ADVERTISEMENT

ಹಿರೇಕೋಗಲೂರು: ಮರಿಯಾನೆ ತಿವಿದು ದಂಪತಿಗೆ ಗಾಯ

​ಪ್ರಜಾವಾಣಿ ವಾರ್ತೆ
Published 13 ಫೆಬ್ರುವರಿ 2020, 9:23 IST
Last Updated 13 ಫೆಬ್ರುವರಿ 2020, 9:23 IST

ದಾವಣಗೆರೆ: ಚನ್ನಗಿರಿ ತಾಲ್ಲೂಕಿನ ಹಿರೇಕೋಗಲೂರು ಗ್ರಾಮದಲ್ಲಿ ಗುರುವಾರ ವಾಯುವಿಹಾರಕ್ಕೆ ತೆರಳಿದ್ದ ದಂಪತಿ ಮರಿಯಾನೆ ತಿವಿದ ಪರಿಣಾಮ ಗಾಯಗೊಂಡಿದ್ದಾರೆ.

ಹಿರೇಕೋಗಲೂರು ಗ್ರಾಮದ ಶೈಲೇಂದ್ರ ಹಾಗೂ ಆಶಾ ಅವರಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಎದೆಯ ಭಾಗದಲ್ಲಿ ನೋವು ಕಾಣಿಸಿಕೊಂಡಿರುವುದರಿಂದ ಶೈಲೇಂದ್ರ ಅವರು ಆಸ್ಪತ್ರೆಗೆ ತೆರಳಿ ಚಿಕಿತ್ಸೆ ಪಡೆದಿದ್ದಾರೆ.

ಗುಂಪಿನಿಂದ ತಪ್ಪಿಸಿಕೊಂಡಿರುವ ಮರಿಯಾನೆ ಬುಧವಾರ ಹೊನ್ನಾಳಿ ತಾಲ್ಲೂಕಿನ ಹೊಸಹಳ್ಳಿ ಬಳಿ ತುಂಗಭದ್ರಾ ನದಿ ತೀರದಲ್ಲಿ ಕಾಣಿಸಿಕೊಂಡಿತ್ತು. ಶಿಕಾರಿಪುರ ಮಾರ್ಗವಾಗಿ ಬಂದಿರುವ ಐದಾರು ವರ್ಷದ ಈ ಮರಿಯಾನೆ, ಜೀನಹಳ್ಳಿ, ಕೆಂಚಿಕೊಪ್ಪ ಸುತ್ತಲಿನ ಭಾಗಗಳ ತೋಟಗಳಿಗೆ ನುಗ್ಗಿ ಬೆಳೆ ಹಾನಿ ಮಾಡಿತ್ತು.

ADVERTISEMENT

ಡೇಲಿಯ ವನ್ಯಜೀವಿ ಧಾಮದಿಂದ ಈ ಮರಿಯಾನೆ ತಪ್ಪಿಸಿಕೊಂಡು ಬಂದಿರುವ ಸಾಧ್ಯತೆ ಇದೆ ಎಂದು ಅರಣ್ಯ ಇಲಾಖೆ ಅಧಿಕಾರಿಗಳು ಶಂಕಿಸಿದ್ದಾರೆ.

ಆನೆಯನ್ನು ಬಂದ ದಾರಿಯಲ್ಲೇ ವಾಪಸ್‌ ಕಳುಹಿಸಲು ಬುಧವಾರ ಅರಣ್ಯ ಇಲಾಖೆ ಸಿಬ್ಬಂದಿ ಕಾರ್ಯಾಚರಣೆ ಆರಂಭಿಸಿದ್ದರು. ಈ ವೇಳೆ ಅರಣ್ಯ ಇಲಾಖೆಯ ತಿಪ್ಪೇಸ್ವಾಮಿ ಎಂಬುವವರಿಗೆ ಆನೆ ತಿವಿದಿತ್ತು. ಗಾಯಗೊಂಡ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಬುಧವಾರ ಸಂಜೆ ವೇಳೆಗೆ ಆನೆಯು ಹೊಸಹಳ್ಳಿಯಿಂದ ಹೊಮ್ಮನಹಳ್ಳಿ ಮೂಲಕ ಹನುಮನಹಳ್ಳಿ ಕಡೆಗೆ ತೆರಳಿತ್ತು.

ಮುಂಜಾನೆ ಆಘಾತ: ಗುರುವಾರ ಬೆಳಿಗ್ಗೆ 5.30ಕ್ಕೆ ಶೈಲೇಂದ್ರ ಹಾಗೂ ಆಶಾ ದಂಪತಿ ಹಿರೇಕೋಗಲೂರಿನಲ್ಲಿ ವಾಯುವವಿಹಾರಕ್ಕೆ ತೆರಳಿದ್ದರು.

‘ಬೆಳಿಗ್ಗೆ 5.45ರ ಸುಮಾರಿಗೆ ವಾಪಸ್‌ ಬರುತ್ತಿದ್ದಾಗ ತೋಟದಲ್ಲಿ ಶಬ್ದ ಕೇಳಿಸಿಕೊಂಡಿತು. ಸಮೀಪಕ್ಕೆ ಹೋಗಿ ನೋಡಿದಾಗ ಏಕಾಏಕಿ ಮರಿಯಾನೆ ಎದುರಿಗೆ ಬಂತು. ಗಾಬರಿಯಿಂದ ನಾವು ಓಡಿ ಹೋಗುತ್ತಿದ್ದೆವು. ಈ ವೇಳೆ ಆಶಾ ಜಾರಿ ಬಿದ್ದಳು. ನಮ್ಮನ್ನು ಹಿಂಬಾಲಿಸಿಕೊಂಡು ಬಂದ ಆನೆ ಇಬ್ಬರಿಗೂ ತಿವಿದು ಗಿರಿಯಾಪುರ ಕಡೆಗೆ ಹೋಯಿತು’ ಎಂದು ಶೈಲೇಂದ್ರ ‘ಪ್ರಜಾವಾಣಿ’ಗೆ ತಿಳಿಸಿದರು.

ಗುಂಪಿನಿಂದ ತಪ್ಪಿಸಿಕೊಂಡು ಬಂದಿರುವ ಮರಿಯಾನೆ ದಾಂಧಲೆ ನಡೆಸುತ್ತಿದ್ದು, ಗ್ರಾಮಸ್ಥರು ಭಯಗೊಂಡಿದ್ದಾರೆ. ಮರಿಯಾನೆಯನ್ನು ಹಿಡಿದು ಸಾಗಿಸಬೇಕು ಎಂದು ಅರಣ್ಯ ಇಲಾಖೆ ಅಧಿಕಾರಿಗಳನ್ನು ಒತ್ತಾಯಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.