ADVERTISEMENT

ಖಾತೆ ಹಂಚಿಕೆಯಲ್ಲಿ ಅಸಮಾಧಾನ ನಿಜ: ಈಶ್ವರಪ್ಪ

ಹೊನ್ನಾಳಿಯಲ್ಲಿ ಸಂಗೊಳ್ಳಿ ರಾಯಣ್ಣನ ಪ್ರತಿಮೆಗೆ ಮಾಲಾರ್ಪಣೆ ಮಾಡಿದ ಸಚಿವ ಈಶ್ವರಪ್ಪ

​ಪ್ರಜಾವಾಣಿ ವಾರ್ತೆ
Published 9 ಆಗಸ್ಟ್ 2021, 3:59 IST
Last Updated 9 ಆಗಸ್ಟ್ 2021, 3:59 IST
ಹೊನ್ನಾಳಿಯ ಸಂಗೊಳ್ಳಿ ರಾಯಣ್ಣ ವೃತ್ತದಲ್ಲಿ ರಾಯಣ್ಣನ ಪ್ರತಿಮೆಗೆ ಮಾಲಾರ್ಪಣೆ ಮಾಡಿದ ಸಚಿವ ಕೆ.ಎಸ್.ಈಶ್ವರಪ್ಪ ಅವರಿಗೆ ಕನಕ ಮಹಿಳಾ ವೇದಿಕೆಯ ಮುಖಂಡರು ಮಾಲಾರ್ಪಣೆ ಮಾಡಿದ ಸಂದರ್ಭ
ಹೊನ್ನಾಳಿಯ ಸಂಗೊಳ್ಳಿ ರಾಯಣ್ಣ ವೃತ್ತದಲ್ಲಿ ರಾಯಣ್ಣನ ಪ್ರತಿಮೆಗೆ ಮಾಲಾರ್ಪಣೆ ಮಾಡಿದ ಸಚಿವ ಕೆ.ಎಸ್.ಈಶ್ವರಪ್ಪ ಅವರಿಗೆ ಕನಕ ಮಹಿಳಾ ವೇದಿಕೆಯ ಮುಖಂಡರು ಮಾಲಾರ್ಪಣೆ ಮಾಡಿದ ಸಂದರ್ಭ   

ಹೊನ್ನಾಳಿ: ಖಾತೆ ಹಂಚಿಕೆಯಲ್ಲಿ ಕೆಲವರಿಗೆ ಅಸಮಾಧಾನ ಇರುವುದು ನಿಜ. ಮುಖ್ಯಮಂತ್ರಿ ಹಾಗೂ ಬಿಜೆಪಿಯ ರಾಜ್ಯ ಘಟಕದ ಅಧ್ಯಕ್ಷರು ಕುಳಿತು ಸರಿ ಮಾಡುತ್ತಾರೆ. ಅದು ಅಂತಹ ದೊಡ್ಡ ಸಮಸ್ಯೆ ಏನೂ ಅಲ್ಲ ಎಂದು ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್. ಈಶ್ವರಪ್ಪ ಹೇಳಿದರು.

ಹರಿಹರದಿಂದ ಶಿವಮೊಗ್ಗಕ್ಕೆ ಹೋಗುವ ಮಾರ್ಗ ಮಧ್ಯೆ ಹೊನ್ನಾಳಿ ನಗರದಲ್ಲಿರುವ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣನ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.

ತಳಮಟ್ಟದಿಂದ ಪಕ್ಷ ಕಟ್ಟಿ ಬೆಳೆಸಿದ ಶಾಸಕರಿಗೆ ಮುಖ್ಯಮಂತ್ರಿ ಹುದ್ದೆ ಹಂಚಿಕೆ ಮಾಡಬಹುದಿತ್ತಲ್ಲ ಎಂಬ ಪ್ರಶ್ನೆಗೆ ಉತ್ತರಿಸಿದ ಸಚಿವರು, ‘ನಮ್ಮ ಪಕ್ಷದಲ್ಲಿ ಮೂಲನಿವಾಸಿಗಳು, ಸ್ವಪಕ್ಷೀಯರು ಎಂಬ ಭೇದವಿಲ್ಲ. ಎಲ್ಲರೂ ಹಾಲು–ಜೇನಿನಂತೆ ಇದ್ದೇವೆ’ ಎಂದ ಅವರು, ‘ಪಕ್ಷದ ವರಿಷ್ಠರ ತೀರ್ಮಾನಕ್ಕೆ ನಾವೆಲ್ಲರೂ ತಲೆಬಾಗುತ್ತೇವೆ’ ಎಂದರು.

ADVERTISEMENT

‘ಪಕ್ಷದ ಕೆಲ ಹಿರಿಯರಿಗೆ ಸಚಿವ ಸ್ಥಾನ ನೀಡಿಲ್ಲ ಏಕೆ ಎಂಬ ಪ್ರಶ್ನೆಗೆ,‘ಕಾಂಗ್ರೆಸ್ ಹಾಗೂ ಜೆಡಿಎಸ್‍ನಿಂದ 17 ಶಾಸಕರು ನಮ್ಮ ಪಕ್ಷಕ್ಕೆ ಬಂದಿದ್ದರಿಂದ ನಾವು ಅಧಿಕಾರ ಬರಲು ಸಾಧ್ಯವಾಯಿತು. ಆದ್ದರಿಂದ ಅವರಿಗೂ ಸಚಿವ ಸ್ಥಾನ ಕೊಡಬೇಕಲ್ಲ’ ಎಂದು ಹೇಳಿದರು.

‘ರಾಜ್ಯದಲ್ಲಿ ಇನ್ನೆಂದಿಗೂ ಕಾಂಗ್ರೆಸ್ ಅಧಿಕಾರಕ್ಕೆ ಬರಲ್ಲ. ಅವರು ಹಗಲು ಕನಸು ಕಾಣುತ್ತಿದ್ದಾರೆ. ನಾವು ಪೂರ್ಣಾವಧಿ ಅಧಿಕಾರ ನಡೆಸುತ್ತೇವೆ. ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ನಮ್ಮ ಸರ್ಕಾರದ ವಿರುದ್ಧ ಅನಗತ್ಯ ಟೀಕೆ ಮಾಡುವುದನ್ನು ನಿಲ್ಲಿಸಬೇಕು’ ಎಂದು ಕಾಂಗ್ರೆಸ್ ಮುಖಂಡರಿಗೆ ತಿರುಗೇಟು ನೀಡಿದರು.

ಶಾಸಕ ಎಂ.ಪಿ. ರೇಣುಕಾಚಾರ್ಯ ಅವರಿಗೆ ಸಚಿವ ಸ್ಥಾನ ಸಿಗಬಹುದೇ ಎಂಬ ಪ್ರಶ್ನೆಗೆ, ‘ಗೊತ್ತಿಲ್ಲ’ ಎಂದು ಉತ್ತರಿಸಿದರು.

ಬಿಜೆಪಿ ತಾಲ್ಲೂಕು ಘಟಕದ ಅಧ್ಯಕ್ಷ ಜೆ.ಕೆ. ಸುರೇಶ್, ಜಿಲ್ಲಾ ಬಿಜೆಪಿ ಉಪಾಧ್ಯಕ್ಷ ನೆಲಹೊನ್ನೆ ಮಂಜುನಾಥ್, ಪುರಸಭಾಧ್ಯಕ್ಷ ಕೆ.ವಿ. ಶ್ರೀಧರ್, ಉಪಾಧ್ಯಕ್ಷೆ ರಂಜಿತಾ ವಡ್ಡಿಚನ್ನಪ್ಪ, ಪುರಸಭಾ ಸದಸ್ಯರಾದ ರಂಗನಾಥ್, ಬಾಬು ಹೋಬಳದರ್, ಬಿಜೆಪಿ ಮುಖಂಡರಾದ ಸುರೇಶ್ ಬಿಸಾಟಿ, ಆರ್‍ಎಸ್‍ಎಸ್ ಮುಖಂಡರಾದ ಎಚ್.ಎಂ. ಅರುಣ್‍ಕುಮಾರ್, ಮುಖಂಡರಾದ ಎಂ.ಆರ್. ಮಹೇಶ್, ಬಿಂಬಾ ಮಂಜುನಾಥ್, ತಾಲ್ಲೂಕು ಕನಕ ಮಹಿಳಾ ವೇದಿಕೆಯ ಪಂಕಜಾ ಅರುಣ್‍ಕುಮಾರ್, ಸೌಮ್ಯ, ಎಸ್.ಆರ್. ಹೇಮಾ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.