ಹರಿಹರ: ‘ಪ್ರಸಕ್ತ ದಿನಗಳಲ್ಲಿ ಬ್ಯಾಂಕಿಂಗ್ ವಹಿವಾಟಿನ ಶೈಲಿ ತ್ವರಿತಗತಿಯಲ್ಲಿ ಬದಲಾಗುತ್ತಿದ್ದು, ಬಳಸುವ ಗ್ರಾಹಕರು ಜಾಗ್ರತೆ ವಹಿಸಬೇಕು’ ಎಂದು ಕರ್ಣಾಟಕ ಬ್ಯಾಂಕ್ ಶಿವಮೊಗ್ಗ ವಲಯದ ಸಹಾಯಕ ಮಹಾ ಪ್ರಬಂಧಕ ನಾಗರಾಜ್ ಅಡಿಗ ಹೇಳಿದರು.
ಶನಿವಾರ ನಗರದ ಕರ್ನಾಟಕ ಬ್ಯಾಂಕ್ ಶಾಖೆಯ 61ನೇ ವರ್ಷಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ‘ವಿದ್ಯುನ್ಮಾನ ಬ್ಯಾಂಕ್ ವಹಿವಾಟು ಗ್ರಾಹಕರಿಗೆ ಹಾಗೂ ಬ್ಯಾಂಕ್ ಸಿಬ್ಬಂದಿಗೆ ಹೆಚ್ಚಿನ ಸವಲತ್ತು ನೀಡಿದೆ. ಆದರೆ, ಅದನ್ನು ಎಚ್ಚರಿಕೆಯಿಂದ ಬಳಸುವುದು ಮುಖ್ಯ’ ಎಂದು ಹೇಳಿದರು.
‘ಗ್ರಾಹಕರಿಗೆ ಉತ್ತಮ ಸೇವೆ ಸಲ್ಲಿಸುವ ಮೂಲಕ 102 ವರ್ಷಗಳಿಂದ ಬ್ಯಾಂಕ್ ಮನೆಮಾತಾಗಿದೆ. ಷೇರುದಾರರಿಗೆ 99 ವರ್ಷ ಸತತವಾಗಿ ಡಿವಿಡೆಂಡ್ ನೀಡಿದೆ. ಸ್ಪರ್ಧಾತ್ಮಕ ಯುಗದಲ್ಲಿ ಖಾಸಗಿ ರಂಗದ ಬ್ಯಾಂಕ್ ಗ್ರಾಹಕರ ಸಹಕಾರದಿಂದ ಶತಮಾನೋತ್ಸವ ಕಂಡಿದೆ. ಮುಂಬರುವ ದಿನಗಳಲ್ಲಿ ಬ್ಯಾಂಕಿಂಗ್ ಕ್ಷೇತ್ರದಲ್ಲಿ ವಿದ್ಯುನ್ಮಾನ ಬಳಕೆ ಇನ್ನಷ್ಟು ಹೆಚ್ಚಲಿದೆ’ ಎಂದರು.
ಶಾಖೆಯ 61ನೇ ವರ್ಷಾಚರಣೆಗೆ ನಗರಸಭೆ ಮಾಜಿ ಅಧ್ಯಕ್ಷ ಬಿ.ರೇವಣಸಿದ್ದಪ್ಪ ಶನಿವಾರ ಚಾಲನೆ ನೀಡಿದರು. ಗ್ರಾಹಕರಾದ ರಮೇಶ್, ವಿರೇಶ್, ದತ್ತಾತ್ರೇಯ ಭಟ್ ಮಾತನಾಡಿದರು. ಶಾಖಾ ಪ್ರಬಂಧಕ ಪಲ್ಲೆ ಮಧು ಕೃಷ್ಣ, ಶಾಖೆ ಸಿಬ್ಬಂದಿ, ಗ್ರಾಹಕರು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.