ADVERTISEMENT

ಮೂರು ದಿನದೊಳಗೆ ಸೌಲಭ್ಯ ಕಲ್ಪಿಸಿ

ಮಹಾನಗರ ಪಾಲಿಕೆ ಸಭೆಯಲ್ಲಿ ಮೇಯರ್‌ ಬಿ.ಜೆ.ಅಜಯ್‌ಕುಮಾರ್ ಸೂಚನೆ

​ಪ್ರಜಾವಾಣಿ ವಾರ್ತೆ
Published 22 ಫೆಬ್ರುವರಿ 2020, 13:50 IST
Last Updated 22 ಫೆಬ್ರುವರಿ 2020, 13:50 IST
ದಾವಣಗೆರೆ ಮಹಾನಗರ ಪಾಲಿಕೆಯಲ್ಲಿ ಮೇಯರ್ ಬಿ.ಜೆ.ಅಜಯ್‌ಕುಮಾರ್ ನೇತೃತ್ವದಲ್ಲಿ ಶನಿವಾರ ಸಭೆ ನಡೆಯಿತು.
ದಾವಣಗೆರೆ ಮಹಾನಗರ ಪಾಲಿಕೆಯಲ್ಲಿ ಮೇಯರ್ ಬಿ.ಜೆ.ಅಜಯ್‌ಕುಮಾರ್ ನೇತೃತ್ವದಲ್ಲಿ ಶನಿವಾರ ಸಭೆ ನಡೆಯಿತು.   

ದಾವಣಗೆರೆ: ನಗರದ ದೇವತೆ ದುರ್ಗಾಂಬಿಕಾ ಜಾತ್ರೆಯ ಹಿನ್ನೆಲೆಯಲ್ಲಿ ನಗರದ ಜನರಿಗೆ ಬೇಕಾಗಿರುವ ಮೂಲಸೌಲಭ್ಯಗಳನ್ನು 3 ದಿನದೊಳಗೆ ಕಲ್ಪಿಸಬೇಕು ಎಂದು ಮಹಾನಗರ ಪಾಲಿಕೆ ಮೇಯರ್ ಬಿ.ಜೆ. ಅಜಯ್‌ಕುಮಾರ್ ಅಧಿಕಾರಿಗಳಿಗೆ ಸೂಚಿಸಿದರು.

ಹಬ್ಬದ ಪ್ರಯುಕ್ತ ಪಾಲಿಕೆ ಸಭಾಂಗಣದಲ್ಲಿ ಅಧಿಕಾರ ಸ್ವೀಕಾರದ ನಂತರ ಇದೇ ಮೊದಲ ಬಾರಿಗೆ ಶನಿವಾರ ನಡೆದ ಪಾಲಿಕೆ ಸದಸ್ಯರು ಹಾಗೂ ಅಧಿಕಾರಿಗಳ ಸಭೆಯಲ್ಲಿ ಅವರು ಮಾತನಾಡಿದರು.

‘ನಗರದ ಸಮಸ್ಯೆಗಳು ಇರುವುದು ಗೊತ್ತಾಗಿದೆ. 8 ತಿಂಗಳು ಚುನಾವಣೆ ನಡೆದಿರಲಿಲ್ಲ. ಈಗ 3 ತಿಂಗಳಾಯಿತು. ಜನಪ್ರತಿನಿಧಿಗಳು ಇಲ್ಲದೇ ಇರುವುದರಿಂದ ಅಧಿಕಾರಿವರ್ಗ ಕೆಲಸದ ಕಡೆ ಹೆಚ್ಚಾಗಿ ಗಮನ ಹರಿಸಿಲ್ಲ. ಪಾಲಿಕೆ ಸದಸ್ಯರ ದೂರವಾಣಿಗೆ ಸ್ಪಂದಿಸಬೇಕು. ಹಿಂದೆ ಯಾವ ರೀತಿ ಕೆಲಸ ಮಾಡಿದ್ದೀರಿ ಎಂಬುದು ನನಗೆ ಗೊತ್ತಿಲ್ಲ. ಕೆಲವರು ಗೌರವ ಕೊಡದೇ ಇರುವುದು ಗಮನಕ್ಕೆ ಬಂದಿದೆ. ಸದಸ್ಯರಿಗೆ ಬೇಧ ಬಾವ ಮಾಡದೇ ಅವರಿಗೆ ಸ್ಪಂದಿಸುವ ವಿವೇಚನೆ ಇಟ್ಟುಕೊಂಡರೆ ಒಳ್ಳೆಯದು. ಇಲ್ಲದೇ ಇದ್ದರೆ ಕ್ರಮ ತೆಗೆದುಕೊಳ್ಳಲು ಹಿಂಜರಿಯುವುದಿಲ್ಲ’ ಎಂದು ಎಚ್ಚರಿಸಿದರು.

ADVERTISEMENT

‘ಹಬ್ಬದ ಅಂಗವಾಗಿ ಸಾರ್ವಜನಿಕರಿಗೆ ಬೇಕಾಗಿರುವ ಸೌಲಭ್ಯಗಳನ್ನು ಸದಸ್ಯರು ಪಟ್ಟಿ ಮಾಡಿಕೊಡಿ, ಆಯುಕ್ತರ ಜೊತೆ ಚರ್ಚಿಸುತ್ತೇನೆ. ಅಧಿಕಾರಿಗಳು ಮೂರು ದಿನದಲ್ಲಿ ಕೆಲಸ ಮಾಡಿಕೊಡಬೇಕು. ಭಾನುವಾರವೂ ರಜೆ ತೆಗೆದುಕೊಳ್ಳದಂತೆ ಕೆಲಸ ಮಾಡಿಕೊಡಬೇಕು. ಪೌರ ಕಾರ್ಮಿಕರು, ವಾಹನಗಳು ಹಾಗೂ ಸಲಕರಣೆ ಇಲ್ಲದಿದ್ದರೆ ಕೊಡಿಸುತ್ತೇನೆ. ವಾಹನಗಳನ್ನು ಬಾಡಿಗೆಗೆ ಪಡೆದಾದರೂ ಶೀಘ್ರ ಕೆಲಸ ಮಾಡಿ’ ಎಂದರು.

‘ಜನರಿಗೆ ಆಶ್ವಾಸನೆ ಕೊಟ್ಟು ಪಾಲಿಕೆ ಸದಸ್ಯರು ಗೆದ್ದು ಬಂದಿದ್ದಾರೆ. ಜನರು ನಂಬಿಕೆ ಇಟ್ಟು ಗೆಲ್ಲಿಸಿದ್ದಾರೆ. ಅವರ ನಿರೀಕ್ಷೆಗೆ ತಕ್ಕಂತೆ ಕೆಲಸ ಮಾಡಬೇಕಾಗುತ್ತದೆ. ಅದಕ್ಕೆ ಅಧಿಕಾರಿಗಳು ಸ್ಪಂದಿಸಬೇಕು. ಎಂದರು.

ಏಕಮುಖ ಸಂಚಾರ: ಎಸ್‌ಪಿ ಜೊತೆ ಚರ್ಚೆ

ಹಬ್ಬದ ಪ್ರಯುಕ್ತ ವಾಹನ ದಟ್ಟಣೆ ಹೆಚ್ಚಾಗಲಿದ್ದು, ಯಾವ ರಸ್ತೆಗಳನ್ನು ಏಕಮುಖ ಸಂಚಾರ ಕಲ್ಪಿಸಬೇಕು ಎಂಬುದರ ಕುರಿತು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅವರ ಜೊತೆ ಚರ್ಚಿಸಲಾಗುವುದು ಎಂದರು.

ವಾಹನದಟ್ಟಣೆ ಹೆಚ್ಚು ಇರುವುದರಿಂದ ಅರುಣಾ ಟಾಕೀಸ್‌ ಮಾರ್ಗವಾಗಿ ನಾಲ್ಕು ಚಕ್ರದ ವಾಹನಗಳನ್ನು ಬಿಡದೇ ಇರುವುದು ಒಳ್ಳೆಯದು. ಜನರಿಗೆ ತೊಂದರೆಯಾಗುತ್ತದೆ ಇದಕ್ಕೆ ಸಹಕರಿಸಬೇಕು ಎಂದು ಮನವಿ ಮಾಡಿದರು.

ಕುಡಿಯುವ ನೀರು:ಮಾರ್ಚ್ 1ರಂದು ಎಲ್ಲಾ ಭಾಗಗಳಲ್ಲೂ ನೀರು ಕೊಡಬೇಕು. ಅದರ ನಂತರ ಒಂದು ದಿವಸ ಬಿಟ್ಟು 3, 4 ಹಾಗೂ 5ರಂದು ನಿರಂತರವಾಗಿ ಒಂದೂವರೆ ಗಂಟೆ ಆನಂತರ ದಿನಗಳಲ್ಲಿ ಒಂದು ದಿನ ಬಿಟ್ಟು ಮತ್ತೊಂದು ದಿವಸ ನೀರು ಬಿಡಬೇಕು. ಶ್ರೀಮಂತರಷ್ಟೇ ಅಲ್ಲ ಒಬ್ಬ ವ್ಯಾಪಾರಿ ಕರೆದರೂ ಟ್ಯಾಂಕರ್ ಮೂಲಕ ನೀರು ಪೂರೈಸಬೇಕು’ ಎಂದು ಸೂಚಿಸಿದರು.

‘ಹಬ್ಬದ ಸಂದರ್ಭ 10 ದಿವಸ ಎಲ್ಲಾ ವಾರ್ಡ್‌ಗಳಲ್ಲೂ ನಿರಂತರವಾಗಿ ವಿದ್ಯುತ್ ಸೌಲಭ್ಯ ಕಲ್ಪಿಸುವಂತೆ ಬೆಸ್ಕಾಂ ಅಧಿಕಾರಿಗಳಿಗೆ ಸೂಚಿಸುವುದಾಗಿ ತಿಳಿಸಿದ ಅವರು, ವಿವಿಐಪಿ ಪಾಸ್ ಸಂಬಂಧ ದೇವಸ್ಥಾನದ ಸಮಿತಿಯವರ ಜೊತೆ ಚರ್ಚಿಸಿ ನೀಡುವ ವ್ಯವಸ್ಥೆ ಮಾಡುತ್ತೇನೆ’ ಎಂದರು.

ಪ್ರತಿ ವಾರ್ಡ್‌ನಲ್ಲೂ ಸಭೆ:‘ಜನರ ಸಮಸ್ಯೆ ಬಗೆಹರಿಸುವ ನಿಟ್ಟಿನಲ್ಲಿ ಹಬ್ಬದ ನಂತರ ಪ್ರತಿ ವಾರ್ಡ್‌ನಲ್ಲೂ ಸಭೆ ನಡೆಸಲಿದ್ದು, ಜನರು ತಮ್ಮ ಸಮಸ್ಯೆಗಳನ್ನು ಹೇಳಿಕೊಳ್ಳಬಹುದು. ಅಧಿಕಾರಿಗಳು ಸ್ಥಳದಲ್ಲೇ ಹಾಜರಿದ್ದು, ಸಮಸ್ಯೆಗಳನ್ನು ಬಗೆಹರಿಸುವರು’ ಎಂದು ಅಜಯ್‌ಕುಮಾರ್ ಕುಮಾರ್‌

ಉಪಮೇಯರ್ ಸೌಮ್ಯಾ ನರೇಂದ್ರಕುಮಾರ್ ಹಾಗೂ ಸದಸ್ಯರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.