ADVERTISEMENT

ವಿದ್ಯುತ್ ನೀತಿ ಬದಲಿಸಿದರೆ ರೈತರು ಸರ್ಕಾರವನ್ನೇ ಬದಲಿಸುತ್ತಾರೆ

ರೈತ ಸಂಘದ ರಾಜ್ಯ ಉಪಾಧ್ಯಕ್ಷ ಶಿವಾನಂದ ಕುಗ್ವೆ ಎಚ್ಚರಿಕೆ

​ಪ್ರಜಾವಾಣಿ ವಾರ್ತೆ
Published 2 ಅಕ್ಟೋಬರ್ 2022, 5:35 IST
Last Updated 2 ಅಕ್ಟೋಬರ್ 2022, 5:35 IST
ಶಿವಾನಂದ ಕುಗ್ವೆ
ಶಿವಾನಂದ ಕುಗ್ವೆ   

ಸಾಗರ: ಕಾರ್ಪೋರೇಟ್‌ ವಲಯಕ್ಕೆ ಅನುಕೂಲ ಮಾಡಿಕೊಡು ವುದಕ್ಕಾಗಿ ರಾಜ್ಯ ಸರ್ಕಾರ ವಿದ್ಯುತ್ ಕ್ಷೇತ್ರವನ್ನು ಖಾಸಗೀಕರಣಗೊಳಿಸಲು ಮುಂದಾಗಿದೆ. ಈಗಿರುವ ವಿದ್ಯುತ್ ನೀತಿಯನ್ನು ಬದಲಿಸಿದರೆ ರೈತರು ಸರ್ಕಾರವನ್ನೇ ಬದಲಿಸುತ್ತಾರೆ’ ಎಂದು ರಾಜ್ಯ ರೈತ ಸಂಘದ ರಾಜ್ಯ ಉಪಾಧ್ಯಕ್ಷ ಶಿವಾನಂದ ಕುಗ್ವೆ ಎಚ್ಚರಿಸಿದ್ದಾರೆ.

ಈಗಾಗಲೇ ಹಾಸನ, ಕೊಡಗು, ಚಿಕ್ಕಮಗಳೂರು ಜಿಲ್ಲೆಗಳಲ್ಲಿ ಕೃಷಿ ಪಂಪ್‌ಸೆಟ್‌ಗಳಿಗೆ ಸ್ಮಾರ್ಟ್ ಮೀಟರ್ ಅಳವಡಿಸಲು ಸರ್ಕಾರ ಮುಂದಾಗಿದೆ. ಇತರ ಜಿಲ್ಲೆಗಳಿಗೂ ಇದನ್ನು ವಿಸ್ತರಿಸುವುದಾಗಿ ಹೇಳಲಾಗುತ್ತಿದೆ. ಈ ಮೂಲಕ ರಾಜ್ಯ ಸರ್ಕಾರ ದುಸ್ಸಾಹಸಕ್ಕೆ ಮುಂದಾಗಿದೆ ಎಂದು ಶನಿವಾರ ಸುದ್ದಿಗೋಷ್ಠಿಯಲ್ಲಿ ಅವರು ಟೀಕಿಸಿದರು.

ರಾಜ್ಯದಲ್ಲಿ 45 ಲಕ್ಷ ಕೃಷಿ ಪಂಪ್‌ಸೆಟ್‌ಗಳಿವೆ. ಸಾಗರ ತಾಲ್ಲೂಕಿನಲ್ಲಿ 18,650 ರೈತರು ಕೃಷಿ ಪಂಪ್ ಸೆಟ್ ಹೊಂದಿದ್ದಾರೆ. ರಾಜ್ಯದಲ್ಲಿ 90 ಲಕ್ಷ ಭಾಗ್ಯಜ್ಯೋತಿ ಹಾಗೂ ಕುಟೀರ ಜ್ಯೋತಿ ಯೋಜನೆಯ ಫಲಾನುಭವಿಗಳಿದ್ದಾರೆ. ಈಗಿರುವ ವಿದ್ಯುತ್ ನೀತಿಯನ್ನು ಬದಲಿಸಿದರೆ ರೈತರು ಹಾಗೂ ಈ ಯೋಜನೆಗಳ ಫಲಾನುಭವಿಗಳು ಸಂಕಷ್ಟಕ್ಕೆ ಸಿಲುಕಲಿದ್ದಾರೆ
ಎಂದರು.

ADVERTISEMENT

ಕೃಷಿಕರು ಬೇರೆ ಬೇರೆ ಕಾರಣಗಳಿಗಾಗಿ ಕೃಷಿಯನ್ನು ನಡೆಸಲಾರದ ಸ್ಥಿತಿಯಲ್ಲಿದ್ದಾರೆ. ಕೃಷಿ ಪಂಪ್‌ಸೆಟ್‌ಗಳಿಗೆ ಸ್ಮಾರ್ಟ್ ಮೀಟರ್ ಅಳವಡಿಸಿದರೆ ದುಬಾರಿ ವಿದ್ಯುತ್ ಶುಲ್ಕ ಪಾವತಿಸಲಾಗದೇ ರೈತರು ತೊಂದರೆಗೆ ಒಳಗಾಗಲಿದ್ದಾರೆ. ಇದು ಆಹಾರ ಉತ್ಪಾದನೆಯ ಮೇಲೂ ಪರಿಣಾಮ ಬೀರಲಿದೆ ಎಂದು ತಿಳಿಸಿದರು.

ವಿದ್ಯುತ್ ನೀತಿಯನ್ನು ಬದಲಿಸದಂತೆ ಒತ್ತಾಯಿಸಿ ಅ.10ರಂದು ಸಾಗರದ ಉಪವಿಭಾಗಾಧಿಕಾರಿ ಕಚೇರಿ ಎದುರು ರೈತ ಸಂಘ ಪ್ರತಿಭಟನೆ ನಡೆಸಲಿದೆ. ನಂತರ ವಿಭಾಗವಾರು ಸಮಾವೇಶ ನಡೆಸಲಾಗುವುದು. ಅದಕ್ಕೂ ಸರ್ಕಾರ ಬಗ್ಗದಿದ್ದಲ್ಲಿ ವಿಧಾನಸೌಧಕ್ಕೆ ಮುತ್ತಿಗೆ ಹಾಕುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗುವುದು ಎಂದು ಹೇಳಿದರು.

ವಿದೇಶದಿಂದ ಅಡಿಕೆ ಆಮದು ಮಾಡಿಕೊಳ್ಳುವ ನಿರ್ಧಾರದಿಂದ ಕೇಂದ್ರ ಸರ್ಕಾರ ಹಿಂದಕ್ಕೆ ಬರಬೇಕು. ರೈತರ ಬೆಳೆಗೆ ವೈಜ್ಞಾನಿಕ ಬೆಲೆ ನೀಡುವ ಸಂಬಂಧ ಕಾಯ್ದೆ ರಚನೆಯಾಗಬೇಕು. ಸ್ವಾಮಿನಾಥನ್ ವರದಿ ಜಾರಿಗೊಳಿಸುವ ಮೂಲಕ ಬೆಂಬಲ ಬೆಲೆ ನೀಡುವ ಪದ್ಧತಿ ಅನುಷ್ಠಾನಗೊಳ್ಳಬೇಕು. ಬಗರ್‌ಹುಕುಂ ಕಾಯ್ದೆಯಡಿ ಅರ್ಹ ಫಲಾನುಭವಿಗಳಿಗೆ ಭೂಮಿಯ ಹಕ್ಕು ಹಾಗೂ ಮೂಲ ಸೌಕರ್ಯ ಒದಗಿಸಲು ಇರುವ ಕಾನೂನಿನ ತೊಡಕುಗಳನ್ನು ಸರ್ಕಾರ ಬಗೆಹರಿಸಬೇಕು ಎಂದು ಅವರು ಆಗ್ರಹಿಸಿದರು.

ರೈತ ಸಂಘದ ಪ್ರಮುಖರಾದ ಎನ್.ಡಿ. ವಸಂತಕುಮಾರ್, ಎಂ.ಬಿ. ಮಂಜಪ್ಪ, ರಮೇಶ್ ಐಗಿನಬೈಲು, ಪ್ರಶಾಂತ್, ರಾಜೇಶ್, ಭೀಮನೇರಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಪರಶುರಾಮ್, ರಾಮಣ್ಣ ಹಸಲರು ಇದ್ದರು.

‘ಗೃಹಮಂತ್ರಿ ಆರಗ ಜ್ಞಾನೇಂದ್ರರಲ್ಲ, ಅವರು ಅಜ್ಞಾನೇಂದ್ರ’

ವಿದೇಶದಿಂದ ಅಡಿಕೆ ಆಮದು ಆದರೆ ಸ್ಥಳೀಯ ಅಡಿಕೆ ಮಾರುಕಟ್ಟೆಯ ಮೇಲೆ ಪರಿಣಾಮ ಬೀರುವುದಿಲ್ಲ ಎಂದು ಅಡಿಕೆ ಟಾಸ್ಕ್ ಫೋರ್ಸ್ ಅಧ್ಯಕ್ಷರೂ ಆಗಿರುವ ಆರಗ ಜ್ಞಾನೇಂದ್ರ ನೀಡಿರುವ ಹೇಳಿಕೆ ನೋಡಿದರೆ ಅವರು ಅಜ್ಞಾನೇಂದ್ರ ಎಂಬುದು ಸ್ಪಷ್ಟವಾಗುತ್ತದೆ ಎಂದು ರೈತ ಮುಖಂಡ ಎನ್.ಡಿ. ವಸಂತಕುಮಾರ್ ಟೀಕಿಸಿದ್ದಾರೆ.

ಬೆಳೆಗಾರರಿಗೆ ತೊಂದರೆ ಇಲ್ಲ ಎಂದು ಒಂದು ಕಡೆ ಹೇಳುತ್ತ ಅದೇ ಹೊತ್ತಿಗೆ ಅಡಿಕೆ ಆಮದು ಕುರಿತು ಕೇಂದ್ರದ ಸಚಿವರೊಂದಿಗೆ ಮಾತುಕತೆ ನಡೆಸುವುದಾಗಿ ಜ್ಞಾನೇಂದ್ರ ಅವರು ಹೇಳಿರುವುದು ಅವರ ದ್ವಂದ್ವ ನೀತಿಯನ್ನು ತೋರಿಸುತ್ತದೆ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.