ADVERTISEMENT

ಜಿಲ್ಲೆಯಲ್ಲಿ ತಗ್ಗಿದ ಮರಣ ಪ್ರಮಾಣ

ಸೆಪ್ಟೆಂಬರ್‌ ತಿಂಗಳಲ್ಲಿ ಕೊರೊನಾ ಸೋಂಕಿತರ ಪ್ರಮಾಣದಲ್ಲೂ ಸ್ವಲ್ಪ ಇಳಿಕೆ

ವಿನಾಯಕ ಭಟ್ಟ‌
Published 18 ಸೆಪ್ಟೆಂಬರ್ 2020, 5:45 IST
Last Updated 18 ಸೆಪ್ಟೆಂಬರ್ 2020, 5:45 IST
ಡಾ. ಜಿ.ಡಿ.ರಾಘವನ್
ಡಾ. ಜಿ.ಡಿ.ರಾಘವನ್   

ದಾವಣಗೆರೆ: ಜಿಲ್ಲೆಯಲ್ಲಿ ಕಳೆದ ತಿಂಗಳು ತಾರಕಕ್ಕೇರಿದ್ದ ಕೊರೊನಾ ಸೋಂಕಿತರ ಪ್ರಮಾಣ 15 ದಿನಗಳಲ್ಲಿ ತುಸು ಇಳಿಕೆಯಾಗಿದೆ. ಇದರ ಜೊತೆಯಲ್ಲೇ ಕೋವಿಡ್‌ನಿಂದ ಮೃತಪಡುವವರ ಪ್ರಮಾಣವೂ ತಗ್ಗಿರುವುದು ಆಶಾದಾಯಕ ಬೆಳವಣಿಗೆಯಾಗಿದೆ.

ಜುಲೈ ತಿಂಗಳಲ್ಲಿ ಕೋವಿಡ್‌ ಸಾವಿನ ಪ್ರಮಾಣವು ಶೇ 4.6ರಷ್ಟಿತ್ತು. ಸೆಪ್ಟೆಂಬರ್‌ 15ಕ್ಕೆ ಅಂತ್ಯಗೊಂಡಂತೆ ಕಳೆದ ಹದಿನೈದು ದಿನಗಳಲ್ಲಿ ಸಾವಿನ ಪ್ರಮಾಣವು ಶೇ 0.8ಕ್ಕೆ ಇಳಿದಿದೆ. ಒಂದು ವಾರದಲ್ಲಿ ಕೋವಿಡ್‌ನಿಂದ ಏಳು ಜನ ಮಾತ್ರ ಮೃತಪಟ್ಟಿದ್ದಾರೆ. ಐದು ದಿನಗಳ ಅವಧಿಯಲ್ಲಿ ಮರಣ ಪ್ರಮಾಣವು ಶೇ 0.3ಕ್ಕೆ ಕುಸಿದಿರುವುದು ಜಿಲ್ಲಾಡಳಿತ ಹಾಗೂ ಆರೋಗ್ಯ ಇಲಾಖೆಯ ವಿಶ್ವಾಸವನ್ನು ಇಮ್ಮಡಿಗೊಳಿಸಿದೆ.

ಜುಲೈನಲ್ಲಿ ಸಾವಿನ ಪ್ರಮಾಣ ಹೆಚ್ಚಿದ್ದ ಐದು ಜಿಲ್ಲೆಗಳ ಪೈಕಿ ದಾವಣಗೆರೆಯೂ ಒಂದಾಗಿತ್ತು. ‘ಕೋವಿಡ್‌ ಪರೀಕ್ಷೆ ಹೆಚ್ಚಿಸುವುದರಿಂದ ಸೋಂಕಿತರನ್ನು ಹೆಚ್ಚು ಪತ್ತೆ ಮಾಡಿ, ಸಕಾಲದಲ್ಲಿ ಚಿಕಿತ್ಸೆ ನೀಡುವುದರಿಂದ ಸಾವಿನ ಪ್ರಮಾಣವನ್ನು ತಗ್ಗಿಸಬಹುದು’ ಎಂದು ಸರ್ಕಾರದ ಮುಖ್ಯ ಕಾರ್ಯದರ್ಶಿ ನೀಡಿದ ಸಲಹೆಯಂತೆ ಜಿಲ್ಲಾಡಳಿತವು ಜುಲೈ ಅಂತ್ಯ ಹಾಗೂ ಆಗಸ್ಟ್‌ನಲ್ಲಿ ಸಮರೋಪಾದಿಯಲ್ಲಿ ಕೋವಿಡ್‌ ಪರೀಕ್ಷೆ ನಡೆಸಿತ್ತು. ದಿನಕ್ಕೆ 1,500ರಿಂದ 2,000 ಮಾದರಿಗಳನ್ನು ಪರೀಕ್ಷೆ ನಡೆಸಿದ್ದರಿಂದ ಸೋಂಕಿತರು ಹೆಚ್ಚೆಚ್ಚು ಪತ್ತೆಯಾಗುತ್ತಿದ್ದರು. ಇದರ ಜೊತೆಗೇ ಸಾವಿನ ಪ್ರಮಾಣ ಶೇ 2.5ಕ್ಕೆ ಇಳಿದಿತ್ತು. ರ‍್ಯಾಪಿಡ್‌ ಆ್ಯಂಟಿಜನ್‌ ಟೆಸ್ಟ್‌ ಮಾಡಲು ಆರಂಭಿಸಿದ ಬಳಿಕ ತಕ್ಷಣಕ್ಕೆ ಫಲಿತಾಂಶ ಲಭಿಸುತ್ತಿರುವುದರಿಂದ ಸೋಂಕಿತರನ್ನು ಪತ್ತೆ ಮಾಡಿ, ಚಿಕಿತ್ಸೆ ನೀಡುವುದು ಸಲುಭವಾಯಿತು ಎನ್ನುತ್ತಾರೆ ಆರೋಗ್ಯ ಇಲಾಖೆಯ ಅಧಿಕಾರಿಗಳು.

ADVERTISEMENT

‘ಆಗಸ್ಟ್‌ ತಿಂಗಳಲ್ಲಿ ಮರಣ ಪ್ರಮಾಣದಲ್ಲಿ ರಾಜ್ಯದ ಆರು ಕಳವಳಕಾರಿ ಜಿಲ್ಲೆಗಳ ಪೈಕಿ ದಾವಣಗೆರೆಯೂ ಒಂದಾಗಿತ್ತು. ಹೀಗಾಗಿ ಸೆಪ್ಟೆಂಬರ್‌ ತಿಂಗಳ ಅಂತ್ಯಕ್ಕೆ ಸಾವಿನ ಪ್ರಮಾಣವನ್ನು ಶೇ 1ಕ್ಕಿಂತ ಕಡಿಮೆಗೆ ತರಲು ಹಾಗೂ ಸೋಂಕಿತರ ಪ್ರಮಾಣದಲ್ಲಿ ಶೇ 75ರಷ್ಟು ಕಡಿಮೆ ಮಾಡುವ ಗುರಿಯನ್ನು ನಮಗೆ ನಾವೇ ನಿಗದಿಪಡಿಸಿಕೊಂಡು ಜಿಲ್ಲಾಡಳಿತದ ಮಾರ್ಗದರ್ಶನದಲ್ಲಿ ಕಾರ್ಯನಿರ್ವಹಿಸತೊಡಗಿದೆವು. ರಾಜ್ಯದಲ್ಲಿ ಸಾವಿನ ಪ್ರಮಾಣವು ಸರಾಸರಿ ಶೇ 2.50ರಷ್ಟು ಇದ್ದುದು ಈಗ ಶೇ 1.3ಕ್ಕೆ ಬಂದಿದೆ. ಅದೇ ರೀತಿ ಜಿಲ್ಲೆಯಲ್ಲಿ ಈ ಹಿಂದೆ ಶೇ 4.6ರಷ್ಟಿದ್ದ ಸಾವಿನ ಪ್ರಮಾಣವು ಹದಿನೈದು ದಿನಗಳ ಅವಧಿಯಲ್ಲಿ ಶೇ 0.8ಕ್ಕೆ ಬಂದಿದೆ. ಈ ಹಿಂದೆ ಪ್ರತಿ ದಿನ 7–8 ಜನ ಮೃತಪಡುತ್ತಿದ್ದರು. ಈಗ ಒಬ್ಬರು–ಇಬ್ಬರು ಮಾತ್ರ ಸಾವನ್ನಪ್ಪುತ್ತಿದ್ದಾರೆ. ಮರಣ ಪ್ರಮಾಣ ತಗ್ಗಿಸುವಲ್ಲಿ ನಾವು ತಕ್ಕಮಟ್ಟಿಗೆ ಯಶಸ್ವಿಯಾಗಿದ್ದೇವೆ’ ಎಂದು ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ. ಜಿ.ಡಿ.ರಾಘವನ್‌ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.

‘ಕೋವಿಡ್‌ ಪರೀಕ್ಷೆ ನಡೆಸಿದ ಮಾದರಿಗಳಲ್ಲಿ ಶೇ 18ರಷ್ಟು ಪಾಸಿಟಿವ್‌ ಪ್ರಕರಣಗಳು ಪತ್ತೆಯಾಗುತ್ತಿವೆ. ಹದಿನೈದು ದಿನಗಳ ಅವಧಿಯಲ್ಲಿ ಕೊರೊನಾ ಸೋಂಕಿತರ ಪ್ರಮಾಣದಲ್ಲಿ ಶೇ 30ರಷ್ಟು ಕಡಿಮೆಯಾಗಿದೆ. ಮುಂದಿನ ಎರಡು ವಾರದೊಳಗೆ ಶೇ 70ರಷ್ಟು ಕಡಿಮೆಯಾಗುವ ನಿರೀಕ್ಷೆ ಇದೆ’ ಎಂದು ಅವರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.