ADVERTISEMENT

ಹೆಣ್ಣು ಮಕ್ಕಳನ್ನು ದತ್ತು ಪಡೆಯಲು ಒಲವು

ಹೆಣ್ಣು ಮಕ್ಕಳ ದಿನಾಚರಣೆಯಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಉಪನಿರ್ದೇಶಕ ವಿಜಯಕುಮಾರ್

​ಪ್ರಜಾವಾಣಿ ವಾರ್ತೆ
Published 24 ಜನವರಿ 2020, 14:02 IST
Last Updated 24 ಜನವರಿ 2020, 14:02 IST
ದಾವಣಗೆರೆಯ ಸೀತಮ್ಮ ಪ್ರೌಢಶಾಲೆಯಲ್ಲಿ ಶುಕ್ರವಾರ ನಡೆದ ಅಂತರರಾಷ್ಟ್ರೀಯ ಹೆಣ್ಣು ಮಕ್ಕಳ ದಿನಾಚರಣೆ ಕಾರ್ಯಕ್ರಮದಲ್ಲಿ ವಿವಿಧ ವಿಭಾಗಗಳಲ್ಲಿ ಸಾಧನೆ ಮಾಡಿದ ವಿದ್ಯಾರ್ಥಿನಿಯರನ್ನು ಅಭಿನಂದಿಸಲಾಯಿತು –ಪ್ರಜಾವಾಣಿ ಚಿತ್ರ
ದಾವಣಗೆರೆಯ ಸೀತಮ್ಮ ಪ್ರೌಢಶಾಲೆಯಲ್ಲಿ ಶುಕ್ರವಾರ ನಡೆದ ಅಂತರರಾಷ್ಟ್ರೀಯ ಹೆಣ್ಣು ಮಕ್ಕಳ ದಿನಾಚರಣೆ ಕಾರ್ಯಕ್ರಮದಲ್ಲಿ ವಿವಿಧ ವಿಭಾಗಗಳಲ್ಲಿ ಸಾಧನೆ ಮಾಡಿದ ವಿದ್ಯಾರ್ಥಿನಿಯರನ್ನು ಅಭಿನಂದಿಸಲಾಯಿತು –ಪ್ರಜಾವಾಣಿ ಚಿತ್ರ   

ದಾವಣಗೆರೆ: ಜನರಿಗೆ ಇಂದು ಹೆಣ್ಣು ಮಕ್ಕಳ ಮೇಲೆ ಒಲವು ಹೆಚ್ಚುತ್ತಿದ್ದು, ಮಕ್ಕಳ ದತ್ತು ಕೇಂದ್ರದಲ್ಲಿ ಹೆಣ್ಣು ಮಕ್ಕಳನ್ನೇ ಹೆಚ್ಚಾಗಿ ದತ್ತು ಪಡೆಯುತ್ತಿದ್ದಾರೆ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಉಪನಿರ್ದೇಶಕ ವಿಜಯಕುಮಾರ್ ಹೇಳಿದರು.

ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಜಿಲ್ಲಾ ಮಕ್ಕಳಾ ರಕ್ಷಣಾ ಘಟಕ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಗಳ ಸಂಯುಕ್ತಾಶ್ರಯದಲ್ಲಿ ಸೀತಮ್ಮ ಬಾಲಕಿಯರ ಹಿರಿಯ ಪ್ರೌಢಶಾಲೆಯಲ್ಲಿ ಶುಕ್ರವಾರ ನಡೆದ ಅಂತರರಾಷ್ಟ್ರೀಯ ಹೆಣ್ಣು ಮಕ್ಕಳ ದಿನಾಚರಣೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ವಂಶೋದ್ಧಾರಕ್ಕೆ ಗಂಡು ಮಕ್ಕಳೇ ಬೇಕು ಎಂಬುದು ಎಲ್ಲರ ಮನಸ್ಥಿತಿ. ಹಲವು ಕಾರಣಕ್ಕೆ ಹೆಣ್ಣು ಮಗು ಹುಟ್ಟಿದರೆ ಕಸದ ತೊಟ್ಟಿ, ಬೇಲಿ ಮತ್ತು ಆಸ್ಪತ್ರೆಗಳಲ್ಲಿ ಬಿಟ್ಟು ಹೋಗುತ್ತಾರೆ. ಅಂತಹ ಮಕ್ಕಳನ್ನು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ದತ್ತು ಕೇಂದ್ರದಲ್ಲಿ ರಕ್ಷಿಸಿ ಪೋಷಿಸುತ್ತೇವೆ. ಹೆಣ್ಣು ಮಗಳು ಮನೆಗೆ ಮಹಾಲಕ್ಷ್ಮೀ ಇದ್ದಂತೆ. ಹೆಣ್ಣು ಗಂಡು ಎಂಬ ಬೇಧ ತೋರದೇ ಮಕ್ಕಳಿಗೆ ಸಮಾನ ಶಿಕ್ಷಣ ನೀಡಿ ಅವರನ್ನು ಪ್ರೋತ್ಸಾಹಿಸಿ ಬೆಳೆಸಬೇಕು ಮಕ್ಕಳ ಸಾಧನೆಗೆ ಸ್ಪೂರ್ತಿ ನೀಡಬೇಕು ಎಂದರು.

ADVERTISEMENT

‘2011ರ ಜನಗಣತಿಯ ಪ್ರಕಾರ 1000 ಪುರುಷರಿಗೆ 948 ಮಹಿಳೆಯರಿದ್ದಾರೆ. ನಮ್ಮಲ್ಲಿರುವ ಲಿಂಗ ತಾರತಮ್ಯವೇ ಈ ಅಂತರಕ್ಕೆ ಕಾರಣ. ಹೆಣ್ಣು ಮಗುವೆಂದರೆ ಇಂದಿಗೂ ಮುಖ ತಿರುಗಿಸುವವರು ಇದ್ದಾರೆ. ಈ ಭಾವನೆ ನಮ್ಮಲ್ಲಿ ಬದಲಾಗಬೇಕು. ಇತ್ತೀಚೆಗೆ ನಮ್ಮ ಜಿಲ್ಲೆಯಲ್ಲಿ ಹೆಣ್ಣು ಮಗುವಿನ ಮಾರಾಟದ ಘಟನೆ ನಡೆದಿದೆ ಇದು ನಮ್ಮ ಜಿಲ್ಲೆಗೆ ಕಳಂಕ ತರುವ ಸಂಗತಿ ಎಂದು ವಿಷಾದ ವ್ಯಕ್ತಪಡಿಸಿದರು.

ಕಾರ್ಯಕ್ರಮ ಉದ್ಘಾಟಿಸಿದ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪ ನಿರ್ದೇಶಕ ಪರಮೇಶ್ವರಪ್ಪ ಮಾತನಾಡಿ, ‘ಮಹಿಳೆಯರು ಎಲ್ಲ ಕ್ಷೇತ್ರಗಳಲ್ಲಿ ಕಾರ್ಯನಿರ್ವಹಿಸುವ ಮೂಲಕ ಉತ್ತಮ ಸಾಧನೆ ಮಾಡುತ್ತಿದ್ದು, ಎಲ್ಲ ಪಾತ್ರ ನಿರ್ವಹಿಸುವ ಮಹಿಳೆಯರನ್ನು ನಾವೆಲ್ಲರೂ ಗೌರವದಿಂದ ಕಾಣಬೇಕು. ಎಲ್ಲಿ ಮಹಿಳೆಯರನ್ನು ಗೌರವಿಸುತ್ತಾರೋ ಅಲ್ಲಿ ದೇವರು ನೆಲಿಸಿರುತ್ತಾನೆ’ ಎಂದು ಹೇಳಿದರು.

‘ಪ್ರಸ್ತುತ ದಿನಮಾನದಲ್ಲಿ ಎಲ್ಲ ಸವಾಲುಗಳನ್ನು ಸ್ವೀಕರಿಸಿ ಹೆಣ್ಣು ಎಲ್ಲಾ ಕ್ಷೇತ್ರದಲ್ಲಿ ಕಾರ್ಯ ನಿರ್ವಹಿಸುವುದರ ಮೂಲಕ ತನ್ನದೇ ಆದ ನೆಲೆ ಕಂಡುಕೊಂಡು ಧೈರ್ಯದಿಂದ ಮುನ್ನಡೆಯುತ್ತಿದ್ದಾಳೆ. ಇಂತಹ ಹೆಣ್ಣು ಮಕ್ಕಳನ್ನು ರಕ್ಷಿಸುವ ಮತ್ತು ಪ್ರೋತ್ಸಾಹಿಸುವ ಗುಣವನ್ನು ನಾವೆಲ್ಲರೂ ಬೆಳಿಸಿಕೊಳ್ಳಬೇಕು’ ಎಂದರು.

‘ಇತ್ತೀಚಿನ ದಿನಗಳಲ್ಲಿ ಹೆಣ್ಣು ಮಕ್ಕಳು ಬೇಕೆಂದು ಬಯಸುವರರ ಸಂಖ್ಯೆ ಹೆಚ್ಚುತ್ತಿದೆ. ತಂದೆ–ತಾಯಿಯನ್ನು ಗಂಡು ಮಕ್ಕಳಿಗಿಂತ ಹೆಚ್ಚು ಪ್ರೀತಿಯಿಂದ ನೋಡಿಕೊಳ್ಳುವವರು ಹೆಣ್ಣು ಮಕ್ಕಳು. ಈ ಕಾರಣಕ್ಕಾದರೂ ನಾವು ಹೆಣ್ಣು ಮಕ್ಕಳನ್ನು ರಕ್ಷಿಸಬೇಕು. ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸಿ ಅವರ ಸಾಧನೆಗೆ ಸ್ಫೂರ್ತಿ ನೀಡುವ ಕೆಲಸವನ್ನು ನಾವೆಲ್ಲಾ ಮಾಡೋಣ. ಹೆಣ್ಣನ್ನು ರಕ್ಷಿಸಿ, ಹೆಣ್ಣನ್ನು ಬೆಳೆಸೋಣ’ ಎಂದು ಸಲಹೆ ನೀಡಿದರು.

ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಅಧಿಕಾರಿ ಕೆ.ಸಿ. ಬಸವರಾಜ್ ಮಾತನಾಡಿ, ‘ಅನಾದಿ ಕಾಲದಿಂದಲೂ ಹೆಣ್ಣನ್ನು ಬರಿ ಭೋಗದ ವಸ್ತುವನ್ನಾಗಿ ನೋಡುತ್ತಿದ್ದಾರೆ. ತಾರತಮ್ಯ ಎಂಬುದು ಹೆಣ್ಣು ಮಕ್ಕಳ ವಿಚಾರದಲ್ಲಿ ಮನೆಯಿಂದಲೇ ಪ್ರಾರಂಭವಾಗುತ್ತದೆ. ಆದರೆ ಈಗ ಸಮಾಜದಲ್ಲಿ ಹೆಣ್ಣು ಮಕ್ಕಳು ಎಲ್ಲವನ್ನು ಮೀರಿ ಗಂಡಿಗೆ ಸಮಾನಳಾಗಿ ಬೆಳೆದು ವಿವಿಧ ಕ್ಷೇತ್ರಗಳಲ್ಲಿ ತನ್ನದೆ ಆದ ಚಾಪು ಮೂಡಿಸುತ್ತಿದ್ದಾಳೆ’ ಎಂದರು.

ಸೀತಮ್ಮ ಬಾಲಕಿಯರ ಪ್ರೌಢಶಾಲೆಯ ಮುಖ್ಯೋಪಾಧ್ಯಾಯರಾದ ಎ.ಆರ್. ಮಂಜಪ್ಪ, ಸಿಡಿಪಿಒ ಧರಣಿಕುಮಾರ್, ಮಹಿಳಾ ಠಾಣೆಯ ಸಬ್ ಇನ್ಸಪೆಕ್ಟರ್ ಮಾಳಮ್ಮ, ಮಹಿಳಾ ರಕ್ಷಣಾ ಘಟಕದ ಶೃತಿ ಉಪಸ್ಥಿತರಿದ್ದರು.

ಸಾಧಕ ವಿದ್ಯಾರ್ಥಿನಿಯರಿಗೆ ಸನ್ಮಾನ

ಉದ್ದ ಜಿಗಿತದಲ್ಲಿ ಸಾಧನೆ ಮಾಡಿದ 9ನೇ ತರಗತಿ ವಿದ್ಯಾರ್ಥಿನಿ ಸುಚಿತ್ರಾ ಟಿ, ರಿಲೇಯಲ್ಲಿ ಸಾಧನೆ ಮಾಡಿದ ಬಿಂದುಶ್ರೀ, ಎಸ್ಸೆಸ್ಸೆಲ್ಸಿಯಲ್ಲಿ ಉರ್ದು ವಿಭಾಗದಲ್ಲಿ ಹೆಚ್ಚು ಅಂಕ ಪಡೆದ ಶಫೀನಾ ಖಾನಂ, ಕನ್ನಡ ವಿಭಾಗದ ಭುವನಾ ಕೆ, ಇಂಗ್ಲಿಷ್ ವಿಭಾಗದ ಉಮೇರಿಯ ಕೆ. ಹಾಗೂ ಚಿತ್ರಕಲೆಯಲ್ಲಿ ಸಾಧನೆ ಮಾಡಿದ ಋತಿಕಾ ಕೆ.ಹೆಗಡೆ ಅವರನ್ನು ಸನ್ಮಾನಿಸಲಾಯಿತು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.