ADVERTISEMENT

ಅಂಗಾಂಗ ದಾನ ಮಾಡಿ ಹೃದಯ ಶ್ರೀಮಂತಿಕೆ ತೋರಿ

ಎಂ.ಎಸ್‌. ರಾಮಯ್ಯ ನಾರಾಯಣ ಹಾರ್ಟ್‌ ಸೆಂಟರ್‌ನ ಡಾ. ನಾಗಮಲ್ಲೇಶ್‌

​ಪ್ರಜಾವಾಣಿ ವಾರ್ತೆ
Published 11 ಜೂನ್ 2019, 10:19 IST
Last Updated 11 ಜೂನ್ 2019, 10:19 IST

ದಾವಣಗೆರೆ: ‘ಬ್ರೇನ್‌ ಡೆಡ್‌’ ಆಗಿರುವ ಒಬ್ಬ ರೋಗಿಯ ಅಂಗಾಂಗಗಳನ್ನು ದಾನ ಮಾಡಿದರೆ ಏಳು–ಎಂಟು ಜನರಿಗೆ ಹೊಸ ಬದುಕು ಸಿಗಲಿದೆ. ಹೀಗಾಗಿ ರೋಗಿಯ ಅಂಗಾಂಗಗಳನ್ನು ದಾನ ಮಾಡುವ ಮೂಲಕ ಸಂಬಂಧಿಕರು ಹೃದಯ ಶ್ರೀಮಂತಿಕೆ ತೋರಬೇಕು ಎಂದು ಬೆಂಗಳೂರಿನ ಎಂ.ಎಸ್‌. ರಾಮಯ್ಯ ನಾರಾಯಣ ಹಾರ್ಟ್‌ ಸೆಂಟರ್‌ನ ಹೃದಯ ಕಸಿ ತಜ್ಞ ಡಾ. ನಾಗಮಲ್ಲೇಶ್‌ ಯು.ಎಂ. ಮನವಿ ಮಾಡಿದರು.

ದಾವಣಗೆರೆಯ ಎಸ್‌ಎಸ್‌ ನಾರಾಯಣ ಹಾರ್ಟ್‌ ಸೆಂಟರ್‌ನ ಶಿಫಾರಸಿನ ಮೇರೆಗೆ ಬೆಂಗಳೂರಿನಲ್ಲಿ ತಮ್ಮ ಆಸ್ಪತ್ರೆಯಲ್ಲಿ ಕಳೆದ ವರ್ಷದ ಜೂನ್‌ನಲ್ಲಿ ಹೃದಯ ಕಸಿ ಮಾಡಿಸಿಕೊಂಡ ಬಳಿಕ ತಾಲ್ಲೂಕಿನ ಕುಕ್ಕವಾಡ ಗ್ರಾಮದ ಕೃಷಿಕ ಕೆ.ಎಚ್‌. ಪ್ರಕಾಶ್‌ ಅವರು ಯಶಸ್ವಿಯಾಗಿ ಬದುಕು ಸಾಗಿಸುತ್ತಿರುವ ಯಶೋಗಾಥೆಯ ಬಗ್ಗೆ ಅವರು ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ಹಂಚಿಕೊಂಡರು.

‘ಅಂಗಾಂಗ ಕಸಿ ಶಸ್ತ್ರಚಿಕಿತ್ಸೆಗಳ ಪೈಕಿ ಹೃದಯ ಕಸಿ ಮಾಡುವುದರಿಂದ ರೋಗಿಯ ಜೀವಿತಾವಧಿಯು ದೀರ್ಘಕಾಲಿಕವಾಗಲಿದೆ. ಐದಾರು ಕೋಟಿ ಜನಸಂಖ್ಯೆ ಇರುವ ಯುನೈಟೆಡ್‌ ಕಿಂಗ್‌ಡಮ್‌ನಲ್ಲಿ (ಯು.ಕೆ) ವರ್ಷಕ್ಕೆ ಸರಾಸರಿ 350 ಅಂಗಾಂಗಗಳ ದಾನ ಮಾಡಲಾಗುತ್ತಿದೆ. ಆದರೆ, ಅಷ್ಟೇ ಜನಸಂಖ್ಯೆ ಹೊಂದಿರುವ ಕರ್ನಾಟಕದಲ್ಲಿ ಮಾತ್ರ ವರ್ಷಕ್ಕೆ ಸರಾಸರಿ 90 ಅಂಗಾಂಗಗಳ ದಾನ ಮಾಡಲಾಗುತ್ತಿದೆ. ಅಂಗಾಂಗಗಳ ದಾನ ಮಾಡುವ ಸಂಖ್ಯೆ ಹೆಚ್ಚಿದರೆ ಸಹಜವಾಗಿಯೇ ಹೃದಯ ಕಸಿ ಶಸ್ತ್ರಚಿಕಿತ್ಸೆಯ ವೆಚ್ಚವೂ ಕಡಿಮೆಯಾಗಲಿದೆ’ ಎಂದು ಅಭಿಪ್ರಾಯಪಟ್ಟರು.

ADVERTISEMENT

‘ಸ್ಪೇನ್‌ನಲ್ಲಿ ರೋಗಿಯ ಬ್ರೈನ್‌ ಡೆಡ್‌ ಆದರೆ ತಕ್ಷಣವೇ ಆಗನ ಅಂಗಾಂಗಳು ಸರ್ಕಾರ ಆಸ್ತಿ ಎನಿಸಿಕೊಳ್ಳುವಂತಹ ಕಾಯ್ದೆ ಜಾರಿಯಲ್ಲಿದೆ. ಇಂಥ ಕಾಯ್ದೆ ನಮ್ಮಲ್ಲೂ ಜಾರಿಗೆ ಬರುವುದು ಒಳ್ಳೆಯದು. ರೋಗಿಯ ದೇಹದ ಜೊತೆಗೆ ಅಂಗಾಂಗಳು ಮಣ್ಣಾಗುವ ಬದಲು ಅವುಗಳನ್ನು ದಾನ ಮಾಡಿ ಬೇರೆ ರೋಗಿಗಳಿಗೆ ಬದುಕು ನೀಡುವ ಬಗ್ಗೆ ಹೆಚ್ಚು ಜಾಗೃತಿ ಮೂಡಿಸಬೇಕಾಗಿದೆ’ ಎಂದು ಡಾ. ನಾಗಮಲ್ಲೇಶ್‌ ಪ್ರತಿಪಾದಿಸಿದರು.

‘ಪ್ರಕಾಶ್‌ ಅವರಿಗೆ ಕಳೆದ ವರ್ಷ ಹೃದಯ ತೊಂದರೆ ಕಾಣಿಸಿಕೊಂಡಾಗ ಬೈಪಾಸ್‌ ಸರ್ಜರಿ ಮಾಡಲಾಗಿತ್ತು. ಶಸ್ತ್ರ ಚಿಕಿತ್ಸೆಯ ಬಳಿಕ ಉಸಿರಾಟದ ತೊಂದರೆಯಿಂದ ಅವರು ಒಂದು ತಿಂಗಳಲ್ಲಿ ಎರಡು ಬಾರಿ ಆಸ್ಪತ್ರೆಗೆ ದಾಖಲಾಗುವಂತಾಯಿತು. ನಂತರ ಎಸ್‌.ಎಸ್‌. ನಾರಾಯಣ ಹಾರ್ಟ್‌ ಸೆಂಟರ್‌ನ ಡಾ. ಆರ್‌.ಎಸ್‌. ಧನಂಜಯ್‌ ಅವರು ಪ್ರಕಾಶ್‌ ಅವರನ್ನು ನಮ್ಮ ಆಸ್ಪತ್ರೆಗೆ ಕಳುಹಿಸಿಕೊಟ್ಟರು. ತಪಾಸಣೆ ನಡೆಸಿದ ಬಳಿಕ ತುರ್ತಾಗಿ ಹೃದಯ ಕಸಿ ಮಾಡಬೇಕಾಗಿರುವುದನ್ನು ಮನಗಂಡೆವು. ಹೃದಯ ಕಸಿ ಮಾಡಿದ ಬಳಿಕ ಇದೀಗ ಅವರು ಸಹಜ ಜೀವನ ನಡೆಸುತ್ತಿದ್ದಾರೆ. ಶಸ್ತ್ರಚಿಕಿತ್ಸೆಗೆ ಸುಮಾರು ₹ 15 ಲಕ್ಷ ವೆಚ್ಚವಾಗಿದೆ’ ಎಂದು ಮಾಹಿತಿ ನೀಡಿದರು.

‘ಹೃದಯ ಕಸಿ ಮಾಡುವ ವೇಳೆ ದಾನಿಯ ಹಾಗೂ ರೋಗಿಯ ವಯಸ್ಸಿನ ಜೊತೆಗೆ ಇಬ್ಬರ ತೂಕವನ್ನೂ ಪ್ರಮುಖವಾಗಿ ಪರಿಗಣನೆಗೆ ತೆಗೆದುಕೊಳ್ಳುತ್ತೇವೆ. ಇಬ್ಬರ ತೂಕದ ನಡುವಿನ ವ್ಯತ್ಯಾಸ ಶೇ 20ಕ್ಕಿಂತಲೂ ಹೆಚ್ಚು ಅಥವಾ ಕಡಿಮೆ ಇರಬಾರದು. ಸಣ್ಣ ಮಕ್ಕಳಿಗೂ ಅಗತ್ಯ ಬಿದ್ದರೆ ಹೃದಯ ಕಸಿ ಮಾಡಲು ಸಾಧ್ಯವಿದೆ. ಆದರೆ, ಮಕ್ಕಳ ಹೃದಯಕ್ಕೆ ಹೊಂದಿಕೊಳ್ಳುವಂತಹ ಹೃದಯ ದಾನಿಗಳ ಸಂಖ್ಯೆ ತೀರಾ ಕಡಿಮೆ ಇದೆ. 45 ವರ್ಷದೊಳಗಿನ ದಾನಿಗಳ ಹೃದಯವನ್ನೇ ಕಸಿ ಮಾಡಲು ಆದ್ಯತೆ ನೀಡುತ್ತೇವೆ’ ಎಂದು ಡಾ. ನಾಗಮಲ್ಲೇಶ್‌ ವಿವರಿಸಿದರು.

ಎಸ್‌.ಎಸ್‌. ನಾರಾಯಣ ಹಾರ್ಟ್‌ ಸೆಂಟರ್‌ನ ಹೃದ್ರೋಗ ತಜ್ಞ ಡಾ. ಆರ್‌.ಎಸ್‌. ಧನಂಜಯ್‌ ಅವರು ಪ್ರಕಾಶ್‌ ಅವರಿಗೆ ಆರಂಭಿಕ ಹಂತದಲ್ಲಿ ನೀಡಿದ ಚಿಕಿತ್ಸೆಗಳ ಬಗ್ಗೆ ಮಾಹಿತಿ ನೀಡಿದರು.

ಆಸ್ಪತ್ರೆಯ ಫೆಸಿಲಿಟಿ ಡೈರೆಕ್ಟರ್‌ ಸುನೀಲ್‌ ಬಂಡಾರಿಗಲ್‌, ಅರವಳಿಕೆ ತಜ್ಞ ಡಾ. ಸುಜಿತ್‌, ರಾಮಯ್ಯ ನಾರಾಯಣ ಹಾರ್ಟ್‌ ಸೆಂಟರ್‌ನ ಆಡಳಿತಾಧಿಕಾರಿ ಮಂಜುನಾಥ್‌ ಇದ್ದರು.

ಹೃದಯ ವೈಫಲ್ಯ ಕ್ಲಿನಿಕ್‌ ಶೀಘ್ರದಲ್ಲೇ ಆರಂಭ

ರಾಮಯ್ಯ ನಾರಾಯಣ ಹಾರ್ಟ್‌ ಸೆಂಟರ್‌ ಸಹಯೋಗದಲ್ಲಿ ದಾವಣಗೆರೆಯ ಎಸ್‌.ಎಸ್‌. ನಾರಾಯಣ ಹಾರ್ಟ್‌ ಸೆಂಟರ್‌ನಲ್ಲಿ ಶೀಘ್ರದಲ್ಲೇ ಹೃದಯ ವೈಫಲ್ಯ ಕ್ಲಿನಿಕ್‌ ಹಾಗೂ ಹೃದಯ ಕಸಿ ವಿಭಾಗವನ್ನು ಆರಂಭಿಸುವ ಗುರಿ ಹೊಂದಲಾಗಿದೆ ಎಂದು ಆಸ್ಪತ್ರೆಯ ಫೆಸಿಲಿಟಿ ಡೈರೆಕ್ಟರ್‌ ಸುನೀಲ್‌ ಬಂಡಾರಿಗಲ್‌ ತಿಳಿಸಿದರು.

ಇದಕ್ಕೆ ಪೂರಕ ಮಾಹಿತಿ ನೀಡಿದ ಡಾ. ನಾಗಮಲ್ಲೇಶ್‌, ‘ಹೃದಯ ವೈಫಲ್ಯಗೊಂಡಾಗ ರೋಗಿಗಳು ಮೇಲಿಂದ ಮೇಲೆ ಆಸ್ಪತ್ರೆಗೆ ದಾಖಲಾಗುವುದರಿಂದ ಬಹಳ ಹಣ ಖರ್ಚಾಗುತ್ತದೆ. ಇದನ್ನು ತಪ್ಪಿಸಲು ಹೃದಯ ವೈಫಲ್ಯ ಕ್ಲಿನಿಕ್‌ ತೆರೆಯಲಾಗುತ್ತದೆ. ಈ ವಿಭಾಗದಲ್ಲಿ ಹೃದ್ರೋಗದ ಬಗ್ಗೆ ವಿಶೇಷ ತರಬೇತಿ ಪಡೆದಿರುವ ನುರಿತ ನರ್ಸ್‌ ಇರಲಿದ್ದಾರೆ. ಹೃದಯ ಸಂಬಂಧಿ ರೋಗಿಗಳಿಗೆ ಇಲ್ಲಿ ಹೃದಯ ಕಾಯಿಲೆ ತಡೆಯಲು ಕೈಗೊಳ್ಳಬೇಕಾದ ಬಗ್ಗೆ ಬೋಧನೆ ಮಾಡಲಾಗುತ್ತದೆ. ದಿನಾಲೂ ತೂಕ, ನಾಡಿ ಮಿಡಿತ, ರಕ್ತದೊತ್ತಡವನ್ನು ಮನೆಯಲ್ಲೇ ತಪಾಸಣೆ ಮಾಡಿಕೊಳ್ಳುವ ಬಗ್ಗೆ ಹೇಳಿಕೊಡಲಾಗುತ್ತದೆ. ಇವು ಸ್ವಲ್ಪ ಪ್ರಮಾಣದಲ್ಲಿ ಬದಲಾದಾಗ ನರ್ಸ್‌ ಗಮನಕ್ಕೆ ತರುತ್ತಾರೆ. ಹೆಚ್ಚಿನ ಪ್ರಮಾಣದಲ್ಲಿ ಬದಲಾವಣೆಯಾದರೆ ತಕ್ಷಣವೇ ಆಸ್ಪತ್ರೆಗೆ ದಾಖಲಾಗಬೇಕು. ಇದರಿಂದ ರೋಗಿಗಳ ಬದುಕುವ ಸಾಧ್ಯತೆ ಹೆಚ್ಚಾಗಿರುತ್ತದೆ’ ಎಂದು ವಿವರ ನೀಡಿದರು.

‘ಅಂಗಾಂಗ ದಾನ ಮಾಡುವ ಊರಿನಲ್ಲಿರುವ ರೋಗಿಗಳಿಗೇ ಹೃದಯ ಕಸಿ ಮಾಡಲು ಮೊದಲ ಆದ್ಯತೆ ನೀಡಬೇಕು ಎಂಬ ನಿಯಮ ಇದೆ. ದಾವಣಗೆರೆ ಜಿಲ್ಲೆಯಲ್ಲಿ ಅಂಗಾಂಗ ದಾನ ಮಾಡಲು ಹೆಚ್ಚು ಜನ ಮುಂದೆ ಬಂದರೆ ಮಾತ್ರ ಹೃದಯ ಕಸಿ ವಿಭಾಗ ತೆರೆದರೆ ಶಸ್ತ್ರಚಿಕಿತ್ಸೆ ನಡೆಸಲು ಸಾಧ್ಯವಾಗಲಿದೆ’ ಎಂದು ಅಭಿಪ್ರಾಯಪಟ್ಟರು.

ಅಂಗಾಂಗ ದಾನ: ಜಾಗೃತಿ ಮೂಡಲಿ

ತಮಗೆ ಹೃದಯ ದಾನ ಮಾಡಿದ ದಾನಿಗಳ ಕುಟುಂಬ ಹಾಗೂ ವೈದ್ಯರ ತಂಡಕ್ಕೆ ಕೃತಜ್ಞತೆ ಸಲ್ಲಿಸಿದ ಕೆ.ಎಚ್‌. ಪ್ರಕಾಶ್‌, ‘ನನಗೆ ಮರುಜನ್ಮ ಸಿಕ್ಕಿರುವುದಕ್ಕೆ ಖುಷಿಯಾಗಿದೆ. ನನ್ನಂತೆ ಹಲವರು ಹೃದ್ರೋಗದಿಂದ ಬಳಲುತ್ತಿದ್ದಾರೆ. ಹೀಗಾಗಿ ಬ್ರೇನ್‌ ಡೆಡ್‌ ಆದಾಗ ಅಂಗಾಂಗಳನ್ನು ದಾನ ಮಾಡಿ, ಅವರ ಜೀವವನ್ನೂ ಉಳಿಸುವ ಬಗ್ಗೆ ಹೆಚ್ಚು ಜಾಗೃತಿ ಮೂಡಿಸಬೇಕಾಗಿದೆ’ ಎಂದು ಅಭಿಪ್ರಾಯಪಟ್ಟರು.

‘ಒಂದೊಮ್ಮೆ ನಾನು ಬೇಗನೆ ಮೃತಪಟ್ಟರೆ ದೇಹವನ್ನು ಆಸ್ಪತ್ರೆಗೆ ದಾನ ಮಾಡಲು ಸಿದ್ಧನಿದ್ದೇನೆ. ಯಾವ ಕಾರಣಕ್ಕೆ ಹೃದಯ ವೈಫಲ್ಯವಾಯಿತು ಎಂಬ ಬಗ್ಗೆ ವೈದ್ಯರು ಸಂಶೋಧನೆ ನಡೆಸಿ, ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬೇಕು’ ಎಂದು ಪ್ರಕಾಶ್‌ ಮನವಿ ಮಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.