ADVERTISEMENT

19 ಗಂಟೆ ವಿದ್ಯುತ್ ಸ್ಥಗಿತ: ಪರಿಹಾರಕ್ಕೆ ಆಗ್ರಹ

​ಪ್ರಜಾವಾಣಿ ವಾರ್ತೆ
Published 19 ಮೇ 2022, 2:47 IST
Last Updated 19 ಮೇ 2022, 2:47 IST
ಕರ್ನಾಟಕ ವಿದ್ಯುತ್ ನಿಯಂತ್ರಣ ಆಯೋಗದ ನಿಯಮಾವಳಿಯ ಪ್ರತಿ.
ಕರ್ನಾಟಕ ವಿದ್ಯುತ್ ನಿಯಂತ್ರಣ ಆಯೋಗದ ನಿಯಮಾವಳಿಯ ಪ್ರತಿ.   

ಹರಿಹರ: ಸೋಮವಾರ ಸಂಜೆಯ ಬಿರುಸಾದ ಗಾಳಿ, ಮಳೆಗೆ ವಿದ್ಯುತ್ ಸರಬರಾಜು ಗರಿಷ್ಠ 19 ಗಂಟೆ ಕಾಲ ಸ್ಥಗಿತಗೊಂಡು ತಾಲ್ಲೂಕಿನ ಜನತೆ ಬೆಳಕಿಲ್ಲದೆ ರಾತ್ರಿ ಕತ್ತಲಲ್ಲೇ ಕಳೆಯುವ ಶಿಕ್ಷೆಗೆ ಈಡಾದರು. ಕರ್ನಾಟಕ ವಿದ್ಯುತ್ ನಿಯಂತ್ರಣ ಆಯೋಗದ (ಕೆಇಆರ್‌ಸಿ) ನಿಯಮದ ಪ್ರಕಾರ ಗ್ರಾಹಕರಿಗೆ ಬೆಸ್ಕಾಂ ಪರಿಹಾರ ನೀಡಬೇಕು ಎಂದು ವಿವಿಧ ಸಂಘ, ಸಂಸ್ಥೆಯವರು ಆಗ್ರಹಿಸಿದ್ದಾರೆ.

ಹರಿಹರ ಚೆಂಬರ್ ಆಫ್ ಕಾಮರ್ಸ್, ಕರ್ನಾಟಕ ದಲಿತ ಸಂಘರ್ಷ ಸಮಿತಿ, ಕರ್ನಾಟಕ ರಕ್ಷಣಾ ವೇದಿಕೆ (ಪ್ರವೀಣ್ ಕುಮಾರ್ ಶೆಟ್ಟಿ ಬಣ), ಜಯ ಕರ್ನಾಟಕ ಸಂಘದ ಪದಾಧಿಕಾರಿಗಳು ಇಂಧನ ಸಚಿವ ಸುನೀಲ್ ಕುಮಾರ್‌ ಅವರಿಗೆ ಈ ಕುರಿತು ಆಗ್ರಹಿಸಿದ್ದಾರೆ.

ಹೊಸ ದಾಖಲೆ: ಸೋಮವಾರ ಸಂಜೆಯ ಗಾಳಿ, ಮಳೆಗೆ 66 ಕೆ.ವಿ. ಲೈನ್‌ನಲ್ಲಿ ತಾಂತ್ರಿಕ ದೋಷ ಕಂಡು ಬಂತು. ಪರಿಣಾಮವಾಗಿ ಅಂದು ಸಂಜೆ 5ಕ್ಕೆ ಸ್ಥಗಿತವಾಗಿದ್ದ ವಿದ್ಯುತ್ ಸರಬರಾಜು ಇಡೀ ರಾತ್ರಿ ಇರಲಿಲ್ಲ. ಅದರಿಂದಾಗಿ ಹರಿಹರ ನಗರವೂ ಸೇರಿದಂತೆ ತಾಲ್ಲೂಕಿನಾದ್ಯಂತ ವಿದ್ಯುತ್ ಸರಬರಾಜು ಸ್ಥಗಿತವಾಯಿತು.

ADVERTISEMENT

ನಗರದ ಸೀಮಿತ ಪ್ರದೇಶಕ್ಕೆ ಮಂಗಳವಾರ ಬೆಳಿಗ್ಗೆ 7ಕ್ಕೆ ಹಾಗೂ ಉಳಿದ ಪ್ರದೇಶಗಳಿಗೆ ಮಧ್ಯಾಹ್ನ 12ಕ್ಕೆ ವಿದ್ಯುತ್ ಸರಬರಾಜು ಆರಂಭವಾಯಿತು. ಇನ್ನು ಗ್ರಾಮೀಣ ಭಾಗಕ್ಕೆ ಇನ್ನಷ್ಟು ಸಮಯದ ನಂತರ ವಿದ್ಯುತ್ ಸರಬರಾಜು ನೀಡಲಾಗಿದೆ ಎಂದು ಸಾರ್ವಜನಿಕರು ದೂರಿದ್ದಾರೆ.

ಸುದೀರ್ಘ ಅವಧಿಯವರೆಗೆ ವಿದ್ಯುತ್ ವ್ಯತ್ಯಯವಾಗಿದ್ದರಿಂದ ಫ್ಯಾನ್ ತಿರುಗದೇ ಬಹುತೇಕರ ನಿದ್ದೆ ಮಾಯವಾಯಿತು. ಉಳ್ಳವರ ಯುಪಿಎಸ್‌ಗಳು ಕೂಡ ಸ್ಥಗಿತಗೊಂಡವು. ಸೊಳ್ಳೆಗಳು ನಿರಾತಂಕವಾಗಿ ಕಾಯಕ ಮಾಡಿದವು. ಬೆಳಿಗ್ಗೆ ಜನತೆ ನೀರು ಹಿಡಿಯಲೆಂದು ನಲ್ಲಿಗಳ ಬಳಿ ಹೋದರೆ ವಿದ್ಯುತ್ ಇಲ್ಲದ ಕಾರಣ ನೀರೂ ಬರಲಿಲ್ಲ. ಅಡುಗೆ ಮಾಡಲು ಮಿಕ್ಸಿಯೂ ಆನ್ ಆಗಲಿಲ್ಲ.

ಸೋಮವಾರ ಸಂಜೆ ವ್ಯಾಪಾರಿಗಳಿಗೆ ವ್ಯಾಪಾರ ಖೋತಾ ಆಯಿತು. ಯುಪಿಎಸ್ ಇದ್ದವರು ಒಂದೆರಡು ಗಂಟೆ ಬೆಳಕಿನಲ್ಲಿ ವ್ಯಾಪಾರ ಮಾಡಿ ನಂತರ ಮೇಣದ ಬತ್ತಿಯ ಆಸರೆ ಪಡೆದರು. ಫುಟ್‌ಪಾತ್ ವ್ಯಾಪಾರಿಗಳು ವ್ಯಾಪಾರವನ್ನು ಅರ್ಧಕ್ಕೆ ನಿಲ್ಲಿಸಬೇಕಾಯಿತು.

ಪರಿಹಾರ ನೀಡಲಿ: ಕರ್ನಾಟಕ ವಿದ್ಯುತ್ ನಿಯಂತ್ರಣ ಆಯೋಗದ ನಿಯಮಾವಳಿ ಪ್ರಕಾರ ತಾಂತ್ರಿಕ ದೋಷದಿಂದ ವಿದ್ಯುತ್ ಲೈನ್‌ನಲ್ಲಿ ತೊಂದರೆ ಉಂಟಾದಲ್ಲಿ ನಗರ ಮತ್ತು ಪಟ್ಟಣ ಪ್ರದೇಶದಲ್ಲಿ 6 ಗಂಟೆಯೊಳಗೆ, ಕಂಬಗಳು ಬಿದ್ದಿದ್ದಲ್ಲಿ 10 ಗಂಟೆಯೊಳಗೆ, ಗ್ರಾಮೀಣ ಪ್ರದೇಶವಾದರೆ 24 ಗಂಟೆಯೊಳಗೆ ವಿದ್ಯುತ್ ಸರಬರಾಜು ಸರಿಪಡಿಸಬೇಕು ಎಂದು ಇದೆ.

ಈ ನಿಯಮವನ್ನು ಮುರಿದಲ್ಲಿ ಬೆಸ್ಕಾಂನವರು ಪ್ರತಿ ಗ್ರಾಹಕನಿಗೆ ₹ 50 ಪರಿಹಾರ ವಿತರಣೆ ಮಾಡಬೇಕು ಎಂದು ಕೆಇಆರ್‌ಸಿ ನಿಯಮ ಹೇಳುತ್ತದೆ. ಆ ಪ್ರಕಾರ ಬೆಸ್ಕಾಂ ನಡೆದುಕೊಳ್ಳಬೇಕು. ಜೊತೆಗೆ ಕರ್ತವ್ಯಲೋಪ ಎಸಗಿದ ಸಂಬಂಧಿತ ಅಧಿಕಾರಿಗಳ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಬೇಕು ಎಂದು ಇಂಧನ ಸಚಿವ ಸುನೀಲ್ ಕುಮಾರ್ ಹಾಗೂ ಬೆಸ್ಕಾಂ ವ್ಯವಸ್ಥಾಪಕ ನಿರ್ದೇಶಕ ರಾಜೇಂದ್ರ ಚೋಲಸ್‌ ಅವರಿಗೆ ಆಗ್ರಹಿಸಲಾಗಿದೆ.

ಮೇ 10ರಂದು ಚಿತ್ರದುರ್ಗ ಜಿಲ್ಲೆಯ ಹೊಳಲ್ಕೆರೆ ತಾಲ್ಲೂಕು ಶಿವಗಂಗೆ ಘಟಕ ವ್ಯಾಪ್ತಿಯಲ್ಲಿ 18 ಗಂಟೆ ವಿದ್ಯುತ್ ಸರಬರಾಜು ಸ್ಥಗಿತಗೊಂಡಾಗ ಚಿತ್ರದುರ್ಗ ಬೆಸ್ಕಾಂ ವಿಭಾಗದ ಕಾರ್ಯನಿರ್ವಾಹಕ ಎಂಜಿನಿಯರ್‌ ಜಯಣ್ಣ ಡಿ ಹಾಗೂ ಹೊಳಲ್ಕೆರೆ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್‌ ನಾಗರಾಜಪ್ಪ ಅವರನ್ನು ಇಲಾಖೆಯ ಪ್ರಧಾನ ವ್ಯವಸ್ಥಾಪಕ ಪ್ರಶಾಂತ್ ಕುಮಾರ್‌ ಸೇವೆಯಿಂದ ಅಮಾನತು ಮಾಡಿದ್ದಾರೆ. ಅಂತಹ ಶಿಸ್ತು ಕ್ರಮ ಇಲ್ಲಿಯೂ ಜಾರಿಯಾಗಬೇಕು ಎಂದು ಕರ್ನಾಟಕ ರಕ್ಷಣಾ ವೇದಿಕೆಯ ತಾಲ್ಲೂಕು ಘಟಕದ ಅಧ್ಯಕ್ಷ ರಮೇಶ್ ಮಾನೆ
ಆಗ್ರಹಿಸಿದ್ದಾರೆ.

...........

ಇತ್ತೀಚಿನ ವರ್ಷಗಳಲ್ಲಿ ಇಷ್ಟೊಂದು ಸುದೀರ್ಘ ಅವಧಿಗೆ ವಿದ್ಯುತ್ ಸ್ಥಗಿತವಾಗಿರಲಿಲ್ಲ. ವ್ಯಾಪಾರ, ವಹಿವಾಟು ನಡೆಸಲು ತೀವ್ರ ತೊಂದರೆಯಾಯಿತು. ಕೆಇಆರ್‌ಸಿ ನಿಯಮದ ಪ್ರಕಾರ ಬೆಸ್ಕಾಂ ಗ್ರಾಹಕರಿಗೆ ಪರಿಹಾರದ ಮೊತ್ತ ವಿತರಿಸಬೇಕು.

– ಶಂಕರ್ ಖಟಾವ್‌ಕರ್, ಅಧ್ಯಕ್ಷ, ಹರಿಹರ ವ್ಯಾಪಾರಿಗಳ ಸಂಘ

....

ಹರಿಹರ 1ನೇ ಘಟಕದ ಸಹಾಯಕ ಎಂಜಿನಿಯರ್ ಹುದ್ದೆ ಖಾಲಿಯಾಗಿ 4 ತಿಂಗಳುಗಳಾಗಿವೆ. ಒಬ್ಬ ಮೀಟರ್ ರೀಡರ್‌ ಅನ್ನು ಆ ಹುದ್ದೆಗೆ ನೇಮಿಸಲಾಗಿದೆ. ಖಾಲಿಯಾದ ಆ ಹುದ್ದೆಗೆ ಸಕ್ಷಮ ಎಂಜಿನಿಯರ್ ಬರದಂತೆ ಕೆಲವರು ಲಾಬಿ ನಡೆಸಿದ್ದಾರೆ

– ಪಿ.ಜೆ. ಮಹಾಂತೇಶ್, ತಾಲ್ಲೂಕು ಸಂಚಾಲಕ, ಕರ್ನಾಟಕ ದಲಿತ ಸಂಘರ್ಷ ಸಮಿತಿ

....

ದಶಕಗಳ ಹಿಂದೆ ಗಾಳಿ ಮಳೆಗೆ ತಾಂತ್ರಿಕ ದೋಷ ಕಂಡು ಬಂದರೆ ವಿದ್ಯುತ್ ಇಲಾಖೆಯ ಅಧಿಕಾರಿಗಳು ನಿದ್ದೆ ಬಿಟ್ಟು ಸರಿಪಡಿಸುತ್ತಿದ್ದರು. ಬೆಸ್ಕಾಂ ಕೂಡ ಪೊಲೀಸ್ ಇಲಾಖೆಯಂತೆ 24X7 ಅವಧಿಯಲ್ಲಿ ಕೆಲಸ ಮಾಡಬೇಕಿದೆ.

- ಎಸ್.ಗೋವಿಂದ, ತಾಲ್ಲೂಕು ಘಟಕದ ಅಧ್ಯಕ್ಷ, ಜಯ ಕರ್ನಾಟಕ ಸಂಘ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.