ADVERTISEMENT

ಪತ್ನಿ ಸಾವಿನಿಂದ ಖಿನ್ನತೆಗೆ ಒಳಗಾಗಿದ್ದ ಪತಿ: ಇಬ್ಬರು ಮಕ್ಕಳ ಕೊಂದು ನೇಣಿಗೆ ಶರಣು

​ಪ್ರಜಾವಾಣಿ ವಾರ್ತೆ
Published 10 ಏಪ್ರಿಲ್ 2025, 15:09 IST
Last Updated 10 ಏಪ್ರಿಲ್ 2025, 15:09 IST
   

ದಾವಣಗೆರೆ: ಪತ್ನಿಯ ಅಕಾಲಿಕ ಸಾವಿನಿಂದ ಖಿನ್ನತೆಗೆ ಒಳಗಾಗಿದ್ದ ವ್ಯಕ್ತಿಯೊಬ್ಬ ತನ್ನ ಇಬ್ಬರು ಮಕ್ಕಳನ್ನು ಕೊಂದು ಬಳಿಕ ತಾನೂ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಗಾಂಧಿನಗರ ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲಿ ಗುರುವಾರ ನಡೆದಿದೆ.

ನಗರದ ರಾಜೀವಗಾಂಧಿ ಬಡಾವಣೆಯ ನಿವಾಸಿ ಉದಯ್ (35) ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿ. ಆತ್ಮಹತ್ಯೆಗೂ ಮುನ್ನ ಪುತ್ರಿ ಸಿಂಧುಶ್ರೀ (4) ಹಾಗೂ ಪುತ್ರ ಶ್ರೀಜಯ್ (3) ಅವರ ಕತ್ತು ಹಿಸುಕಿ ಕೊಲೆ ಮಾಡಿದ್ದಾನೆ.

ರಾಣೆಬೆನ್ನೂರು ತಾಲ್ಲೂಕಿನ ಚಳಗೆರಿಯ ಹೇಮಾ ಹಾಗೂ ದಾವಣಗೆರೆಯ ಉದಯ್‌ ಪರಸ್ಪರ ಪ್ರೀತಿಸಿ ವಿವಾಹವಾಗಿದ್ದರು. ಹೇಮಾ ಹೃದಯಾಘಾತದಿಂದ ಸೆಪ್ಟೆಂಬರ್‌ನಲ್ಲಿ ಮೃತಪಟ್ಟಿದ್ದರು. ಇದರಿಂದ ಉದಯ್‌ ಮಾನಸಿಕ ಖಿನ್ನತೆಗೆ ಒಳಗಾಗಿದ್ದರು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ADVERTISEMENT

‘ಆತ್ಮಹತ್ಯೆಗೂ ಮುನ್ನ ಉದಯ್‌ ಬರೆದಿಟ್ಟಿದ್ದ ಮರಣ ಪತ್ರ ಲಭ್ಯವಾಗಿದೆ. ಮಕ್ಕಳೊಂದಿಗೆ ಪತ್ನಿಯ ಬಳಿಗೆ ತೆರಳುತ್ತಿರುವುದಾಗಿ ಉಲ್ಲೇಖಿಸಿದ್ದಾರೆ. ಪತ್ನಿಯ ಅಕಾಲಿಕ ಸಾವಿನಿಂದ ಉದಯ್‌ ಖಿನ್ನತೆಗೆ ಒಳಗಾಗಿದ್ದರು ಎಂಬುದು ಗೊತ್ತಾಗಿದೆ’ ಎಂದು ಪ್ರಕರಣ ದಾಖಲಿಸಿಕೊಂಡಿರುವ ಗಾಂಧಿ ನಗರ ಠಾಣೆಯ ಪೊಲೀಸರು ಮಾಹಿತಿ ನೀಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.