ಚನ್ನಗಿರಿ: ‘ಎಲ್ಲರೂ ತಮ್ಮ ಬದುಕಿನಲ್ಲಿ ಗುರಿ ಮುಟ್ಟಬೇಕಾದರೆ ಅಲ್ಲಿ ‘ಭಗೀರಥ’ ಪ್ರಯತ್ನ ಇರಬೇಕು. ಭಗೀರಥ ಪ್ರಯತ್ನದಿಂದ ಯಶಸ್ಸು ಕಾಣಲು ಸಾಧ್ಯ’ ಎಂದು ಭಗೀರಥ ಉಪ್ಪಾರ ಸಮಾಜದ ತಾಲ್ಲೂಕು ಘಟಕದ ಅಧ್ಯಕ್ಷ ಎ.ಎಸ್. ಬಸವರಾಜಪ್ಪ ತಿಳಿಸಿದರು.
ಪಟ್ಟಣದ ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ಭಾನುವಾರ ತಾಲ್ಲೂಕು ಆಡಳಿತದಿಂದ ಹಮ್ಮಿಕೊಂಡಿದ್ದ ಭಗೀರಥ ಮಹರ್ಷಿ ಜಯಂತ್ಯುತ್ಸವ ಉದ್ಘಾಟಿಸಿ ಮಾತನಾಡಿದರು.
‘ಸತತ ಪ್ರಯತ್ನಗಳಿಂದ ಪ್ರತಿಫಲ ಸಿಗಲಿದೆ ಎಂಬುದಕ್ಕೆ ಗಂಗೆಯನ್ನು ಧರೆಗಿಳಿಸಿದ ಭಗೀರಥ ಮಹರ್ಷಿ ಉತ್ತಮ ಉದಾಹರಣೆ. ರಾಜ್ಯದಲ್ಲಿ ಉಪ್ಪಾರ ಸಮಾಜದ ಜನಸಂಖ್ಯೆ 40 ಲಕ್ಷ ಇದ್ದು, ಆರ್ಥಿಕ, ಸಾಮಾಜಿಕ ಸಮೀಕ್ಷೆ (ಜಾತಿಗಣತಿ)ಯಲ್ಲಿ 19 ಲಕ್ಷ ಜನಸಂಖ್ಯೆ ತೋರಿಸಲಾಗಿದೆ. ಗಣತಿ ಅವೈಜ್ಞಾನಿಕವಾಗಿದೆ ಎಂದು ದೂರಿದರು.
ಇಡೀ ರಾಜ್ಯದಲ್ಲಿ ಅತ್ಯಂತ ಹಿಂದುಳಿದ ಸಮಾಜವಾಗಿದ್ದು, ಕೆಳಸ್ತರದಲ್ಲಿ ಜೀವನವನ್ನು ಸಾಗಿಸುತ್ತಿದೆ. ಉಪ್ಪಾರ ಸಮಾಜವನ್ನು ಪರಿಶಿಷ್ಟ ಜಾತಿ ಅಥವಾ ಪಂಗಡಕ್ಕೆ ಸೇರ್ಪಡೆ ಮಾಡಬೇಕು ಎಂದು ದಶಕಗಳಿಂದಲೂ ಹೋರಾಟ ಮಾಡುತ್ತಾ ಬಂದರೂ ಯಾವುದೇ ಕ್ರಮ ಕೈಗೊಂಡಿಲ್ಲ. ಆದರೂ ಭಗೀರಥ ಪ್ರಯತ್ನ ಎನ್ನುವಂತೆ ಹೋರಾಟ ಮುಂದುವರಿಸಲಾಗುವುದು ಎಂದರು.
ತಹಶೀಲ್ದಾರ್ ಎನ್.ಜೆ. ನಾಗರಾಜ್ ಅಧ್ಯಕ್ಷತೆ ವಹಿಸಿದ್ದರು.
ಕಾಂಗ್ರೆಸ್ ತಾಲ್ಲೂಕು ಘಟಕದ ಅಧ್ಯಕ್ಷ ಸಿ.ಎಚ್. ಶ್ರೀನಿವಾಸ್, ಸಮಾಜದ ಮುಖಂಡರಾದ ಎಂ. ಚಂದ್ರಪ್ಪ, ಎಂ.ಜಿ.ಕೆ. ಹನುಮಂತಪ್ಪ, ಡಿ.ಆರ್. ರಾಜಪ್ಪ, ಮಂಜುನಾಥ್, ಪುರಸಭೆ ಸದಸ್ಯ ನಂಜುಂಡಪ್ಪ, ಬುಳ್ಳಿ ಗಣೇಶ್ ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.