ADVERTISEMENT

ಹಣ ನೀಡುವಂತೆ ಆಗ್ರಹಿಸಿ ಠೇವಣಿದಾರರ ಪ್ರತಿಭಟನೆ

ಲಕ್ಷ್ಮೀ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿ ಮುಂದೆ ಜಮಾಯಿಸಿದ ಪ್ರತಿಭಟನಾಕಾರರು

​ಪ್ರಜಾವಾಣಿ ವಾರ್ತೆ
Published 22 ನವೆಂಬರ್ 2019, 14:47 IST
Last Updated 22 ನವೆಂಬರ್ 2019, 14:47 IST
ಹಣ ಹಿಂತಿರುಗಿಸುವಂತೆ ಆಗ್ರಹಿಸಿ ದಾವಣಗೆರೆಯ ಲಕ್ಷ್ಮೀ ಕ್ರೆಡಿಟ್ ಕೋ–ಆಪರೇಟಿವ್ ಸೊಸೈಟಿ ದಾವಣಗೆರೆ ಮುಂಭಾಗದಲ್ಲಿ ಠೇವಣಿದಾರರ ವೇದಿಕೆ ಸದಸ್ಯರು ಪ್ರತಿಭಟನೆ ನಡೆಸಿದರು –ಪ್ರಜಾವಾಣಿ ಚಿತ್ರ
ಹಣ ಹಿಂತಿರುಗಿಸುವಂತೆ ಆಗ್ರಹಿಸಿ ದಾವಣಗೆರೆಯ ಲಕ್ಷ್ಮೀ ಕ್ರೆಡಿಟ್ ಕೋ–ಆಪರೇಟಿವ್ ಸೊಸೈಟಿ ದಾವಣಗೆರೆ ಮುಂಭಾಗದಲ್ಲಿ ಠೇವಣಿದಾರರ ವೇದಿಕೆ ಸದಸ್ಯರು ಪ್ರತಿಭಟನೆ ನಡೆಸಿದರು –ಪ್ರಜಾವಾಣಿ ಚಿತ್ರ   

ದಾವಣಗೆರೆ: ಠೇವಣಿ ಹಣ ಮರುಪಾವತಿ ಮಾಡುವಂತೆ ಆಗ್ರಹಿಸಿ ಲಕ್ಷ್ಮೀ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿ ಎದುರು ಠೇವಣಿದಾರರು ಶುಕ್ರವಾರ ಧರಣಿ ನಡೆಸಿ ಆಡಳಿತ ಮಂಡಳಿ ವಿರುದ್ಧ ಧಿಕ್ಕಾರ ಕೂಗಿದರು.

ಆಡಳಿತ ಮಂಡಳಿ ವಿರುದ್ದ ಸಿಡಿದೆದ್ದ ಹೂಡಿಕೆದಾರರು ಕೂಡಲೇ ಠೇವಣಿ ಮಾಡಿದ ₹ 20 ಕೋಟಿಗಳನ್ನು ಪಾವತಿ ಮಾಡಬೇಕೆಂದು ಒತ್ತಾಯಿಸಿದರು.

ಸೊಸೈಟಿಯ ದಾವಣಗೆರೆ ಠೇವಣಿದಾರರ ಹಿತರಕ್ಷಣಾ ವೇದಿಕೆಯಡಿ ಧರಣಿ ನಡೆಯಿತು. ಠೇವಣಿದಾರರು ಜಮಾಯಿಸಿದ್ದರಿಂದ ಕೆಲ ಕಾಲ ಬಿಗುವಿನ ವಾತಾವರಣ ಕಂಡುಬಂದಿತು. ಪೊಲೀಸ್ ಬಂದೋಬಸ್ತ್ ಮಾಡಲಾಗಿತ್ತು. ಪ್ರತಿಭಟನೆಯ ನಂತರ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗೆ ಮನವು ಸಲ್ಲಿಸಿದರು.

ADVERTISEMENT

ಸೊಸೈಟಿಯಲ್ಲಿ ಆಕರ್ಷಕ ಬಡ್ಡಿ ನೀಡುವುದಾಗಿ ಹೇಳಿ ಸಾರ್ವಜನಿಕರಿಂದ ಬಂಡವಾಳ ಹೂಡಿಕೆ ಮಾಡಿಕೊಳ್ಳಲಾಗಿದೆ. ಕೂಲಿ ಕಾರ್ಮಿಕರು, ಬಡವರು ಹಿರಿಯ ನಾಗರಿಕರು, ಮಹಿಳೆಯರು ಸೊಸೈಟಿಯಲ್ಲಿ ಠೇವಣಿ ಇರಿಸಿದ್ದಾರೆ. ಅವಧಿ ಮುಗಿದರೂ 2017ನೇ ಸಾಲಿನಿಂದ ಹಣ ನೀಡದೆ ಅಲೆದಾಡಿಸಲಾಗುತ್ತಿದೆ. ಆಡಳಿತ ಮಂಡಳಿ ಪ್ರತಿಕ್ರಿಯೆ ನೀಡುತ್ತಿಲ್ಲ. ಮೇಲ್ನೋಟಕ್ಕೆ ಸೊಸೈಟಿಯಲ್ಲಿ ಅವ್ಯವಹಾರವಾಗಿದೆ. ಠೇವಣಿ ಮೊತ್ತವನ್ನು ಆಡಳಿತ ವರ್ಗದವರಿಂದಲೇ ವಸೂಲಿ ಮಾಡಿಸಿ ಕೊಡುವಂತೆ ಆಗ್ರಹಿಸಿದರು.

‘ಪ್ರತಿಭಟನೆ ನಡೆಸುತ್ತಿದ್ದರೂ ಆಡಳಿತ ಮಂಡಳಿಯವರು ಕೆಲವರು ಬಂದರೂ ಯಾವುದೇ ಭರವಸೆ ನೀಡಲಿಲ್ಲ. ಆಡಳಿತ ಮಂಡಳಿ ಪದಾಧಿಕಾರಿಗಳ ಮನೆ ಎದುರು ಧರಣಿ ಮುಂದುವರಿಸುವ ಸೋಮವಾರ ಸಭೆ ನಡೆಸಿ ಆನಂತರ ಚರ್ಚಿಸಲಾಗುವುದು. ಅಲ್ಲದೇ ಆಡಳಿತ ಮಂಡಳಿಯ 16 ಸದಸ್ಯರ ವಿರುದ್ಧ ಒಬ್ಬ ಠೇವಣಿದಾರರು ನೀಡಿದ್ದಾರೆ. ಉಳಿದಂತೆ ಶನಿವಾರದಿಂದ ಹಣ ಕಳೆದುಕೊಂಡ ಎಲ್ಲರೂ ಕೆಟಿಜೆ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸುತ್ತೇವೆ’ ಎಂದು ವೇದಿಕೆ ಅಧ್ಯಕ್ಷ ಎನ್.ವಿ. ಬಂಡಿವಾಡ್ ತಿಳಿಸಿದರು.

‘ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗೆ ಮನವಿ ಪತ್ರ ನೀಡಿದ್ದು, ಅವರು ಸೂಕ್ತ ತನಿಖೆ ನಡೆಸಿ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದ್ದಾರೆ’ ಎಂದು ಬಂಡಿವಾಡ್ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.