ADVERTISEMENT

ದಾವಣಗೆರೆ | ಮಳೆ, ಗಾಳಿಯಿಂದ ಹಾನಿ: ಶಾಸಕ ಭೇಟಿ

​ಪ್ರಜಾವಾಣಿ ವಾರ್ತೆ
Published 15 ಮೇ 2024, 5:19 IST
Last Updated 15 ಮೇ 2024, 5:19 IST
ಅಡಿಕೆ ಮರಗಳನ್ನು ನಾಶ ಮಾಡಿದ ದಾವಣಗೆರೆ ತಾಲ್ಲೂಕಿನ ಹೊನ್ನನಾಯಕನಹಳ್ಳಿ ಗ್ರಾಮದ ರೈತನ ಜಮೀನಿಗೆ ಶಾಸಕ ಕೆ.ಎಸ್. ಬಸವಂತಪ್ಪ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಅಡಿಕೆ ಮರಗಳನ್ನು ನಾಶ ಮಾಡಿದ ದಾವಣಗೆರೆ ತಾಲ್ಲೂಕಿನ ಹೊನ್ನನಾಯಕನಹಳ್ಳಿ ಗ್ರಾಮದ ರೈತನ ಜಮೀನಿಗೆ ಶಾಸಕ ಕೆ.ಎಸ್. ಬಸವಂತಪ್ಪ ಭೇಟಿ ನೀಡಿ ಪರಿಶೀಲನೆ ನಡೆಸಿದರು.   

ದಾವಣಗೆರೆ: ಮಾಯಕೊಂಡ ಕ್ಷೇತ್ರದ ವ್ಯಾಪ್ತಿಯಲ್ಲಿ ಸುರಿದ ಮಳೆ, ಗಾಳಿಗೆ ಬೆಳೆ ಹಾನಿಯಾದ ತೋಟಗಳಿಗೆ ಶಾಸಕ ಕೆ.ಎಸ್. ಬಸವಂತಪ್ಪ ಮಂಗಳವಾರ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ತಾಲ್ಲೂಕಿನ ಅಣಬೇರು ಗ್ರಾಮದ ರೈತರ ಅಡಿಕೆ ತೋಟಗಳಲ್ಲಿ ಫಲಕ್ಕೆ ಬಂದ ಸುಮಾರು 150ರಿಂದ 200 ಅಡಿಕೆ ಮರಗಳು ಮಳೆಯಿಂದಾಗಿ ಧರೆಗುರುಳಿದ್ದು, ಇದರಿಂದ ಲಕ್ಷಾಂತರ ರೂಪಾಯಿ ನಷ್ಟ ಸಂಭವಿಸಿದೆ. ಸರ್ಕಾರದಿಂದ ಪರಿಹಾರ ಕೊಡಿಸುವಂತೆ ರೈತರು ಶಾಸಕರಿಗೆ ಮನವಿ ಮಾಡಿದರು.

ತೋಟಗಳಿಗೆ ಭೇಟಿ ನೀಡಿ ಮಳೆ, ಗಾಳಿಗೆ ಹಾನಿಯಾಗಿರುವ ಬೆಳೆ ವರದಿ ತಯಾರಿಸಿ ಸರ್ಕಾರ ಸಲ್ಲಿಸುವ ಮೂಲಕ ಪರಿಹಾರ ವಿತರಣೆಗೆ ಕ್ರಮ ತೆಗೆದುಕೊಳ್ಳುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ದೂರವಾಣಿ ಸಂಪರ್ಕಿಸಿ ಸೂಚಿಸಿದರು.

ADVERTISEMENT

‘ಕ್ಷೇತ್ರದ ರೈತರು ಬೆಳೆ ವಿಮೆ ಕಂತಿನ ಹಣ ಪಾವತಿಸಿದ್ದು, ಬರಗಾಲದಿಂದ ರೈತರು ಕಂಗಾಲಾಗಿದ್ದರೂ ಕೆಲವು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ವಿಮೆ ಹಣ ಬಂದಿದ್ದರೆ, ಇನ್ನು ಕೆಲವು ರೈತರಿಗೆ ಪಾವತಿಯಾಗಿಲ್ಲ. ಈಗ ಗಾಳಿ, ಮಳೆಗೆ ಬೆಳೆ ಹಾನಿಯಾಗಿರುವ ರೈತರು ಬೆಳೆ ವಿಮೆ ಕಟ್ಟಿದ್ದು, ಕೂಡಲೇ ಜಿಲ್ಲಾಧಿಕಾರಿ ಸಂಬಂಧಪಟ್ಟ ಅಧಿಕಾರಿಗಳಿಂದ ಬೆಳೆ ಹಾನಿ ವರದಿ ತರಿಸಿಕೊಂಡು ಬೆಳೆ ವಿಮೆ ಪಾವತಿಸಲು ಕ್ರಮ ತೆಗೆದುಕೊಳ್ಳಬೇಕು’ ಎಂದು ಒತ್ತಾಯಿಸಿದರು.

ಬಳಿಕ ಗ್ರಾಮದ ಶಿಥಿಲಗೊಂಡ ಸರ್ಕಾರಿ ಪ್ರೌಢಶಾಲೆಗೆ ಭೇಟಿ ನೀಡಿದ ಶಾಸಕರು, ಪರಿಶೀಲನೆ ನಡೆಸಿದರು. ಶಾಲೆಯ ಕೊಠಡಿಗಳಲ್ಲಿ ಶಿಥಿಲಗೊಂಡು ಆರ್ ಸಿಸಿಯ ಚಕ್ಕಳ ಕಿತ್ತುಕೊಂಡಿವೆ. ಇದರಿಂದ ಮಳೆ ಬಂದಾಗ ಸೊರುತ್ತಿವೆ ಎಂದು ಗ್ರಾಮಸ್ಥರು ಶಾಸಕರಿಗೆ ಸಮಸ್ಯೆ ಬಿಚ್ಚಿಟ್ಟರು.

ಇದೇ ಸಂದರ್ಭದಲ್ಲಿ ಶಾಲೆಯ ಆವರಣದಲ್ಲಿ ಸುಮಾರು ₹15 ಲಕ್ಷ ವೆಚ್ಚದಲ್ಲಿ ನಿರ್ಮಿಸುತ್ತಿರುವ ಹೈಟೆಕ್ ಶೌಚಾಲಯವನ್ನು ಶಾಸಕ ಕೆ.ಎಸ್. ಬಸವಂತಪ್ಪ ಪರಿಶೀಲಿಸಿದರು. ಕಳಪೆ ಕಾಮಗಾರಿ ಕುರಿತು ಸಂಬಂಧಪಟ್ಟ ಅಧಿಕಾರಿಗೆ ಮಾಹಿತಿ ನೀಡಿ, ಗುಣಮಟ್ಟದ ಕಾಮಗಾರಿ ನಡೆಸಲು ಗುತ್ತಿಗೆದಾರನಿಗೆ ಸೂಚಿಸಿದರು.

ಅಣಬೇರು ಗ್ರಾಮ ಪಂಚಾಯತಿ ಅಧ್ಯಕ್ಷ ಬುಡೆನ್ ಸಾಬ್, ಸದಸ್ಯ ಮಹಾರುದ್ರಪ್ಪ, ಜಾಫರ್ ಶರೀಫ್ ರೈತರು, ಗ್ರಾಮಸ್ಥರು ಹಾಜರಿದ್ದರು.

ರೈತನಿಗೆ ಧೈರ್ಯ ತುಂಬಿದ ಶಾಸಕ

ಮಳೆ ಕೊರತೆಯಿಂದಾಗಿ ಕೊಳವೆ ಬಾವಿಗಳು ಬತ್ತಿದ್ದು ಅಡಿಕೆ ಮರಗಳು ಒಣಗುವುದಕ್ಕೆ ಬೇಸತ್ತ ಹೊನ್ನಾಯಕನಹಳ್ಳಿ ಗ್ರಾಮದ ರೈತ ಶಾಸ್ತ್ರಿಹಳ್ಳಿ ಬಸವರಾಜಪ್ಪ ಅವರು ತಮ್ಮ ಎರಡು ಎಕರೆಯಲ್ಲಿ ಬೆಳೆದಿದ್ದ ಅಡಿಕೆ ಮರಗಳನ್ನು ಕಡಿದು ಸುಟ್ಟು ಹಾಕಿದ್ದ ವಿಷಯ ತಿಳಿದ ಶಾಸಕ ಕೆ. ಎಸ್ .ಬಸವಂತಪ್ಪ ಭೇಟಿ ನೀಡಿ ರೈತ ಬಸವರಾಜಪ್ಪ ಹಾಗೂ ಕುಟುಂಬಕ್ಕೆ ಧೈರ್ಯ ತುಂಬಿದರು.  ಗ್ರಾಮದ ಎಚ್. ಡಿ.ಕಿರಣಕುಮಾರ್ ದೇವೇಂದ್ರಪ್ಪ ಸಿದ್ದೇಶ್ ಹನುಮಂತಪ್ಪ ಸಿದ್ದಪ್ಪ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.