ADVERTISEMENT

ದಾವಣಗೆರೆ: ರಸ್ತೆಯಲ್ಲಿ ಭತ್ತ ಸುರಿದು ರೈತರ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 3 ಮೇ 2025, 14:28 IST
Last Updated 3 ಮೇ 2025, 14:28 IST
ದಾವಣಗೆರೆಯ ಬೀರಲಿಂಗೇಶ್ವರ ದೇವಸ್ಥಾನದ ಆವರಣದಿಂದ ಉಪವಿಭಾಗಾಧಿಕಾರಿ ಕಚೇರಿವರೆಗೆ ಜಿಲ್ಲಾ ರೈತ ಒಕ್ಕೂಟದ ಮುಖಂಡರು ಪ್ರತಿಭಟನಾ ರ್‍ಯಾಲಿ ನಡೆಸಿದರು ಪ್ರಜಾವಾಣಿ ಚಿತ್ರ
ದಾವಣಗೆರೆಯ ಬೀರಲಿಂಗೇಶ್ವರ ದೇವಸ್ಥಾನದ ಆವರಣದಿಂದ ಉಪವಿಭಾಗಾಧಿಕಾರಿ ಕಚೇರಿವರೆಗೆ ಜಿಲ್ಲಾ ರೈತ ಒಕ್ಕೂಟದ ಮುಖಂಡರು ಪ್ರತಿಭಟನಾ ರ್‍ಯಾಲಿ ನಡೆಸಿದರು ಪ್ರಜಾವಾಣಿ ಚಿತ್ರ   

ದಾವಣಗೆರೆ: ‘ಜಿಲ್ಲಾಡಳಿತವು ಕೂಡಲೇ ಭತ್ತ ಖರೀದಿಗೆ ನೋಂದಣಿ ಪ್ರಕ್ರಿಯೆ ಆರಂಭಿಸಬೇಕು. ಖರೀದಿ ಕೇಂದ್ರಗಳನ್ನು ತೆರೆಯಬೇಕು’ ಎಂದು ಒತ್ತಾಯಿಸಿ ಜಿಲ್ಲಾ ರೈತರ ಒಕ್ಕೂಟದ ನೇತೃತ್ವದಲ್ಲಿ ರೈತರು ಇಲ್ಲಿನ ಪಿ.ಬಿ.ರಸ್ತೆಯಲ್ಲಿ ವಾಹನ ಸಂಚಾರ ತಡೆದು ಶನಿವಾರ ಪ್ರತಿಭಟನೆ ನಡೆಸಿದರು.

ಮಾನವ ಸರಪಳಿ ರಚಿಸಿದ ರೈತರು, ರಸ್ತೆ ಮಧ್ಯದಲ್ಲಿ ಭತ್ತ ಸುರಿದು ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.

‘ಜಿಲ್ಲೆಯಲ್ಲಿ ಭತ್ತದ ಕಟಾವು ಆರಂಭವಾಗಿದೆ. ಮುಕ್ತ ಮಾರುಕಟ್ಟೆಯಲ್ಲಿ ಕ್ವಿಂಟಲ್ ಭತ್ತದ ದರ ₹1,900 ರಿಂದ ₹1,950 ಇದೆ. ಬೆಲೆ ಕುಸಿತದಿಂದ ರೈತರಿಗೆ ಅನ್ಯಾಯ ಆಗುತ್ತಿದೆ. ಜಿಲ್ಲಾಡಳಿತ ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿ ಕೂಡಲೇ ಭತ್ತ ಖರೀದಿ ಪ್ರಕ್ರಿಯೆ ಆರಂಭಿಸಬೇಕು’ ಎಂದು ಪ್ರತಿಭಟನಕಾರರು ಆಗ್ರಹಿಸಿದರು.

ADVERTISEMENT

‘ಕ್ವಿಂಟಲ್ ಭತ್ತಕ್ಕೆ ₹2,320 ನಿಗದಿಪಡಿಸಿದ್ದು, ರಾಜ್ಯ ಸರ್ಕಾರ ₹500 ಪ್ರೋತ್ಸಾಹಧನ ಮಂಜೂರು ಮಾಡಿ ₹2,820ರ ದರದಲ್ಲಿ ಖರೀದಿ ಮಾಡಬೇಕು’ ಎಂದು ಒತ್ತಾಯಿಸಿದರು.

‘ರೈತರು ತಾವು ಬೆಳೆದ ಬೆಳೆಗಳಿಗೆ ಬೆಂಬಲ ಬೆಲೆ ನೀಡಲು 2 ವರ್ಷಗಳಿಂದ ಕೇಳುತ್ತಿದ್ದರೂ ಸಿದ್ದರಾಮಯ್ಯ ಅವರ ಸರ್ಕಾರ ಕಣ್ಣು, ಕಿವಿ ಇಲ್ಲದಂತೆ ವರ್ತಿಸುತ್ತಿದೆ. ಪಂಚ ಗ್ಯಾರಂಟಿಗೋಸ್ಕರ ರೈತರಿಗೆ ಅಗತ್ಯವಿರುವ ಎಲ್ಲಾ ವಸ್ತುಗಳ ಬೆಲೆಯನ್ನು ಕಾಂಗ್ರೆಸ್ ಸರ್ಕಾರ ಏರಿಕೆ ಮಾಡಿದೆ. 1 ಎಕರೆ ಭತ್ತ ಬೆಳೆಯಲು ರೈತರು ₹ 25,000 ದಿಂದ ₹30,000 ಖರ್ಚು ಮಾಡಬೇಕಿದೆ. ಆದರೆ, ರೈತರಿಗೆ 15 ಕ್ವಿಂಟಲ್ ಭತ್ತ ಸಿಗುತ್ತಿಲ್ಲ. ಉತ್ತಮ ದರವೂ ಸಿಗುತ್ತಿಲ್ಲ’ ಎಂದು ಮಾಜಿ ಶಾಸಕ ಬಸವರಾಜ ನಾಯ್ಕ ದೂರಿದರು.

‘ಭತ್ತ ಖರೀದಿ ಕೇಂದ್ರಗಳನ್ನು ಆರಂಭಿಸಿ ಎಂದು ರೈತರು ಪ್ರತಿಭಟಿಸುವ ಪರಿಸ್ಥಿತಿಯೇ ಬರಬಾರದು. ಖರೀದಿ ಕೇಂದ್ರಗಳು ಸಾಂದರ್ಭಿಕ ಪ್ರಕ್ರಿಯೆ ಆಗದೆ ಶಾಶ್ವತವಾಗಿರಬೇಕು. ಜಿಲ್ಲಾಡಳಿತ ಬೇಜವಾಬ್ದಾರಿತನದಿಂದ ನಡೆದುಕೊಳ್ಳುತ್ತಿದೆ. ಖರೀದಿ ಕೇಂದ್ರದಲ್ಲಿ ರೈತರು ಹೆಸರು ನೋಂದಾಯಿಸುವ ಅವಶ್ಯಕತೆ ಇಲ್ಲ. ರೈತರು ಜಮೀನುಗಳಲ್ಲಿ ಭತ್ತ ನಾಟಿ ಮಾಡಿದ ದಿನವೇ ನೋಂದಣಿ ಮಾಡಿದಂತೆ’ ಎಂದು ರೈತ ಮುಖಂಡ ತೇಜಸ್ವಿ ಪಟೇಲ್ ಹೇಳಿದರು.

ಸ್ಥಳಕ್ಕೆ ಜಿಲ್ಲಾಧಿಕಾರಿ ಭೇಟಿ ನೀಡಿ ಮನವಿ ಸ್ವೀಕರಿಸಬೇಕು ಎಂದು ರೈತರು ಪಟ್ಟು ಹಿಡಿದಿದ್ದರು. ಉಪವಿಭಾಗಾಧಿಕಾರಿ ಸಂತೋಷ್ ಅವರು ಸ್ಥಳಕ್ಕಾಗಮಿಸಿ ರೈತರ ಮನವಿ ಸ್ವೀಕರಿಸಿದರು.

ಬಳಿಕ ಮಾತನಾಡಿದ ಸಂತೋಷ್, ‘ಭತ್ತ ಖರೀದಿ ಪ್ರಕ್ರಿಯೆಗೆ ಅವಕಾಶ ನೀಡುವಂತೆ ಸರ್ಕಾರಕ್ಕೆ ಮನವಿ ಮಾಡಲಾಗಿದೆ. ಸರ್ಕಾರ ಆದೇಶ ಹೊರಡಿಸಿದ ಕೂಡಲೇ ಈ ಬಗ್ಗೆ ಕ್ರಮ ವಹಿಸಲಾಗುವುದು. ನೋಂದಣಿ ಬಗ್ಗೆ ರೈತರಿಗೆ ಮಾಹಿತಿ ನೀಡಲಾಗುವುದು’ ಎಂದು ತಿಳಿಸಿದರು.

ಆ ಬಳಿಕ ರೈತರು ಪ್ರತಿಭಟನೆಯನ್ನು ಹಿಂಪಡೆದರು.

ಮಾಜಿ ಶಾಸಕ ಎಂ.ಬಸವರಾಜನಾಯ್ಕ, ರೈತ ಮುಖಂಡರಾದ ಕೊಳೇನಹಳ್ಳಿ ಬಿ.ಎಂ.ಸತೀಶ್, ತೇಜಸ್ವಿ ಪಟೇಲ್, ಲೋಕಿಕೆರೆ ನಾಗರಾಜ್, ಬೆಳವನೂರು ನಾಗೇಶ್ವರರಾವ್, ಧನಂಜಯ ಕಡ್ಲೆಬಾಳ್, ಹದಡಿ ಎಂ.ಬಿ.ಹಾಲಪ್ಪ, ಬಾತಿ ಶಿವಕುಮಾರ್, ಗೋಪನಾಳ್ ಪಾಲಾಕ್ಷಪ್ಪ, ಕೆಂಚವೀರಪ್ಪ, ಕುಂದುವಾಡದ ಗಣೇಶಪ್ಪ, ಜಿಮ್ಮಿ ಹನುಮಂತಪ್ಪ, ಆರುಂಡಿ ಪುನೀತ್, ಅತ್ತಿಗೆರೆ ನಂದೀಶ್, ಗೋಣಿವಾಡ ಮಂಜುನಾಥ, ಕುರ್ಕಿ ರೇವಣಸಿದ್ದಪ್ಪ, ರಾಮಗೊಂಡನಹಳ್ಳಿ ರಾಜಶೇಖರ್, ಕುಕ್ಕುವಾಡದ ಶಂಕರ್, ಜಗದೀಶ, ಹದಡಿ ವಿಜಯ ಬಳೇಯರ, ಪ್ರಕಾಶ್, ಸಂಕೋಳ ಚಂದ್ರಶೇಖರ, ಕಳವೂರು ಮಂಜುನಾಥ, ಜಡಗನಹಳ್ಳಿ ವಿರೂಪಾಕ್ಷಪ್ಪ ಮುಂತಾದವರು ಉಪಸ್ಥಿತರಿದ್ದರು.

ದಾವಣಗೆರೆಯ ಪಿ.ಬಿ.ರಸ್ತೆಯಲ್ಲಿ ರೈತ ಮುಖಂಡರು ಭತ್ತ ಸುರಿದು ಪ್ರತಿಭಟನೆ ನಡೆಸಿದರು

ಮಾತಿನ ಚಕಮಕಿ

ರಸ್ತೆಯಲ್ಲಿ ಮಾನವ ಸರಪಳಿ ರಚಿಸಿ ಕೆಲ ಕಾಲ ವಾಹನ ಸಂಚಾರವನ್ನು ತಡೆಯಲಾಯಿತು. ಇದರಿಂದಾಗಿ ವಾಹನಗಳ ಸವಾರರು ಬೇರೆ ಮಾರ್ಗಗಳಲ್ಲಿ ಸಂಚರಿಸಿದರು. ಪ್ರತಿಭಟನಾಕರರ ನಡುವೆಯೇ ದ್ವಿಚಕ್ರ ವಾಹನ ಚಲಾಯಿಸಲು ಮುಂದಾದ ಸವಾರರೊಂದಿಗೆ ರೈತರು ಮಾತಿನ ಚಕಮಕಿ ನಡೆಸಿದರು. ಪೊಲೀಸರು ಮಧ್ಯಪ್ರವೇಶಿಸಿ ಪರಿಸ್ಥಿತಿಯನ್ನು ತಿಳಿಗೊಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.