ADVERTISEMENT

ರೈತ, ಕಾರ್ಮಿಕ ವಿರೋಧಿ ನೀತಿಗೆ ಖಂಡನೆ

ಎಐಕೆಎಸ್‍ಸಿಸಿಯಿಂದ ಹೆದ್ದಾರಿ ತಡೆ

​ಪ್ರಜಾವಾಣಿ ವಾರ್ತೆ
Published 5 ನವೆಂಬರ್ 2020, 13:32 IST
Last Updated 5 ನವೆಂಬರ್ 2020, 13:32 IST
ದಾವಣಗೆರೆಯ ಜಿಲ್ಲಾ ಪಂಚಾಯಿತಿ ಕಚೇರಿ ಎದುರು ಗುರುವಾರ ಅಖಿಲ ಭಾರತ ರೈತ ಸಂಘರ್ಷ ಸಮನ್ವಯ ಸಮಿತಿ ನೇತೃತ್ವದಲ್ಲಿ ರೈತ ಮುಖಂಡರು ರಾಷ್ಟ್ರೀಯ ಹೆದ್ದಾರಿ ತಡೆ ನಡೆಸಿದರು.             –ಪ್ರಜಾವಾಣಿ ಚಿತ್ರ/ಸತೀಶ್ ಬಡಿಗೇರ್
ದಾವಣಗೆರೆಯ ಜಿಲ್ಲಾ ಪಂಚಾಯಿತಿ ಕಚೇರಿ ಎದುರು ಗುರುವಾರ ಅಖಿಲ ಭಾರತ ರೈತ ಸಂಘರ್ಷ ಸಮನ್ವಯ ಸಮಿತಿ ನೇತೃತ್ವದಲ್ಲಿ ರೈತ ಮುಖಂಡರು ರಾಷ್ಟ್ರೀಯ ಹೆದ್ದಾರಿ ತಡೆ ನಡೆಸಿದರು.             –ಪ್ರಜಾವಾಣಿ ಚಿತ್ರ/ಸತೀಶ್ ಬಡಿಗೇರ್   

ದಾವಣಗೆರೆ: ಕೇಂದ್ರ, ರಾಜ್ಯ ಸರ್ಕಾರಗಳ ರೈತ, ಕಾರ್ಮಿಕ, ಜನ ವಿರೋಧಿ ನೀತಿಗಳನ್ನು ಖಂಡಿಸಿ ಅಖಿಲ ಭಾರತ ರೈತ ಸಂಘರ್ಷ ಸಮನ್ವಯ ಸಮಿತಿ (ಎಐಕೆಎಸ್‍ಸಿಸಿ) ಸಂಘಟನೆಯಿಂದ ಗುರುವಾರ ಹೆದ್ದಾರಿ ತಡೆ ನಡೆಸಲಾಯಿತು.

ಸಮಿತಿ ನೇತೃತ್ವದಲ್ಲಿಜಿಲ್ಲಾ ಪಂಚಾಯಿತಿ ಎದುರಿನ ಜೆ.ಎಚ್. ಪ್ರತಿಮೆಗೆ ಮಾಲಾರ್ಪಣೆ ಮಾಡಿದ ರೈತ ಸಂಘ, ಹಸಿರು ಸೇನೆ, ಕಿಸಾನ್‌ ಸಭಾದ ಮುಖಂಡರು ರಾಷ್ಟ್ರೀಯ ಹೆದ್ದಾರಿ ತಡೆ ನಡೆಸಿ ಜನ ವಿರೋಧಿ ಕಾಯ್ದೆಗಳನ್ನು ಹಿಂಪಡೆಯುವಂತೆ ಆಗ್ರಹಿಸಿದರು.

ಎಐಕೆಎಸ್‍ನ ಜಿಲ್ಲಾ ಘಟಕದ ಅಧ್ಯಕ್ಷ ಆವರಗೆರೆ ಎಚ್.ಜಿ. ಉಮೇಶ್, ‘ಪ್ರಧಾನಿ ಮೋದಿ ಹಾಗೂ ಮುಖ್ಯಮಂತ್ರಿ ಬಿ.ಎಸ್.‌ ಯಡಿಯೂರಪ್ಪ ಸರ್ಕಾರದ ಲಾಭದಾಯಕ ಅಂಗ ಸಂಸ್ಥೆಗಳನ್ನು ನಿರ್ವಹಣೆ ಮಾಡದೆ ದಿವಾಳಿ ಮಾಡಿದ್ದಾರೆ. ದೇಶದ ಆರ್ಥಿಕತೆ ಬಲಪಡಿಸಲು ಹಿಂದಿನ ನಾಯಕರು ಬಿಎಸ್‍ಎನ್‍ಎಲ್, ಎಲ್‍ಐಸಿ, ರೈಲ್ವೆ, ವಿಮಾನಯಾನ, ವಿದ್ಯುತ್ ಪ್ರಸರಣ ನಿಗಮ ಸೇರಿ ಹಲವು ಸಂಸ್ಥೆಗಳನ್ನು ಹುಟ್ಟುಹಾಕಿ ಆರ್ಥಿಕತೆ ಭದ್ರ ಬುನಾದಿ ಹಾಕಿದ್ದರು. ಆದರೆ ಈಗಿನ ಸರ್ಕಾರ ಬಹುರಾಷ್ಟ್ರೀಯ ಕಂಪೆನಿಗಳಿಗೆ ಏಜೆಂಟ್‍ಗಿರಿ ಮಾಡಿ ಸಂಸ್ಥೆಗಳನ್ನು ಖಾಸಗಿಯವರಿಗೆ ಮಾರಾಟ ಮಾಡುತ್ತಿದೆ’ ಎಂದು ದೂರಿದರು.

ADVERTISEMENT

ಜಿಲ್ಲಾ ಪಂಚಾಯಿತಿ ಸದಸ್ಯ ತೇಜಸ್ವಿ ಪಟೇಲ್, ‘ಖಾಸಗಿಯವರ ಜೇಬು ತುಂಬಿಸುವ ಹಲವಾರು ಯೋಜನೆಗಳನ್ನು ಜಾರಿ ಮಾಡುತ್ತಿರುವ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಚುನಾವಣೆ ಪೂರ್ವದ ಯಾವ ಭರವಸೆಯನ್ನೂ ಜಾರಿಗೆ ತಂದಿಲ್ಲ. ಜನಪರ, ಜನಧನ್ ಸರ್ಕಾರ, ಮನ್‍ಕೀ ಬಾತ್ ಸರ್ಕಾರ ಅಂತಾ ಹೇಳುವ ಮೋದಿ ಅವರು ಶೋ ಮ್ಯಾನ್. ಸರ್ಕಾರದ ಬೊಕ್ಕಸಕ್ಕೆ ಲಕ್ಷಾಂತರ ಕೋಟಿ ನಷ್ಟ ಮಾಡಿ ಆರ್ಥಿಕ ದಿವಾಳಿ ಮಾಡಿರುವುದೇ ಮೋದಿ, ಯಡಿಯೂರಪ್ಪ ಅವರ ಸಾಧನೆ’ ಎಂದು ಟೀಕಿಸಿದರು.

ರೈತ ಮುಖಂಡರಾದ ಹೊನ್ನೂರು ಮುನಿಯಪ್ಪ,ಹುಚ್ಚವ್ವನಹಳ್ಳಿ ಮಂಜುನಾಥ್,ಬಲ್ಲೂರು ರವಿಕುಮಾರ್, ನಿಟುವಳ್ಳಿ ಅಂಜಿನಪ್ಪಮಾತನಾಡಿದರು.

ಮುಖಂಡರಾದ ಐರಣಿ ಚಂದ್ರು, ಕೆ. ಬಾನಪ್ಪ ಅವರಗೆರೆ, ಹನುಮಂತಪ್ಪ ಕೆ.ಎಚ್., ಸಿದ್ದೇಶ್ ಆನೆಕಲ್ಲು, ಪ್ರಸಾದ್, ಮಲ್ಲಶೆಟ್ಟಹಳ್ಳಿ ಚನ್ನಬಸಪ್ಪ, ಶೇಖರನಾಯ್ಕ, ತಿಪ್ಪೇಸ್ವಾಮಿ, ಅನಿಲ್‍ಕುಮಾರ್, ಶಿವಕುಮಾರ್, ಚಂದ್ರು, ಹನುಮಂತಪ್ಪ, ಭೀಮಾರೆಡ್ಡಿ, ಬಸವರಾಜ ರಾಮಪುರ, ರೈತ ಮತ್ತು ಕಾರ್ಮಿಕ ಮುಖಂಡರು ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.