ADVERTISEMENT

ಸರ್ಕಾರಿ ಶಾಲೆಗಳ ಗೋಳು ಕೇಳೋರ್‍ಯಾರು?

ಸೋರುತಿಹುದು ನಿಜಲಿಂಗಪ್ಪ ಓದಿದ ಶಾಲೆ l ಮೈದಾನ, ಕೊಠಡಿ, ಶಿಕ್ಷಕರ ಸಮಸ್ಯೆಗಳ ಸರಮಾಲೆ

​ಪ್ರಜಾವಾಣಿ ವಾರ್ತೆ
Published 2 ಡಿಸೆಂಬರ್ 2019, 11:06 IST
Last Updated 2 ಡಿಸೆಂಬರ್ 2019, 11:06 IST
ಮಂಡಕ್ಕಿಭಟ್ಟಿ ಲೇಔಟ್‌ ಸರ್ಕಾರಿ ಉರ್ದು ಶಾಲೆ ಮುಂದಿರುವ ರಸ್ತೆಯಲ್ಲಿ ಕೊಳಚೆ ನಿಂತಿರುವುದು
ಮಂಡಕ್ಕಿಭಟ್ಟಿ ಲೇಔಟ್‌ ಸರ್ಕಾರಿ ಉರ್ದು ಶಾಲೆ ಮುಂದಿರುವ ರಸ್ತೆಯಲ್ಲಿ ಕೊಳಚೆ ನಿಂತಿರುವುದು   

ದಾವಣಗೆರೆ: ಮಳೆಗೆ ಸೋರುವ ಕೊಠಡಿಗಳು, ಕೆಸರು ಗದ್ದೆಯಂತಾಗುವ ಆಟದ ಮೈದಾನಗಳು. ಇದರ ಜೊತೆಗೆ ಹಂದಿ ಮತ್ತು ಮಂದಿಗಳ ಕಾಟ. ವಿಷಯವಾರು ಶಿಕ್ಷಕರ ಕೊರತೆ, ನೀರಿಲ್ಲದೇ ಬಾಗಿಲು ಮುಚ್ಚಿರುವ ಶೌಚಾಲಯಗಳು, ಬಯಲಲ್ಲೇ ಮೂತ್ರಕ್ಕೆ ಹೋಗುವ ವಿದ್ಯಾರ್ಥಿಗಳು. ಬೆಂಚುಗಳಿಲ್ಲದ ರೂಮುಗಳು; ಕಂಪ್ಯೂಟರ್, ಕಂಪ್ಯೂಟರ್ ಶಿಕ್ಷಕರು ಇಲ್ಲದೆ ‘ಸ್ಮಾರ್ಟ್‌’ ಆಗದ ತರಗತಿಗಳು. ಪಾಠ ಕೇಳುವ ವೇಳೆ ದೇವಸ್ಥಾನದ ಗಂಟೆ ಮತ್ತು ವಾಹನಗಳ ಶಬ್ದ... ಹೀಗೆ ಹೇಳುತ್ತಾ ಹೋದರೆ ಮುಗಿಯುವುದಿಲ್ಲ ನಗರದ ಸರ್ಕಾರಿ ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳ ಸಮಸ್ಯೆಗಳ ಸರಮಾಲೆ.

ವಿದ್ಯಾನಗರಿ, ಬೆಣ್ಣೆ ದೋಸೆ ನಗರಿ ಎಂದೇ ಹೆಸರಾಗಿದ್ದ ದಾವಣಗೆರೆ ನಗರ ವ್ಯಾಪ್ತಿಯ ಸರ್ಕಾರಿ ಶಾಲೆಗಳ ದುಸ್ಥಿತಿ ಇದು. ಖಾಸಗಿ ಶಾಲೆಗಳ ಭರಾಟೆಯಲ್ಲಿ ಸರ್ಕಾರಿ ಶಾಲೆಗಳ ವಿದ್ಯಾರ್ಥಿಗಳ ಸಂಖ್ಯೆ ವರ್ಷದಿಂದ ವರ್ಷಕ್ಕೆ ಕುಸಿಯುತ್ತಲೇ ಇದೇ.

ಮಂಡಕ್ಕಿ ಭಟ್ಟಿ ಮತ್ತು ಆಜಾದ್ ನಗರದಲ್ಲಿರುವ ಉರ್ದು ಶಾಲೆಗಳ ಸ್ಥಿತಿಯಂತೂ ಶೋಚನೀಯವಾಗಿದೆ. ಮಕ್ಕಳು ಕೆಸರು ಗದ್ದೆಯಂತಿರುವ ರಸ್ತೆಯನ್ನು ದಾಟಿ ಶಾಲೆಗೆ ಹೋಗಬೇಕಿದೆ. ಶಾಲೆಯ ಕಾಂಪೌಂಡ್‌ ಪಕ್ಕದಲ್ಲಿಯೇ ಕೊಳಚೆ ನೀರು ಮೊಣಕಾಲುದ್ದ ನಿಂತಿರುತ್ತದೆ. ವಾಹನಗಳು ಓಡಾಡಿ ಇಲ್ಲಿ 1–2 ಅಡಿ ಉದ್ದದ ಕಾಲುವೆಯಂತಾಗಿದೆ.

ADVERTISEMENT

‘ಶಿಕ್ಷಕರನ್ನು ಪಾಠಗಳಿಗಿಂತ ಅನ್ಯ ಕಾರ್ಯಗಳಿಗೆ ಹೆಚ್ಚು ಬಳಸಿಕೊಳ್ಳುತ್ತಿರುವುದರಿಂದ ಶಿಕ್ಷಣದ ಗುಣಮಟ್ಟ ಕುಸಿಯಲು ಪ್ರಮುಖ ಕಾರಣ. ಮುಖ್ಯ ಶಿಕ್ಷಕರು ವಿದ್ಯಾರ್ಥಿಗಳ ವಿದ್ಯಾರ್ಥಿವೇತನ, ಬಿಸಿಯೂಟ ಮಾಹಿತಿ ಹಾಗೂ ಇತರ ಮಾಹಿತಿಯನ್ನು ಸೈಬರ್‌ ಸೆಂಟರ್‌ಗೆ ಹೋಗಿ ಆನ್‌ಲೈನ್‌ಗೆ ಅಪ್‌ಲೋಡ್ ಮಾಡಲು ತುಂಬಾ ಸಮಯ ಹಿಡಿಯುತ್ತದೆ. ಹೀಗಾಗಿ ಶಾಲೆಗೆ ಕಂಪ್ಯೂಟರ್‌ಗಳನ್ನು ನೀಡಬೇಕು’ ಎನ್ನುತ್ತಾರೆ ಹೆಸರು ಹೇಳಲು ಇಚ್ಛಿಸದ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕರೊಬ್ಬರು.

‘ಕೆ.ಆರ್. ಮಾರುಕಟ್ಟೆಯಲ್ಲಿ ಒಂದೇ ಸ್ಥಳದಲ್ಲಿ ಮೂರು ಸರ್ಕಾರಿ ಶಾಲೆಗಳಿವೆ. ಒಂದು ಹಳೆ ಮಾಧ್ಯಮಿಕ ಶಾಲೆ, ಪ್ರೌಢ ಶಾಲೆ ಮತ್ತು ಉರ್ದು ಶಾಲೆ. ಇಲ್ಲಿ ವಿಶಾಲವಾದ ಮೈದಾನವಿದೆ. ಆದರೆ, ಇಲ್ಲಿ ಕೆ.ಆರ್. ಮಾರುಕಟ್ಟೆಯನ್ನು ಹೊಸದಾಗಿ ನಿರ್ಮಿಸುತ್ತಿರುವುದರಿಂದ 8 ತಿಂಗಳ ಹಿಂದೆ ತಾತ್ಕಾಲಿಕ ಮಳಿಗೆಗಳನ್ನು ನಿರ್ಮಿಸಲಾಗಿದೆ. ಇದರಿಂದ ಮಕ್ಕಳ ಕ್ರೀಡಾ ಚಟುವಟಿಕೆಗೆ ತೊಂದರೆ ಆಗಿದೆ’ ಎನ್ನುತ್ತಾರೆ ಶಿಕ್ಷಕ ಕಲ್ಲಪ್ಪ ಅರಳಿ.

ಮಳೆ ಬಂದರೆ ಶಾಲೆಯ ಆವರಣದಲ್ಲಿ ಒಂದು ಅಡಿ ನೀರು ಮತ್ತು ಕೊಳಚೆ ನೀರು ನಿಲ್ಲುತ್ತದೆ. ಶಾಲೆಯ ಸುತ್ತ ಕೊಳಚೆ ತುಂಬಿದೆ. ಅದರಲ್ಲೇ ಮಕ್ಕಳು ಬರುತ್ತಿದ್ದಾರೆ. ಮಂಡಕ್ಕಿ ಭಟ್ಟಿಗೆ ಲಾರಿಗಳು ಬರುವುದರಿಂದ ರಸ್ತೆಯಲ್ಲಿ ಒಂದು ಅಡಿ ಗುಂಡಿಗಳು ಬಿದ್ದಿವೆ. ಈ ಸಮಸ್ಯೆಗಳ ಕುರಿತು ಶಿಕ್ಷಣ ಇಲಾಖೆಗೆ ಮತ್ತು ಪಾಲಿಕೆಯ ಗಮನಕ್ಕೆ ತಂದಿದ್ದೇವೆ ಎನ್ನುತ್ತಾರೆ ಮಂಡಕ್ಕಿಭಟ್ಟಿ ಲೇಔಟ್‌ಸರ್ಕಾರಿ ಉರ್ದು ಶಾಲೆಯ ಮುಖ್ಯ ಶಿಕ್ಷಕ ಕೆ.ಆರ್. ಮಹಮದ್ ರಿಯಾಜ್.

ಆಜಾದ್‌ನಗರದಲ್ಲಿರುವ ಉರ್ದು ಶಾಲೆಯ ಸ್ಥಿತಿಯೂ ಶೋಚನೀಯವಾಗಿದೆ.

‘ಶಾಲೆ ಕಟ್ಟಡಗಳ ದುರಸ್ತಿಗಾಗಿ ಕ್ರಿಯಾ ಯೋಜನೆ ರೂಪಿಸಲಾಗಿದೆ. ನಿಜಲಿಂಗಪ್ಪ ಓದಿರುವ ಹಳೇ ಮಾಧ್ಯಮಿಕ ಶಾಲೆ ಶಿಥಿಲಾವಸ್ಥೆಯಲ್ಲಿದೆ. ಶಾಲೆಯ ದುರಸ್ತಿಗೆ ₹ 65 ಲಕ್ಷ ಅನುದಾನ ಬಂದಿದೆ. ಅವರ ನೆನಪಿಗಾಗಿ ಈ ಶಾಲೆಯನ್ನು ಸ್ಮಾರಕ ಮಾಡಬೇಕು ಎಂಬ ಅಭಿಪ್ರಾಯ ಕೇಳಿಬರುತ್ತಿದೆ. ಹೀಗಾಗಿ ಹೊಸ ಕೊಠಡಿಗಳನ್ನು ನಿರ್ಮಾಣ ಮಾಡಲು ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸುತ್ತೇವೆ’ ಎನ್ನುತ್ತಾರೆ ಡಿಡಿಪಿಐ ಸಿ.ಆರ್. ಪರಮೇಶ್ವರಪ್ಪ.

‘ಕೆಲ ಶಾಲೆಗಳಲ್ಲಿ ಶೌಚಾಲಯದ ಸಮಸ್ಯೆ ಇದೆ. ಇನ್ನು ಕೆಲ ಶಾಲೆಗಳಲ್ಲಿ ನಿರ್ವಹಣೆಯ ಕೊರತೆ ಇದೆ. ಕೆಲ ಶಾಲೆಗಳಲ್ಲಿ ಹೆಚ್ಚುವರಿ ಶೌಚಾಲಯಕ್ಕೆ ಬೇಡಿಕೆ ಇದೆ. ಸ್ಮಾರ್ಟ್‌ ಸಿಟಿ ಕಂಪನಿ ಮತ್ತು ಪಾಲಿಕೆಗೆ ಹೈಟೆಕ್ ಶೌಚಾಲಯ ಮಾಡಿಕೊಡುವಂತೆ ಮನವಿ ಮಾಡಿದ್ದೇವೆ. ನಗರ ಪ್ರದೇಶ ಆಗಿರುವುದರಿಂದ ಕೆಲ ಶಾಲೆಗಳಲ್ಲಿ ಮೈದಾನದ ಕೊರತೆ ಇದೆ. ಮೈದಾನ ಇರುವ ಸಮೀಪದ ಶಾಲೆಗಳಿಗೆ ಮಕ್ಕಳನ್ನು ಕರೆದುಕೊಂಡು ಹೋಗಿ ಕ್ರೀಡಾ ಚಟುವಟಿಕೆಗಳಲ್ಲಿ ತೊಡಗುವಂತೆ ಸೂಚಿಸಿದ್ದೇವೆ’ ಎಂದು ಅವರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.