ADVERTISEMENT

ಲೋಕೋಪಯೋಗಿ ಇಲಾಖೆಯ ನಾಲ್ವರು ಅಧಿಕಾರಿಗಳಿಂದ ಲಂಚಕ್ಕೆ ಬೇಡಿಕೆ: ಕೆ. ಮಣಿ ಸರ್ಕಾರ್‌

ಲೋಕಾಯುಕ್ತಕ್ಕೆ ದೂರು: ಶ್ರೀರಾಮ ಸೇನೆ ಜಿಲ್ಲಾಧ್ಯಕ್ಷ ಕೆ. ಮಣಿ ಸರ್ಕಾರ್‌ ಆರೋಪ

​ಪ್ರಜಾವಾಣಿ ವಾರ್ತೆ
Published 16 ಫೆಬ್ರುವರಿ 2023, 5:15 IST
Last Updated 16 ಫೆಬ್ರುವರಿ 2023, 5:15 IST
   

ದಾವಣಗೆರೆ: ‘ಲೋಕೋಪಯೋಗಿ ಇಲಾಖೆಯಿಂದ ಮಂಜೂರಾದ ಹಣವನ್ನು ಗುತ್ತಿಗೆದಾರರಿಗೆ ಬಿಡುಗಡೆ ಮಾಡಲು ಇಲಾಖೆಯ ಅಧಿಕಾರಿಗಳು ಲಂಚಕ್ಕೆ ಬೇಡಿಕೆ ಇಟ್ಟಿದ್ದು, ಲೋಕೋಪಯೋಗಿ ಸಚಿವರು ಅವರನ್ನು ಅಮಾನತು ಮಾಡಬೇಕು’ ಎಂದು ಶ್ರೀರಾಮ ಸೇನೆ ಜಿಲ್ಲಾಧ್ಯಕ್ಷ ಹಾಗೂ ಮಾಹಿತಿ ಕಾರ್ಯಕರ್ತ ಕೆ. ಮಣಿ ಸರ್ಕಾರ್‌ ಆರೋಪಿಸಿದರು.

ಈ ಕುರಿತು ಪತ್ರಿಕಾಗೋಷ್ಠಿಯಲ್ಲಿ ಲಂಚಕ್ಕೆ ಬೇಡಿಕೆ ಇಡುವ ವಿಡಿಯೊವನ್ನು ಪತ್ರಕರ್ತರ ಮುಂದೆ ಪ್ರದರ್ಶಿಸಿದರು.

‘ಲೋಕೊಪಯೋಗಿ, ಬಂದರು ಮತ್ತು ಒಳನಾಡು ಜಲಸಾರಿಗೆ ಇಲಾಖೆ ಕಚೇರಿಯ ಸಹಾಯಕ ಕಾರ್ಯಪಾಲಕ ಎಂಜಿನಿಯರ್ ನರೇಂದ್ರಬಾಬು, ಸಹಾಯಕ ಎಂಜಿನಿಯರ್ ವೀರಪ್ಪ, ಇಇ ವಿಜಯ್‌ಕುಮಾರ್, ಎಸ್‌ಇ ಜಗದೀಶ್ ಅವರ ವಿರುದ್ಧ ಲೋಕಾಯುಕ್ತ ಎಸ್‌ಪಿಗೆ ದೂರು ನೀಡಲಾಗಿದೆ’ ಎಂದು ಹೇಳಿದರು.

ADVERTISEMENT

‘ಗುತ್ತಿಗೆದಾರರು ಹಣ ಬಿಡುಗಡೆ ಮಾಡಲು ಕೇಳಿದಾಗ ಲಂಚ ಕೊಟ್ಟರೆ ಮಾತ್ರ ಹಣ ಬಿಡುಗಡೆ ಮಾಡುತ್ತೇನೆ. ಇದು ತರಕಾರಿ ವ್ಯಾಪಾರವಲ್ಲ. ನಾನು ಈ ಸ್ಥಳಕ್ಕೆ ಬರಲು ₹25 ಲಕ್ಷ ಕೊಟ್ಟಿದ್ದೇನೆ. ನೀವು ಒಂದೊಂದು ಕಡತಕ್ಕೆ ₹ 20 ಸಾವಿರ ನೀಡಿದರೆ ಹಣ ಬಿಡುಗಡೆ ಮಾಡುತ್ತೇನೆ ಎಂದು ಸಹಾಯಕ ಎಂಜಿನಿಯರ್ ವೀರಪ್ಪ ಹೇಳಿದ್ದಾರೆ. ಅಲ್ಲದೇ ಅವರು ಲಂಚವನ್ನು ಪಡೆದಿದ್ದಾರೆ. ಅವರು ಯಾವ ಸಚಿವರಿಗೆ, ಅಧಿಕಾರಿಗೆ ₹ 25ಲಕ್ಷ ಕೊಟ್ಟಿದ್ದಾರೆ ಎಂಬುದನ್ನು ಬಹಿರಂಗಪಡಿಸಬೇಕು’ ಎಂದು ಆಗ್ರಹಿಸಿದರು.

‘ಮಹಾನಗರ ಪಾಲಿಕೆಯಲ್ಲಿ ಅಧಿಕಾರಿಗಳು, ವಿಶೇಷ ಭೂಸ್ವಾಧೀನಾಧಿಕಾರಿ, ಹರಿಹರ ಕ್ಷೇತ್ರ ಶಿಕ್ಷಣಾಧಿಕಾರಿ, ವಿಶೇಷ ಸರ್ಕಾರಿ ಅಭಿಯೋಜಕಿ ಸೇರಿದಂತೆ ಹಲವರು ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ. ಈಚೆಗೆ ಅಧಿಕಾರಿಯೊಬ್ಬರು ಜೈಲು ಸೇರಿದ್ದಾರೆ. ಹಾಗಿದ್ದರೂ ಅಧಿಕಾರಿಗಳು ಲಂಚ ಪಡೆಯುವುತ್ತಿರುವುದನ್ನು ಬಿಟ್ಟಿಲ್ಲ. ಟೇಬಲ್ ಮೇಲೆಯೇ ಲಂಚ ಪಡೆಯುತ್ತಿರುವುದು ನಾಚಿಕೆಗೇಡಿನ ಸಂಗತಿ’ ಎಂದರು.

‘ಲಂಚ ಪಡೆದಿರುವ ಈ ನಾಲ್ವರ ಆಸ್ತಿಯ ವಿವರಗಳನ್ನು ಸಂಬಂಧಪಟ್ಟ ಅಧಿಕಾರಿಗಳನ್ನು ಭೇಟಿ ಮಾಡಿ ವಿವರ ಕೊಡುತ್ತೇನೆ. ಮುಖ್ಯಮಂತ್ರಿಗಳು, ಸರ್ಕಾರದ ಮುಖ್ಯ ಕಾರ್ಯದರ್ಶಿಗಳು ಕ್ರಮ ಜರುಗಿಸುವವರೆಗೂ ಹೋರಾಟ ನಿಲ್ಲುವುದಿಲ್ಲ ಎಂದು ಎಚ್ಚರಿಸಿದ ಅವರು, ಮೂವರು ಗುತ್ತಿಗೆದಾರರು ಇದ್ದು, ಅವರ ಹೆಸರನ್ನು ಬಹಿರಂಗಪಡಿಸುವ ಹಾಗಿಲ್ಲ’ ಎಂದು ಹೇಳಿದರು.

ಶ್ರೀರಾಮ ಸೇನೆಯ ಸಾಗರ್, ಶ್ರೀಧರ್, ರಾಹುಲ್, ರಾಜು, ವಿನಯ್, ರಮೇಶ್, ರಘು, ವಿನೋದ್ ಪತ್ರಿಕಾಗೋಷ್ಠಿಯಲ್ಲಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.