ADVERTISEMENT

ದಾವಣಗೆರೆ ಜಿಲ್ಲೆಯ 1.22 ಲಕ್ಷ ಕುಟುಂಬಕ್ಕೆ ಆಸರೆ

ಸರ್ಕಾರಿ ಶಾಲೆಗೆ ಬಲ ತುಂಬುತ್ತಿರುವ ‘ಮನರೇಗಾ’ ಯೋಜನೆ

ಜಿ.ಬಿ.ನಾಗರಾಜ್
Published 15 ಆಗಸ್ಟ್ 2025, 7:07 IST
Last Updated 15 ಆಗಸ್ಟ್ 2025, 7:07 IST
ಹರಿಹರ ತಾಲ್ಲೂಕಿನ ಭಾನುವಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ‘ಮನರೇಗಾ’ ಯೋಜನೆಯಡಿ ನಡೆದ ಕಾಮಗಾರಿಯನ್ನು ಜಿಲ್ಲಾ ಪಂಚಾಯಿತಿ ಸಿಇಒ ಗಿತ್ತೆ ಮಾಧವ ವಿಠ್ಠಲರಾವ್‌ ಪರಿಶೀಲಿಸಿದರು
ಹರಿಹರ ತಾಲ್ಲೂಕಿನ ಭಾನುವಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ‘ಮನರೇಗಾ’ ಯೋಜನೆಯಡಿ ನಡೆದ ಕಾಮಗಾರಿಯನ್ನು ಜಿಲ್ಲಾ ಪಂಚಾಯಿತಿ ಸಿಇಒ ಗಿತ್ತೆ ಮಾಧವ ವಿಠ್ಠಲರಾವ್‌ ಪರಿಶೀಲಿಸಿದರು   

ದಾವಣಗೆರೆ: ಗ್ರಾಮೀಣ ಪ್ರದೇಶದ ಜನರು ಕೆಲಸ ಅರಸಿ ಗುಳೇ ಹೋಗುವುದನ್ನು ತಪ್ಪಿಸುವ ಉದ್ದೇಶದಿಂದ ಜಾರಿಗೆ ತರಲಾಗಿರುವ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ (ಮನರೇಗಾ) ಜಿಲ್ಲೆಯ ಸರ್ಕಾರಿ ಶಾಲೆಗಳಿಗೆ ಶಕ್ತಿ ತುಂಬುವ ಕೆಲಸ ಮಾಡುತ್ತಿದೆ.

ಕೆರೆ ಹೂಳು ತೆಗೆಯುವ, ರಸ್ತೆ, ಚರಂಡಿ ನಿರ್ಮಾಣದಂತಹ ಕಾರ್ಯಗಳೊಂದಿಗೆ ಶಾಲಾ ಕಟ್ಟಡ ನಿರ್ಮಾಣ ಕೂಡ ಯೋಜನೆಯಡಿ ಕೈಗೆತ್ತಿಕೊಳ್ಳಲಾಗಿದೆ. ಉತ್ತಮ ಶೈಕ್ಷಣಿಕ ವಾತಾವರಣ ಒದಗಿಸುವ ಪ್ರಯತ್ನವನ್ನು ಜಿಲ್ಲಾ ಪಂಚಾಯಿತಿ ಮಾಡತೊಡಗಿದೆ.

ಜಿಲ್ಲೆಯ 155 ಸರ್ಕಾರಿ ಶಾಲೆಗಳು ‘ಮನರೇಗಾ’ ಯೋಜನೆಯಡಿ ಶೌಚಾಲಯ ಸೌಲಭ್ಯ ಪಡೆದಿವೆ. 143 ಶಾಲೆಗಳ ಸುತ್ತ ಕಾಪೌಂಡ್‌ ನಿರ್ಮಾಣ ಮಾಡಲಾಗಿದೆ. 124 ಶಾಲೆಗಳಿಗೆ ಆಟದ ಮೈದಾನವನ್ನು ಅಭಿವೃದ್ಧಿಪಡಿಸಲಾಗಿದೆ. 55 ಶಾಲೆಗಳಲ್ಲಿ ಅಡುಗೆ ಕೋಣೆ, ಭೋಜನಾಲಯ ನಿರ್ಮಿಸಲಾಗಿದೆ. ಗ್ರಾಮೀಣ ಶಾಲೆಗಳನ್ನು ಇನ್ನಷ್ಟು ಆಕರ್ಷಕಗೊಳಿಸುವ ಪ್ರಯತ್ನ ‘ಮನರೇಗಾ’ ಯೋಜನೆಯಲ್ಲೂ ನಡೆಯುತ್ತಿದೆ.

ADVERTISEMENT

ಜಿಲ್ಲೆಯಲ್ಲಿ ಯೋಜನೆಯಡಿ 2.36 ಲಕ್ಷ ಕುಟುಂಬಗಳು ನೋಂದಣಿಯಾಗಿವೆ. ಇದರಲ್ಲಿ 1.22 ಲಕ್ಷ ಕುಟುಂಬಗಳು ಕ್ರಿಯಾಶೀಲವಾಗಿ ಉದ್ಯೋಗ ಪಡೆಯುತ್ತಿವೆ. 2024-25ನೇ ಆರ್ಥಿಕ ವರ್ಷದಲ್ಲಿ 27,88,786 ಮಾನವ ದಿನಗಳನ್ನು ನೀಡಲಾಗಿದೆ. ಪ್ರಸಕ್ತ ವರ್ಷ ಆಗಸ್ಟ್‌ 14ರವರೆಗೆ 11,89,470 ಮಾನವ ದಿನಗಳನ್ನು ಸೃಜಿಸಲಾಗಿದೆ. ಗ್ರಾಮೀಣ ಪ್ರದೇಶದ ಜೀವನೋಪಾಯ ಸುಧಾರಿಸಲು ಮತ್ತು ಆರ್ಥಿಕ ಭದ್ರತೆ ಒದಗಿಸಲು ಸಹಕಾರಿಯಾಗಿದೆ.

ಸ್ವ–ಸಹಾಯ ಸಂಘಗಳ ಆರ್ಥಿಕ ಸಬಲೀಕರಣಕ್ಕಾಗಿ ಜೀವನೋಪಾಯ ಚಟುವಟಿಕೆಗಳನ್ನು ಪ್ರೋತ್ಸಾಹಿಸಲಾಗಿದೆ. ಗ್ರಾಮ ಪಂಚಾಯಿತಿ ಮಟ್ಟದಲ್ಲಿ ‘ಎನ್ಆರ್‌ಎಲ್‌ಎಂ’ ಶೆಡ್‌ ನಿರ್ಮಾಣವನ್ನು ‘ಮನರೇಗಾ’ ಅಡಿ ಮಾಡಲಾಗುತ್ತಿದೆ. ಎರಡು ವರ್ಷ ಅವಧಿಯಲ್ಲಿ ಜಿಲ್ಲೆಯಾದ್ಯಂತ 19 ‘ಎನ್ಆರ್‌ಎಲ್‌ಎಂ’ ಶೆಡ್‌ ನಿರ್ಮಿಸಲಾಗಿದೆ. ಗ್ರಾಮೀಣ ಸಂತೆಗೆ ಪೂರಕ ಸೌಲಭ್ಯ ಕಲ್ಪಿಸಲಾಗಿದೆ. ಗ್ರಾಮ ಪಂಚಾಯಿತಿ ಮಟ್ಟದಲ್ಲಿ 135 ಘನ ತ್ಯಾಜ್ಯ ವಿಲೇವಾರಿ ಘಟಕಗಳು ಈ ಯೋಜನೆಯಡಿ ನಿರ್ಮಾಣಗೊಂಡಿವೆ.

ಕೃಷಿ, ತೋಟಗಾರಿಕೆ, ಪಶುಸಂಗೋಪನೆ, ಮೀನುಗಾರಿಕೆಗೆ ಪೂರಕ ಕಾಮಗಾರಿಗಳನ್ನು ಈ ಯೋಜನೆಯಡಿ ಅನುಷ್ಠಾನ ಮಾಡಲಾಗುತ್ತಿದೆ. 2024-25ನೇ ಸಾಲಿನಲ್ಲಿ 3,260 ಫಲಾನುಭವಿಗಳಿಗೆ ವೈಯಕ್ತಿಕ ಸೌಲಭ್ಯವನ್ನು ನೀಡಲಾಗಿದೆ. 2025-26 ನೇ ಸಾಲಿನಲ್ಲಿ 1,826 ಫಲಾನುಭವಿಗಳಿಗೆ ಕಾಮಗಾರಿಗಳನ್ನು ಅನುಷ್ಠಾನ ಮಾಡಲಾಗುತ್ತಿದೆ.

ಜಿಲ್ಲೆಯಲ್ಲಿ ‘ಮನರೇಗಾ’ ಯೋಜನೆಯ ಶೇ 65ರಷ್ಟು ವೆಚ್ಚವನ್ನು ಜಲ ಸಂರಕ್ಷಣಾ ಕಾರ್ಯಗಳಿಗೆ ಮೀಸಲಿಡಲಾಗಿದೆ. ನೀರಿನ ಸಂರಕ್ಷಣೆಗಾಗಿ 2023-24 ನೇ ಸಾಲಿನಲ್ಲಿ 5,804 ಕಾಮಗಾರಿ ಮತ್ತು 2024-25 ನೇ ಸಾಲಿನಲ್ಲಿ 6,338 ಕಾಮಗಾರಿಗಳನ್ನು ಅನುಷ್ಠಾನಗೊಳಿಸಲಾಗಿದೆ.

Quote - ಸರ್ಕಾರಿ ಶಾಲೆಗಳನ್ನು ಅಭಿವೃದ್ಧಿಪಡಿಸುವ ನಿಟ್ಟಿನಲ್ಲಿ ಗಮನ ಕೇಂದ್ರೀಕರಿಸಲಾಗಿದೆ. ಗ್ರಾಮೀಣ ಪ್ರದೇಶಕ್ಕೆ ತೆರಳಿದಾಗ ಶಾಲೆಗಳಿಗೆ ಭೇಟಿ ನೀಡುತ್ತಿದ್ದೇನೆ ಗಿತ್ತೆ ಮಾಧವ ವಿಠ್ಠಲರಾವ್‌ ಸಿಇಒ ಜಿಲ್ಲಾ ಪಂಚಾಯಿತಿ

ನೀರಾವರಿ ಕಾಲುವೆ ಅಭಿವೃದ್ಧಿ

ಜಿಲ್ಲೆಯಲ್ಲಿ ತುಂಗಾ ಮತ್ತು ಭದ್ರಾ ಅಚ್ಚುಕಟ್ಟು ಪ್ರದೇಶ 139940 ಹೆಕ್ಟೇರ್‌ನಷ್ಟಿದೆ. ಚನ್ನಗಿರಿ ದಾವಣಗೆರೆ ಹರಿಹರ ಮತ್ತು ಹೊನ್ನಾಳಿ ತಾಲ್ಲೂಕುಗಳಲ್ಲಿ 122649 ಹೆಕ್ಟರ್ ಭದ್ರಾ ಅಚ್ಚುಕಟ್ಟು ಪ್ರದೇಶವಿದೆ. ಹೊನ್ನಾಳಿ ಮತ್ತು ನ್ಯಾಮತಿ ತಾಲ್ಲೂಕಿನ 17291 ಹೆಕ್ಟೇರ್ ತುಂಗಾ ಅಚ್ಚುಕಟ್ಟು ಪ್ರದೇಶವಿದೆ. ಅಚ್ಚುಕಟ್ಟು ಪ್ರದೇಶದ ಕೂನೆಭಾಗದ ರೈತರ ಜಮೀನುಗಳಿಗೆ ನೀರು ತಲುಪದೇ ಇರುವುದು ದೊಡ್ಡ ಸಮಸ್ಯೆ. ಕಾಲುವೆಯಲ್ಲಿ ತುಂಬಿರುವ ಹೂಳು ತೆಗೆದು ದುರಸ್ತಿ ಮಾಡುವ ಕಾಮಗಾರಿಯನ್ನು ‘ಮನರೇಗಾ’ ಅಡಿ ಕೈಗೆತ್ತಿಕೊಳ್ಳಲಾಗಿತ್ತು. 2023-24 ಮತ್ತು 2024-25 ನೇ ಸಾಲಿನಲ್ಲಿ 569 ಕಾಮಗಾರಿಗಳಿಂದ 635 ಕಿ.ಮೀ ಅಂತರದ ಕಾಲುವೆ ಹೂಳೆತ್ತಲಾಗಿದೆ. ಇದರಿಂದ ಕಾಲುವೆಯ ಅಚ್ಚುಕಟ್ಟು ವ್ಯಾಪ್ತಿಯ ಕೊನೆಯ ಭಾಗದ ರೈತರಿಗೆ ಅನುಕೂಲವಾಗಿದೆ.

418 ಕಿ.ಮೀ ರಸ್ತೆ ಅಭಿವೃದ್ಧಿ

ಗ್ರಾಮೀಣ ಪ್ರದೇಶದ ರಸ್ತೆ ನಿರ್ಮಾಣದಲ್ಲಿ ‘ಮನರೇಗಾ’ ಮಹತ್ವಪೂರ್ಣ ಪಾತ್ರ ವಹಿಸಿದೆ. ರಸ್ತೆ ನಿರ್ಮಾಣದಿಂದ ಗ್ರಾಮೀಣ ವಿಕಾಸ ಹಾಗೂ ಆರ್ಥಿಕ ಬೆಳವಣಿಗೆಗೆ ಸಾಕಷ್ಟು ಪ್ರಯೋಜನಕಾರಿಯಾಗಿದೆ. ಜಿಲ್ಲೆಯಲ್ಲಿ 2024-25 ನೇ ಸಾಲಿನಲ್ಲಿ 553 ಕಾಮಗಾರಿಗಳಿಂದ 418 ಕಿ.ಮೀ ರಸ್ತೆ ಅಭಿವೃದ್ಧಿಪಡಿಸಲಾಗಿದೆ. ಈ ಕಾಮಗಾರಿಗಳಿಂದ ಗ್ರಾಮೀಣ ಭಾಗದ ಜನರಿಗೆ 483286 ಮಾನವ ದಿನಗಳ ಉದ್ಯೋಗ ದೊರೆಕಿದೆ. ಗ್ರಾಮೀಣ ಸಮುದಾಯಗಳ ಜೀವನಮಟ್ಟ ಸುಧಾರಿಸಲು ಹಾಗೂ ಸ್ವಾಭಿಮಾನದಿಂದ ಬದುಕು ಕಟ್ಟಿಕೊಳ್ಳಲು ಸಹಾಯವಾಗಿದೆ.

126 ಅಮೃತ ಸರೋವರ

‘ಮನರೇಗಾ’ ಅಡಿ ಜಿಲ್ಲೆಯಲ್ಲಿ 126 ಅಮೃತ ಸರೋವರಗಳನ್ನು ಪುನರುಜ್ಜೀವನ ಮಾಡಲಾಗಿದೆ. ಈ ಯೋಜನೆಯು ಗ್ರಾಮೀಣ ಪ್ರದೇಶಗಳಲ್ಲಿ ನೀರಿನ ಲಭ್ಯತೆ ಹೆಚ್ಚಿಸಲು ಮತ್ತು ಪರಿಸರ ಸಂರಕ್ಷಣೆಗೆ ಸಹಾಯ ಮಾಡುತ್ತಿದೆ. ಹೀಗೆ ಪುನರುಜ್ಜೀವನಗೊಂಡ ಅಮೃತ ಸರೋವರಗಳ ಬಳಿ ಸ್ವಾತಂತ್ರ್ಯ ದಿನಾಚರಣೆಯ ದಿನ ಧ್ವಜಾರೋಹಣ ನಡೆಸಲಾಗುತ್ತದೆ. 90 ಅಮೃತ ಸರೋವರಗಳಿಂದ ಹೂಳೆತ್ತಲಾಗಿದೆ. ಇದರಿಂದ 104732 ಕ್ಯೂಬಿಕ್‌ ಮೀಟರ್‌ನಷ್ಷು ನೀರಿನ ಸಂಗ್ರಹ ಸಾಮರ್ಥ್ಯ ಹೆಚ್ಚಿದೆ. ಕೆರೆ ಏರಿ ಬಲವರ್ಧನೆ ಗಿಡಗಳನ್ನು ತೆರವುಗೊಳಿಸುವುದು ಸೇರಿ ಹಲವು ರೀತಿಯ ಕೆಲಸವನ್ನು ಮಾಡಲಾಗಿದೆ.

150 ಕೂಸಿನ ಮನೆ

‘ಮನರೇಗಾ’ ಉದ್ಯೋಗ ಚೀಟಿ ಹೊಂದಿರುವ ಕುಟುಂಬಗಳ 6 ತಿಂಗಳ ಮಗುವಿನಿಂದ 3 ವರ್ಷದೊಳಗಿನ ಮಕ್ಕಳಿಗೆ ಶಿಶುಪಾಲನಾ ಕೇಂದ್ರಗಳನ್ನು ‘ಕೂಸಿನ ಮನೆ’ ಹೆಸರಿನೊಂದಿಗೆ ಪ್ರಾರಂಭಿಸಲಾಗಿದೆ. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ನೆರವಿನೊಂದಿಗೆ ಜಿಲ್ಲೆಯಲ್ಲಿ 150 ಕೂಸಿನ ಮನೆ ಆರಂಭಗೊಂಡಿವೆ. ಇದರಲ್ಲಿ 621 ಬಾಲಕಿಯರು ಮತ್ತು 615 ಬಾಲಕರು ಸೇರಿ 1236 ಮಕ್ಕಳು ಕೂಸಿನ ಮನೆ ಕೇಂದ್ರಗಳಲ್ಲಿ ನೋಂದಣಿಯಾಗಿದ್ದಾರೆ. ಈ ಮಕ್ಕಳಿಗೆ ಷೌಷ್ಟಿಕ ಆಹಾರ ಮತ್ತು ವೈದ್ಯಕೀಯ ಸೌಲಭ್ಯವನ್ನು ನೀಡಲಾಗುತ್ತಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.