ADVERTISEMENT

ಹವಾಮಾನ ವೈಪರೀತ್ಯ, ರೋಗ ಬಾಧೆ | ತೀವ್ರವಾಗಿ ಕುಸಿದ ಮಾವಿನ ಇಳುವರಿ

ಹವಾಮಾನ ವೈಪರೀತ್ಯ, ರೋಗ ಬಾಧೆ; ತೀವ್ರ ನಷ್ಟ

ಕೆ.ಎಸ್.ವೀರೇಶ್ ಪ್ರಸಾದ್
Published 7 ಮೇ 2025, 6:02 IST
Last Updated 7 ಮೇ 2025, 6:02 IST
ಸಂತೇಬೆನ್ನೂರು ಬಳಿಯ ಮಾವಿನ ತೋಟದಲ್ಲಿ ಫಸಲು ಕಡಿಮೆಯಾಗಿರುವುದು
ಸಂತೇಬೆನ್ನೂರು ಬಳಿಯ ಮಾವಿನ ತೋಟದಲ್ಲಿ ಫಸಲು ಕಡಿಮೆಯಾಗಿರುವುದು   

ಸಂತೇಬೆನ್ನೂರು: ಹವಾಮಾನ ವೈಪರೀತ್ಯ, ರೋಗ ಬಾಧೆ ಪರಿಣಾಮವಾಗಿ ಮಾವಿನ ಫಸಲು ಈ ಬಾರಿಯೂ ತೀವ್ರ ಕುಸಿತ ಕಂಡಿದೆ. ರುಚಿಕರ ತಳಿಗಳ ಮಾವಿನ ಕಣಜ ಎಂದು ಕರೆಸಿಕೊಂಡಿದ್ದ ಈ ಭಾಗದಲ್ಲಿ ನಿರೀಕ್ಷೆಗೂ ಮೀರಿದ ಇಳುವರಿ ಕುಸಿತವು ರೈತರು, ಗೇಣಿದಾರರಿಗೆ ನಷ್ಟ ಉಂಟು ಮಾಡಿದೆ.

ಡಿಸೆಂಬರ್‌ನಲ್ಲಿ ಭರಪೂರ ಹೂ, ಗೊಂಚಲು ಮೂಡಿ ಉತ್ತಮ ಇಳುವರಿ ನಿರೀಕ್ಷೆ ಮೂಡಿಸಿತ್ತು. ಆದರೆ ಮಂಜು ಕವಿದ ವಾತಾವರಣ ಮಾವು ಬೆಳೆಗೆ ಮತ್ತೊಮ್ಮೆ ಹೊಡೆತ ಕೊಟ್ಟಿದೆ. ಮೊಗ್ಗಿನ ಹಂತದಲ್ಲಿಯೇ ಔಷಧಿ ಸಿಂಪಡಿಸಿದರೂ ರೋಗ ನಿಯಂತ್ರಣಕ್ಕೆ ಬಂದಿಲ್ಲ. ಫೆಬ್ರುವರಿಯಲ್ಲಿ ತಾಪಮಾನ ಹೆಚ್ಚಳವಾಗಿ ಈಚುಗಳು ಉದುರಿದ ಪರಿಣಾಮವಾಗಿ ಇಳುವರಿ ಪ್ರಮಾಣ ಕುಸಿಯಿತು.

‘ಸಂತೇಬೆನ್ನೂರು, ಕುಳೇನೂರು, ದೊಡ್ಡಬ್ಬಿಗೆರೆ, ಚಿಕ್ಕಬೆನ್ನೂರು, ದೊಡ್ಡೇರಿಕಟ್ಟೆ, ಸಿದ್ಧನಮಠ ಗ್ರಾಮಗಳ ವ್ಯಾಪ್ತಿಯ ಮಾವಿನ ತೋಟಗಳು ಕಾಯಿ ಇಲ್ಲದೇ ಭಣಗುಡುತ್ತಿವೆ’ ಎನ್ನುತ್ತಾರೆ ರೈತ ರಾಜು.

ADVERTISEMENT

‘ಆರು ಎಕರೆಯಲ್ಲಿ ಬಾದಾಮಿ, ರಸಪೂರಿ ಮಾವು ಬೆಳೆಯನ್ನು ಖೇಣಿ ನೀಡಿದ್ದೆ. ₹ 6,000 ಮುಂಗಡ ನೀಡಿ ತೆರಳಿದ್ದ ಖೇಣಿದಾರ, ಬೆಳೆ ಕುಸಿತದಿಂದ ತೋಟದತ್ತ ಮುಖ ಮಾಡಿಲ್ಲ’ ಎನ್ನುತ್ತಾರೆ ಸಿದ್ದನಮಠದ ರೈತ ಹಾಲೇಶ್.

ವಿಮೆ ಮಾಡಿಸಲು ಹಿಂದೇಟು:

‘ಪ್ರತಿ ಎಕರೆಗೆ ₹ 1,600 ವಿಮೆ ಪಾವತಿಸಬೇಕು. ಕೇವಲ ಇಬ್ಬರು ವಿಮೆ ಮಾಡಿಸಿದ್ದಾರೆ. ನಾಲ್ಕು ವಿಧದ ಪ್ರಾಕೃತಿಕ ವಿಕೋಪಗಳ ಪೈಕಿ ಎರಡು ಬಗೆಯ ವಿಕೋಪಗಳಿಗೆ ಮಾತ್ರ ವಿಮೆ ಪರಿಹಾರ ಸಿಗಲಿದೆ. ಪ್ರತಿ ಎಕರೆಗೆ ₹ 35,000 ವರೆಗೆ ಪರಿಹಾರ ಸಿಗಬಹುದು’ ಎನ್ನುತ್ತಾರೆ ದೊಡ್ಡಬ್ಬಿಗೆರೆ ರೈತ ಪ್ರಸನ್ನ.

ಸಂತೇಬೆನ್ನೂರು ಹೊರವಲಯದಲ್ಲಿ ತೋಟವೊಂದರಲ್ಲಿ ಮಾವಿನ ಮರಗಳನ್ನು ಕಡಿದು ಹಾಕಿರುವುದು
ಸಂತೇಬೆನ್ನೂರಿನ ಹೊರವಲಯದ ರಾಜ್ಯ ಹೆದ್ದಾರಿ ಪಕ್ಕದಲ್ಲಿ ಚಿಲ್ಲರೆ ಮಾವು ಮಾರಾಟಗಾರರು

ಕ್ರಮಬದ್ಧ ನಿರ್ವಹಣೆ ಸಮೃದ್ಧ ಬೆಳೆ ಕ್ರಮಬದ್ಧ ನಿರ್ವಹಣೆಯಿಂದ ಗ್ರಾಮದ ಕೆ.ಎಚ್. ವಿಜಯ್ ಹಾಗೂ ಸಹೋದರರ ಮಾವು ಬೆಳೆ ಸಮೃದ್ಧವಾಗಿದೆ. ಅವರ ತೋಟದ 450 ಮಾವಿನ ಮರಗಳಿಂದ 10 ಟನ್‌ಗೂ ಹೆಚ್ಚು ಇಳುವರಿ ಬಂದಿದ್ದು ₹ 6.20 ಲಕ್ಷ ಆದಾಯ ಗಳಿಸಿದ್ದಾರೆ. ಇದರಲ್ಲಿ ಬಾದಾಮಿ ತಳಿಯೇ ಹೆಚ್ಚು. ‘ಮಳೆಗಾಲದಲ್ಲಿ ಮಾವಿನ ನಡುವೆ ಪಾಪ್ ಕಾರ್ನ್ ಬೆಳೆಯುತ್ತೇವೆ. ಒಕ್ಕಣೆ ನಂತರ ಮಾವಿನ ಮರದಲ್ಲಿ ಒಣ ಹಾಗು ಅನುಪಯುಕ್ತ ಕೊಂಬೆ ಕಡಿದು ಹಾಕುತ್ತೇವೆ. ಆಗ ಗಾಳಿ ಬೆಳಕು ಸಮೃದ್ಧವಾಗಿ ಮರದೊಳಗೆ ಪ್ರವೇಶಿಸುತ್ತದೆ. ತಜ್ಞರಿಂದ ಸಲಹೆ ಪಡೆದು ರೋಗ ಪಸರಿಸದಂತೆ ಔಷಧಿ ಸಿಂಪಡಿಸುತ್ತೇವೆ. ಸಗಣಿ ಗೊಬ್ಬರ ಅಲ್ಪ ಪ್ರಮಾಣದಲ್ಲಿ ರಾಸಾಯನಿಕ ಗೊಬ್ಬರ ಹಾಕುತ್ತವೆ. ರೋಗದ ಬಗ್ಗೆ ನಿರಂತರವಾಗಿ ನಿಗಾ ವಹಿಸುವುದೇ ಸಮೃದ್ಧ ಫಸಲಿಗೆ ಕಾರಣ’ ಎನ್ನುತ್ತಾರೆ ರೈತ ಕೆ.ಎಚ್.ವಿಜಯ್.

ಮಾವಿನ ವ್ಯಾಪ್ತಿ ಕುಸಿತ ತಾಲ್ಲೂಕಿನಲ್ಲಿ ಅಂದಾಜು 3500 ಎಕರೆಯಲ್ಲಿ ಮಾವು ಬೆಳೆಯಲಾಗುತ್ತಿತ್ತು. ಐದಾರು ವರ್ಷಗಳಿಂದ 1500 ಎಕರೆಯಷ್ಟು ಕಡಿದು ಹಾಕಲಾಗಿದೆ. ಈಗ 2000 ಎಕರೆಯಲ್ಲಷ್ಟೇ ಮಾವು ಬೆಳೆಯಲಾಗುತ್ತಿದೆ ಎನ್ನುತ್ತಾರೆ ಚನ್ನಗಿರಿಯ ಹಿರಿಯ ತೋಟಗಾರಿಕಾ ಅಧಿಕಾರಿ ಕೆ.ಎಸ್.ಶ್ರೀಕಾಂತ್.  ‘ಹೂವಿನ ಹಂತದಲ್ಲಿ ಜಿಗಿಹುಳುವಿನ ಜೊಲ್ಲು ರಸ ಬೀಳುತ್ತದೆ. ಇದರಿಂದ ದೂಳು ಹಿಡಿದು ಹೂವು ಒಣಗುತ್ತವೆ. ಫೆಬ್ರುವರಿಯಲ್ಲೇ 35 ಡಿಗ್ರಿ ಸೆಲ್ಸಿಯಸ್‌ಗಿಂತ ಹೆಚ್ಚಿನ ತಾಪಮಾನ ಇದ್ದ ಕಾರಣ ಈಚು ಉದುರಿದ್ದವು. ನಿರ್ವಹಣೆ ಕೊರತೆಯೂ ಇಳುವರಿ ಕುಸಿತಕ್ಕೆ ಕಾರಣವಾಗಿದೆ. ಈ ಬಗ್ಗೆ ಮಾವು ಬೆಳೆಗಾರರಿಗಾಗಿ ಮುಂದಿನ ಹಂಗಾಮಿನೊಳಗಾಗಿ ವಿಚಾರ ಗೋಷ್ಠಿ ಆಯೋಜಿಸಿ ಮಾಹಿತಿ ನೀಡಲಾಗುವುದು’ ಎಂದು ಅವರು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.