ADVERTISEMENT

ಸರ್ಕಾರಿ ನೌಕರರ ಬೇಡಿಕೆ: ಒಕ್ಕೂಟದಿಂದ ಕಾರ್ಯಾಗಾರ

​ಪ್ರಜಾವಾಣಿ ವಾರ್ತೆ
Published 4 ಸೆಪ್ಟೆಂಬರ್ 2021, 3:44 IST
Last Updated 4 ಸೆಪ್ಟೆಂಬರ್ 2021, 3:44 IST

ದಾವಣಗೆರೆ:ನೂತನ ಪಿಂಚಣಿ ಯೋಜನೆ ರದ್ದತಿ ಮತ್ತು ಗುತ್ತಿಗೆ ನೇಮಕಾತಿ ಕಾಯಂಗೊಳಿಸುವ ಕುರಿತು ರಾಷ್ಟ್ರಮಟ್ಟದ ಕಾರ್ಯಾಗಾರವನ್ನು ಬೆಂಗಳೂರಿನಲ್ಲಿ ನಡೆಸಲು ತೀರ್ಮಾನಿಸಲಾಗಿದೆ ಎಂದು ಅಖಿಲ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಒಕ್ಕೂಟದ ರಾಜ್ಯಾಧ್ಯಕ್ಷ ಎನ್.ಇ. ನಟರಾಜ್ ಹೇಳಿದರು.

‘ಕಾರ್ಯಾಗಾರದ ದಿನಾಂಕವನ್ನು ಶೀಘ್ರ ನಿಗದಿಪಡಿಸಲಾಗುವುದು. ಕಾರ್ಯಾಗಾರದಲ್ಲಿ ದೇಶದ ಎಲ್ಲಾ ರಾಜ್ಯಗಳಿಂದ 200 ಪ್ರತಿನಿಧಿಗಳು ಬರಲಿದ್ದು, ಕಾನೂನು ತಜ್ಞರು, ನೌಕರರು ಭಾಗವಹಿಸಲಿದ್ದಾರೆ.ಕಾರ್ಯಾಗಾರದ ನಂತರ ಜನವರಿ 2022ರ ಒಳಗೆ ಎನ್‌ಪಿಎಸ್ ರದ್ದತಿ, ವೇತನ ಪರಿಷ್ಕರಣೆ, ಖಾಲಿ ಹುದ್ದೆಗಳ ಭರ್ತಿ ಸೇರಿ ಹಲವು ಬೇಡಿಕೆಗಳ ಕುರಿತು ರಾಜ್ಯವ್ಯಾಪಿ ವಾಹನ ಜಾಥಾ ನಡೆಸಲಾಗುವುದು’ ಎಂದು ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

ರಾಜ್ಯದಲ್ಲಿ 2.75 ಲಕ್ಷ ಸರ್ಕಾರಿ ಹುದ್ದೆಗಳು ಖಾಲಿ ಇವೆ. ನೇಮಕಾತಿ ಮಾಡಿಕೊಂಡರೆ ಎಲ್ಲಾ ವರ್ಗಕ್ಕೂ ಅನುಕೂಲವಾಗುತ್ತದೆ.ಸರ್ಕಾರದ ಹೊಸ ಆದೇಶಗಳಿಂದ ನೌಕರರು ತುಳಿತಕ್ಕೊಳಪಡುತ್ತಿದ್ದಾರೆ. ಕೇಂದ್ರ ಸರ್ಕಾರದ ಸಮಾನ ವೇತನದ ಬೇಡಿಕೆ ಇನ್ನೂ ಈಡೇರುತ್ತಿಲ್ಲ. ಈ ಬಗ್ಗೆ ಒಕ್ಕೂಟ ಹೋರಾಟ ನಡೆಸಲಿದೆ ಎಂದರು.

ADVERTISEMENT

‘ನೌಕರರ ಒಕ್ಕೂಟವು ಹೋರಾಟದ ಮೂಲಕ ಬೇಡಿಕೆಗಳನ್ನು ಈಡೇರಿಸಿಕೊಳ್ಳುವ ಉದ್ದೇಶ ಹೊಂದಿದ್ದರೆ, ರಾಜ್ಯ ಸರ್ಕಾರಿ ನೌಕರರ ಸಂಘವು ರಾಜಿ ಪಂಚಾಯಿತಿ ಮೂಲಕ ಬೇಡಿಕೆ ಈಡೇರಿಸಿಕೊಳ್ಳುತ್ತದೆ. ಒಕ್ಕೂಟದ ಕಾರ್ಯವ್ಯಾಪ್ತಿ ರಾಷ್ಟ್ರವ್ಯಾಪ್ತಿಯಾದರೆ, ಸಂಘದ್ದು ಕೇವಲ ರಾಜ್ಯಕ್ಕೆ ಮಾತ್ರ ಸೀಮಿತವಾಗಿದೆ.ದೂರವಾಣಿ ಕರೆ ಮಾಡಿ ಒಕ್ಕೂಟದ ಕಾರ್ಯಕ್ರಮಗಳಲ್ಲಿ ಭಾಗವಹಿಸದಂತೆ ನೌಕರರಿಗೆ ಹೇಳಲಾಗುತ್ತದೆ’ ಎಂದು ಆರೋಪಿಸಿದರು.

ಒಕ್ಕೂಟದ ಜಿಲ್ಲಾಧ್ಯಕ್ಷ ಎಂ.ಆರ್. ಮಲ್ಲಿಕಾರ್ಜುನ ಸ್ವಾಮಿ, ರಾಜ್ಯ ಗೌರವಾಧ್ಯಕ್ಷ ಮಹದೇವಯ್ಯ ಮಠಪತಿ, ಶಾಂತರಾಮ್, ಅಭಿಜಿತ್, ಪಿ.ಗುರುಸಿದ್ಧಸ್ವಾಮಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.