ADVERTISEMENT

‘ವಿಶ್ವಮಟ್ಟದಲ್ಲಿ ಜಾನಪದ ವಿವಿ ಅಭಿವೃದ್ಧಿಪಡಿಸಿ’

ಭದ್ರಾವತಿ ತಾಲ್ಲೂಕಿನ ಲಕ್ಷ್ಮಮ್ಮ ಮಾಳೇನಹಳ್ಳಿ ಅವರಿಗೆ ಕೆ.ಆರ್‌.ಲಿಂಗಪ್ಪ ಜಾನಪದ ಪ್ರಶಸ್ತಿ ಪ್ರದಾನ

​ಪ್ರಜಾವಾಣಿ ವಾರ್ತೆ
Published 10 ಜೂನ್ 2019, 20:17 IST
Last Updated 10 ಜೂನ್ 2019, 20:17 IST
ದಾವಣಗೆರೆಯಲ್ಲಿ ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತುವತಿಯಿಂದ ಭದ್ರಾವತಿಯ ಗಾಯಕಿ ಲಕ್ಷ್ಮಮ್ಮ ಮಾಳೇನಹಳ್ಳಿ ಅವರಿಗೆ ಕೆ.ಆರ್. ಲಿಂಗಪ್ಪ ಜಾನಪದ ಪ್ರಶಸ್ತಿಯನ್ನು ಡಾ.ಗೊ.ರು. ಚನ್ನಬಸಪ್ಪ ಭಾನುವಾರ ಪ್ರದಾನ ಮಾಡಿದರು
ದಾವಣಗೆರೆಯಲ್ಲಿ ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತುವತಿಯಿಂದ ಭದ್ರಾವತಿಯ ಗಾಯಕಿ ಲಕ್ಷ್ಮಮ್ಮ ಮಾಳೇನಹಳ್ಳಿ ಅವರಿಗೆ ಕೆ.ಆರ್. ಲಿಂಗಪ್ಪ ಜಾನಪದ ಪ್ರಶಸ್ತಿಯನ್ನು ಡಾ.ಗೊ.ರು. ಚನ್ನಬಸಪ್ಪ ಭಾನುವಾರ ಪ್ರದಾನ ಮಾಡಿದರು   

ದಾವಣಗೆರೆ: ಕರ್ನಾಟಕ ಜಾನಪದ ವಿಶ್ವವಿದ್ಯಾಲಯವನ್ನು ವಿಶ್ವಮಟ್ಟದಲ್ಲಿ ಗಮನ ಸೆಳೆಯುವಂತೆ ಅಭಿವೃದ್ಧಿಪಡಿಸಬೇಕು ಎಂದು ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತಿನ ಗೌರವ ಸಲಹೆಗಾರ ಡಾ. ಗೊ.ರು. ಚನ್ನಬಸಪ್ಪ ಸರ್ಕಾರಕ್ಕೆ ಸಲಹೆ ನೀಡಿದರು.

ಅಖಿಲ ಭಾರತ ಶರಣ ಪರಿಷತ್ತು ಮೈಸೂರು ಹಾಗೂ ದಾವಣಗೆರೆ ಜಿಲ್ಲಾ ಶರಣ ಪರಿಷತ್ತಿನ ಸಹಯೋಗದಲ್ಲಿ ಖ್ಯಾತ ಜನಪದ ಗಾಯಕಿ ಭದ್ರಾವತಿ ತಾಲ್ಲೂಕಿನ ಲಕ್ಷ್ಮಮ್ಮ ಮಾಳೇನಹಳ್ಳಿ ಅವರಿಗೆ ಕೆ.ಆರ್‌.ಲಿಂಗಪ್ಪ ಜಾನಪದ ಪ್ರಶಸ್ತಿ ಪ್ರದಾನ ಮಾಡಿ ಅವರು ಮಾತನಾಡಿದರು.

‘ವಿಶ್ವವಿದ್ಯಾಲಯವನ್ನು ಬೆಳೆಸಲು ತುಂಬಾ ಅವಕಾಶಗಳು ಇದ್ದು, ಗ್ರಾಮೀಣ, ಕೃಷಿ, ಜನಜೀವನ, ಆಹಾರ, ವಿಹಾರ, ಸಂಬಂಧಗಳನ್ನು ಸುಧಾರಣೆ ಮಾಡಲು ಸಾಧ್ಯವಿದೆ. ಜಾನಪದ ವಿಶ್ವ ಕೆ.ಆರ್.ಲಿಂಗಪ್ಪ ಅವರನ್ನು ಸ್ಮರಿಸುವ ಕೆಲಸ ಮಾಡಬೇಕು. ಆಧುನಿಕ ತಲೆಮಾರಿಗೆ ಗಮನ ಸೆಳೆಯುವ ವಿಶ್ವಮಟ್ಟದಲ್ಲಿ ಅಭಿವೃದ್ಧಿಪಡಿಸಬೇಕು’ ಎಂದರು.

ADVERTISEMENT

‘ಜಾನಪದ ವಿಶ್ವವಿದ್ಯಾಲಯದಲ್ಲಿ ತಯಾರಾಗುತ್ತಿರುವ ‘ಗ್ರಾಮಚರಿತ್ರೆ’ ಕೋಶ ಶೀಘ್ರವಾಗಿ ಆಗಬೇಕು. ಗ್ರಾಮೀಣ ಪ್ರದೇಶಗಳ ಜನರ ಜೀವನ, ದೇವಾಲಯ, ಪಂಚಾಯಿತಿಗಳ ಮಾಹಿತಿಗಳನ್ನು ಒಳಗೊಂಡಿದ್ದು, 13 ಜಿಲ್ಲೆಗಳ ಸಂಪುಟ ರಚನೆಯಾಗಿದೆ. ಉಳಿದ ಜಿಲ್ಲೆಗಳ ಮಾಹಿತಿ ಶೀಘ್ರವಾಗಿ ನಡೆಯಬೇಕು’ ಎಂದು ಹೇಳಿದರು.

ವಾಸ್ತವತೆ ಉಳಿದಿರುವುದೇ ಹಳ್ಳಿಗಳಲ್ಲಿ. ಆದರೆ ಇಂದಿನ ದಿನಗಳಲ್ಲಿ ಹಳ್ಳಿಗಳೂ ಕುಲಗೆಟ್ಟಿವೆ. ರಾಜಕಾರಣಿಗಳು ಬುದ್ಧಿಜೀವಿಗಳು ಇದಕ್ಕೆ ಕಾರಣ ಎಂದು ಹೇಳಿದರು.

ಗೋಟಗೋಡಿಯ ಕರ್ನಾಟಕ ಜಾನಪದ ವಿಶ್ವವಿದ್ಯಾಲಯದ ಕುಲಪತಿ ಡಾ. ಡಿ.ಬಿ. ನಾಯಕ ಮಾತನಾಡಿ, ‘ಜಾನಪದರ ಬದುಕು ಶ್ರೇಷ್ಠ, ನಿಜವಾದ ಸಂಸ್ಕೃತಿ ಇರುವುದು ಜಾನಪದದಲ್ಲೇ ಅದನ್ನು ಕೆ.ಆರ್. ಲಿಂಗಪ್ಪ ರಾಜ್ಯದೆಲ್ಲೆಡೆ ಪಸರಿಸಿದರು. ಆಧುನಿಕ ಸಂಸ್ಕೃತಿಗೆ ಮೂಲಧಾತುವಾಗಿರುವ ಜಾನಪದ ಕಲೆಯನ್ನು ಉಳಿಸಿ ಬೆಳೆಸಬೇಕು. ಜಾನಪದ ವಸ್ತುಗಳನ್ನು ಸಂಗ್ರಹಿಸುವ ಕೆಲಸವಾಗಬೇಕು’ ಎಂದರು.

ಜಾನಪದ ಒಂದು ರಾಷ್ಟ್ರೀಯ ಸಂಪತ್ತು. ಆರ್ಥಿಕ ಸಂಪತ್ತಿಗಿಂತ ಸಂಸ್ಕೃತಿಯ ಮೌಲ್ಯಗಳು ಮುಖ್ಯ. ಆಫ್ರಿಕಾ ಬಿಟ್ಟರೆ ಜಾನಪದ ಕಲೆ ಹೆಚ್ಚು ಇರುವುದು ಭಾರತದಲ್ಲಿ ಮಾತ್ರ. ಜಾನಪದ ಕಲೆಯನ್ನು ಉಳಿಸುವುದು ರಾಷ್ಟ್ರೀಯ ಕರ್ತವ್ಯ ಎಂದು ಭಾವಿಸಬೇಕು’ ಎಂದು ಹೇಳಿದರು.

ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತು ಅಧ್ಯಕ್ಷ ಅಪ್ಪಾರಾವ ಅಕ್ಕೋಣಿ, ಕುವೆಂಪು ವಿಶ್ವವಿದ್ಯಾಲಯದ ನಿವೃತ್ತ ಪ್ರಾಧ್ಯಾಪಕ ಡಾ.ಬಸವರಾಜ ನೆಲ್ಲಿಸರ, ಕೆ.ಆರ್‌. ಲಿಂಗಪ್ಪ ಅವರ ಪುತ್ರ ಕೆ.ಎಲ್‌. ಪಂಚಾಕ್ಷರಿ, ಎಂ.ಜಿ. ಈಶ್ವರಪ್ಪ, ಶರಣ ಸಾಹಿತ್ಯ ಪರಿಷತ್ತು ಜಿಲ್ಲಾ ಘಟಕದ ಅಧ್ಯಕ್ಷ ಚಿಕ್ಕೋಳ್ ಈಶ್ವರಪ್ಪ ವೇದಿಕೆಯಲ್ಲಿ ಇದ್ದರು. ಪ್ರಧಾನ ಕಾರ್ಯದರ್ಶಿ ಮೃತ್ಯುಂಜಯ ಎಸ್‌.ಕೆಂಡದಮಠ ಸ್ವಾಗತಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.