ಚನ್ನಗಿರಿ: ‘ಸರ್ಕಾರಿ ವೇತನ ಪಡೆಯುವ ಅಧಿಕಾರಿಗಳು ಪ್ರಾಮಾಣಿಕವಾಗಿ ಕಾರ್ಯನಿರ್ವಹಿಸಬೇಕು. ಸಾರ್ವಜನಿಕರನ್ನು ಕಚೇರಿಗಳಿಗೆ ಪದೇಪದೇ ಅಲೆದಾಡಿಸದೇ ಅವರ ಕೆಲಸಗಳನ್ನು ಶೀಘ್ರವೇ ಮಾಡಿಕೊಡಬೇಕು’ ಎಂದು ಲೋಕಾಯುಕ್ತ ಎಸ್‌ಪಿ ಎಂ.ಎಸ್. ಕೌಲಾಪೂರೆ ತಿಳಿಸಿದರು.
ಪಟ್ಟಣದ ಪ್ರವಾಸಿ ಮಂದಿರದಲ್ಲಿ ಗುರುವಾರ ಸಾರ್ವಜನಿಕರಿಂದ ಅಹವಾಲು ಸ್ವೀಕರಿಸಿ ಮಾತನಾಡಿದ ಅವರು, 11 ಅರ್ಜಿಗಳು ಸಲ್ಲಿಕೆಯಾಗಿದ್ದು, ಈ ಪೈಕಿ ಮೂರು ದೂರುಗಳನ್ನು ಸ್ಥಳದಲ್ಲಿಯೇ ಪರಿಹರಿಸಲಾಗಿದೆ ಎಂದರು.
‘ಯಾವುದೇ ಇಲಾಖೆಗೆ ಹೋಗಿ ‘ಎ’ ಕೆಟಗರಿ ದಾಖಲೆಗಳನ್ನು ಕೇಳಿದರೆ ಅಧಿಕಾರಿಗಳು ದಾಖಲಾತಿ ಇಲ್ಲ ಎಂದು ಹಿಂಬರಹ ಬರೆದುಕೊಡುವ ಪರಿಪಾಟ ಮುಂದುವರೆಸಿದ್ದಾರೆ. ಇದು ಸರಿಯಾದ ಕ್ರಮವಲ್ಲ. ಮೂಲ ದಾಖಲೆಗಳು ಕಚೇರಿಯಲ್ಲೇ ಇರುತ್ತವೆ. ಅವುಗಳನ್ನು ಪರಿಶೀಲಿಸಿ ಅರ್ಜಿದಾರರಿಗೆ ನೀಡುವುದು ಆಯಾ ಇಲಾಖೆ ಅಧಿಕಾರಿಗಳ ಜವಾಬ್ದಾರಿ. ಈ ರೀತಿ ಹಿಂಬರಹ ಬರೆಯುವುದು ಕಾನೂನು ಬಾಹಿರ ಕ್ರಮವಾಗಿದ್ದು, ಹಿಂಬರಹ ಬರೆದುಕೊಡುವ ಅಧಿಕಾರಿಗಳಿಗೆ ದಂಡ ವಿಧಿಸಲಾಗುವುದು’ ಎಂದು ಅವರು ಎಚ್ಚರಿಸಿದರು.
ಸರ್ಕಾರದ ಯೋಜನೆಗಳು ಅರ್ಹ ಫಲಾನುಭವಿಗಳಿಗೆ ಸಮರ್ಪಕವಾಗಿ ತಲುಪುತ್ತಿಲ್ಲ ಎಂಬ ಬಗ್ಗೆ ಸಾಕಷ್ಟು ದೂರುಗಳು ಕೇಳಿ ಬರುತ್ತಿವೆ. ಅಧಿಕಾರಿ ವರ್ಗದವರು ಸಂಯಮದಿಂದ ವರ್ತಿಸಿ, ಅರ್ಹರಿಗೆ ಸರ್ಕಾರದ ಯೋಜನೆಗಳನ್ನು ಪ್ರಾಮಾಣಿಕವಾಗಿ ತಲುಪಿಸಬೇಕು. ಜವಾಬ್ದಾರಿ ಅರಿತು ಕಾರ್ಯನಿರ್ವಹಿಸಬೇಕು. ಯಾವುದೇ ಕಾರಣಕ್ಕೂ ಸಾರ್ವಜನಿಕರ ಸೇವೆಗೆ ವ್ಯತ್ಯಯ ಉಂಟಾಗದಂತೆ ಅಧಿಕಾರಿಗಳು ಕೆಲಸ ಮಾಡಬೇಕು’ ಎಂದು ಸೂಚಿಸಿದರು.
ಡಿವೈಎಸ್‌ಪಿ ಕಲಾವತಿ, ಪ್ರಭು ಸುರೇನ್, ಗುರುಬಸವರಾಜ, ತಹಶೀಲ್ದಾರ್ ಎನ್.ಜೆ. ನಾಗರಾಜ್, ತಾಲ್ಲೂಕು ಪಂಚಾಯಿತಿ ಇಒ ಬಿ.ಕೆ. ಉತ್ತಮ, ಬಿಇಒ ಎಲ್. ಜಯಪ್ಪ, ತೋಟಗಾರಿಕೆ ಇಲಾಖೆ ಸಹಾಯಕ ನಿರ್ದೇಶಕ ಶ್ರೀಕಾಂತ್, ಪುರಸಭೆ ಮುಖ್ಯಾಧಿಕಾರಿ ಕೃಷ್ಣ ಡಿ. ಕಟ್ಟಿಮನಿ ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.