ADVERTISEMENT

ಕಿವಿಗೆ ಆಪರೇಷನ್ ಮಾಡಲು ಹೋಗಿ ಕಾಲಿಗೆ ಬರೆ ಹಾಕಿದರು: ಮಹಿಳೆ ಆರೋಪ

ಸಿ.ಜಿ.ಆಸ್ಪತ್ರೆಯಲ್ಲಿ ವೈದ್ಯರ ಎಡವಟ್ಟು: ಆರೋಪ

​ಪ್ರಜಾವಾಣಿ ವಾರ್ತೆ
Published 21 ಆಗಸ್ಟ್ 2019, 7:24 IST
Last Updated 21 ಆಗಸ್ಟ್ 2019, 7:24 IST
   

ದಾವಣಗೆರೆ: ಬಲಕಿವಿ ತೊಂದರೆಯಿಂದ ಇಲ್ಲಿನ ಚಿಗಟೇರಿ ಆಸ್ಪತ್ರೆಗೆ ದಾಖಲಾದ ಬಳ್ಳಾರಿ ಜಿಲ್ಲೆಯ ಹೊಸಪೇಟೆ ತಾಲ್ಲೂಕಿನ ಮರಿಯಮ್ಮನಹಳ್ಳಿ ಗ್ರಾಮದ ಮಹಿಳೆಯೊಬ್ಬರಿಗೆ ಶಸ್ತ್ರಚಿಕಿತ್ಸೆ ವೇಳೆ ಕಾಲಿಗೆ ಕರೆಂಟ್ ಶಾಕ್ ಆಗಿದ್ದು, ತೊಂದರೆ ಅನುಭವಿಸುವಂತಾಗಿದೆ.

‘ನನಗೆ ಬಲಕಿವಿ ತೊಂದರೆ ಇದ್ದು, ಚಿಕಿತ್ಸೆಗಾಗಿ ಕಳೆದ ತಿಂಗಳು ಆಸ್ಪತ್ರೆಗೆ ಹೋಗಿದ್ದೆ. ಅಲ್ಲಿನ ಸಿಜಿಬಿ ಯೂನಿಟ್ ಚೀಫ್‌ ಡಾ.ಪ್ರಕಾಶ್ ಎನ್‌.ಎಸ್‌ ಅವರು ಅಡ್ಮಿಟ್ ಆಗಲು ಹೇಳಿದರು. ಅದರಂತೆ ನಾನು ದಾಖಲಾದೆ’ ಎಂದು ತೊಂದರೆಗೊಳಗಾದ ಲಕ್ಷ್ಮಿದೇವಿ ಎಂಬವರು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

‘ಮಾರನೆಯ ದಿನ ನನ್ನನ್ನು ಕಿವಿಯ ವಿಭಾಗದ ಶಸ್ತ್ರಚಿಕಿತ್ಸೆಗೆ ಕರೆದೋಯ್ದರು. ನನಗೆ ಜಾಕೆಟ್, ಒಂದು ಸೀರೆ ಹಾಕಿಸಿ ನನ್ನ ಕೈಗೆ ಇಂಜಕ್ಷನ್ ಹಾಕಿದರು. ಆಗ ನನಗೆ ಎಚ್ಚರ ತಪ್ಪಿತು. ಎಚ್ಚರವಾದ ತಕ್ಷಣ ನನಗೆ ಕಾಲನ್ನು ಮೇಲೆ ಎತ್ತಲು ಆಗಲಿಲ್ಲ. ಈ ಬಗ್ಗೆ ವೈದ್ಯರಲ್ಲಿ ವಿಚಾರಿಸಿದಾಗ ಆಗ ಅವರು ‘ಕಾಲಿಗೆ ಕರೆಂಟ್ ಶಾಕ್ ಆಗಿದೆ. ಏನು ಆಗುವುದಿಲ್ಲ ಎಂದು ಹೇಳಿದರು’ ಎಂದು ವಿವರಿಸಿದರು.

ADVERTISEMENT

‘ಈಗ ನನ್ನ ಎರಡು ಕಾಲುಗಳ ಹಿಂದೆ ಮೀನಖಂಡ ಸುಟ್ಟಿದ್ದು, ದೊಡ್ಡ ನೀರುಗುಳ್ಳೆ ಬಂದಿದೆ. ರಾಡಿಯಾಗಿದೆ. ಓಡಾಡಲು ಬರಲಿಲ್ಲ. ನಾನು ಏಳು ದಿವಸ ಆಸ್ಪತ್ರೆಯಲ್ಲಿದ್ದು, ನಂತರ ಹೋಗಿ ಎಂದು ಕಳುಹಿಸಿದರು. ನಾನು ಸುಟ್ಟಿದೆ ಎಂದು ಕೇಳಿದಾಗ ‘ಮಿಷನ್ ತೊಂದರೆಯಿಂದ ಈ ರೀತಿ ಆಗಿದೆ. ಯಾರಿಗೆ ಬೇಕಾದರೂ ದೂರು ಕೊಡಬಹುದು’ ಎಂದು ನಿರ್ಲಕ್ಷ್ಯದಿಂದ ಉತ್ತರ ನೀಡಿದರು’ ಎಂದರು.

‘ವೈದ್ಯರ ನಿರ್ಲಕ್ಷ್ಯದಿಂದ ನನ್ನ ಕಾಲುಗಳು ಸುಟ್ಟಿದ್ದು, ನಡೆಯಲು ಆಗುತ್ತಿಲ್ಲ. ನನ್ನ ಪತಿ ಆಟೊ ಡ್ರೈವರ್ ಆಗಿದ್ದು, ನಾನು ಅಂಗನವಾಡಿಯಲ್ಲಿ ಕೆಲಸ ಮಾಡುತ್ತಿದ್ದೇನೆ. ಮೂವರು ಮಕ್ಕಳನ್ನು ಸಾಕುವುದು ಕಷ್ಟವಾಗಿದೆ. ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ನಾವು ಬಡವರಾದ್ದರಿಂದ ಅಷ್ಟು ಹಣವನ್ನು ಭರಿಸಲು ಆಗುತ್ತಿಲ್ಲ. ಇದಕ್ಕೆ ಕಾರಣರಾದ ಡಾ.ಪ್ರಕಾಶ್‌, ಆರ್‌ಎಂಒ, ಡಿಎಚ್‌ಒ, ಸಿಜಿಎಚ್ ಅವರ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು. ನಮಗೆ ಪರಿಹಾರ ನೀಡುವ ನ್ಯಾಯ ಒದಗಿಸಬೇಕು’ ಎಂದು ಆಗ್ರಹಿಸಿದರು.

ಲಕ್ಷ್ಮಿದೇವಿ ಅವರ ತಾಯಿ ನೀಲಮ್ಮ, ಪತಿ ರಾಘವೇಂದ್ರ ಪತ್ರಿಕಾಗೋಷ್ಠಿಯಲ್ಲಿ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.