ADVERTISEMENT

ಎಚ್.ಪಿ. ರಾಜೇಶ್ ವಿರುದ್ಧ ಹರಿಹಾಯ್ದ ಶಾಸಕ ದೇವೇಂದ್ರಪ್ಪ

​ಪ್ರಜಾವಾಣಿ ವಾರ್ತೆ
Published 17 ಆಗಸ್ಟ್ 2025, 6:31 IST
Last Updated 17 ಆಗಸ್ಟ್ 2025, 6:31 IST
ಜಗಳೂರಿನಲ್ಲಿ ಶನಿವಾರ ನಡೆದ ಜನಸಂಪರ್ಕ ಸಭೆಯಲ್ಲಿ ಶಾಸಕ ಬಿ. ದೇವೇಂದ್ರಪ್ಪ ಅವರು ಕ್ಷೇತ್ರಕ್ಕೆ ಮಂಜೂರಾಗಿರುವ ಯೋಜನೆಗಳ ದಾಖಲೆ ಪ್ರದರ್ಶಿಸಿದರು
ಜಗಳೂರಿನಲ್ಲಿ ಶನಿವಾರ ನಡೆದ ಜನಸಂಪರ್ಕ ಸಭೆಯಲ್ಲಿ ಶಾಸಕ ಬಿ. ದೇವೇಂದ್ರಪ್ಪ ಅವರು ಕ್ಷೇತ್ರಕ್ಕೆ ಮಂಜೂರಾಗಿರುವ ಯೋಜನೆಗಳ ದಾಖಲೆ ಪ್ರದರ್ಶಿಸಿದರು   

ಜಗಳೂರು: ‘ಚುನಾವಣೆಯಲ್ಲಿ ಗೆದ್ದು ಶಾಸಕನಾಗಿ ಆಯ್ಕೆಯಾಗಿರುವ ನನ್ನನ್ನು ಲಾಟರಿ ಶಾಸಕ ಎಂದು ಮೂದಲಿಸುವ ಮೂಲಕ ಮಾಜಿ ಶಾಸಕ ಎಚ್.ಪಿ. ರಾಜೇಶ್ ಅವರು ಕ್ಷೇತ್ರದ ಮತದಾರರು ಹಾಗೂ ಸಂವಿಧಾನವನ್ನು ಅವಹೇಳನ ಮಾಡಿದ್ದಾರೆ’ ಎಂದು ಶಾಸಕ ಬಿ. ದೇವೇಂದ್ರಪ್ಪ ಹೇಳಿದರು.

ಪಟ್ಟಣದ ಜನಸಂಪರ್ಕ ಕಚೇರಿಯಲ್ಲಿ ಶನಿವಾರ ಕಾಂಗ್ರೆಸ್ ಮುಖಂಡರ ಸಭೆಯ ನಂತರ ಸುದ್ದಿಗಾರರೊಂದಿಗೆ ಮಾತನಾಡಿದರು.

‘ತಾವೇ ಶಾಸಕ ಅಥವಾ ತಾವೇ ಮುಖ್ಯಮಂತ್ರಿ ಅಂದರೂ ನನ್ನ ಆಕ್ಷೇಪ ಇಲ್ಲ. ಆದರೆ ನನ್ನನ್ನು ಲಾಟರಿ ಟಿಕೆಟ್‌ಗೆ ಹೋಲಿಸಿದ್ದು ಏಕೆ? ಅವರ ವಿರುದ್ಧ ಮಾನನಷ್ಟ ಮೊಕದ್ದಮೆ ಏಕೆ ಹೂಡಬಾರದು?’ ಎಂದು ಪ್ರಶ್ನಿಸಿದರು.

ADVERTISEMENT

‘ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಬನ್ನಿ, ಇಬ್ಬರೂ ಪಕ್ಷೇತರ ಅಭ್ಯರ್ಥಿಗಳಾಗಿ ಸ್ಪರ್ಧಿಸೋಣ ಎಂದು ಸವಾಲು ಹಾಕಿದ್ದೀರಿ. ಈ ಬಾರಿಯೂ ನಿಮ್ಮ ಪಕ್ಷದ ಟಿಕೆಟ್ ಸಿಗುವುದಿಲ್ಲ ಎಂಬುದು ನಿಮಗೆ ಖಾತ್ರಿಯಾಗಿದೆ. ಆದರೆ ಐದು ಚುನಾವಣೆಗಳಲ್ಲಿ ನಾಲ್ಕು ಬಾರಿ ನಿಮ್ಮನ್ನು ಕ್ಷೇತ್ರದ ಮತದಾರರು ತಿರಸ್ಕರಿಸಿದ್ದಾರೆ. ಅರಸಿಕೆರೆ ದೇವೇಂದ್ರಪ್ಪ ಅವರು ಸಂಘಟಿಸಿದ್ದ ಕಾಂಗ್ರೆಸ್ ಪಕ್ಷದಿಂದ 2013ರಲ್ಲಿ ನೀವು ಶಾಸಕರಾಗಿ ಆರಿಸಿ ಬಂದಿರಲ್ಲವೇ’ ಎಂದು ವ್ಯಂಗ್ಯವಾಡಿದರು.

‘ಮಾಜಿ ಶಾಸಕ ಎಸ್.ವಿ. ರಾಮಚಂದ್ರಪ್ಪ ಅವರನ್ನು ಅವಮಾನಿಸಿದ್ದು ಮರೆತಿದ್ದೀರಾ. ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಗೆ ಹೋದಿರಿ. ಇಬ್ಬರು ಮಾಜಿ ಶಾಸಕರು ಸೇರಿಕೊಂಡರೂ ನಮ್ಮ ಪಕ್ಷಕ್ಕೆ 27,000 ಮುನ್ನಡೆ ಬಂತು. ಏನು ನಿಮ್ಮ ಸಾಧನೆ’ ಎಂದು ಶಾಸಕ ತಿರುಗೇಟು ನೀಡಿದರು.

ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಷಂಷೀರ್ ಅಹಮ್ಮದ್, ಎಸ್. ಮಂಜುನಾಥ್, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಕೆ.ಪಿ.ಪಾಲಯ್ಯ, ಮುಖಂಡರಾದ ಸಿ.ತಿಪ್ಪೇಸ್ವಾಮಿ, ಪ್ರಕಾಶ ರೆಡ್ಡಿ, ಸುರೇಶ್ ಗೌಡ, ಮಹೇಶ್ವರಪ್ಪ, ಶೇಖರಪ್ಪ, ಚಿತ್ತಪ್ಪ, ಶಕೀಲ್ ಅಹ್ಮದ್, ರಮೇಶ್ ರೆಡ್ಡಿ, ಶಿಲ್ಪಾ ಸಾವಿತ್ರಮ್ಮ ಇದ್ದರು.

‘₹600 ಕೊಟಿ ಅನುದಾನ’

ಎರಡು ವರ್ಷದಲ್ಲಿ ಕ್ಷೇತ್ರಕ್ಕೆ ₹600 ಕೊಟಿ ಅನುದಾನ ತಂದಿದ್ದೇನೆ. ತಾಲ್ಲೂಕಿನ 166 ಹಳ್ಳಿಗಳಿಗೆ ₹482 ಕೋಟಿ ವೆಚ್ಚದ ಬಹುಗ್ರಾಮ ಯೋಜನೆಯಡಿ ಶೇ 50ರಷ್ಟು ಕಾಮಗಾರಿ ಮುಗಿದಿದೆ. ಭದ್ರಾ ಮೇಲ್ದಂಡೆ ಯೋಜನೆಯಡಿ ತಾಲ್ಲೂಕಿನ 9 ಕೆರೆ ತುಂಬಿಸುವ ₹1025 ಕೋಟಿ ಮೊತ್ತದ ಯೋಜನೆಯಡಿ ತಾಲ್ಲೂಕಿನಲ್ಲಿ ₹312 ವೆಚ್ಚದಲ್ಲಿ ಶೇ 34ರಷ್ಟು ಕಾಮಗಾರಿ ಮುಗಿದಿವೆ ಎಂದು ಶಾಸಕ ದೇವೇಂದ್ರಪ್ಪ ವಿವರಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.