ADVERTISEMENT

ಗ್ರಾಮೀಣ ಸೊಗಡಿನ ಜೋಕುಮಾರಸ್ವಾಮಿ ಹಬ್ಬ

​ಪ್ರಜಾವಾಣಿ ವಾರ್ತೆ
Published 17 ಸೆಪ್ಟೆಂಬರ್ 2021, 3:02 IST
Last Updated 17 ಸೆಪ್ಟೆಂಬರ್ 2021, 3:02 IST
ಬಸವಾಪಟ್ಟಣದ ಮನೆಯೊಂದರ ಮುಂದೆ ಗುರುವಾರ ನಿಲೋಗಲ್ ಗ್ರಾಮದ ಮಹಿಳೆಯರು ಜೋಕುಮಾರಸ್ವಾಮಿಯ ಜೀವನದ ಕುರಿತ ಜನಪದ ಗೀತೆಗಳನ್ನು ಹಾಡಿದರು.
ಬಸವಾಪಟ್ಟಣದ ಮನೆಯೊಂದರ ಮುಂದೆ ಗುರುವಾರ ನಿಲೋಗಲ್ ಗ್ರಾಮದ ಮಹಿಳೆಯರು ಜೋಕುಮಾರಸ್ವಾಮಿಯ ಜೀವನದ ಕುರಿತ ಜನಪದ ಗೀತೆಗಳನ್ನು ಹಾಡಿದರು.   

ಬಸವಾಪಟ್ಟಣ: ಜಾನಪದ ಸೊಗಡಿನ ಜೋಕುಮಾರಸ್ವಾಮಿ ಹಬ್ಬವನ್ನು ಇಲ್ಲಿ ಗುರುವಾರ ಆಚರಿಸಲಾಯಿತು.

ಜನಪದ ಸಾಹಿತ್ಯದ ಆಧಾರದಂತೆ ಜೋಕುಮಾರನು ಭಾದ್ರಪದ ಶುದ್ಧ ಅಷ್ಟಮಿಯಂದು ತನ್ನ ತಾಯಿ ಗೌರಿಗೆ ಅಲಂಕರಿಸಿರುವ ಹತ್ತಿಯ ಎಳೆಯಲ್ಲಿ ಗ್ರಾಮವೊಂದರಲ್ಲಿ ಹುಟ್ಟುತ್ತಾನೆ. ಅವನ ಆಯುಷ್ಯ ಕೇವಲ ಏಳು ದಿನ ಮಾತ್ರವಾದ್ದರಿಂದ ಕೂಡಲೇ ಬೆಳೆದು ಸುಂದರ ಯುವಕನಾಗುತ್ತಾನೆ. ಆಗ ಹೊಲಗಳಲ್ಲಿ ಬೆಳೆಗಳು ಸೊಂಪಾಗಿ ಬೆಳೆದು ನಿಂತಿರುತ್ತವೆ. ಈ ಸೊಬಗನ್ನು ನೋಡಲು ಹೋದ ಜೋಕುಮಾರ, ಅಲ್ಲಿ ಸುಂದರ ಯುವತಿಯೊಬ್ಬಳನ್ನು ಕಂಡು ಜೋಕುಮಾರ ಅವಳಲ್ಲಿ ಮೋಹಿತನಾಗುತ್ತಾನೆ. ಆದರೆ, ಆಕೆ ಅವನನ್ನು ತಿರಸ್ಕರಿಸುತ್ತಾಳೆ. ಇದರಿಂದ ನೊಂದ ಜೋಕುಮಾರ ವಿರಹದಿಂದ ಹಣ್ಣಿಮೆಯಂದು ಅಸುನೀಗುತ್ತಾನೆ.

ಜೋಕುಮಾರನ ಹಬ್ಬವನ್ನು ಆಚರಿಸುವ ಸುಣಗಾರ ಮಹಿಳೆಯರು ತೆರೆದ ಬಾಯಿ, ಹುರಿ ಮೀಸೆ, ಅಗಲವಾದ ಹಣೆ, ಬಾಯಿಯಲ್ಲಿ ಬೆಣ್ಣೆಯನ್ನು ಇಟ್ಟುಕೊಂಡ ಜೋಕುಮಾರನ ಮೂರ್ತಿಯನ್ನು ಮಣ್ಣಿನಲ್ಲಿ ನಿರ್ಮಿಸಿ ಬೇವಿನಸೊಪ್ಪು ತುಂಬಿದ ಬುಟ್ಟಿಯಲ್ಲಿ ಇಟ್ಟುಕೊಂಡು, ತಾವು ನಿಗದಿಪಡಿಸಿಕೊಂಡಿರುವ ಗ್ರಾಮಗಳ ಮನೆ ಮನೆಗೆ ತೆರಳಿ ಜೋಕುಮಾರನ ಹಾಡುಗಳನ್ನು ಶೃಶ್ರಾವ್ಯವಾಗಿ ಹಾಡಿ ಮನೆಯವರು ಕೊಡುವ ಅಕ್ಕಿ, ಬೆಲ್ಲ ತೆಂಗಿನಕಾಯಿ, ತಾಂಬೂಲ ಮತ್ತು ದಕ್ಷಿಣೆ ಪಡೆದು ಮನೆಗೆ ದೀಪದ ಕರಿಯ ರಕ್ಷೆನ್ನು ಇಟ್ಟು ಹಾರೈಸಿ ತೆರಳುತ್ತಾರೆ. ಏಳನೇ ದಿನವಾದ ಹಣ್ಣಿಮೆ ದಿನದಂದು ರಾತ್ರಿ ಜೋಕುಮಾರನ ಮೂರ್ತಿಯನ್ನು ತಮ್ಮೂರ ಕೆರೆಯಲ್ಲಿ ಮಡಿವಾಳರು ಬಟ್ಟೆ ತೊಳೆಯುವ ಕಲ್ಲಿನ ಕೆಳಗೆ ಇಟ್ಟು ಬರುತ್ತಾರೆ. ಮರುದಿನ ಅದನ್ನು ಕಂಡ ಅವರು, ಮೂರು ದಿನ ಸೂತಕದಿಂದ ಕಳೆದು ಪರಿಶುದ್ಧರಾಗಿ ಅವನ ಸಮಾರಾಧನೆ ನಡೆಸುತ್ತಾರೆ.

ADVERTISEMENT

ಗ್ರಾಮೀಣ ಮಹಿಳೆಯರು ಸಾಂಪ್ರದಾಯಿವಾಗಿ ಬಂದ ಜೋಕುಮಾರನ ಹಾಡುಗಳನ್ನು ಹಾಡುವುದು ಈ ಹಬ್ಬದ ವಿಶೇಷ. ಈ ಜನಪದ ಸಂಪತ್ತನ್ನು ಉಳಿಸಿ ಬೆಳೆಸಬೇಕು ಎನ್ನುತ್ತಾರೆ ನಿಲೋಗಲ್‌ನ ಸಾಹಿತಿ ಜಿ. ರಂಗನಗೌಡ ಮತ್ತು ಜನಪದ ಗಾಯಕ ಎಂ.ಬಿ. ಜಯಣ್ಣ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.