ADVERTISEMENT

ವಾಲ್ಮೀಕಿ ಟ್ರಸ್ಟ್ ಸೂಪರ್‌ಸೀಡ್‌ಗೆ ಆಗ್ರಹ

​ಪ್ರಜಾವಾಣಿ ವಾರ್ತೆ
Published 7 ಜುಲೈ 2022, 4:34 IST
Last Updated 7 ಜುಲೈ 2022, 4:34 IST

ದಾವಣಗೆರೆ: ‘ರಾಜನಹಳ್ಳಿ ಪೀಠದ ಪ್ರಸನ್ನಾನಂದ ಸ್ವಾಮೀಜಿಯವರು ಮೀಸಲಾತಿ ಪ್ರಮಾಣ ಹೆಚ್ಚಳಕ್ಕಾಗಿ ಹೋರಾಟ ನಡೆಸುತ್ತಿದ್ದು, ಮಹರ್ಷಿ ವಾಲ್ಮೀಕಿ ಗುರುಪೀಠ ಟ್ರಸ್ಟ್‌ನ ಕಾರ್ಯಗಳು ಸ್ಥಗಿತಗೊಂಡಿವೆ. ಆದ್ದರಿಂದ ಸರ್ಕಾರ ಟ್ರಸ್ಟ್‌ಗೆ ಆಡಳಿತಾಧಿಕಾರಿಯನ್ನು ನೇಮಿಸಬೇಕು’ ಎಂದು ವಕೀಲರಾದ ಗುಮ್ಮನೂರು ಮಲ್ಲಿಕಾರ್ಜುನಪ್ಪ ಒತ್ತಾಯಿಸಿದರು.

‘ಟ್ರಸ್ಟ್‌ನ ಅಧ್ಯಕ್ಷರಾಗಿರುವ ಸ್ವಾಮೀಜಿಯವರು ಯಾವುದೇ ಲೆಕ್ಕಪತ್ರ ಇಡದೇ ಟ್ರಸ್ಟ್ ನಿಯಮವನ್ನು ಉಲ್ಲಂಘಿಸಿದ್ದಾರೆ. ಟ್ರಸ್ಟ್‌ ಹೆಸರಿಗೆ ಇರುವ ಆಸ್ತಿಯನ್ನು ತಮ್ಮ ಹೆಸರಿಗೆ ವರ್ಗಾಯಿಸಿಕೊಂಡಿದ್ದಾರೆ. ಪರಿಶಿಷ್ಟ ಪಂಗಡದ ಯೋಜನೆಗಳ ಹಣದಿಂದ ವಾಲ್ಮೀಕಿ ಜಾತ್ರೆ ನಡೆಸಿ ಸರ್ಕಾರಕ್ಕೆ ನಷ್ಟ ಉಂಟುಮಾಡಿದ್ದಾರೆ. ಹೀಗಾಗಿ ಟ್ರಸ್ಟ್‌ ಅನ್ನು ಸೂಪರ್‌ಸೀಡ್ ಮಾಡಬೇಕು’ ಎಂದು ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಆಗ್ರಹಿಸಿದರು.

‘ಪರಿಶಿಷ್ಟ ಪಂಗಡದ ಮೀಸಲಾತಿ ಪ್ರಮಾಣ ಹೆಚ್ಚಿಸುವಂತೆ ಸ್ವಾಮೀಜಿ ಕಾನೂನು ಹೋರಾಟ ಮಾಡಬೇಕು. ಫ್ರೀಡಂ ಪಾರ್ಕ್‌ನಲ್ಲಿ ಸತ್ಯಾಗ್ರಹ ನಡೆಸುತ್ತಿರುವುದು ಕಾನೂನುಬಾಹಿರ. ಸುಪ್ರೀಂ ಕೋರ್ಟ್ ಆದೇಶದಂತೆ ಶೇ 50ಕ್ಕಿಂತ ಹೆಚ್ಚು ಮೀಸಲಾತಿ ನೀಡಲು ಬರುವುದಿಲ್ಲ ಎಂದು ಗೊತ್ತಿದ್ದರೂ ರಾಜ್ಯದ ಜನರ ದಾರಿ ತಪ್ಪಿಸುತ್ತಿದ್ದಾರೆ’ ಎಂದು ಅವರು ಆರೋಪಿಸಿದರು.

ADVERTISEMENT

‘ಜುಲೈ 11ರಂದು ಜಿಲ್ಲಾಧಿಕಾರಿ ಕಚೇರಿಗಳಿಗೆ ಮುತ್ತಿಗೆ ಹಾಕಬೇಕು ಎಂದು ಕರೆ ಕೊಟ್ಟಿರುವುದು ಪ್ರಚೋದನಾಕಾರಿ ಹೇಳಿಕೆಯಾಗಿದೆ. ಇದರಿಂದ ಸಾರ್ವಜನಿಕ ಆಸ್ತಿಗೆ ನಷ್ಟವಾದರೆ ಸ್ವಾಮೀಜಿಯೇ ಹೊಣೆ ಹೊರಬೇಕಾಗುತ್ತದೆ. ಸರ್ಕಾರಿ ನೌಕರರಿಗೂ ಈ ರೀತಿಯ ಕರೆ ಕೊಟ್ಟಿರುವುದು ಸರಿಯಲ್ಲ. ಸ್ವಾಮೀಜಿ ಹಠಮಾರಿತನ ಬಿಟ್ಟು ಕಾನೂನು ಹೋರಾಟ ಮಾಡಲಿ’ ಎಂದು ಸಲಹೆ ನೀಡಿದರು.

‘ನಮ್ಮ ಸಮಾಜಕ್ಕೆ ಮೌಲ್ಯ ಬಿತ್ತುವ ಸಾತ್ವಿಕ ಗುಣವುಳ್ಳ, ಕಾನೂನು ಒಪ್ಪುವಂತಹ ಸ್ವಾಮೀಜಿಯ ಅವಶ್ಯಕತೆ ಇದೆ. ಹೀಗಾಗಿ ಬೇರೆ ಸ್ವಾಮೀಜಿಯನ್ನು ನೇಮಿಸಬೇಕು’ ಎಂದು ಆಗ್ರಹಿಸಿದರು.

‘ಪ್ರಸನ್ನಾನಂದ ಸ್ವಾಮೀಜಿಯವರು ಮೀಸಲಾತಿ ಪ್ರಮಾಣ ಹೆಚ್ಚಿಸುವಂತೆ ಪ್ರತಿಭಟನೆ ನಡೆಸುವ ಬದಲು, ಪರಿಶಿಷ್ಟರ ಹೆಸರಿನಲ್ಲಿ ಸುಳ್ಳು ಜಾತಿಯ ಪ್ರಮಾಣಪತ್ರ ಪಡೆಯುವುದರ ವಿರುದ್ಧ ಹೋರಾಟ ನಡೆಸಬೇಕು’ ಎಂದು ಕರ್ನಾಟಕ ರಾಜ್ಯ ಬುಡಕಟ್ಟು ಹಿತರಕ್ಷಣಾ ಸಂಘದ ರಾಜ್ಯ ಘಟಕದ ಅಧ್ಯಕ್ಷ ಸುಭಾಷ್ ಎಸ್‌.ಎಚ್. ಸಲಹೆ ನೀಡಿದರು.

‘ಉಪ್ಪಾರ, ಕೋಲಿ, ಕುರುಬ, ಹಾಲುಮತ, ಪರಿವಾರ, ತಳವಾರ, ಗೋಂದಳಿ, ಕಾಡುಗೊಲ್ಲ, ಸವಿತಾ ಸಮಾಜಗಳನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸಬಾರದು’ ಎಂದು ಒತ್ತಾಯಿಸಿದರು. ಅರವಿಂದಾಕ್ಷ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.