ADVERTISEMENT

ದರ್ಶನ್‌ ನೋಡಲು ಮುಗಿಬಿದ್ದ ಜನ

ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ಕಲಾವಿದರ ಮೆರುಗು

​ಪ್ರಜಾವಾಣಿ ವಾರ್ತೆ
Published 23 ಸೆಪ್ಟೆಂಬರ್ 2022, 5:37 IST
Last Updated 23 ಸೆಪ್ಟೆಂಬರ್ 2022, 5:37 IST
ದಾವಣಗೆರೆಯ ಬಾಪೂಜಿ ಎಂಬಿಎ ಕಾಲೇಜಿನ ಮೈದಾನದಲ್ಲಿ ಗುರುವಾರ ನಡೆದ ಮಾಜಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನ್‌ ಜನ್ಮದಿನ ಸಮಾರಂಭದಲ್ಲಿ ನಟ ದರ್ಶನ್‌ ಮಾತನಾಡಿದರು
ದಾವಣಗೆರೆಯ ಬಾಪೂಜಿ ಎಂಬಿಎ ಕಾಲೇಜಿನ ಮೈದಾನದಲ್ಲಿ ಗುರುವಾರ ನಡೆದ ಮಾಜಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನ್‌ ಜನ್ಮದಿನ ಸಮಾರಂಭದಲ್ಲಿ ನಟ ದರ್ಶನ್‌ ಮಾತನಾಡಿದರು   

ದಾವಣಗೆರೆ: ಇಲ್ಲಿನ ಬಾಪೂಜಿ ಎಂಬಿಎ ಕಾಲೇಜಿನ ಮೈದಾನದಲ್ಲಿ ಗುರುವಾರ ರಾತ್ರಿ ನಡೆದ ಮಾಜಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನ್‌ ಜನ್ಮದಿನ ಸಮಾರಂಭಕ್ಕೆ ಸಾಂಸ್ಕೃತಿಕ ಕಾರ್ಯಕ್ರಮಗಳ ಮೆರುಗು.

ಸಾವಿರಾರು ಸಂಖ್ಯೆಯಲ್ಲಿ ಸೇರಿದ್ದ ಜನರುಕನ್ನಡದ ಚಿತ್ರಗೀತೆಗಳ ಸಂಗೀತ‌ಕ್ಕೆ ಹುಚ್ಚೆದ್ದು ಕುಣಿದರು. ನಟ ದರ್ಶನ್‌ ಸಾಥ್‌ ನೀಡಿ ಅಭಿಮಾನಿಗಳನ್ನು ರಂಜಿಸಿದರು.

ವೇದಿಕೆ ಎದುರು ಕಿಕ್ಕಿರಿದು ಸೇರಿದ್ದ ಜನರು ನಟ ದರ್ಶನ್‌ ನೋಡಲು ಮುಗಿಬಿದ್ದರು. ನಿರೂಪಕರು ದರ್ಶನ್‌ ಹೆಸರು ಹೇಳಿದಾಗಲೆಲ್ಲ ಅಭಿಮಾನಿಗಳು ‘ಡಿ ಬಾಸ್‌.. ಡಿ ಬಾಸ್‌’ ಎಂದು ಕೂಗಿದರು.

ADVERTISEMENT

ನೂಕು ನುಗ್ಗಲು, ತಳ್ಳಾಟದಿಂದಾಗಿ ಮಹಿಳೆಯರು, ಯುವತಿಯರು ಪರದಾಡಿದರು. ನೂಕು ನುಗ್ಗಲು ತಡೆ ಯಲು ಪೊಲೀಸರು, ಕಾರ್ಯಕ್ರಮದ ಆಯೋಜಕರು, ನಿರೂಪಕರು ಮನವಿ ಮಾಡಿದರೂ ಪ್ರಯೋಜನವಾಗಲಿಲ್ಲ.

ಅಭಿಮಾನಿಗಳು ಸಂಗೀತ ಕಾರ್ಯಕ್ರಮ, ಕಾಮಿಡಿ ಕಾರ್ಯಕ್ರಮ ನೀಡಲು ಬಂದ ಕಲಾವಿದರಿಗೂ ವೇದಿಕೆ ಹತ್ತಲು ಅವಕಾಶವಾಗದಂತೆ ಕಿಕ್ಕಿರಿದು ಸೇರಿದ್ದರು.

ಸಂಗೀತ ನಿರ್ದೇಶಕ ವಿ. ಹರಿಕೃಷ್ಣ ನೇತೃತ್ವದ ತಂಡ ಸಂಗೀತ ಕಾರ್ಯಕ್ರಮ ನಡೆಸಿಕೊಟ್ಟಿತು. ಗಾಯಕರಾದ ಹೇಮಂತ್‌, ಅನಿರುದ್ಧ್‌, ಇಂದು ನಾಗರಾಜ್‌, ಶ್ರೀರಾಮ್‌ ಕಾಸರ್‌ ಹಾಡಿ ಪ್ರೇಕ್ಷಕರನ್ನು ರಂಜಿಸಿದರು.

ಖಾಸಗಿ ವಾಹಿನಿಯ ಕಾಮಿಡಿ ಕಿಲಾಡಿಗಳು ಖ್ಯಾತಿಯ ಕಲಾವಿದರಾದ ನಯನ, ಅಪ್ಪಣ್ಣ, ದಾನಪ್ಪ, ಸಂಜು ಬಸಯ್ಯ ಹಾಸ್ಯ ಕಾರ್ಯಕ್ರಮ ನಡೆಸಿಕೊಟ್ಟರು.

ಶ್ರೀರಾಮ್‌ ಕಾಸರ್‌ ಅವರ ‘ತರವಲ್ಲ ತಗಿ ನಿನ್ನ ತಂಬೂರಿ’... ಹೇಮಂತ್‌ ಅವರ ‘ಈ ಕನ್ನಡ ಮಣ್ಣನು ಮರಿಬೇಡ ಓ ಅಭಿಮಾನಿ’.. ಹಾಡು, ನಟ ದರ್ಶನ್‌ ಚಿತ್ರದ ಹಾಡುಗಳಿಗೆ ಅಭಿಮಾನಿಗಳು ಹುಚ್ಚೆದ್ದು ಕುಣಿದರು.

ಬಳಿಕ ಮಾತನಾಡಿದ ನಟ ದರ್ಶನ್‌, ‘ಎಸ್‌.ಎಸ್‌. ಮಲ್ಲಿಕಾರ್ಜುನ್‌ ಅವರ ಜನ್ಮದಿನ ಎಂಬ ಕಾರಣಕ್ಕೆ ಅವರ ಮೇಲಿನ ಪ್ರೀತಿಯಿಂದ ಇಲ್ಲಿಗೆ ಬಂದಿದ್ದೇನೆ. ಅವರು ನನಗೆ ಆತ್ಮೀಯರು. ಅವರು ಸಾಕಿದ ಕುದುರೆಗಳನ್ನು ಪ್ರೀತಿಯಿಂದ ಕದಿಯಲು ಇಲ್ಲಿಗೆ ಬರುತ್ತೇನೆ. ಯಾವಾಗ ಬಂದರೂ ಕುದುರೆ ಒಯ್ತಿಯೇನ್ಲೆ.. ಒಯ್ಯಿ ಎಂದು ಸಂತಸದಿಂದ ಕೊಡುತ್ತಾರೆ’ ಎಂದರು.

‘ದೋಸೆ ಮೇಲಿನ ಬೆಣ್ಣೆಯಂತೆ ದಾವಣಗೆರೆ ಜನರು ಯಾವಾಗಲೂ ಪ್ರೀತಿ, ವಿಶ್ವಾಸ, ಪ್ರೋತ್ಸಾಹ ನೀಡುತ್ತೀರಿ. ಇ‌ಲ್ಲಿಗೆ ಬರಲು ಇಷ್ಟ. ಇದು ಹೀಗೆಯೇ ಇರಲಿ. ಎಲ್ಲ ಕಲಾವಿದರು, ಕನ್ನಡ ಚಿತ್ರರಂಗದ ಮೇಲೆ ನಿಮ್ಮ ಪ್ರೀತಿ ಅಭಿಮಾನ ಇರಲಿ’ ಎಂದು
ಹೇಳಿದರು.

ಶಾಸಕ ಶಾಮನೂರು ಶಿವಶಂಕರಪ್ಪ, ಎಸ್‌.ಎಸ್‌. ಮಲ್ಲಿಕಾರ್ಜುನ್‌, ಪ್ರಭಾ ಮಲ್ಲಿಕಾರ್ಜುನ್‌ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.