ADVERTISEMENT

ಅಗತ್ಯ ವಸ್ತುಗಳ ವಹಿವಾಟು ಸರ್ಕಾರವೇ ವಹಿಸಲು ಆಗ್ರಹ

​ಪ್ರಜಾವಾಣಿ ವಾರ್ತೆ
Published 21 ಸೆಪ್ಟೆಂಬರ್ 2022, 5:54 IST
Last Updated 21 ಸೆಪ್ಟೆಂಬರ್ 2022, 5:54 IST
ಕೃಷಿ ಉತ್ಪನ್ನಗಳು ಮತ್ತು ಅಗತ್ಯ ವಸ್ತುಗಳ ಸಗಟು ಮತ್ತು ಚಿಲ್ಲರೆ ವ್ಯಾಪಾರವನ್ನು ಸರ್ಕಾರವೇ ವಹಿಸಿಕೊಳ್ಳಬೇಕು  ಎಂದು ಆಗ್ರಹಿಸಿ ಅಖಿಲ ಭಾರತ ರೈತ-ಕೃಷಿ ಕಾರ್ಮಿಕರ ಸಂಘಟನೆಯು (ಎಐಕೆಕೆಎಂಎಸ್‌) ದಾವಣಗೆರೆ ಹೆಚ್ಚುವರಿ ಜಿಲ್ಲಾಧಿಕಾರಿ ಪಿ.ಎನ್‌. ಲೋಕೇಶ್ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿತು
ಕೃಷಿ ಉತ್ಪನ್ನಗಳು ಮತ್ತು ಅಗತ್ಯ ವಸ್ತುಗಳ ಸಗಟು ಮತ್ತು ಚಿಲ್ಲರೆ ವ್ಯಾಪಾರವನ್ನು ಸರ್ಕಾರವೇ ವಹಿಸಿಕೊಳ್ಳಬೇಕು  ಎಂದು ಆಗ್ರಹಿಸಿ ಅಖಿಲ ಭಾರತ ರೈತ-ಕೃಷಿ ಕಾರ್ಮಿಕರ ಸಂಘಟನೆಯು (ಎಐಕೆಕೆಎಂಎಸ್‌) ದಾವಣಗೆರೆ ಹೆಚ್ಚುವರಿ ಜಿಲ್ಲಾಧಿಕಾರಿ ಪಿ.ಎನ್‌. ಲೋಕೇಶ್ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿತು   

ದಾವಣಗೆರೆ: ಕೃಷಿ ಉತ್ಪನ್ನಗಳು ಮತ್ತು ಅಗತ್ಯ ವಸ್ತುಗಳ ಸಗಟು ಮತ್ತು ಚಿಲ್ಲರೆ ವ್ಯಾಪಾರವನ್ನು ಸರ್ಕಾರವೇ ವಹಿಸಿಕೊಳ್ಳಬೇಕು. ಈ ಮೂಲಕ ಬೆಲೆ ಏರಿಕೆಯನ್ನು ನಿಯಂತ್ರಿಸಬೇಕು ಎಂದು ಆಗ್ರಹಿಸಿ ಅಖಿಲ ಭಾರತ ರೈತ-ಕೃಷಿ ಕಾರ್ಮಿಕರ ಸಂಘಟನೆಯು (ಎಐಕೆಕೆಎಂಎಸ್‌) ಹೆಚ್ಚುವರಿ ಜಿಲ್ಲಾಧಿಕಾರಿ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿದರು.

ಜಿಲ್ಲಾಧಿಕಾರಿ ಕಚೇರಿ ಮುಂದೆ ಮಂಗಳವಾರ ಪ್ರತಿಭಟನೆ ನಡೆಸಿದ ಬಳಿಕ ಮನವಿ ಸಲ್ಲಿಸಲಾಯಿತು.

ಬೆಲೆ ಏರಿಕೆಯ ಮೂಲಕ ಸರ್ಕಾರವು ಗ್ರಾಮೀಣ ಬಡ ಜನರ ಜೀವನದ ಮೇಲೆ ಎಳೆಯುತ್ತಿದೆ. ಬೀಜ, ರಸಗೊಬ್ಬರಗಳ ಬೆಲೆಯನ್ನು ದುಬಾರಿ ಮಾಡಿ ಮತ್ತು ಅದರ ಮೇಲೆ ಇರುವ ಸಬ್ಸಿಡಿಯನ್ನು ಹಿಂದಕ್ಕೆ ತೆಗೆದುಕೊಂಡು ಕೃಷಿಯನ್ನು ದುಬಾರಿ ಮಾಡಲಾಗಿದೆ. ಬೆಳೆದ ಬೆಳೆಗಳಿಗೆ ಯೋಗ್ಯ ಬೆಲೆ ಸಿಗದೆ ರೈತರು ಕಂಗಾಲಾಗುವ ಸ್ಥಿತಿ ಬಂದೊದಗಿದೆ. ಆದ್ದರಿಂದ ಸರ್ಕಾರವೇ ಬೆಳೆಗಳನ್ನು ಕೊಂಡುಕೊಂಡು ರೈತರಿಗೆ ಪ್ರತಿ ಎಕರೆಗೆ ತಗಲುವ ವೆಚ್ಚವನ್ನು ಒಳಗೊಂಡು ಒಂದೂವರೆ ಪಟ್ಟು ಬೆಂಬಲ ಬೆಲೆಯನ್ನು ನಿಗದಿ ಮಾಡಲು ಬೆಂಬಲ ಬೆಲೆಯನ್ನು ಕಾನೂನು ಬದ್ಧಗೊಳಿಸಬೇಕು ಎಂದು ಪ್ರತಿಭಟನಕಾರರು ಆಗ್ರಹಿಸಿದರು.

ADVERTISEMENT

ಕಳೆದ ವರ್ಷ ಮೂರು ಕರಾಳ ಕಾನೂನುಗಳನ್ನು ಹಿಂಪಡೆಯುವ ಸಂದರ್ಭದಲ್ಲಿ ದೇಶದಾದ್ಯಂತ ಕೃಷಿ ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆಯನ್ನು ಕಾನೂನುಬದ್ಧಗೊಳಿಸುವುದಾಗಿ ಸರ್ಕಾರ ಭರವಸೆ ನೀಡಿತ್ತು. ಅದನ್ನೇ ಪ್ರಮಾಣ ಮಾಡಿ ಲಿಖಿತವಾಗಿ ನೀಡಲಾಗಿತ್ತು. ಕೊಟ್ಟ ಮಾತನ್ನು ಉಳಿಸಿಕೊಂಡಿಲ್ಲ. ರೈತ ಚಳವಳಿಯ ಬೇಡಿಕೆಗೆ ವಿರುದ್ಧವಾಗಿ ಸಾಮಾನ್ಯ ಜನರಲ್ಲಿ ಗೊಂದಲಗಳನ್ನು ಸೃಷ್ಟಿಸಲು ಕೆಲವು ಸುಳ್ಳು ವಾದಗಳನ್ನು ಮಾಧ್ಯಮಗಳಲ್ಲಿ ಪ್ರಸಾರ ಮಾಡಲಾಗುತ್ತಿದೆ ಎಂದು ಆರೋಪಿಸಿದರು.

ಸರ್ಕಾರವು ದೊಡ್ಡ, ಸಣ್ಣ ಬಂಡವಾಳಶಾಹಿಗಳು ಮತ್ತು ಬಹುರಾಷ್ಟ್ರೀಯ ಕಂಪನಿಗಳು ಆಹಾರ ಮತ್ತು ಅಗತ್ಯ ವಸ್ತುಗಳ ಸಂಪೂರ್ಣ ಮಾರಾಟ ಅಥವಾ ಚಿಲ್ಲರೆ ಮಾರುಕಟ್ಟೆಗೆ ಪ್ರವೇಶಿಸದಂತೆ ನಿಷೇಧಿಸಬೇಕು. ರೈತರ ವ್ಯಾಪ್ತಿಯೊಳಗೆ ಖರೀದಿ ಕೇಂದ್ರಗಳನ್ನು ಸ್ಥಾಪಿಸಬೇಕು. ಮಾರುಕಟ್ಟೆ ಬಲಪಡಿಸಬೇಕು. ಎಂಎಸ್‌ಪಿ ಕಾನೂನುಬದ್ಧಗೊಳಿಸಬೇಕು. ಸರ್ಕಾರವೇ ನೇರ ಖರೀದಿ ಮಾಡಬೇಕು ಎಂದು ಆಗ್ರಹಿಸಿದರು.

ಎಐಕೆಕೆಎಂಎಸ್‌ ಜಿಲ್ಲಾ ಅಧ್ಯಕ್ಷ ಮಧು ತೊಗಲೇರಿ, ಕಾರ್ಯದರ್ಶಿ ನಾಗಸ್ಮಿತಾ, ಉಪಾಧ್ಯಕ್ಷ ಭೀಮಣ್ಣ ಮಾಯಕೊಂಡ, ಸಹಕಾರ್ಯದರ್ಶಿ ನಾಗರಾಜ ರಾಮಗೊಂಡನಹಳ್ಳಿ, ಮಲ್ಲಿಕಾರ್ಜುನ ಮೆಳ್ಳೆಕಟ್ಟೆ, ಬಾವಿಹಾಳ್‌ ರಾಜಪ್ಪ ಮುಂತಾದವರು ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.