ADVERTISEMENT

ದಾವಣಗೆರೆ: ಪಟಾಕಿ ವಹಿವಾಟು ಹೆಚ್ಚುವ ನಿರೀಕ್ಷೆ

ಡಿ.ಕೆ.ಬಸವರಾಜು
Published 4 ನವೆಂಬರ್ 2021, 6:16 IST
Last Updated 4 ನವೆಂಬರ್ 2021, 6:16 IST
ದಾವಣಗೆರೆಯ ಹೈಸ್ಕೂಲ್ ಮೈದಾನದಲ್ಲಿ ಪಟಾಕಿ ಖರೀದಿಯಲ್ಲಿ ತೊಡಗಿರುವುದು. (ಸಂಗ್ರಹ ಚಿತ್ರ)
ದಾವಣಗೆರೆಯ ಹೈಸ್ಕೂಲ್ ಮೈದಾನದಲ್ಲಿ ಪಟಾಕಿ ಖರೀದಿಯಲ್ಲಿ ತೊಡಗಿರುವುದು. (ಸಂಗ್ರಹ ಚಿತ್ರ)   

ದಾವಣಗೆರೆ: ಕೊರೊನಾ ಕಾರಣದಿಂದ ವಿಧಿಸಿದ್ದ ಲಾಕ್‌ಡೌನ್ ತೆರವುಗೊಂಡು ಪರಿಸ್ಥಿತಿ ಸಹಜಸ್ಥಿತಿಗೆ ಬಂದಿದೆ. ಈ ಬಾರಿ ಹಬ್ಬವೂ ಕಳೆಗಟ್ಟುವ ನಿರೀಕ್ಷೆ ಇದೆ. ಆದರೆ ಪಟಾಕಿ ವಹಿವಾಟು ಹೆಚ್ಚಾಗುವ ನಿರೀಕ್ಷೆ ಇದೆ.

‘ಜಿಲ್ಲೆಯಲ್ಲಿ ಪಟಾಕಿ ಮಾರಾಟಕ್ಕೆ ಅನುಮತಿ ಕೋರಿ ಈಗಾಗಲೇ 105 ಅರ್ಜಿಗಳು ಬಂದಿವೆ. ಅವುಗಳಲ್ಲಿ ದಾವಣಗೆರೆ ನಗರದಲ್ಲಿ 63 ಮಳಿಗೆಗಳಿಗೆ ಲೈಸೆನ್ಸ್ ನೀಡಲಾಗಿದೆ.ಈ ಬಾರಿ ₹ 50 ಲಕ್ಷದವರೆಗೂ ವಹಿವಾಟು ನಿರೀಕ್ಷೆ ನಡೆಯಬಹುದು ಎಂಬುದು ವ್ಯಾಪಾರಿಗಳ ನಿರೀಕ್ಷೆ. ಕಳೆದ ಬಾರಿ 80 ಮಳಿಗೆಗಳಲ್ಲಿ ₹ 35 ಲಕ್ಷದಿಂದ ₹40 ಲಕ್ಷದವರೆಗೂ ವಹಿವಾಟು ನಡೆದಿತ್ತು.

ಈ ಬಾರಿ ನವೆಂಬರ್ 6ರವರೆಗೆ ಹಸಿರು ಪಟಾಕಿಗಳ ಮಾರಾಟಕ್ಕೆ ಮಾತ್ರ ಅನುಮತಿ ನೀಡಿದ್ದು, ಸಂಬಂಧಪಟ್ಟ ಇಲಾಖೆ, ಪ್ರಾಧಿಕಾರಗಳಿಂದ ಅಧಿಕೃತ ಪರವಾನಗಿಯನ್ನು ಪಡೆದ ಮಾರಾಟಗಾರರು ಮಾತ್ರ ಪಟಾಕಿ ಮಾರಾಟ ಮಾಡಬೇಕು, ಅನಧಿಕೃತವಾಗಿ ಮಾರಾಟ ಮಾಡಿದರೆ ಪಟಾಕಿಗಳನ್ನು ಜಪ್ತಿ ಮಾಡಿ, ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿಗಳು ಎಚ್ಚರಿಕೆ ನೀಡಿದ್ದಾರೆ. ಆದರೆ ಕೆಲವರು ನಗರದ ಮಧ್ಯಭಾಗಗಳಲ್ಲೂ ಪಟಾಕಿ ಮಾರಾಟ ಮಾಡುತ್ತಿದ್ದಾರೆ ಎಂಬುದು ವ್ಯಾಪಾರಿಗಳ ಆರೋಪ.

ADVERTISEMENT

ನಗರದ ಹೈಸ್ಕೂಲ್ ಮೈದಾನದಲ್ಲಿ ಪಟಾಕಿ ಮಳಿಗೆಗಳನ್ನು ಆರಂಭಿಸಿದ್ದು, ಒಂದು ಮಳಿಗೆಯಿಂದ ಮತ್ತೊಂದು ಮಳಿಗೆಗೆ ಕನಿಷ್ಠ 6 ಮೀಟರ್ ಅಂತರವಿರಬೇಕು. ಪಟಾಕಿ ಸಿಡಿಮದ್ದುಗಳನ್ನು ಮಾರಾಟ ಮಾಡುವ ಮಳಿಗೆಗಳ ಸುತ್ತಮುತ್ತ ನಿತ್ಯ ಸ್ಯಾನಿಟೈಸ್ ಮಾಡಬೇಕು. ಜನ ಅಂತರ ಕಾಪಾಡಿಕೊಳ್ಳಬೇಕು. ವ್ಯಾಪಾರಸ್ಥರು ಹಾಗೂ ಗ್ರಾಹಕರು ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು. ಪಟಾಕಿ ಮಳಿಗೆ ಮಾಲೀಕರು ಹಾಗೂ ಕೆಲಸ ಮಾಡುವವರು ಆರ್.ಟಿ.ಪಿ.ಸಿ.ಆರ್ ಪರೀಕ್ಷೆ ಮಾಡಿಸಿ ಕನಿಷ್ಠ 72 ಗಂಟೆಯೊಳಗಿನ ಕೋವಿಡ್‌ ನೆಗೆಟಿವ್‌ ವರದಿಯನ್ನು ಕಡ್ಡಾಯವಾಗಿ ನೀಡಬೇಕು ಎಂದು ಸೂಚನೆ ನೀಡಿದ್ದು,‘ನಗರದಲ್ಲಿ ವ್ಯಾಪಾರಿಗಳು ಹಾಗೂ ಕೆಲಸ ಮಾಡುವವರು ಸೇರಿ 100 ಮಂದಿ ಇದ್ದು, ರೆಡ್‌ಕ್ರಾಸ್‌ ಸಂಸ್ಥೆಯಲ್ಲಿ ಪರೀಕ್ಷೆ ಮಾಡಿಸಲಾಗಿದೆ’ ಎನ್ನುತ್ತಾರೆ ಪಟಾಕಿ ಮಾರಾಟಗಾರರು ಹಾಗೂ ಬಳಕೆದಾರರ ಸಂಘದ ಅಧ್ಯಕ್ಷ ಸಿದ್ದಣ್ಣ.

ಗೋದಾಮು ಮಳಿಗೆ ಜಾಗ ನೀಡಿ:‘ಪಟಾಕಿ ಮಾರಾಟದ ಬಳಿಕ ಉಳಿದ ಪಟಾಕಿಗಳನ್ನು ಸಂಗ್ರಹಿಸಲು ಗೋದಾಮಿಗೆ ಜಾಗ ನೀಡಬೇಕು ಎಂದು 10 ವರ್ಷಗಳಿಂದ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸುತ್ತಿದ್ದೇವೆ. ಆದರೂ ನಮ್ಮ ಬೇಡಿಕೆಗೆ ಸ್ಪಂದಿಸಿಲ್ಲ’ ಎಂದು ಸಿದ್ದಣ್ಣ ಅಸಮಾಧಾನ ವ್ಯಕ್ತಪಡಿಸುತ್ತಾರೆ.

ಸಮಸ್ಯೆಗೆ ಸ್ಪಂದಿಸದಿದ್ದರೆ ಜಿಲ್ಲಾ ಉಸ್ತುವಾರಿ ಸಚಿವರಿಗೆ ಮನವಿ ನೀಡುತ್ತೇವೆ ಎಂದು ಹೇಳುತ್ತಾರೆ.

ಅನಧಿಕೃತವಾಗಿ ಪಟಾಕಿ ಮಾರಾಟ:‘ನಗರದಲ್ಲಿ ಕೆಲವರು ಅನಧಿಕೃತವಾಗಿ ಪಟಾಕಿಗಳನ್ನು ಮಾರಾಟ ಮಾಡುತ್ತಿದ್ದಾರೆ. ಮೂವರು ಹೋಲ್‌ಸೇಲ್ ವ್ಯಾಪಾರ ಮಾಡುತ್ತಿದ್ದಾರೆ. ಮಂಡಿಪೇಟೆ, ಕುಂದವಾಡವಲ್ಲದೇ, ನಗರದ ಬುಕ್‌ ಡಿಪೊ ಒಂದರಲ್ಲಿ ಪಟಾಕಿ ಮಾರಾಟ ನಡೆಯುತ್ತಿದೆ. ಜಿಲ್ಲಾಡಳಿತ ಈ ಬಗ್ಗೆ ಸೂಕ್ತ ಕ್ರಮ ತೆಗೆದುಕೊಳ್ಳುತ್ತಿಲ್ಲ‘ ಎಂದು ಸಿದ್ದಣ್ಣ ಆರೋಪಿಸುತ್ತಾರೆ.

‘ಸೂಕ್ತ ಕ್ರಮಕ್ಕೆ ಆಗ್ರಹಿಸಿ ನಾವು ದೆಹಲಿಯವರೆಗೂ ಮನವಿ ಮಾಡಿದ್ದೇವೆ. ಅವರು ಜಿಲ್ಲಾಧಿಕಾರಿಗೆ ಪೂರ್ತಿ ಅಧಿಕಾರ ನೀಡಿದ್ದೇವೆ ಎಂದು ಹೇಳುತ್ತಾರೆ. ಆದರೆ ಜಿಲ್ಲಾಧಿಕಾರಿಗಳು ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ’ ಎಂದು ಅಸಮಾಧಾನ ವ್ಯಕ್ತಪಡಿಸುತ್ತಾರೆ.

***

ಕೊರೊನಾ ಕಾರಣದಿಂದಾಗಿ ಜನರ ಬಳಿ ಹಣ ಇಲ್ಲ. ಆದರೂ ಕಳೆದ ಬಾರಿಗಿಂತ ಈ ಬಾರಿ ವ್ಯಾಪಾರ ಹೆಚ್ಚಾಗುವ ನಿರೀಕ್ಷೆ ಇದೆ. ಅನಧಿಕೃತ ವ್ಯಾಪಾರಿಗಳ ಮೇಲೆ ಜಿಲ್ಲಾಡಳಿತ ನಿಗಾವಹಿಸಿ ಕ್ರಮ ಕೈಗೊಳ್ಳಬೇಕು.
-ಡಿ.ಎಸ್‌. ಸಿದ್ದಣ್ಣ, ಪಟಾಕಿ ವರ್ತಕರ ಮತ್ತು ಬಳಕೆದಾರರ ಸಂಘದ ಅಧ್ಯಕ್ಷ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.