ADVERTISEMENT

ಸದಾಶಿವ ಆಯೋಗ ವರದಿ ಚರ್ಚಿಸಿ: ಶಾಸಕ ಎಸ್. ರಾಮಪ್ಪ

​ಪ್ರಜಾವಾಣಿ ವಾರ್ತೆ
Published 20 ಸೆಪ್ಟೆಂಬರ್ 2020, 3:14 IST
Last Updated 20 ಸೆಪ್ಟೆಂಬರ್ 2020, 3:14 IST
ಹರಿಹರದಲ್ಲಿ ಬಂಜಾರ ಸಮಾಜ, ಕರ್ನಾಟಕ ಮೀಸಲಾತಿ ಸಂರಕ್ಷಣಾ ಒಕ್ಕೂಟದ ಕಾರ್ಯಕರ್ತರು ಶುಕ್ರವಾರ ಶಾಸಕ ಎಸ್. ರಾಮಪ್ಪ ಅವರಿಗೆ ಮನವಿ ಸಲ್ಲಿಸಿದರು.
ಹರಿಹರದಲ್ಲಿ ಬಂಜಾರ ಸಮಾಜ, ಕರ್ನಾಟಕ ಮೀಸಲಾತಿ ಸಂರಕ್ಷಣಾ ಒಕ್ಕೂಟದ ಕಾರ್ಯಕರ್ತರು ಶುಕ್ರವಾರ ಶಾಸಕ ಎಸ್. ರಾಮಪ್ಪ ಅವರಿಗೆ ಮನವಿ ಸಲ್ಲಿಸಿದರು.   

ಹರಿಹರ:ಪರಿಶಿಷ್ಟ ಜಾತಿ ಸಮಾಜಗಳ ಮೀಸಲಾತಿ ವಿಚಾರದಲ್ಲಿ ನ್ಯಾ.ಸದಾಶಿವ ಆಯೋಗದ ವರದಿ ಅನುಷ್ಠಾನ ಪ್ರಕ್ರಿಯೆ ಅಧಿವೇಶನ ಹಾಗೂ ಸಾಮಾಜಿಕವಾಗಿಚರ್ಚೆ ನಡೆಸುವಂತೆ ಆಗ್ರಹಿಸಿ ಬಂಜಾರ ಸಮಾಜ, ಕರ್ನಾಟಕ ಮೀಸಲಾತಿ ಸಂರಕ್ಷಣಾ ಒಕ್ಕೂಟದ ಕಾರ್ಯಕರ್ತರು ಶುಕ್ರವಾರ ಶಾಸಕ ಎಸ್. ರಾಮಪ್ಪ ಅವರಿಗೆ ಮನವಿ ಸಲ್ಲಿಸಿದರು.

ಬಂಜಾರ ಸಮಾಜದ ಕಾರ್ಯಾಧ್ಯಕ್ಷ ಅರ್ಜಾನಾಯ್ಕ ಯಲವಟ್ಟಿ, ‘ಸದಾಶಿವ ಆಯೋಗದ ವರದಿ ಜಾರಿಗೊಳಿಸಿ ಅಸ್ಪೃಶ್ಯ ಸಮುದಾಯಗಳಿಗೆ ನ್ಯಾಯ ಒದಗಿಸಿಕೊಡಬೇಕೆಂಬ ಹುಸಿ ವಾದದ ಮೂಲಕ ಪರಿಶಿಷ್ಟ ಜಾತಿಗಳ ಒಗ್ಗಟ್ಟು ಮುರಿಯಲು ಕೆಲವರು ಹುನ್ನಾರ ನಡೆಸಿದ್ದಾರೆ’ ಎಂದು ಆರೋಪಿಸಿದರು.

ಪರಿಶಿಷ್ಟ ಜಾತಿ ಪಟ್ಟಿಯಿಂದ ಲಂಬಾಣಿ, ಕೊರಮ, ಕೊರಚ, ಭೋವಿ ಸಮುದಾಯಗಳನ್ನು ಕೈಬಿಡಬೇಕು ಎಂಬುದು ಅವೈಜ್ಞಾನಿಕ ಹಾಗೂ ಸಾಮಾಜಿಕ ನ್ಯಾಯದ ವಿರುದ್ಧ. ಆಯೋಗದ ವರದಿಯ ಬಗ್ಗೆ ನ್ಯಾಯಸಮ್ಮತ ಚರ್ಚೆ ನಡೆದ ನಂತರ, ಅನುಷ್ಠಾನದ ಚಿಂತನೆ ನಡೆಯಲಿ. ಇಲ್ಲವಾದಲ್ಲಿ ಉಗ್ರ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದರು.

ADVERTISEMENT

ಗೌರವಾಧ್ಯಕ್ಷ ಬಿ. ಮೋತ್ಯನಾಯ್ಕ, ‘ಪರಸ್ಪರ ದ್ವೇಷ ಹುಟ್ಟುಹಾಕುವ ಈ ಆಯೋಗದ ವರದಿ ಚರ್ಚೆಯಾಗದೇ ಶಿಫಾರಸು ಆಗಬಾರದು. ಪರಿಶಿಷ್ಟ ಜಾತಿಯ 101 ಸಮುದಾಯಗಳಿಗೆ ಈ ವರದಿಯ ದೃಢೀಕೃತ ಪ್ರತಿ ತಲುಪಬೇಕು. ಆಕ್ಷೇಪಣೆ, ತಕರಾರುಗಳಿಗೆ ಕಾಲಾವಕಾಶ ನೀಡಬೇಕು’ ಎಂದು ಒತ್ತಾಯಿಸಿದರು.

ಸಂಘದ ಖಜಾಂಚಿ ಶಿವಾನಂದ್ ಎಸ್. ಚೌಹಾಣ್, ಪ್ರಧಾನ ಕಾರ್ಯದರ್ಶಿ ಎಚ್‍. ಮಂಜನಾಯ್ಕ, ಪದಾಧಿಕಾರಿಗಳಾದ ಲಕ್ಷ್ಮಣ್ ನಾಯ್ಕ, ಅಣ್ಣಪ್ಪ ಸ್ವಾಮಿ, ರಾಜನಾಯ್ಕ, ಬಾಬು ರಾಠೋಡ್, ರಘುನಾಯ್ಕ, ರವಿನಾಯ್ಕ, ಹರೀಶ್ ನಾಯ್ಕ ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.