ADVERTISEMENT

ಜಗಳೂರಿನ 11 ಕೆರೆಗಳಿಗೆ ಹರಿದ ತುಂಗಭದ್ರೆ: ರೈತರಲ್ಲಿ ಸಂತಸ

ಬಯಲುಸೀಮೆಯ ಮಹತ್ವದ ನೀರಾವರಿ ಯೋಜನೆ

​ಪ್ರಜಾವಾಣಿ ವಾರ್ತೆ
Published 30 ಜುಲೈ 2023, 5:58 IST
Last Updated 30 ಜುಲೈ 2023, 5:58 IST
ಜಗಳೂರು ತಾಲ್ಲೂಕಿನ ಬಿಳಿಚೋಡು ಕೆರೆಯಲ್ಲಿ 57 ಕೆರೆ ಯೋಜನೆಯಡಿ ಮುಗಿಲೆತ್ತರಕ್ಕೆ ಚಿಮ್ಮಿ ಬರುತ್ತಿರುವ ನೀರು
ಜಗಳೂರು ತಾಲ್ಲೂಕಿನ ಬಿಳಿಚೋಡು ಕೆರೆಯಲ್ಲಿ 57 ಕೆರೆ ಯೋಜನೆಯಡಿ ಮುಗಿಲೆತ್ತರಕ್ಕೆ ಚಿಮ್ಮಿ ಬರುತ್ತಿರುವ ನೀರು   

ಜಗಳೂರು: ತುಂಗಭದ್ರಾ ನದಿಯಿಂದ 57 ಕೆರೆಗಳಿಗೆ ನೀರು ತುಂಬಿಸುವ ಯೋಜನೆಯಡಿ ವರ್ಷಗಳ ವಿಳಂಬದ ನಂತರ ಕೊನೆಗೂ ಶನಿವಾರ ತಾಲ್ಲೂಕಿನ 11 ಕೆರೆಗಳಿಗೆ ನೀರು ಹರಿದು ಬಂದಿದ್ದು, ರೈತರು ತಂಡಗಳಲ್ಲಿ ತೆರಳಿ ಕೆರೆಗೆ ನೀರು ಹರಿಯುತ್ತಿರುವುದನ್ನು ನೋಡಿ ಸಂಭ್ರಮಿಸುತ್ತಿದ್ದಾರೆ.

ತುಪ್ಪದಹಳ್ಳಿ ಹಾಗೂ ಹಾಲೇಕಲ್ಲು, ಬಿಳಿಚೋಡು, ಮರಿಕುಂಟೆ, ಚದರಗೊಳ್ಳ, ಅಸಗೋಡು, ಕಾಟೇನಹಳ್ಳಿ, ಗೋಡೆ, ತಾರೇಹಳ್ಳಿ, ಉರ್ಲಕಟ್ಟೆ ಮತ್ತು ಮಾದನಹಳ್ಳಿ ಕೆರೆಗಳಿಗೆ ಶುಕ್ರವಾರ ರಾತ್ರಿಯಿಂದ ನೀರು ಹರಿದು ಬರುತ್ತಿದೆ. ಹಲವು ವರ್ಷಗಳಿಂದ ನನೆಗುದಿಗೆ ಬಿದ್ದಿದ್ದ ಕೆರೆ ತುಂಬಿಸುವ ಯೋಜನೆಯಡಿ 11 ಕೆರೆಗಳಿಗೆ ಪೈಪ್‌ಲೈನ್‌ ಮೂಲಕ ನೀರು ಬರುವುದನ್ನು ಕಂಡು ಗ್ರಾಮಸ್ಥರು ಕೆರೆಗಳಿಗೆ ಸಾಮೂಹಿಕವಾಗಿ ತೆರಳಿ ವೀಕ್ಷಿಸಿ ಸಂತಸಪಟ್ಟರು.

ಬಯಲುಸೀಮೆಯ 57 ಕೆರೆ ತುಂಬಿಸುವ ಮಹತ್ವದ ಯೋಜನೆ ಪ್ರಾರಂಭವಾಗಿ ಆರೇಳು ವರ್ಷಗಳು ಕಳೆದರೂ ಕಾಮಗಾರಿ ವಿಳಂಬದಿಂದಾಗಿ ಕೆರೆಗಳಿಗೆ ನೀರು ಹರಿದಿರಲಿಲ್ಲ. ತಾಲ್ಲೂಕಿನ ತುಪ್ಪದಹಳ್ಳಿ ಕೆರೆಗೆ ಮಾತ್ರ ಕಳೆದ ವರ್ಷ ನೀರು ಹರಿದು ಕೆರೆ ಕೋಡಿ ಬಿದ್ದಿತ್ತು. ಪೈಪ್‌ಲೈನ್‌ ಅಳವಡಿಕೆ ಕಾಮಗಾರಿ ವಿಳಂಬದಿಂದ ಕೆರೆಗಳಿಗೆ ನೀರು ಹರಿಯಲು ಸಾಧ್ಯವಾಗದೆ ನೀರಿವಾರಿ ಇಲಾಖೆ ಅಧಿಕಾರಿಗಳ ವಿರುದ್ಧ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದರು.

ADVERTISEMENT

ಶಾಸಕ ಬಿ. ದೇವೇಂದ್ರಪ್ಪ ಅವರು ತುಂಗಭದ್ರಾ ನದಿ ತಟದದಲ್ಲಿ ದೀಟೂರು ಬಳಿ ಜಾಕ್ ವೆಲ್ ಸ್ಥಳಕ್ಕೆ ಭೇಟಿ ನೀಡಿ ಕಾಮಗಾರಿಯನ್ನು ವೀಕ್ಷಿಸಿ, ವಿಳಂಬಕ್ಕೆ ಸಂಬಂಧಿಸಿದಂತೆ ಅಧಿಕಾರಿಗಳು ಹಾಗೂ ಗುತ್ತಿಗೆದಾರರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದರು.

ಈಚೆಗೆ ನಡೆದ ವಿಧಾನಸಭಾ ಅಧಿವೇಶನದಲ್ಲಿ ಶಾಸಕರು 57 ಕೆರೆ ಯೋಜನೆಯ ಕಾಮಗಾರಿ ವಿಳಂಬದ ಬಗ್ಗೆ ಪ್ರಸ್ತಾಪಿಸಿ ಸರ್ಕಾರದ ಗಮನ ಸೆಳೆದಿದ್ದರು. ನಂತರ ಸಿರಿಗೆರೆ ಶ್ರೀ ನೇತೃತ್ವದಲ್ಲಿ ಸಿರಿಗೆರೆ ತರಳಬಾಳು ಮಠದಲ್ಲಿ ಜನಪ್ರತಿಧಿನಿಗಳು ಹಾಗೂ ಅಧಿಕಾರಿಗಳ ಸಭೆ ನಡೆಸಿ ಶಿಘ್ರವೇ ಕಾಮಗಾರಿ ಪೂರ್ಣಗೊಳಿಸುವಂತೆ ತಾಕೀತು ಮಾಡಲಾಗಿತ್ತು.

‘ಜಗಳೂರು ವಿಧಾನಸಭಾ ಕ್ಷೇತ್ರದ ಮಹತ್ವದ 57 ಕೆರೆ ತುಂಬಿಸುವ ಯೋಜನೆಯ ವಿಳಂಬದಿಂದ ಸಕಾಲದಲ್ಲಿ ಕೆರೆಗಳಿಗೆ ನೀರು ತುಂಬಿಸಲು ಸಾಧ್ಯವಾಗಿರಲಿಲ್ಲ. ಸಿರಿಗೆರೆ ಶ್ರೀ ಸಮ್ಮುಖದಲ್ಲಿ ಕಾಮಗಾರಿ ವಿಳಂಬದ ಬಗ್ಗೆ ಅಧಿಕಾರಿಗಳು ಹಾಗೂ ಗುತ್ತಿಗೆದಾರರ ಸಭೆ ಕರೆದು ಯೋಜನೆ ಜಾರಿಗೆ ಎದುರಾಗಿರುವ ತೊಡಕುಗಳನ್ನು ನಿವಾರಿಸುವ ನಿಟ್ಟಿನಲ್ಲಿ ಚರ್ಚಿಸಲಾಗಿತ್ತು. ಇದೇ ಮೊದಲ ಬಾರಿಗೆ 11 ಕೆರೆಗಳಿಗೆ ನೀರು ಹರಿದು ಬರುತ್ತಿದೆ. ಬಯಲುಸೀಮೆಯ ರೈತರಲ್ಲಿ ಇದರಿಂದ ಸಂತಸ ಮೂಡಿದೆ. ಮುಂದಿನ ದಿನಗಳಲ್ಲಿ ತ್ವರಿತ ಗತಿಯಲ್ಲಿ ಎಲ್ಲಾ 57 ಕೆರೆಗಳಿಗೂ ನೀರು ಹರಿಸುವ ಬಗ್ಗೆ ಕ್ರಮ ಕೈಗೊಳ್ಳಲಾಗುವುದು’ ಎಂದು ಶಾಸಕ ಬಿ. ದೇವೇಂದ್ರಪ್ಪ ತಿಳಿಸಿದರು.

ಶಾಸಕ ಬಿ. ದೇವೇಂದ್ರಪ್ಪ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.