ಹೊನ್ನಾಳಿ: ಹಿಂದುಳಿದ ಮತ್ತು ಅತೀ ಹಿಂದುಳಿದ ವರ್ಗಗಳ ಕುರಿತು ಎಚ್. ಕಾಂತರಾಜ ಆಯೋಗ ಸಲ್ಲಿಸಿದ ವರದಿಯನ್ನು ರಾಜ್ಯ ಸರ್ಕಾರ ಕೂಡಲೇ ಜಾರಿ ಮಾಡಬೇಕು ಎಂದು ಶಿವಮೊಗ್ಗ ಜಿಲ್ಲಾ ಹಿಂದುಳಿದ ಮತ್ತು ಅತೀ ಹಿಂದುಳಿದ ಜನಜಾಗೃತಿ ವೇದಿಕೆಯ ಅಧ್ಯಕ್ಷ ಆರ್. ಮೋಹನ್ ಆಗ್ರಹಿಸಿದರು.
ಶನಿವಾರ ಪಟ್ಟಣದಲ್ಲಿ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು.
ಸರ್ಕಾರ ಯಾವುದೇ ಪಟ್ಟಭದ್ರ ಹಿತಾಸಕ್ತಿಗಳ ಲಾಬಿಗೆ ಒಳಗಾಗದೇ ವರದಿಯನ್ನು ಯಥಾವತ್ತಾಗಿ ಜಾರಿ ಮಾಡಬೇಕು ಎಂದರು.
‘ಹಿಂದುಳಿದ ವರ್ಗಗಳ ಶಾಶ್ವತ ಆಯೋಗಕ್ಕೆ ನೇಮಕಗೊಂಡ ಜಯಪ್ರಕಾಶ ಹೆಗ್ಡೆ ಅವರು 3 ವರ್ಷ ಮೌನವಾಗಿದ್ದರು. ಇದೀಗ ತಮ್ಮ ಅಧಿಕಾರಾವಧಿ ಮುಕ್ತಾಯಗೊಳ್ಳುತ್ತಿರುವ ಸಂದರ್ಭದಲ್ಲಿ ವರದಿ ಜಾರಿಗೆ ಒತ್ತಡಗಳು ಹೆಚ್ಚಾಗುತ್ತಿದ್ದಂತೆಯೇ ಎಚ್ಚೆತ್ತುಕೊಂಡಿರುವ ಅವರು ವರದಿಯನ್ನು ಸರ್ಕಾರಕ್ಕೆ ಸಲ್ಲಿಸುವುದಾಗಿ ಹೇಳಿದ್ದಾರೆ. ಆದರೆ ವರದಿಯ ಮಹತ್ವವನ್ನು ಅರಿತ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ಆಯೋಗದ ಅಧ್ಯಕ್ಷರಿಗೆ ಇನ್ನೂ ಒಂದು ತಿಂಗಳು ಕಾಲಾವಕಾಶ ನೀಡಿದ್ದಾರೆ. ವರದಿಯನ್ನು ತಕ್ಷಣ ಅಂಗೀಕರಿಸಿ ಅನುಷ್ಠಾನಗೊಳಿಸಬೇಕು ಇಲ್ಲದಿದ್ದರೆ ರಾಜ್ಯಾದ್ಯಂತ ಹೋರಾಟ ನಡೆಸಲಾಗುವುದು’ ಎಂದರು.
ಬಿಜೆಪಿ ಮುಖಂಡ ಕೆ.ಎಸ್. ಈಶ್ವರಪ್ಪ ಅವರು ಈ ವರದಿಯನ್ನು ಬೆಂಕಿಗೆ ಹಾಕಬೇಕು ಎಂದು ಉದ್ಧಟತನದ ಹೇಳಿಕೆ ನೀಡಿದ್ದಾರೆ. ಜೊತೆಗೆ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ. ವಿಜಯೇಂದ್ರ ಅವರು ಆರೆಬೆಂದ ವರದಿ ಎಂದು ಹೇಳಿಕೆ ನೀಡಿದ್ದಾರೆ. ಇದನ್ನು ಹಿಂದುಳಿದ ಮತ್ತು ಅತೀ ಹಿಂದುಳಿದ ಜನ ಜಾಗೃತಿ ವೇದಿಕೆ ಖಂಡಿಸುತ್ತದೆ ಎಂದರು.
ವೇದಿಕೆಯ ಹೋರಾಟಕ್ಕೆ ರಾಜ್ಯದ ಹಿಂದುಳಿದ ಮತ್ತು ಅತೀ ಹಿಂದುಳಿದ ಜನ ಸಮುದಾಯ ಬೆಂಬಲಿಸಬೇಕು ಎಂದು ಮನವಿ ಮಾಡಿದರು.
ಸುದ್ದಿಗೋಷ್ಠಿಯಲ್ಲಿ ದರ್ಶನ್ ಬಳ್ಳೇಶ್ವರ, ಉಪ್ಪಾರ ಸಮಾಜದ ಅಧ್ಯಕ್ಷ ಷಣ್ಮುಖಪ್ಪ, ರೆಡ್ಡಿ ಸಮಾಜದ ಅಧ್ಯಕ್ಷ ಹುತ್ತೇಶ, ಗಂಗಾಮತ ಸಮಾಜದ ಹನುಮೇಶ, ಮುಸ್ಲಿಂ ಸಮಾಜದ ಮುಖಂಡ ವಾಜೀದ್, ಸವಿತಾ ಸಮಾಜದ ಗೋವಿಂದಪ್ಪ, ದರ್ಜಿ ಸಮಾಜದ ನಟರಾಜ್ ಸೇರಿದಂತೆ ವಿವಿಧ ಹಿಂದುಳಿದ ಸಮಾಜಗಳ ಅಧ್ಯಕ್ಷರು ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.