳವಾಗಿರಬೇಕು. ಈ ಎಲ್ಲ ಮಾರ್ಗಸೂಚಿಗಳನ್ನು ತಪ್ಪದೇ ಪಾಲಿಸಬೇಕು ಎಂದು ಮಹಾಂತೇಶ ಬೀಳಗಿ ಸೂಚಿಸಿದರು.

ಆಕ್ಸಿಜನ್ ಬೆಡ್‍ಗಳ ಹೆಚ್ಚಳ:

5 ಸಾವಿರ ಪ್ರಕರಣಗಳು ಬಂದರೂ ನಿಭಾಯಿಸಲು ಜಿಲ್ಲೆಯಲ್ಲಿ ಅಗತ್ಯ ಸಿದ್ಧತೆ ಮಾಡಿಕೊಳ್ಳಲಾಗಿದೆ. ‌ವೆಂಟಿಲೇಟರ್‌, ಅಗತ್ಯ ವೈದ್ಯಕೀಯ ಸಿಬ್ಬಂದಿ ಸೇರಿ ಎಲ್ಲ ಸಿದ್ಧತೆ ಕೈಗೊಳ್ಳಲಾಗಿದೆ. ಜಿಲ್ಲೆಯಲ್ಲಿ 717 ಆಕ್ಸಿಜನ್‌ ಬೆಡ್, 38 ಎಚ್‍ಎಫ್‍ಒ, 31 ವೆಂಟಿಲೇಟರ್, 20 ನಾನ್‍ಇನ್‍ವೇಸಿವ್ ವೆಂಟಿಲೇಟರ್‌ಗಳಿವೆ. 8000 ರ‍್ಯಾಪಿಡ್ ಕಿಟ್‌ ಮತ್ತು 27 ಸಾವಿರ ಆರ್‌ಟಿಪಿಸಿಆರ್ ಕಿಟ್‍ಗಳ ದಾಸ್ತಾನು ಇದೆ ಎಂದು ಜಿಲ್ಲಾಧಿಕಾರಿ ವಿವರಿಸಿದರು.

ಲಸಿಕಾ ಕಾರ್ಯಕ್ರಮಕ್ಕೆ ಡಬ್ಲ್ಯುಎಚ್‍ಒ ಮೆಚ್ಚುಗೆ:

ಆಗಸ್ಟ್ ತಿಂಗಳಲ್ಲಿ ಆರೋಗ್ಯ ಇಲಾಖೆಯಿಂದ ಶಾಲಾ ಮಕ್ಕಳಿಗೆ ನೀಡುವ ವಿವಿಧ ಲಸಿಕಾ ಅಭಿಯಾನವನ್ನು ಕೋವಿಡ್ ಸಂದರ್ಭದಲ್ಲೂ ನಿಯಮ ಪಾಲಿಸಿ ಮೊದಲು ಪ್ರಾರಂಭಿಸಿದ ದಾವಣಗೆರೆ ಜಿಲ್ಲೆಯ ಕ್ರಮಕ್ಕೆ ಡಬ್ಲ್ಯುಎಚ್‍ಒ ಮೆಚ್ಚುಗೆ ವ್ಯಕ್ತಪಡಿಸಿದೆ. ಹಾಗೂ ವಿವಿಧ ಲಸಿಕಾ ಅಭಿಯಾನವನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಿದ್ದಕ್ಕಾಗಿ ರಾಜ್ಯಕ್ಕೆ ಬೆಳ್ಳಿ ಪ್ರಶಸ್ತಿ ದೊರೆತಿರುವುದು ಸಂತಸ ತಂದಿದೆ ಎಂದು ಜಿಲ್ಲಾ ಆರ್‌ಸಿಎಚ್‌ ಅಧಿಕಾರಿ ಡಾ. ಮೀನಾಕ್ಷಿ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.