ADVERTISEMENT

ದಾವಣಗೆರೆ: ಕಾನೂನು ಅರಿವಿನಿಂದ ಅಪರಾಧ ನಿಯಂತ್ರಣ

ಶರಣ ಸಂಗಮ ಕಾರ್ಯಕ್ರಮದಲ್ಲಿ ವಿರಕ್ತಮಠದ ಬಸವಪ್ರಭು ಸ್ವಾಮೀಜಿ

​ಪ್ರಜಾವಾಣಿ ವಾರ್ತೆ
Published 4 ನವೆಂಬರ್ 2021, 7:29 IST
Last Updated 4 ನವೆಂಬರ್ 2021, 7:29 IST
ದಾವಣಗೆರೆಯ ಶಿವಯೋಗಾಶ್ರಮದಲ್ಲಿ ಆಯೋಜಿಸಿದ್ದ ಶರಣ ಸಂಗಮ ಕಾರ್ಯಕ್ರಮದಲ್ಲಿ ಗ್ರಾಮಾಂತರ ಪೊಲೀಸ ಠಾಣೆಯ ಉಪಾಧಿಕ್ಷಕ ನರಸಿಂಹ ತಾಮ್ರದ್ವಜ ಅವರು ‘ಜನಸಾಮಾನ್ಯರಿಗಾಗಿ ಕಾನೂನು ಅರಿವು’ ಕುರಿತು ಮಾತನಾಡಿದರು
ದಾವಣಗೆರೆಯ ಶಿವಯೋಗಾಶ್ರಮದಲ್ಲಿ ಆಯೋಜಿಸಿದ್ದ ಶರಣ ಸಂಗಮ ಕಾರ್ಯಕ್ರಮದಲ್ಲಿ ಗ್ರಾಮಾಂತರ ಪೊಲೀಸ ಠಾಣೆಯ ಉಪಾಧಿಕ್ಷಕ ನರಸಿಂಹ ತಾಮ್ರದ್ವಜ ಅವರು ‘ಜನಸಾಮಾನ್ಯರಿಗಾಗಿ ಕಾನೂನು ಅರಿವು’ ಕುರಿತು ಮಾತನಾಡಿದರು   

ದಾವಣಗೆರೆ: ಜನಸಾಮಾನ್ಯರು ಮುಗ್ಧರಾಗಿರುತ್ತಾರೆ. ಆ ಮುಗ್ಧತೆಯನ್ನು ಬುದ್ಧಿವಂತರು ದುರುಪಯೋಗಪಡಿಸಿಕೊಂಡು ಮೋಸ ಮಾಡುತ್ತಾರೆ. ಈ ಅನ್ಯಾಯವನ್ನು, ನಯವಂಚನೆಯನ್ನು ತಪ್ಪಿಸಲು ಕಾನೂನಿನ ಅರಿವು ಅಗತ್ಯ ಎಂದು ವಿರಕ್ತಮಠದ ಬಸವಪ್ರಭು ಸ್ವಾಮೀಜಿ ಹೇಳಿದರು.

ಆರ್‌.ಎಲ್‌. ಕಾನೂನು ವಿದ್ಯಾಲಯ ಮತ್ತು ವಿರಕ್ತಮಠದ ಆಶ್ರಯದಲ್ಲಿ ನಗರದ ಶಿವಯೋಗಾಶ್ರಮ ಬಸವಕೇಂದ್ರದಲ್ಲಿ ಬುಧವಾರ ನಡೆದ ‘ಜನಸಾಮಾನ್ಯರಿಗಾಗಿ ಕಾನೂನು ಅರಿವು’ ಶರಣ ಸಂಗಮ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.

ದೇಶದ ಕಾನೂನುಗಳನ್ನು ಎಲ್ಲರೂ ಪಾಲನೆ ಮಾಡಿದರೆ ಶಾಂತಿ ನೆಲೆಸುತ್ತದೆ. ಕಳಬೇಡ, ಕೊಲಬೇಡ, ಹುಸಿಯ ನುಡಿಯಬೇಡ, ಮುನಿಯಬೇಡ, ಅನ್ಯರಿಗೆ ಅಸಹ್ಯಪಡಬೇಡ, ತನ್ನ ಬಣ್ಣಿಸಬೇಡ, ಇದಿರು ಹಳಿಯಬೇಡ ಎಂಬ ಬಸವಣ್ಣನ ಸಪ್ತಶೀಲಗಳನ್ನು ಪಾಲನೆ ಮಾಡಿದರೆ ದೇಶದ ಕಾನೂನು ಪಾಲನೆಯಾಗುತ್ತದೆ ಎಂದು ತಿಳಿಸಿದರು.

ADVERTISEMENT

ಗ್ರಾಮಾಂತರ ಪೊಲೀಸ್‌ ಉಪಾಧೀಕ್ಷಕ ನರಸಿಂಹ ವಿ. ತಾಮ್ರಧ್ವಜ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ‘ಬ್ಯಾಂಕ್‌ನವರು ಎಂದೋ, ಕೋವಿಡ್‌ ಲಸಿಕೆ ಹಾಕಲು ವಿವರ ಕೊಡಿ ಎಂದೋ ಅಪರಿಚಿತರು ಕರೆ ಮಾಡಿದರೆ ಬ್ಯಾಂಕ್‌ ಪಾಸ್‌ ಪುಸ್ತಕದ ವಿವರ ನೀಡಬೇಡಿ. ಬ್ಯಾಂಕ್‌ ವಿವರ ನೀಡಿ ಒಟಿಪಿ ಕೊಟ್ಟರೆ ಹಣ ಕಳೆದುಕೊಳ್ಳುತ್ತೀರಿ’ ಎಂದು ಎಚ್ಚರಿಸಿದರು.

ದಾವಣಗೆರೆಯಲ್ಲಿ ಚೀಟಿ ಹಣ ಹಾಕಿ ವಂಚನೆ ಮಾಡುವುದು ಮತ್ತು ಬೈಕ್‌ ಕಳ್ಳತನ ಇವೆರಡು ಭಾರಿ ಪ್ರಮಾಣದಲ್ಲಿ ನಡೆಯುತ್ತಿದೆ. ಈ ಬಗ್ಗೆ ಜಾಗರೂಕರಾಗಿರಿ. ಬಡ್ಡಿ, ಮೀಟರ್‌ ಬಡ್ಡಿ ವ್ಯವಹಾರ ಕೂಡ ಜಾಸ್ತಿ ಇದೆ. ಇಂಥವೆಲ್ಲ ಕಂಡರೆ ಕೂಡಲೇ ಪೊಲೀಸರಿಗೆ ತಿಳಿಸಿ ಎಂದು ಮನವಿ ಮಾಡಿದರು.

ಬೈಕಲ್ಲಿ ಬಂದು ಸರ ಕಿತ್ತುಕೊಂಡು ಪರಾರಿಯಾಗುವ ಪ್ರಕರಣಗಳು ಹೆಚ್ಚಾಗಿವೆ. ಅಂಥ ಪ್ರಕರಣ ನಡೆದ ಕೂಡಲೇ ಪೊಲೀಸರಿಗೆ ಮಾಹಿತಿ ನೀಡಿದರೆ ನಗರದ ಎಲ್ಲ ಒಳ ಬರುವ, ಹೊರಹೋಗುವ ರಸ್ತೆಗಳಲ್ಲಿ ಪೊಲೀಸರು ಬಂದೋಬಸ್ತು ಮಾಡುತ್ತಾರೆ. ಆಗ ಕಳ್ಳರು ಸಿಗುವ ಸಾಧ್ಯತೆ ಹೆಚ್ಚಿರುತ್ತದೆ. ತಡವಾಗಿ ತಿಳಿಸಿದರೆ ಅವರು ನಗರ ದಾಟಿ ಹೋಗಿಬಿಡುತ್ತಾರೆ ಎಂದು ತಿಳಿಸಿದರು.

ಆರ್‌.ಎಲ್‌. ಕಾನೂನು ಕಾಲೇಜು ಪ್ರಾಚಾರ್ಯ ಡಾ. ಎಂ. ಸೋಮಶೇಖರಪ್ಪ, ‘ಸಂವಿಧಾನವೇ ಮೂಲ ಕಾಯ್ದೆ. ಮತ್ತೆಲ್ಲ ಕಾನೂನುಗಳು ಇದರಡಿಯಲ್ಲಿ ಬರುತ್ತದೆ. ಅಮೆರಿಕ, ಇಂಗ್ಲೆಂಡ್‌ನಂಥ ಆಧುನಿಕ ಸರ್ಕಾರಗಳು ಕೂಡ ಮೂಲಭೂತ ಹಕ್ಕುಗಳನ್ನು ಸಂವಿಧಾನದಲ್ಲಿ ಹೊಂದಿಲ್ಲ. ಭಾರತ ಹೊಂದಿದೆ’ ಎಂದು ತಿಳಿಸಿದರು.

ಈಗ ಸಂವಿಧಾನ ಹೊಂದಿರುವ ಆಶಯವನ್ನೇ 12ನೇ ಶತಮಾನದಲ್ಲಿ ಬಸವಾದಿ ಶರಣರು ನಡೆಸಿದ ಅನುಭವ ಮಂಟಪ ಹೊಂದಿತ್ತು ಎಂದರು.

ಸಹಾಯಕ ಪ್ರಾಧ್ಯಾಪಕರಾದ ಬಿ.ಪಿ. ಬಸವನಗೌಡ ಪಾಟೀಲ, ವಿದ್ಯಾಧರ ವೇದವರ್ಮ ಟಿ., ವಿದ್ಯಾರ್ಥಿ ಸಂಚಾಲಕ ಸಿದ್ಧನಗೌಡ ಕೆ. ಇದ್ದರು. ಶರಣಬಸವ ಸ್ವಾಗತಿಸಿದರು. ಕುಂಟೋಜಿ ಚನ್ನಪ್ಪ ಶರಣು ಸಲ್ಲಿಸಿದರು. ರೋಶನ್‌ ಕಾರ್ಯಕ್ರಮ ನಿರೂಪಿಸಿದರು. ರುಕ್ಮಾಬಾಯಿ ವಚನಗಾಯನ ಮಾಡಿದರು. ಬಸವ ಕಲಾ ಲೋಕದ ಸದಸ್ಯರು ವಚನ ಸಂಗೀತ ನಡೆಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.