ADVERTISEMENT

ವಾಣಿಜ್ಯೋದ್ಯಮದ ಕಸ ಸಂಗ್ರಹ ಶುರು

ಕಸ ಉತ್ಪಾದನೆ, ಅಂಗಡಿಗಳ ವಿಸ್ತೀರ್ಣದ ಆಧಾರದಲ್ಲಿ ದರ ನಿಗದಿ

ಬಾಲಕೃಷ್ಣ ಪಿ.ಎಚ್‌
Published 20 ಜನವರಿ 2019, 19:45 IST
Last Updated 20 ಜನವರಿ 2019, 19:45 IST
ದಾವಣಗೆರೆ ಪಾಲಿಕೆ ವ್ಯಾಪ್ತಿಯಲ್ಲಿ ರಾತ್ರಿ ಕಸ ಸಂಗ್ರಹಣೆ
ದಾವಣಗೆರೆ ಪಾಲಿಕೆ ವ್ಯಾಪ್ತಿಯಲ್ಲಿ ರಾತ್ರಿ ಕಸ ಸಂಗ್ರಹಣೆ   

ದಾವಣಗೆರೆ: ಮನೆ ಮನೆಗಳಿಂದ ಕಸ ಸಂಗ್ರಹ ಮಾಡುತ್ತಿರುವುದು ಹಳೇ ವಿಚಾರ. ಅಂಗಡಿಗಳಿಂದ ಕಸ ವಿಂಗಡಿಸಿ, ಸಂಗ್ರಹಿಸುವ ವ್ಯವಸ್ಥೆ ಇಲ್ಲಿನ ಪಾಲಿಕೆ ವ್ಯಾಪ್ತಿಯಲ್ಲಿ ಪ್ರಥಮ ಬಾರಿಗೆ ಜಾರಿಗೆ ಬಂದಿದೆ. ಕಸ ಉತ್ಪಾದನೆ ಮತ್ತು ಅಂಗಡಿಗಳ ವಿಸ್ತೀರ್ಣಕ್ಕೆ ಅನುಗುಣವಾಗಿ ದರ ನಿಗದಿಪಡಿಸಿ ಕಸ ಸಂಗ್ರಹಕ್ಕೆ ಹೊಸವರ್ಷದಲ್ಲಿ ಚಾಲನೆ ಸಿಕ್ಕಿದೆ.

ಪಾಲಿಕೆ ವ್ಯಾಪ್ತಿಯನ್ನು ನಾಲ್ಕು ವಿಭಾಗಗಳನ್ನಾಗಿ ಮಾಡಲಾಗಿದ್ದು, ಚಿರಂತನ, ದೇವನಗರ, ಕರ್ನಾಟಕ ದಲಿತ ಸೇನಾ ಸಮಿತಿ ಮತ್ತು ಪವನ್‌ ಎಂಬ ನಾಲ್ಕು ಏಜೆನ್ಸಿಗಳಿಗೆ ಈ ಗುತ್ತಿಗೆಯನ್ನು ನೀಡಲಾಗಿದೆ. ಹೆಚ್ಚು ಅಂಗಡಿ ಮಳಿಗೆಗಳು ಇರುವಲ್ಲಿ ಎರಡು ಏಜೆನ್ಸಿಗಳು ರಾತ್ರಿ ಕೂಡ ಕಸ ಸಂಗ್ರಹಿಸುತ್ತವೆ.

ತರಕಾರಿ, ಹಣ್ಣಿನ ಸಿಪ್ಪೆ, ಹೂವು, ಹಣ್ಣುಗಳು, ಕಾಫಿ–ಟೀ, ಸಾಂಬಾರು, ಮೊಸರು, ಉಳಿದ ಆಹಾರ ಪದಾರ್ಥಗಳು, ಒಣಎಲೆ, ಬಾಳೆಎಲೆ, ಅಡಿಕೆ ಹಾಳೆ ಇತ್ಯಾದಿಯನ್ನು ಹಸಿ ಕಸ ಎಂದು ಗುರುತಿಸಲಾಗಿದೆ. ಪತ್ರಿಕೆ, ವಿವಿಧ ನಮೂನೆಯ ಕಾಗದಗಳು, ಕ್ಯಾನ್‌, ಪೈಪ್‌, ಬಾಟಲ್‌ ಸೇರಿ ಎಲ್ಲ ತರಹದ ಪ್ಲಾಸ್ಟಿಕ್‌, ಫೈಬರ್‌ ವಸ್ತುಗಳು, ಟಿನ್‌, ಅಲ್ಯೂಮಿನಿಯಂ, ಕಬ್ಬಿಣ, ಚಾಕು, ಬ್ಲೇಡ್‌, ಪೆನ್‌ ಮತ್ತಿತರ ಲೋಹಗಳ ಸಾಮಗ್ರಿಗಳು, ಗಾಜುಗಳನ್ನೆಲ್ಲ ಒಣ ಕಸ ಎಂದು ವಿಂಗಡಿಸಲಾಗಿದೆ. ಪ್ರತಿ ಅಂಗಡಿ, ಹೋಟೆಲ್‌, ಇನ್ನಿತರ ವಾಣಿಜ್ಯೋದ್ಯಮ ಶಾಪ್‌ಗಳವರೇ ಕಸವನ್ನು ಈ ರೀತಿ ವಿಂಗಡಿಸಿ ನೀಡಬೇಕು ಎಂದು ಪಾಲಿಕೆ ಆಯುಕ್ತ ಮಂಜುನಾಥ್‌ ಬಳ್ಳಾರಿ ‘ಪ್ರಜಾವಾಣಿ’ಗೆ ತಿಳಿಸಿದರು.

ADVERTISEMENT

ಮದುವೆ ಮತ್ತಿತರ ಕಾರ್ಯಕ್ರಮಗಳು ಇದ್ದಲ್ಲಿ, ಕಸ ಸಂಗ್ರಹಿಸಲು ಮಾಹಿತಿ ನೀಡಿದರೆ ಪಾಲಿಕೆಯಿಂದಲೇ ಕಸ ಸಂಗ್ರಹಿಸುವ ವ್ಯವಸ್ಥೆ ಮಾಡಲಾಗುವುದು. ಕಾರ್ಯಕ್ರಮ ಆಯೋಜಕರಿಗೆ ಇದರಿಂದ ಕಸ ವಿಲೇವಾರಿಯ ಒತ್ತಡ ತಪ್ಪಲಿದೆ ಎಂಬುದು ಆಯುಕ್ತರ ಅಭಿಪ್ರಾಯ.

ಆರೋಗ್ಯ, ಶಿಕ್ಷಣ ಮತ್ತು ಸ್ಥಾಯಿ ಸಮಿತಿಯು ಮೊದಲು ಈ ಬಗ್ಗೆ ತೀರ್ಮಾನ ಕೈಗೊಂಡಿತು. ಪಾಲಿಕೆ ಸಭೆಯಲ್ಲಿ ಇದು ಅನುಮೋದನೆಗೊಂಡು ಕಾರ್ಯರೂಪಕ್ಕೆ ಬಂದಿದೆ. ಇದು ಆರಂಭದ ತಿಂಗಳು ಆಗಿರುವುದರಿಂದ ಸ್ವಲ್ಪ ವ್ಯತ್ಯಾಸ ಆಗುವುದು ಸಹಜ. ವ್ಯಾಪಾರಿಗಳ ಸ್ಪಂದನ ಮತ್ತು ಒಳಿತು–ಕೆಡುಕುಗಳ ಮಾಹಿತಿ ನೋಡಿಕೊಂಡು ಮುಂದೆ ಅವಶ್ಯಕತೆ ಇದ್ದರೆ ಸಣ್ಣಸಣ್ಣ ಬದಲಾವಣೆ ಮಾಡಲು ಅವಕಾಶ ಇದೆ ಎಂದು ಆರೋಗ್ಯ, ಶಿಕ್ಷಣ ಮತ್ತು ಸ್ಥಾಯಿ ಸಮಿತಿ ಅಧ್ಯಕ್ಷ ಎಸ್‌. ಸುರೇಂದ್ರ ಮೊಯ್ಲಿ ತಿಳಿಸಿದ್ದಾರೆ.

ರಾತ್ರಿ ವ್ಯಾಪಾರ ಮುಗಿಸಿ ಹೋಗುವಾಗ ರಸ್ತೆ ಬದಿಯಲ್ಲಿ ಕಸ ಬಿಸಾಡುವುದಕ್ಕೆ ಕಡಿವಾಣ ಬೀಳಲಿದೆ. ನಗರದ ಸ್ವಚ್ಛತೆ ಕಾಪಾಡಲು ಇದು ಮಹತ್ವದ ಯೋಜನೆಯಾಗಲಿದೆ ಎಂಬುದು ಮೇಯರ್‌ ಶೋಭಾ ಪಲ್ಲಗಟ್ಟೆ ಅವರ ಅಭಿಪ್ರಾಯ.

*
ಒಳ್ಳೆಯ ಯೋಜನೆ. ಆದರೆ ನಿಗದಿ ಮಾಡಿರುವ ದರ ಕೆಲವಕ್ಕೆ ಹೆಚ್ಚಾಗಿದೆ. ಕಂಪ್ಯೂಟರ್‌ ಶಾಪ್‌ಗಳು, ಶಿಕ್ಷಣ ಸಂಸ್ಥೆಗಳು, ಹಾಸ್ಟೆಲ್‌ಗಳಿಗೆ ದರ ಕಡಿಮೆ ಮಾಡಬೇಕು.
-ರೇಖಾ ನಾಗರಾಜ್‌, ಪಾಲಿಕೆ ಸದಸ್ಯೆ.

*
ಸರ್ಕಾರ ನಿಗದಿ ಮಾಡಿದ ದರಕ್ಕಿಂತಲೂ ಕನಿಷ್ಠ ವಿಧಿಸಲಾಗಿದೆ. ದರದಿಂದ ತುಂಬಾ ತೊಂದರೆ ಆಗುವುದು ನಿಜವಾಗಿ ಕಂಡು ಬಂದರೆ ಮುಂದೆ ಪರಿಶೀಲಿಸಿ ಬದಲಾಯಿಸಲು ಅವಕಾಶ ಇದೆ.
-ಮಂಜುನಾಥ ಬಳ್ಳಾರಿ, ದಾವಣಗೆರೆ ಮಹಾನಗರ ಪಾಲಿಕೆ ಆಯುಕ್ತ

***
ದರ ವಿವರ

200 ಚದರ ಅಡಿಗಿಂತ ಕಡಿಮೆ ಇರುವ ಅಂಗಡಿ ₹ 400

200 ಚದರ ಅಡಿಗಿಂತ ಹೆಚ್ಚು ವಿಸ್ತೀರ್ಣ ಇರುವ ಅಂಗಡಿ ₹ 800

ಕೋಳಿ ಮತ್ತು ಮಾಂಸದ ಅಂಗಡಿ ₹ 750

ಶಿಕ್ಷಣ ಸಂಸ್ಥೆಗಳು ಮತ್ತು ಹಾಸ್ಟೆಲ್‌ ತಲಾ ₹ 1,500

30 ಸೀಟ್‌ಗಳಿಗಿಂತ ಹೆಚ್ಚಿಗೆ ಇರುವ ಹೋಟೆಲ್‌, ಜ್ಯೂಸ್‌ ಸ್ಟಾಲ್‌, ತಿಂಡಿ ಅಂಗಡಿ ₹ 1,500

30 ಸೀಟ್‌ಗಳಿಗಿಂತ ಕಡಿಮೆ ಇರುವ ಹೋಟೆಲ್‌, ಜ್ಯೂಸ್‌ ಸ್ಟಾಲ್‌, ತಿಂಡಿ ಅಂಗಡಿ ₹1,000

ಸಿನಿಮಾ ಮಂದಿರ ₹ 1,500

ಬಾರ್‌ ಮತ್ತು ರೆಸ್ಟೊರೆಂಟ್‌ ₹ 1,500

ಬೀದಿಬದಿ ವ್ಯಾಪಾರಿಗಳು, ಗೂಡಂಗಡಿ ₹ 100

ಆಸ್ಪತ್ರೆ/ ನರ್ಸಿಂಗ್‌ ಹೋಂ ₹ 1,500

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.