ADVERTISEMENT

ಟೈಲರ್‌ ಕಲ್ಯಾಣ ಮಂಡಳಿ ರಚನೆಗೆ ಒತ್ತಾಯ

ಸರ್ಕಾರಿ ಸೌಲಭ್ಯಕ್ಕಾಗಿ ಟೈಲರ್‌ಗಳಿಂದ ಧರಣಿ

​ಪ್ರಜಾವಾಣಿ ವಾರ್ತೆ
Published 4 ಅಕ್ಟೋಬರ್ 2018, 20:08 IST
Last Updated 4 ಅಕ್ಟೋಬರ್ 2018, 20:08 IST
ಟೈಲರ್‌ಗಳ ಕಲ್ಯಾಣ ಮಂಡಳಿ ರಚಿಸುವಂತೆ ಒತ್ತಾಯಿಸಿ ಕರ್ನಾಟಕ ರಾಜ್ಯ ಟೈಲರ್ಸ್‌ ಮತ್ತು ಸಹಾಯಕರ ಫೆಡರೇಷನ್‌ ಕಾರ್ಯಕರ್ತರು ದಾವಣಗೆರೆಯಲ್ಲಿ ಗುರುವಾರ ಮೆರವಣಿಗೆ ನಡೆಸಿದರು.
ಟೈಲರ್‌ಗಳ ಕಲ್ಯಾಣ ಮಂಡಳಿ ರಚಿಸುವಂತೆ ಒತ್ತಾಯಿಸಿ ಕರ್ನಾಟಕ ರಾಜ್ಯ ಟೈಲರ್ಸ್‌ ಮತ್ತು ಸಹಾಯಕರ ಫೆಡರೇಷನ್‌ ಕಾರ್ಯಕರ್ತರು ದಾವಣಗೆರೆಯಲ್ಲಿ ಗುರುವಾರ ಮೆರವಣಿಗೆ ನಡೆಸಿದರು.   

ದಾವಣಗೆರೆ: ಕಟ್ಟಡ ಕಾರ್ಮಿಕರ ಕಲ್ಯಾಣ ಮಂಡಳಿ ಮಾದರಿಯಲ್ಲಿ ಟೈಲರ್‌ಗಳ ಕಲ್ಯಾಣ ಮಂಡಳಿಯನ್ನು ರಚಿಸಬೇಕು ಎಂದು ಒತ್ತಾಯಿಸಿ ಕರ್ನಾಟಕ ರಾಜ್ಯ ಟೈಲರ್ಸ್‌ ಮತ್ತು ಸಹಾಯಕರ ಫೆಡರೇಷನ್‌ನ ಕಾರ್ಯಕರ್ತರು ಜಿಲ್ಲಾಧಿಕಾರಿ ಕಚೇರಿ ಬಳಿ ಗುರುವಾರ ಧರಣಿ ನಡೆಸಿದರು.

ಟೈಲರ್‌ ವೃತ್ತಿ ಮಾಡುತ್ತಿರುವವರು ಅಸಂಘಟಿತ ವಲಯದ ಕಾರ್ಮಿಕರಾಗಿದ್ದಾರೆ. ಯಾವುದೇ ಸೌಲಭ್ಯಗಳು ಸಿಗುತ್ತಿಲ್ಲ. ಟೈಲರ್‌ ವೃತ್ತಿಯಲ್ಲಿ ಹೆಚ್ಚಿನವರು ಮಹಿಳೆಯರೇ ಆಗಿದ್ದಾರೆ. ರಾಜ್ಯದ ಗಾರ್ಮೆಂಟ್‌ಗಳಲ್ಲಿ ಸುಮಾರು 20 ಲಕ್ಷ ಟೈಲರ್‌ಗಳಿದ್ದಾರೆ. ಕಾರ್ಮಿಕ ಕಾಯ್ದೆ ಅನ್ವಯಿಸದೆ ಇರುವುದರಿಂದ ಸರ್ಕಾರಿ ಸೌಲಭ್ಯ ಸಿಗುತ್ತಿಲ್ಲ ಎಂದು ದೂರಿದರು.

ಎಚ್‌.ಡಿ. ಕುಮಾರಸ್ವಾಮಿ ಅವರು 2007ರಲ್ಲಿ ಮುಖ್ಯಮಂತ್ರಿಯಾಗಿದ್ದಾಗ ಕಟ್ಟಡ ಕಾರ್ಮಿಕರಿಗೆ ಕಲ್ಯಾಣ ಮಂಡಳಿ ರಚಿಸಿದ್ದಾರೆ. ಇದರಿಂದಾಗಿ ಕಟ್ಟಡ ಕಾರ್ಮಿಕರು ಹಲವು ಸೌಲಭ್ಯಗಳನ್ನು ಪಡೆದುಕೊಳ್ಳುತ್ತಿದ್ದಾರೆ. ನೆರೆಯ ರಾಜ್ಯ ಕೇರಳ ಸೇರಿ ಕೆಲವು ರಾಜ್ಯಗಳಲ್ಲಿ ಟೈಲರ್‌ಗಳ ಕಲ್ಯಾಣ ಮಂಡಳಿಯನ್ನು ಈಗಾಗಲೇ ರಚಿಸಲಾಗಿದೆ ಎಂದು ತಿಳಿಸಿದರು.

ADVERTISEMENT

ಟೈಲರ್‌ಗಳ ಕಲ್ಯಾಣ ಮಂಡಳಿಯನ್ನು ರಚಿಸಿ, ಟೈಲರ್‌ಗಳಿಗೂ ಆರೋಗ್ಯ ಸುಧಾರಣೆಗೆ ಸಹಾಯಧನ, ಟೈಲರ್‌ಗಳ ಮದುವೆಗೆ ಧನ ಸಹಾಯ, ಟೈಲರ್‌ಗಳ ಮಕ್ಕಳಿಗೆ ವಿದ್ಯಾಭ್ಯಾಸಕ್ಕೆ ಶಿಷ್ಯವೇತನ, ಅಪಘಾತ ಪರಿಹಾರ, ಪಿಂಚಣಿ ವ್ಯವಸ್ಥೆ, ಹೆರಿಗೆ ಭತ್ಯೆ, ಸಹಜ ಸಾವು ಹಾಗೂ ಅಪಘಾತ ಸಾವಿಗೆ ಪರಿಹಾರ ನೀಡಬೇಕು ಎಂದು ಮುಖ್ಯಮಂತ್ರಿಯನ್ನು ಒತ್ತಾಯಿಸಿದರು.

ಕಟ್ಟಡ ಕಾರ್ಮಿಕರ ಕಲ್ಯಾಣ ಮಂಡಳಿಗೆ ಕಟ್ಟಡ ಹಾಗೂ ಇತರೆ ನಿರ್ಮಾಣ ಮಾಲೀಕರಿಂದ ಸೆಸ್‌ ಸಂಗ್ರಹಿಸುತ್ತಿರುವ ರೀತಿಯಲ್ಲೇ ಟೈಲರ್‌ಗಳ ಕಲ್ಯಾಣ ಮಂಡಳಿಗೆ ಟೆಕ್ಸ್‌ಟೈಲ್‌ ಮಿಲ್‌, ಗಾರ್ಮೆಂಟ್ಸ್‌, ಬಟ್ಟೆ ಅಂಗಡಿ ಹಾಗೂ ಹೊಲಿಗೆಗೆ ಪೂರಕವಾದ ಉತ್ಪನ್ನ ಮಾಡುವ ಸರಕುದಾರರಿಂದ ಸೆಸ್‌ ಸಂಗ್ರಹಿಸಬೇಕು ಎಂದು ಆಗ್ರಹಿಸಿದರು.

ಹೆಚ್ಚುವರಿ ಜಿಲ್ಲಾಧಿಕಾರಿ ಪದ್ಮ ಬಸವಂತಪ್ಪ ಅವರ ಮೂಲಕ ಮುಖ್ಯಮಂತ್ರಿಗೆ ಮನವಿ ಪತ್ರವನ್ನು ರವಾನಿಸಲಾಯಿತು.

ರಾಜ್ಯ ಟೈಲರ್ಸ್‌ ಮತ್ತು ಸಹಾಯಕರ ಫೆಡರೇಷನ್‌ನ ರಾಜ್ಯ ಪ್ರಧಾನ ಕಾರ್ಯದರ್ಶಿ ಆವರಗೆರೆ ಚಂದ್ರು, ರಾಜ್ಯ ಉಪಾಧ್ಯಕ್ಷ ಸಿ. ರಮೇಶ್‌, ಜಿಲ್ಲಾ ಸಂಚಾಲಕಿ ಯಶೋದಾ, ಸರೋಜಾ, ರಂಗನಾಥ ಆವರಗೆರೆ, ಆವರಗೆರೆ ವಾಸು, ಕೆ.ಎಂ. ಗೌರಮ್ಮ ಅವರೂ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.