ADVERTISEMENT

‘ಒಡಕು ಸೃಷ್ಟಿಸುವ ಹುನ್ನಾರ’

​ಪ್ರಜಾವಾಣಿ ವಾರ್ತೆ
Published 8 ಜೂನ್ 2025, 16:23 IST
Last Updated 8 ಜೂನ್ 2025, 16:23 IST
ದಾವಣಗೆರೆಯ ಪಂಪಾಪತಿ ಭವನದಲ್ಲಿ ಅಖಿಲ ಭಾರತ ದಲಿತ ಹಕ್ಕುಗಳ ಆಂದೋಲನದ ವತಿಯಿಂದ ಭಾನುವಾರ ಹಮ್ಮಿಕೊಂಡಿದ್ದ ಜಿಲ್ಲಾ ‌ಸಮ್ಮೇಳನವನ್ನು ಜನಾರ್ದನ್ ಉದ್ಘಾಟಿಸಿದರು
ದಾವಣಗೆರೆಯ ಪಂಪಾಪತಿ ಭವನದಲ್ಲಿ ಅಖಿಲ ಭಾರತ ದಲಿತ ಹಕ್ಕುಗಳ ಆಂದೋಲನದ ವತಿಯಿಂದ ಭಾನುವಾರ ಹಮ್ಮಿಕೊಂಡಿದ್ದ ಜಿಲ್ಲಾ ‌ಸಮ್ಮೇಳನವನ್ನು ಜನಾರ್ದನ್ ಉದ್ಘಾಟಿಸಿದರು   

ದಾವಣಗೆರೆ: ಕಾರ್ಲ್‌ ಮಾರ್ಕ್ಸ್‌ ಹಾಗೂ ಬಿ.ಆರ್‌. ಅಂಬೇಡ್ಕರ್‌ ಪ್ರತಿಪಾದಿಸಿದ ತತ್ವಗಳಲ್ಲಿ ಸಾಮ್ಯತೆ ಇದೆ. ಇಬ್ಬರ ವಿಚಾರಗಳ ನಡುವೆ ಒಡಕು ಸೃಷ್ಟಿಸುವ ಹುನ್ನಾರ ನಡೆಯುತ್ತಿದೆ. ಈ ಬಗ್ಗೆ ಎಚ್ಚರದಿಂದ ಇರುವ ಅಗತ್ಯವಿದೆ ಎಂದು ಅಖಿಲ ಭಾರತ ದಲಿತ ಹಕ್ಕುಗಳ ಆಂದೋಲನದ ರಾಜ್ಯ ಘಟಕದ ಅಧ್ಯಕ್ಷ ಜನಾರ್ದನ್ ಹೇಳಿದರು.

ಇಲ್ಲಿನ ಪಂಪಾಪತಿ ಭವನದಲ್ಲಿ ಅಖಿಲ ಭಾರತ ದಲಿತ ಹಕ್ಕುಗಳ ಆಂದೋಲನದ ವತಿಯಿಂದ ಭಾನುವಾರ ಹಮ್ಮಿಕೊಂಡಿದ್ದ ಜಿಲ್ಲಾ ‌ಸಮ್ಮೇಳನ ಉದ್ಘಾಟಿಸಿ ಅವರು ಮಾತನಾಡಿದರು.

‘ಭೂಮಿ ಸರ್ಕಾರದ ಕೈಯಲ್ಲಿರಬೇಕು ಹಾಗೂ ಕೈಗಾರಿಕೆ ಸಾರ್ವಜನಿಕ ಸ್ವತ್ತಾಗಬೇಕು ಎಂಬುದನ್ನು ಅಂಬೇಡ್ಕರ್‌ ಪ್ರತಿಪಾದಿಸಿದ್ದಾರೆ. ಸಮ ಸಮಾಜದ ಕನಸನ್ನು ಕಾರ್ಲ್‌ ಮಾರ್ಕ್ಸ್‌ ಕಂಡಿದ್ದರು. ಇಬ್ಬರ ವಿಚಾರಧಾರೆಗಳ ನಡುವೆ ಭಿನ್ನತೆ ಇಲ್ಲ’ ಎಂದು ಹೇಳಿದರು.

ADVERTISEMENT

‘ಭಾರತೀಯ ಕಮ್ಯುನಿಸ್ಟ್‌ ಪಕ್ಷ (ಸಿಪಿಐ) ದಲಿತ ಸಮುದಾಯದ ಹಕ್ಕುಗಳಿಗೆ ಹೋರಾಟ ಮಾಡುತ್ತ ಬಂದಿದೆ. ಜನರ ಹಕ್ಕುಗಳಿಗಾಗಿ ಆಂದೋಲನ ನಡೆಸುವ ಅಗತ್ಯವಿದೆ. ದಲಿತ ಸಂಘಟನೆಗಳು ಒಗ್ಗೂಡಬೇಕಿದೆ’ ಎಂದರು.

‘ಎಲ್ಲ ಜಾತಿಯ ಬಡವರ ಪರವಾಗಿ ಹೋರಾಟ ಸಂಘಟಿಸಬೇಕಿದೆ. ಅವರ ಹಕ್ಕುಗಳನ್ನು ಕಾಪಾಡಲು ಶ್ರಮಿಸಬೇಕಿದೆ. ಹಳ್ಳಿಗಳಿಗೆ ತೆರಳಿ ಸಂಘಟನೆ ಬಲವರ್ಧನೆಗೆ ಮುಂದಾಗಿ’ ಎಂದು ಸಿಪಿಐ ಜಿಲ್ಲಾ ಕಾರ್ಯದರ್ಶಿ ಆವರಗೆರೆ ಚಂದ್ರು ಸಲಹೆ ನೀಡಿದರು.

ಸಿಪಿಐ ಜಿಲ್ಲಾ ಸಹಕಾರ್ಯದರ್ಶಿ ಎಚ್‌.ಜಿ. ಉಮೇಶ್, ಮುಖಂಡರಾದ ಪಿ.ಷಣ್ಮುಖಸ್ವಾಮಿ, ಎಸ್.‌ಎಸ್. ಮಲ್ಲಮ್ಮ, ವಿ. ಲಕ್ಷ್ಮಣ, ಜಿ.ಯಲ್ಲಪ್ಪ, ರಂಗನಾಥ್, ಶೇಖರ ನಾಯಕ ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.