ADVERTISEMENT

ಸಾಧನಾ ಪರೀಕ್ಷೆ: ಮೂವರು ವಿದ್ಯಾರ್ಥಿಗಳ ಆಯ್ಕೆ

​ಪ್ರಜಾವಾಣಿ ವಾರ್ತೆ
Published 27 ಏಪ್ರಿಲ್ 2025, 14:18 IST
Last Updated 27 ಏಪ್ರಿಲ್ 2025, 14:18 IST
ಸಾಧನಾ ಪರೀಕ್ಷೆಯಲ್ಲಿ ಯಶಸ್ಸು ಗಳಿಸಿದ ಸಂತೇಬೆನ್ನೂರು ಸಮೀಪದ ತಣಿಗೆರೆ ಗ್ರಾಮದ ವಿದ್ಯಾರ್ಥಿನಿ ಜೇಷ್ಠಾಳನ್ನು ಬಿಇಒ ಎಲ್.ಜಯಪ್ಪ ಸನ್ಮಾನಿಸಿದರು
ಸಾಧನಾ ಪರೀಕ್ಷೆಯಲ್ಲಿ ಯಶಸ್ಸು ಗಳಿಸಿದ ಸಂತೇಬೆನ್ನೂರು ಸಮೀಪದ ತಣಿಗೆರೆ ಗ್ರಾಮದ ವಿದ್ಯಾರ್ಥಿನಿ ಜೇಷ್ಠಾಳನ್ನು ಬಿಇಒ ಎಲ್.ಜಯಪ್ಪ ಸನ್ಮಾನಿಸಿದರು   

ಸಂತೇಬೆನ್ನೂರು: ಬಹುಹಂತದ ಸಂಕೀರ್ಣ ಸಾಧನಾ ಪರೀಕ್ಷೆಯಲ್ಲಿ ತಾಲ್ಲೂಕಿನ ಮೂವರು ಬಾಲಕಿಯರು ತೇರ್ಗಡೆ ಹೊಂದಿದ್ದು, ಬೆಂಗಳೂರಿನ ರಾಷ್ಟ್ರೋತ್ಥಾನ ಸಂಸ್ಥೆಯಲ್ಲಿ ಪದವಿಪೂರ್ವ ಶಿಕ್ಷಣಕ್ಕೆ ಪ್ರವೇಶ ಪಡೆದಿದ್ದಾರೆ.

ರಾಜ್ಯದಾದ್ಯಂತ ಪರೀಕ್ಷೆ ನಡೆದಿದ್ದು, ಒಟ್ಟು 60 ವಿದ್ಯಾರ್ಥಿಗಳು ಆಯ್ಕೆಯಾಗಿದ್ದು, ಅದರಲ್ಲಿ ತಾಲ್ಲೂಕಿನ ತಣಿಗೆರೆ ಗ್ರಾಮದ ಜ್ಯೇಷ್ಠಾ, ಹಟ್ಟಿಯ ಜಯಶ್ರೀ ಹಾಗೂ ನುಗ್ಗಿಹಳ್ಳಿ ಗ್ರಾಮದ ಭಾನುಪ್ರಿಯ ಪ್ರವೇಶ ಪಡೆದಿದ್ದಾರೆ.

ರಾಷ್ಟ್ರೋತ್ಥಾನ ಸಂಸ್ಥೆ ಗ್ರಾಮೀಣ ಭಾಗದ ಆರ್ಥಿಕವಾಗಿ ಹಿಂದುಳಿದ ಪ್ರತಿಭಾವಂತ ವಿದ್ಯಾರ್ಥಿಗಳಿಗಾಗಿ ಸಾಧನಾ ಪರೀಕ್ಷೆ ನಡೆಸುತ್ತದೆ.

ADVERTISEMENT

ಆಯ್ಕೆ ಐದು ಹಂತದಲ್ಲಿ ನಡೆಯುತ್ತದೆ. ಮೊದಲೆರೆಡು ಹಂತದಲ್ಲಿ ಲಿಖಿತ ಪರೀಕ್ಷೆ, ಮೂರನೇ ಹಂತದಲ್ಲಿ ಸಂದರ್ಶನ, ನಾಲ್ಕನೇ ಹಂತದಲ್ಲಿ ಮನೆ-ಮನೆ ಭೇಟಿ ಹಾಗೂ ಐದನೇ ಹಂತದಲ್ಲಿ ಒಂದು ವಾರ ತರಬೇತಿ ಇರುತ್ತದೆ. ಅಂತಿಮ ಪರೀಕ್ಷೆಯಲ್ಲಿ ಆಯ್ಕೆ ಮಾಡಲಾಗುತ್ತದೆ. ಪದವಿ ಶಿಕ್ಷಣದ ಜೊತೆ ಬಾಲಕಿಯರಿಗೆ ನೀಟ್ ಕೋಚಿಂಗ್ ಹಾಗೂ ಬಾಲಕರಿಗೆ ಜೆಇಇ ಕೋಚಿಂಗ್ ನೀಡಲಾಗುತ್ತದೆ. ಗುಣಮಟ್ಟದ ಶಿಕ್ಷಣ, ಯೋಗ, ಧ್ಯಾನ, ಜೀವನ ಮೌಲ್ಯಗಳು ಹಾಗೂ ಭಾರತೀಯ ಸಂಸ್ಕೃತಿ ಕಲಿಕೆಗೆ ಇಲ್ಲಿ ಒತ್ತು ನೀಡಲಾಗುತ್ತದೆ. ಇಂತಹ ಪರೀಕ್ಷೆಗೆ ವ್ಯಾಪಕ ಪ್ರಚಾರ ಹಾಗೂ ಪರಿಶ್ರಮದ ಅಗತ್ಯವಿದೆ. ಎರಡು ವರ್ಷದಿಂದ ಈ ಪ್ರಯತ್ನ ಮಾಡಲಾಗಿತ್ತು. ವಿದ್ಯಾರ್ಥಿಗಳನ್ನು ಆಯ್ಕೆ ಮಾಡಿ ಸಂಪನ್ಮೂಲ ವ್ಯಕ್ತಿಗಳಿಂದ ತರಬೇತಿ ನೀಡಿದ ಪರಿಣಾಮ ಯಶಸ್ಸು ಲಭಿಸಿದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಎಲ್.ಜಯಪ್ಪ ಸಂತಸ ಹಂಚಿಕೊಂಡರು.

‘ಪತಿ ಇಲ್ಲ‌. ಬಡತನದಲ್ಲಿ ಪುತ್ರಿಯನ್ನು ಓದಿಸಿದ್ದೆ. ನನ್ನ ಮಗಳಿಗೆ ಉನ್ನತ ಶಿಕ್ಷಣ ನೀಡಲು ಶ್ರಮಿಸಿದ ಎಲ್ಲರಿಗೂ ಕೃತಜ್ಞತೆ ಸಲ್ಲಿಸುವೆ’ ಎಂದು ಜೇಷ್ಠಾ ತಾಯಿ ಕವಿತಾ ಹೇಳಿದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.