ಸಾಸ್ವೆಹಳ್ಳಿ: ಸಮೀಪದ ರಾಂಪುರ ಗ್ರಾಮದ ದುರ್ಗಮ್ಮ ದೇವಿ ರಥೋತ್ಸವ ಬುಧವಾರ ಮಧ್ಯಾಹ್ನ ಸಂಭ್ರಮದಿಂದ ನಡೆಯಿತು.
ರಥೋತ್ಸವದ ಅಂಗವಾಗಿ ದುರ್ಗಮ್ಮ ದೇವಿಗೆ ವಿಶೇಷ ಪೂಜೆ, ಅಲಂಕಾರ ಮಾಡಲಾಗಿತ್ತು.
ಮಧ್ಯಾಹ್ನ ಎರಡು ಗಂಟೆ ನಂತರ ಜಾನಪದ ವಾದ್ಯಗಳಾದ ಹಲಗೆ ಮತ್ತು ಓಲಗದೊಂದಿಗೆ ಉತ್ಸವಮೂರ್ತಿಯನ್ನು ಅಲಂಕೃತ ಪಲ್ಲಕ್ಕಿಯಲ್ಲಿ ಕೂರಿಸಿ, ತುಂಗಭದ್ರಾ ನದಿಗೆ ಕೊಂಡೊಯ್ದು ಗಂಗಾ ಪೂಜೆ ನೆರವೇರಿಸಲಾಯಿತು.
ಬಳಿಕ ರಥದ ನಾಲ್ಕು ಚಕ್ರಗಳಿಗೂ ಎಲೆ-ಬಾನದ ಎಡೆಯನ್ನು ಅರ್ಪಿಸಲಾಯಿತು. ವೆಂಕಟೇಶ್ವರ ಸ್ವಾಮಿ ದೇವಸ್ಥಾನ ಬಳಿಯ ದ್ವಾರದ ಕಂಬಗಳಿಗೂ ಎಡೆ ಹಾಕಲಾಯಿತು. ದೇವಿಯ ಉತ್ಸವ ಮೂರ್ತಿಯನ್ನು ರಥದಲ್ಲಿ ಪ್ರತಿಷ್ಠಾಪಿಸಿ ಭಕ್ತರ ಹರ್ಷೋದ್ಘಾರದೊಂದಿಗೆ ರಥವನ್ನು ಎಳೆಯಲಾಯಿತು. ಭಕ್ತರು ರಥದ ಗಾಲಿಗಳಿಗೆ ಇಡಿಗಾಯಿ ಒಡೆದು ಭಕ್ತಿ ಸಮರ್ಪಿಸಿದರು.
ಶುಕ್ರವಾರ ಸಂಜೆ ದುರ್ಗಮ್ಮ ದೇವಿಯ ಸಿಡಿ ಉತ್ಸವ ನಡೆಯಲಿದೆ ಎಂದು ಪ್ರಕಟಣೆ ತಿಳಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.