ADVERTISEMENT

ವಲಸೆ ಕಾರ್ಮಿಕರ ಮಕ್ಕಳಿಗೆ ಶಿಕ್ಷಣ ಕೊಡಿ

ದಾವಣಗೆರೆ ತಾಲ್ಲೂಕು ಪಂಚಾಯಿತಿ ಸಾಮಾನ್ಯ ಸಭೆಯಲ್ಲಿ ಸದಸ್ಯರ ಆಗ್ರಹ

​ಪ್ರಜಾವಾಣಿ ವಾರ್ತೆ
Published 5 ಡಿಸೆಂಬರ್ 2019, 15:27 IST
Last Updated 5 ಡಿಸೆಂಬರ್ 2019, 15:27 IST
ದಾವಣಗೆರೆ ತಾಲ್ಲೂಕು ಪಂಚಾಯತಿ ಸಾಮಾನ್ಯ ಸಭೆಯಲ್ಲಿ ಅಧ್ಯಕ್ಷರಾದ ಮಮತಾ ಮಲ್ಲೇಶಪ್, ಕಾರ್ಯನಿರ್ವಾಹಕ ಅಧಿಕಾರಿ ದಾರುಕೇಶ್, ಉಪಾಧ್ಯಕ್ಷ ಎ.ಬಿ. ಹನುಮಂತಪ್ಪ, ಸ್ಥಾಯಿ ಸಮಿತಿ ಅಧ್ಯಕ್ಷ ಜಿ.ಎನ್. ನಾಗರಾಜ್ ಇದ್ದರು.
ದಾವಣಗೆರೆ ತಾಲ್ಲೂಕು ಪಂಚಾಯತಿ ಸಾಮಾನ್ಯ ಸಭೆಯಲ್ಲಿ ಅಧ್ಯಕ್ಷರಾದ ಮಮತಾ ಮಲ್ಲೇಶಪ್, ಕಾರ್ಯನಿರ್ವಾಹಕ ಅಧಿಕಾರಿ ದಾರುಕೇಶ್, ಉಪಾಧ್ಯಕ್ಷ ಎ.ಬಿ. ಹನುಮಂತಪ್ಪ, ಸ್ಥಾಯಿ ಸಮಿತಿ ಅಧ್ಯಕ್ಷ ಜಿ.ಎನ್. ನಾಗರಾಜ್ ಇದ್ದರು.   

ದಾವಣಗೆರೆ: ನಗರಕ್ಕೆ ಕೆಲಸಕ್ಕಾಗಿ ಕಾರ್ಮಿಕರು ಬೇರೆ ಬೇರೆ ಕಡೆಗಳಿಂದ ಬರುತ್ತಾರೆ. ಅವರ ಮಕ್ಕಳಿಗೆ ಶಿಕ್ಷಣ ನೀಡಲು ಏನು ಕ್ರಮ ಕೈಗೊಂಡಿದ್ದೀರಿ?

ಗುರುವಾರ ನಡೆದ ತಾಲ್ಲೂಕು ಪಂಚಾಯಿತಿ ಸಾಮಾನ್ಯ ಸಭೆಯಲ್ಲಿ ಸದಸ್ಯರು ವ್ಯಕ್ತಪಡಿಸಿದ ಕಾಳಜಿಯ ಪ್ರಶ್ನೆ ಇದು.

ನಗರ ದೊಡ್ಡದಿದೆ. ಹಾಗಾಗಿ ದುಡಿಯಲು ಬರುವವರ ಸಂಖ್ಯೆ ಜಾಸ್ತಿಯಾಗುತ್ತಿದೆ. ಅವರ ಮಕ್ಕಳು ಶಿಕ್ಷಣದಿಂದ ವಂಚಿತರಾಗುತ್ತಿದ್ದಾರೆ ಎಂದು ಸದಸ್ಯೆ ಮಂಜುಳಾ ಅಣಬೇರು ಶಿವಮೂರ್ತಿ ವಿವರಿಸಿದರು.

ADVERTISEMENT

ಈಗಾಗಲೇ ಕುಕ್ಕವಾಡದಲ್ಲಿ ಅಂಥ 22 ಮಕ್ಕಳನ್ನು ‍‍ಪತ್ತೆ ಹಚ್ಚಿ ಅವರಿಗೆ ವಿಶೇಷ ತರಬೇತಿ ಮೂಲಕ ಶಿಕ್ಷಣ ಒದಗಿಸುವ ವ್ಯವಸ್ಥೆ ಮಾಡಲಾಗಿದೆ ಎಂದು ದಾವಣಗೆರೆ ದಕ್ಷಿಣ ಕ್ಷೇತ್ರ ಶಿಕ್ಷಣಾಧಿಕಾರಿ ಉತ್ತರಿಸಿದರು.

ಭಿಕ್ಷೆ ಬೇಡುವುದುನ್ನು ನಿಷೇಧಿಸಲಾಗಿದೆ. ಆದರೂ ಸಾಯಿಬಾಬಾ ಚಿತ್ರ ಹಿಡಿದುಕೊಂಡು ಮಕ್ಕಳ ಜತೆಗೆ ಭಿಕ್ಷೆ ಬೇಡುತ್ತಿರುವುದು ಎಲ್ಲೆಡೆ ಕಾಣುತ್ತಿದೆ ಎಂದು ಮಂಜುಳಾ ತಿಳಿಸಿದಾಗ, ‘6ರಿಂದ 14 ವರ್ಷದೊಳಗಿನ ಮಕ್ಕಳು ಶಿಕ್ಷಣದಿಂದ ಹೊರಗುಳಿಯಬಾರದು. ಆಯಾ ಶಾಲೆಯ ವ್ಯಾಪ್ತಿಯಲ್ಲಿ ಮಕ್ಕಳು ಹೊರಗುಳಿಯದಂತೆ ಅಲ್ಲಿನ ಶಿಕ್ಷಕರು ನೋಡುತ್ತಾರೆ. ಜತೆಗೆ ಇತರ ಸಂಘಟನೆಗಳ ಸಹಕಾರದೊಂದಿಗೆ ಹೊರಗುಳಿದ ಮಕ್ಕಳನ್ನು ಪತ್ತೆ ಹಚ್ಚಲಾಗುವುದು. ಮಂಡಕ್ಕಿಭಟ್ಟಿ ಪ್ರದೇಶದಲ್ಲಿ ಕೂಡ ಹೊರಗುಳಿದ ಮಕ್ಕಳನ್ನು ಪತ್ತೆ ಹಚ್ಚಲಾಗಿದೆ’ ಎಂದು ಶಿಕ್ಷಣಾಧಿಕಾರಿ ಮಾಹಿತಿ ನೀಡಿದರು.

14 ವರ್ಷದೊಳಗಿನ ಮಕ್ಕಳು ಶಾಲೆಗೆ ಹೋಗದೇ ಹೊರಗಡೆ ಭಿಕ್ಷೆ ಬೇಡುತ್ತಿದ್ದರೆ, ತಿರುಗಾಡುತ್ತಿದ್ದರೆ, ಬಾಲಕಾರ್ಮಿಕರಾಗಿ ಕೆಲಸ ಮಾಡುತ್ತಿದ್ದರೆ ಮಕ್ಕಳ ಸಹಾಯವಾಣಿ ‘1092’ ಗೆ ಕರೆ ಮಾಡಿ ಸಾರ್ವಜನಿಕರು ಮಾಹಿತಿ ನೀಡಬೇಕು ಎಂದು ಕೋರಿದರು.

ಸರ್ಕಾರಿ ಶಾಲೆಗಳು ಮುಚ್ಚುವ ಸ್ಥಿತಿಗೆ ಬರಲು ಆಡಳಿತ ವ್ಯವಸ್ಥೆಯೇ ಕಾರಣವಾಗಿದೆ. ಮೊದಲೇ ಸರ್ಕಾರಿ ಶಾಲೆಗಳಲ್ಲಿ ಶಿಕ್ಷಕರ ಕೊರತೆ ಇದೆ. ಅದರ ನಡುವೆ ತರಬೇತಿ, ಮೀಟಿಂಗ್‌ ಎಂದು ಶಿಕ್ಷಕರು ಹೊರಗೆ ಇರುವುದೇ ಜಾಸ್ತಿಯಾಗುತ್ತಿದೆ. ಹೀಗಾದರೆ ವಿದ್ಯಾರ್ಥಿಗಳು ಕಲಿಯುವುದು ಹೇಗೆ ಎಂದು ಸಂಗಜ್ಜ ಗೌಡ್ರು, ಅಶೋಕ ಪಿ.ಕೆ., ಮಂಜಪ್ಪ, ಉಮೇಶ ನಾಯ್ಕ, ಮುರುಗೇಂದ್ರಪ್ಪ ಪ್ರಶ್ನಿಸಿದರು. ರಜಾ ದಿನಗಳಲ್ಲಿ ಇಲ್ಲವೇ ಶನಿವಾರ ಮಧ್ಯಾಹ್ನದ ಬಳಿಕ ತರಬೇತಿ, ಮೀಟಿಂಗ್‌ಗಳನ್ನು ಇಟ್ಟುಕೊಳ್ಳಿ ಎಂದು ಸಲಹೆ ನೀಡಿದರು.

ಶಿಕ್ಷಣಾಧಿಕಾರಿಗಳು ಇಲಾಖೆಯ ಮಾಹಿತಿ, ಮೇಲಿನವರ ಆದೇಶಗಳನ್ನಷ್ಟೇ ಹೇಳುತ್ತಿದ್ದೀರಿ. ಶಿಕ್ಷಕರು ಸರಿಯಾಗಿ ಕೆಲಸ ಮಾಡುತ್ತಿದ್ದಾರಾ? ಸರಿಯಾಗಿ ಶಾಲೆಗೆ ಬರುತ್ತಿದ್ದಾರಾ? ಎಂಬುದನ್ನು ನೋಡುತ್ತಿಲ್ಲ ಎಂದು ಅಧ್ಯಕ್ಷೆ ಮಮತಾ ಮಲ್ಲೇಶಪ್ಪ ಆರೋಪಿಸಿದರು. ಬಸ್‌ ನೆಪ ಒಡ್ಡಿ ಬೆಳಿಗ್ಗೆ ತಡವಾಗಿ ಶಿಕ್ಷಕರು ಬರುತ್ತಾರೆ. ಸಂಜೆ ಅದೇ ಬಸ್‌ನ ಕಾರಣವೊಡ್ಡಿ ಬೇಗ ಹೋಗುತ್ತಾರೆ ಎಂದು ಪರಮೇಶ್ವರಪ್ಪ ತಿಳಿಸಿದರು.

ಶಿಕ್ಷಕರ ಕೊರತೆ ಇರುವ ಶಾಲೆಗಳಿಂದ ನಿಯೋಜಿತ ಶಿಕ್ಷಕರನ್ನು ವಾಪಸ್‌ ಕರೆಸಿಕೊಳ್ಳುವುದು ಸರಿಯಾದ ಕ್ರಮ ಅಲ್ಲ ಎಂದು ಮಂಜಪ್ಪ ಹೇಳಿದರು.

ಶಿಕ್ಷಣ ಇಲಾಖೆಯ ಬಗ್ಗೆ ಸುಧೀರ್ಘವಾಗಿ ಚರ್ಚೆಗಳು ನಡೆದವು. ಫಲಿತಾಂಶ ಸುಧಾರಣೆಗೆ ಕ್ರಮ ಕೈಗೊಳ್ಳಿ ಎಂದು ಕಾರ್ಯನಿರ್ವಾಹಕ ಅಧಿಕಾರಿ ಬಿ.ಎಂ. ದಾರುಕೇಶ್‌ ಸಲಹೆ ನೀಡಿದರು.

ತಾಲ್ಲೂಕಿನಲ್ಲಿ ಅಕ್ಟೋಬರ್‌ ಮತ್ತು ನವೆಂಬರ್‌ನಲ್ಲಿ ಸರಾಸರಿ ಮಳೆಗಿಂತ ಹೆಚ್ಚು ಬಂದಿದೆ. ಇದರಿಂದ 600 ಹೆಕ್ಟೇರ್‌ ಮೆಕ್ಕೆಜೋಳ ಬೆಳೆ ಹಾನಿಯಾಗಿದೆ. ಭತ್ತ ತಡವಾಗಿ ಬಿತ್ತನೆಯಾಗಿರುವುದರಿಂದ ತೊಂದರೆಯಾಗಬಹುದು ಎಂದು ಊಹಿಸಲಾಗಿತ್ತು. ಆದರೆ, ಸರಾಸರಿ ಬೆಳೆ ಬಂದಿದೆ ಎಂದು ಕೃಷಿ ಇಲಾಖೆಯ ಅಧಿಕಾರಿ ಮಾಹಿತಿ ನೀಡಿದರು.

ನಕಲಿ ರಸಗೊಬ್ಬರ ವಿತರಣೆ ಆಗುತ್ತಿರುವ ಹಲವು ದೂರುಗಳು ಬಂದಿದ್ದವು. ಅದಕ್ಕಾಗಿ 80 ಮಾದರಿಗಳನ್ನು ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ. 6 ಪ್ರಕರಣಗಳನ್ನು ದಾಖಲಿಸಲಾಗಿದೆ ಎಂದು ತಿಳಿಸಿದರು.

ಡಿಸೆಂಬರ್‌ ಅಂತ್ಯದೊಳಗೆ ಆನಗೋಡು ಮತ್ತು ಮಾಯಕೊಂಡ ಹೋಬಳಿಗಳಲ್ಲಿ ಕಂದಾಯ ಅದಾಲತ್ ನಡೆಸಲಾಗುವುದು. ಪಿಂಚಣಿ ಸಮಸ್ಯೆ ಸೇರಿ ಎಲ್ಲ ಕುಂದುಕೊರತೆಗಳ ಬಗ್ಗೆ ಅಲ್ಲಿ ಅಹವಾಲು ಸಲ್ಲಿಸಬಹುದು ಎಂದು ತಹಶೀಲ್ದಾರ್‌ ಸಂತೋಷ್‌ ಕುಮಾರ್‌ ತಿಳಿಸಿದರು.

ಮಮತಾ ಮಲ್ಲೇಶಪ್ಪ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಉಪಾಧ್ಯಕ್ಷ ಹನುಮಂತಪ್ಪ, ಸ್ಥಾಯಿ ಸಮಿತಿ ಅಧ್ಯಕ್ಷ ನಾಗರಾಜ್‌, ಅಧಿಕಾರಿಗಳು ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.