
ಹೊನ್ನಾಳಿ ಪಟ್ಟಣದ ಶ್ರೀ ದುರ್ಗಮ್ಮ ಮತ್ತು ಶ್ರೀಮರಿಯಮ್ಮ ದೇವಿ ದೇವಸ್ಥಾನಕ್ಕೆ ಸಾವಿರಾರು ಭಕ್ತರು ಭೇಟಿ ನೀಡಿ ದೇವಿ ದರ್ಶನ ಮಾಡಿದರು. ಈ ಸಂದರ್ಭದಲ್ಲಿ ಭಕ್ತರು ತಮ್ಮ ಹರಕೆ ಸಮರ್ಪಿಸಿದರು.
ಹೊನ್ನಾಳಿ: ಬನದ ಹುಣ್ಣಿಮೆ ನಂತರ ಬರುವ ಶ್ರೀ ದುರ್ಗಮ್ಮದೇವಿ ಮತ್ತು ಶ್ರೀ ಮರಿಯಮ್ಮ ದೇವಿಯ ಜಾತ್ರಾ ಮಹೋತ್ಸವದ ಎರಡನೇ ದಿನವಾದ ಮಂಗಳವಾರ ಅತ್ಯಂತ ಸಡಗರ ಸಂಭ್ರಮದಿಂದ ನಡೆಯಿತು.
ದೇವಿಯರಿಗೆ ಬೆಳ್ಳಿಯ ಮುಖ ತೊಡಿಸಿ, ಹಸಿರು ಸೀರೆ ಉಡಿಸಿ, ವಿವಿಧ ಹೂವಿನ ಹಾರಗಳೊಂದಿಗೆ ಅಲಂಕಾರ ಮಾಡಲಾಗಿತ್ತು. ವಿಶೇಷ ಪೂಜಾ ವಿಧಿ–ವಿಧಾನಗಳನ್ನು ಅರ್ಚಕರು ನೆರವೇರಿಸಿದರು.
ಮಂಗಳವಾರ ಬೆಳಿಗ್ಗೆಯಿಂದಲೇ ಮಹಿಳೆಯರು ಹಣ್ಣುಕಾಯಿ ಸಿಹಿ ಅಡುಗೆಯ ನೈವೇದ್ಯೆಯನ್ನು ದೇವಿಗೆ ಸಮರ್ಪಿಸಿದರು. ಹರಕೆ ಹೊತ್ತ ನೂರಾರು ಮಹಿಳೆಯರು, ಮಕ್ಕಳು, ಯುವಕರು ಬೇವಿನ ಸೊಪ್ಪಿನ ಉಡುಗೆಯನ್ನು ತೊಟ್ಟು ದೇವಸ್ಥಾನಕ್ಕೆ ಬಂದು ದೇವಿಯ ದರ್ಶನ ಮಾಡಿ ಹರಕೆ ತೀರಿಸಿದರು.
ವಿವಿಧ ಸ್ಪರ್ಧೆಗಳು: ಸೋಮವಾರ ಮಧ್ಯಾಹ್ನದಿಂದ ರಾತ್ರಿವರೆಗೂ ಶ್ರೀ ದುರ್ಗಮ್ಮ ಶ್ರೀ ಮರಿಯಮ್ಮದೇವಿ ಯುವಕ ಸಂಘದಿಂದ ಮಹಿಳೆಯರಿಗೆ ರಂಗೋಲಿ ಸ್ಪರ್ಧೆ, ಮಕ್ಕಳಿಗೆ ಗೋಲಿ ಸ್ಪರ್ಧೆ, ಯುವಕರಿಗೆ ಸ್ಲೋ ಸೈಕಲ್ ರೇಸ್, ಗೋಣಿ ಚೀಲದ ರೇಸ್, ಮ್ಯೂಜಿಕಲ್ ಚೇರ್, ಹಗ್ಗ ಜಗ್ಗಾಟ ಸೇರಿ ವಿವಿಧ ಸ್ಪರ್ಧೆಗಳನ್ನು ಏರ್ಪಡಿಸಲಾಗಿತ್ತು. ವಿಜೇತರಿಗೆ ಸಮಿತಿವತಿಯಿಂದ ಬಹುಮಾನಗಳನ್ನು ವಿತರಿಸಲಾಯಿತು.
ಇಂದಿನಿಂದ ಮೂರು ದಿನಗಳ ಕಾಲ ಕುಸ್ತಿ ಪಂದ್ಯಾವಳಿ: ಜಾತ್ರೆಯ ಅಂಗವಾಗಿ ಪಟ್ಟಣದ ಖಾಸಗಿ ಬಸ್ ನಿಲ್ದಾಣದ ಪಕ್ಕದಲ್ಲಿರುವ ಮೈದಾನದಲ್ಲಿ ಜ. 7 ರಿಂದ 9ರ ವರೆಗೆ ಮೂರು ದಿನಗಳು ಬಯಲು ಕಾಟ ಜಂಗೀ ಕುಸ್ತಿ ಪಂದ್ಯಾವಳಿಗಳು ನಡೆಯಲಿವೆ.
ಹೊನ್ನಾಳಿ ಪಟ್ಟಣದ ಶ್ರೀ ದುರ್ಗಮ್ಮ ದೇವಿ ಹಾಗೂ ಶ್ರೀ ಮರಿಯಮ್ಮ ದೇವಿಗೆ ಬೆಳ್ಳಿಮುಖ ಹಾಗೂ ಹಸಿರು ತೊಡಿಸಿ ವಿವಿಧ ಬಣ್ಣಗಳ ಹೂವಿನ ಹಾರದಿಂದ ಅಲಂಕಾರ ಮಾಡಿರುವುದು.